ದುಬೈ ಮತ್ತು ಮುಂಬೈ ನಡುವೆ ವಿಮಾನದ ಮೂಲಕ ಪ್ರಯಾಣ ಬೆಳೆಸುವುದೆಂದರೆ ಸರಿಸುಮಾರು 3 ಗಂಟೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಅದೇ 2000ಕಿಲೋ ಮೀಟರ್‌ ದೂರವನ್ನು 2 ಗಂಟೆಗಳ ಒಳಗಾಗಿ ತಲುಪುವ ಅವಕಾಶವಿದ್ದರೆ ? ಹೌದು, 2030ರಲ್ಲಿ ಈ ವಿಶೇಷ ಅವಕಾಶ ಪ್ರಯಾಣಿಕರಿಗೆ ಮತ್ತು ಪ್ರವಾಸಿಗರಿಗೆ ಲಭ್ಯವಾಗಲಿದೆ. ಮುಂಬೈನಿಂದ ದುಬೈಗೆ ಜಲಾಂತರ್ಗಾಮಿ ರೈಲು ಸಂಪರ್ಕ ಯೋಜನೆ ಇನ್ನೇನು ಕೆಲವೇ ವರ್ಷಗಳಲ್ಲಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ.

ಯುಎಇಯ ನ್ಯಾಷನಲ್‌ ಅಡ್ವೈಸರ್ ಬ್ಯೂರೋ ಲಿಮಿಟೆಡ್‌ನ (National Advisor Bureau Limited) ಯೋಜನೆಯ ಪ್ರಕಾರ, ದುಬೈ ಮತ್ತು ಮುಂಬೈ ನಡುವಿನ ಪ್ರಸ್ತಾವಿತ ಜಲಾಂತರ್ಯಾಮಿ ರೈಲು ಸಂಪರ್ಕವು ಪ್ರಯಾಣದ ಸಮಯವನ್ನು ಕಡಿಮೆ ಮಾಡಬಹುದು. ಈ ಹೈ-ಸ್ಪೀಡ್ ರೈಲು ಗಂಟೆಗೆ 600 ಕಿಮೀ ಮತ್ತು 1,000 ಕಿಮೀ ವೇಗದಲ್ಲಿ ಚಲಿಸುವ ನಿರೀಕ್ಷೆಯಿದ್ದು, ಇದು ಎರಡು ನಗರಗಳ ನಡುವಿನ ಸಂಪರ್ಕವನ್ನು ಸುಲಭಗೊಳಿಸಲಿದೆ. ಈ ಯೋಜನೆಯನ್ನು ಕೆಲವು ವರ್ಷಗಳ ಹಿಂದೆ ಪ್ರಸ್ತಾಪಿಸಲಾಗಿದ್ದರೂ, ಅದಕ್ಕೆ ಇನ್ನೂ ಅನುಮೋದನೆ ಸಿಕ್ಕಿರಲಿಲ್ಲ.

images (3)

ಮುಂಬೈ ದುಬೈ ಅಂಡರ್‌ವಾಟರ್ ರೈಲು ಯೋಜನೆ:

ವಿಮಾನ ಪ್ರಯಾಣಕ್ಕೆ ಪರ್ಯಾಯವಾಗಿ ರೂಪುಗೊಳ್ಳಲಿರುವ ಪ್ರಸ್ತಾವಿತ ರೈಲು ಸಂಪರ್ಕವು ಭಾರತ ಮತ್ತು ಯುಎಇ ನಡುವೆ ಪ್ರಕಾಣೀಕರನ್ನು ಹೊತ್ತೊಯ್ಯುವುದು ಮಾತ್ರವಲ್ಲದೆ ಕಚ್ಚಾ ತೈಲ ಸೇರಿದಂತೆ ಸರಕುಗಳ ಸಾಗಣೆಗೆ ಅನುಕೂಲವಾಗಲಿದೆ. ನ್ಯಾಷನಲ್‌ ಅಡ್ವೈಸರ್ ಬ್ಯೂರೋ ಲಿಮಿಟೆಡ್‌ ಅನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಯೂಟ್ಯೂಬ್ ಖಾತೆಯು ರೈಲು ವ್ಯವಸ್ಥೆಯು ಒಮ್ಮೆ ನಿರ್ಮಾಣವಾದ ನಂತರ ಹೇಗೆ ಕಾಣುತ್ತದೆ ಎಂಬುದನ್ನು ವಿವರಿಸುವ ವೀಡಿಯೊವನ್ನು ಹಂಚಿಕೊಂಡಿದೆ. ಈ ಮೂಲಕ ಪ್ರಯಾಣಿಕರ ಅನುಭವ ಹೇಗಿರಲಿದೆ ಎಂಬುದರ ಬಗ್ಗೆಯೂ ಚಿತ್ರಣವನ್ನು ನೀಡಿದೆ.

ಮುಂಬೈ ದುಬೈ ಅಂಡರ್‌ವಾಟರ್ ರೈಲು ಟೈಮ್‌ಲೈನ್ :

ಜಲಾಂತರ್ಗಾಮಿ ರೈಲು ಯೋಜನೆಯ ಕಾರ್ಯರೂಪದ ಬಗ್ಗೆ ಚರ್ಚೆಗಳು ಇನ್ನೂ ನಡೆಯುತ್ತಿದ್ದು, ಒಂದುವೇಳೆ ಅನುಮೋದನೆ ದೊರೆತರೆ, ತಾಂತ್ರಿಕ ಮತ್ತು ಎಂಜಿನಿಯರಿಂಗ್ ಸವಾಲುಗಳಿಂದಾಗಿ ಶತಕೋಟಿ ಡಾಲರ್‌ಗಳ ಹೂಡಿಕೆಯ ಅಗತ್ಯವಿದೆ. ಎಲ್ಲವೂ ಸರಿಯಾದರೆ ಜಲಾಂತರ್ಗಾಮಿ ರೈಲು ಸಂಪರ್ಕವು 2030ರ ವೇಳೆಗೆ ಪೂರ್ಣಗೊಳ್ಳಬಹುದು ಎನ್ನಲಾಗುತ್ತಿದೆ.