ಅಲೆಮಾರಿತನ ಅವಳನ್ನು ನೂರು ವರ್ಷ ಬದುಕಿಸಿತ್ತು!
ಫ್ರೇಯಾ ಸ್ಟಾರ್ಕ್ ಡೆಂಗ್ಯೂ, ಮಲೇರಿಯಾದಿಂದ ವಿಪರೀತವಾಗಿ ನರಳಿದಳು. ಬದುಕಿನ ಹತ್ತಾರು ವರ್ಷಗಳು ಸೌಖ್ಯವಿಲ್ಲದೆ ಕುಸಿದು ಹೋದಳು. ಪ್ರೀತಿಯ ತಂಗಿಯನ್ನು ಕಳೆದುಕೊಂಡು ದುಃಖಿತಳಾದಳು. ಇತ್ತ ಕಡೆ ಕಟ್ಟಿಕೊಂಡ ಗಂಡನೂ ಸಲಿಂಗಕಾಮಿ ಎಂದು ತಿಳಿದಾಗ ಅವಳಿಗೆ ಬರಸಿಡಿಲು ಬಡಿದಂತಾಯಿತು. ಕೊನೆಗೆ ಅಲೆಮಾರಿತನವೇ ಅವಳನ್ನು ಬದುಕಿಸಿತು. ತನ್ನ ಎಂಬತ್ತಾರನೇ ವಯಸ್ಸಿನಲ್ಲಿ ಹಿಮಾಲಯದ ಅನ್ನಪೂರ್ಣ ಪರ್ವತ ಶಿಖರವನ್ನೇರಿ ಇಳಿದಳು. ಹುಟ್ಟು ತಿರುಗಾಲ ಜೀವಿಯಾದ ಫ್ರೇಯಾ ನೂರು ವರ್ಷ ಬದುಕಿದ್ದಳು.
ʼನಿಮಗೀಗ ಎಂಬತ್ತೆಂಟು ವಯಸ್ಸು. ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಹಿಮಾಲಯದ ಅನ್ನಪೂರ್ಣ ಶಿಖರವನ್ನೇರಿ ಇಳಿದಿದ್ದೀರಿ. ನನಗಂತು ನಿಮ್ಮಲ್ಲಿ ಇನ್ನೂ ಜೀವನೋತ್ಸಾಹವಿದೆ ಎಂದೆನಿಸುತ್ತಿದೆ. ನಿಮ್ಮ ಮುಂದಿನ ಪ್ರಯಾಣ ಎಲ್ಲಿಗೆ?ʼ ಎಂದು ಇಟಾಲಿಯನ್ ಪತ್ರಕರ್ತನೊಬ್ಬ ಕೇಳಿದಾಗ ʼನನ್ನ ಮುಂದಿನ ಪ್ರಯಾಣ ಸಾವಿನ ಕಡೆಗೆ. ಇಷ್ಟು ವರ್ಷಗಳು ಬೇಕೆಂದೆಡೆಗೆ ಅಲೆದಾಡಿದ್ದೇನೆ. ಎಲ್ಲ ಅನುಭವಗಳನ್ನೂ ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ನನ್ನ ಪುಸ್ತಕಗಳು ನನಗೆ ಖ್ಯಾತಿ ತಂದುಕೊಟ್ಟಿವೆ. ಜಗತ್ತು ನನ್ನನ್ನು ಸಾಹಸ ಪ್ರವೃತ್ತಿಯುಳ್ಳ ಅನ್ವೇಷಕಿ ಮತ್ತು ಪ್ರವಾಸಿ ಎಂದು ಕರೆದಿದೆ. ಮತ್ತೇನು ಬೇಕು? ಅಷ್ಟಕ್ಕೂ ಸಾವು ಕೂಡ ಒಂದು ಅದ್ಭುತ ಪ್ರಯಾಣʼ ಎಂದು ಹೇಳುತ್ತಾ ಜೋರಾಗಿ ನಕ್ಕಿದ್ದಳು ಫ್ರೇಯಾ ಸ್ಟಾರ್ಕ್. ಅವಳು ಇಪ್ಪತ್ತನೇ ಶತಮಾನದಲ್ಲಿ ಮಧ್ಯಪ್ರಾಚ್ಯದೆಲ್ಲೆಡೆ ಪ್ರವಾಸ ಮಾಡಿದ ದಿಟ್ಟ ಮಹಿಳೆ. ಕಾರು, ಜೀಪು, ಕುದುರೆ, ಹೇಸರಗತ್ತೆ, ಕತ್ತೆ ಮತ್ತು ಕಾಲ್ನಡಿಗೆಯ ಮೂಲಕ ಪರ್ಷಿಯಾದಲ್ಲಿನ ಅಸ್ಸಾಸಿನ್ ಕಣಿವೆಯಲ್ಲಿ ಅಡ್ಡಾಡಿದ ಮೊದಲ ಯುರೋಪಿಯನ್. ಫ್ರೇಯಾ ಮಧ್ಯ ಪ್ರಾಚ್ಯದಿಂದ ಅಫ್ಘನಿಸ್ತಾನದವರೆಗೂ ಪ್ರವಾಸ ಬೆಳೆಸಿ ತನ್ನ ಅನುಭವಗಳೆಲ್ಲವನ್ನೂ ಜಗತ್ತಿನೆದುರು ತೆರೆದಿಟ್ಟಳು. ಅವಳು ಬರೆದ ಪ್ರವಾಸಕಥನಗಳಿಂದ ಅಪಾರ ಓದುಗ ವರ್ಗ ಸೃಷ್ಟಿಯಾಯಿತು. ಅವಳದ್ದು ಏಕನಿಷ್ಠೆಯ ಸಾಧನೆ. ತನ್ನ ಸಂಕಲ್ಪ ಬಲದ ಜಾಗರಣೆಯಿಂದಾಗಿಯೇ ದುರ್ಗಮ ಹಾದಿಯಲ್ಲಿ ಸಾಗಿದವಳು.

ಸ್ಟಾರ್ಕ್ ನಡೆದು ಬಂದ ದಾರಿ
ಫ್ರೇಯಾ ಸ್ಟಾರ್ಕ್ 1893 ರಲ್ಲಿ ಜನಿಸಿದಳು. ಇಟಲಿ ಆಕೆಯ ಜನ್ಮಭೂಮಿ. ಹುಟ್ಟಿನಿಂದಲೇ ಅನಾರೋಗ್ಯಕ್ಕೆ ತುತ್ತಾಗಿ ಅಸೌಖ್ಯ ಜೀವನ ನಡೆಸಿದಳು. ಆಕೆಯ ಪೋಷಕರದ್ದೂ ಅಸ್ಥಿರ ಸಂಸಾರ. ದುಃಖವನ್ನೇ ಉಣ್ಣುತ್ತಾ ಬೆಳೆದ ಹುಡುಗಿ ಹೀಗೊಮ್ಮೆ ತನ್ನ ಹದಿಮೂರನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಕಾರ್ಖಾನೆಗೆ ಭೇಟಿ ನೀಡಿದಳು. ಅಚಾನಾಕ್ಕಾಗಿ ಆಕೆಯ ಕೂದಲು ಯಂತ್ರದಲ್ಲಿ ಸಿಲುಕಿಕೊಂಡಿತು. ಇದರಿಂದಾಗಿ ಅವಳ ನೆತ್ತಿ ಮತ್ತು ಕಿವಿಯ ಭಾಗ ಹರಿದುಹೋಯಿತು. ಶಸ್ತ್ರಚಿಕಿತ್ಸೆ ಮತ್ತು ಚರ್ಮದ ಕಸಿ ಮಾಡಿಸಿದರೂ ಕಲೆಗಳು ಆಕೆಯ ಮುಖದ ಮೇಲೆ ಶಾಶ್ವತವಾಗಿ ಉಳಿದುಬಿಟ್ಟವು. ಸ್ಟಾರ್ಕ್ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಇಟಲಿಯನ್ನು ತೊರೆದಳು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ರೆಡ್ ಕ್ರಾಸ್ ನರ್ಸ್ ಆಗಿ ಕೆಲಸ ಮಾಡಿದಳು. ಅಧ್ಯಯನಶೀಲಳಾದ ಆಕೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯಲ್ಲಿ ಪರಿಣತಿಯನ್ನು ಸಾಧಿಸಿದಳು. ನಂತರದ ದಿನಗಳಲ್ಲಿ ಯುರೋಪಿನಿಂದ ಮಧ್ಯಪ್ರಾಚ್ಯಕ್ಕೆ ಪ್ರವಾಸ ಬೆಳೆಸಿದಳು. ಬ್ರಿಟಿಷರು ಮತ್ತು ಫ್ರೆಂಚರು ಆಳ್ವಿಕೆ ನಡೆಸುತ್ತಿದ್ದ ಈ ಪ್ರದೇಶದಲ್ಲಿ ಸ್ಟಾರ್ಕ್ ಲೆಬನಾನ್ ಮತ್ತು ಸಿರಿಯಾದವರೆಗೂ ಅಲೆಮಾರಿಯಂತೆ ಅಡ್ಡಾಡಿದಳು. ಅವಳ ಅಲೆಮಾರಿತನ ಇರಾಕ್, ಯೆಮೆನ್, ಕುವೈತ್, ಇರಾನ್‌ವರೆಗೂ ಕರೆದೊಯ್ಯಿತು. ಸ್ಟಾರ್ಕ್ ಕತ್ತೆ ಮತ್ತು ಒಂಟೆಯ ಮೇಲೆ ಪ್ರಯಾಣ ಬೆಳೆಸುತ್ತಿದ್ದಳು. ಮಧ್ಯಪ್ರಾಚ್ಯದ ಪ್ರವಾಸದ ಅನುಭವವನ್ನು ಆಕೆ 'The Valley of the Assassins' ಕೃತಿಯ ಮೂಲಕ ಕಟ್ಟಿಕೊಟ್ಟಳು. 1930ರ ದಶಕದಲ್ಲಿಯೇ ಆ ಪುಸ್ತಕವು ಹತ್ತಾರು ಮುದ್ರಣಗಳನ್ನು ಕಂಡಿತು. ಪುರಾತನ ದಾರಿಗಳು, ಗುಹೆಗಳು, ಬೀದಿಗಳು, ಧರ್ಮ ಬೀಡುಗಳು, ಸ್ಥಳೀಯರ ಜನ ಜೀವನ ಮತ್ತು ಸಂಸ್ಕೃತಿಗಳ ವಿವರಣೆಗಳನ್ನು ಸ್ಪಷ್ಟವಾಗಿ ತಿಳಿಸಿದಳು. ಅವಳು ಬರೆದ Travels in the Near east, A winter in Arabia, The southern gates of Arabia ಕೃತಿಗಳು ಕೂಡ ಆಕೆಗೆ ಸಾಕಷ್ಟು ಜನಮನ್ನಣೆಯನ್ನು ತಂದುಕೊಟ್ಟಿತು.

ಅಗ್ನಿಯಿಂದ ಎದ್ದ ಬೆಳಕು
ಫ್ರೇಯಾ ಸ್ಟಾರ್ಕ್ ಅದೆಷ್ಟೋ ಅಗ್ನಿ ದಿವ್ಯವನ್ನು ಹಾದು ಬಂದವಳು. ತೀವ್ರ ಅನಾರೋಗ್ಯ ಅವಳನ್ನು ಕಂಗೆಡಿಸಿತ್ತು. ಫ್ರೇಯಾ ಹುಟ್ಟು ಸಾಹಸಿ ಪ್ರವೃತ್ತಿಯವಳಾದರೂ ರೋಗ ಅವಳನ್ನು ಅಂಟಿಕೊಂಡತೆಯೇ ಇತ್ತು. ಡೆಂಗ್ಯೂ, ಮಲೇರಿಯಾ, ಜ್ವರ ಮತ್ತು ಬೇಧಿ ಅವಳನ್ನು ಹಿಂಡಿ ಹಾಕಿತ್ತು. ತನಗೆ ಆಸರೆಯಾಗಿದ್ದ ಪ್ರೀತಿಯ ತಂಗಿಯನ್ನು ಕಳೆದುಕೊಂಡು ದುಃಖಿತಳಾದಳು. ಫ್ರೇಯಾ ತನ್ನ ಐವತ್ನಾಲ್ಕನೇ ವಯಸ್ಸಿನಲ್ಲಿ ವಿವಾಹವಾದಳು. ಉಹೂಂ. ವೈವಾಹಿಕ ಜೀವನವೂ ಸುಖವಾಗಿರಲಿಲ್ಲ. ಕಟ್ಟಿಕೊಂಡ ಗಂಡ ಸಲಿಂಗಕಾಮಿ ಎಂದು ತಿಳಿದು ಕಂಗಾಲಾದಳು. ಸಾಂಸಾರಿಕ ಜೀವನದಿಂದ ದೂರ ಸರಿದು ಒಂಟಿಯಾಗಿಯೇ ಬದುಕು ನಡೆಸಿದಳು. ತನ್ನ ಒಳಗಿನಳಲುಗಳನ್ನು ಶಮನ ಮಾಡಲು ಅವಳಿಗಿದ್ದ ಪರಿಹಾರ ಮತ್ತು ಕಟ್ಟಕಡೆಯ ದಾರಿ ಎಂದರೆ ಅದು ಪ್ರವಾಸ! ಹಾಗಾಗಿಯೇ ಅವಳು ತನ್ನ ಇಳಿ ವಯಸ್ಸಿನವರೆಗೂ ಅರ್ಧ ಜಗತ್ತನ್ನು ಸುತ್ತಿಬಂದಳು. ಅಫ್ಘನಿಸ್ತಾನದ ಮಿನಾರ್ ಅನ್ನು ಕಂಡು ಬರಲು ಸ್ಟಾರ್ಕ್ ಪ್ರವಾಸಕ್ಕೆ ಹೊರಟಿದ್ದು ತನ್ನ ಎಪ್ಪತ್ತೈದನೆಯ ವಯಸ್ಸಿನಲ್ಲಿ. ಹಿಮಾಲಯದ ಅನ್ನಪೂರ್ಣ ಪರ್ವತಾರೋಹಣ ಮಾಡಿದಾಗ ಆಕೆಗೆ ಎಂಬತ್ತಾರು ವಯಸ್ಸು. ಪ್ರವಾಸ ಮತ್ತು ಅನ್ವೇಷಣೆಗೆ ಹೊಸ ದಿಕ್ಕು ತೋರಿದ ಫ್ರೇಯಾ ಸ್ಟಾರ್ಕ್ ಸಾಧನೆ ಅವಿಸ್ಮರಣೀಯ. ವಿವಾದಗಳಾಚೆಗೂ ಫ್ರೇಯಾ ತನ್ನ ಹೆಜ್ಜೆ ಗುರುತನ್ನು ಉಳಿಸಿ ಹೋಗಿದ್ದಾಳೆ. ಚಕ್ರ ಪ್ರಾಣಿಯಂತೆ ಊರೂರು ಅಲೆದ ಫ್ರೇಯಾ ಸ್ಟಾರ್ಕ್ 1993ರಲ್ಲಿ, ತನ್ನ ನೂರನೇ ವಯಸ್ಸಿನಲ್ಲಿ ಸಾವನ್ನಪ್ಪಿದಳು. ಫ್ರೇಯಾ ಶತಾಯುಷಿ!
‘ನನಗೀಗ ಎಂಬತ್ತಾರು ವಯಸ್ಸು. ಆದರೆ ಈಗಲೂ ಮೂವತ್ತರ ಹರೆಯದಲ್ಲಿ ನಾನು ಮಧ್ಯಪ್ರಾಚ್ಯ ಪ್ರವಾಸ ಮಾಡಿದಾಗ ಇದ್ದಷ್ಟೇ ಹುರುಪು ಮತ್ತು ಉತ್ಸಾಹವಿದೆʼ ಹಿಮಾಲಯದ ಅನ್ನಪೂರ್ಣ ಪರ್ವತಾರೋಹಣ ಮುಗಿಸಿ ಫ್ರೇಯಾ ಆಡಿದ ಮಾತುಗಳಿವು.