ಪಾಕಿಸ್ತಾನದ(Pakistan) ಉಗ್ರಗಾಮಿಗಳು ನಡೆಸಿದ ಪಹಲ್ಗಾಮ್‌ ದಾಳಿಗೆ (Pahalgam Attack) ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌(Operation Sindoor) ನಡೆಸಿತು. ಎರಡು ದೇಶದ ಗಡಿಗಳ ಉದ್ವಿಗ್ನತೆಯಿಂದಾಗಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದೀಗ ಶ್ರೀನಗರ(Srinagr) ವಿಮಾನ ನಿಲ್ದಾಣವು(Airport) ತನ್ನ ಕಾರ್ಯವನ್ನು ಶುರು ಮಾಡಿದೆ. ಉತ್ತರ ಮತ್ತು ಪಶ್ಚಿಮ ಭಾರತದ ಸಾಕಷ್ಟು ವಿಮಾನಗಳು ಹಾರಾಡುತ್ತಿವೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕಡಿಮೆಯಾಗಿದ್ದು, ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗಿದೆ. ಹಾಗಾಗಿ ಶ್ರೀನಗರದಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ಮತ್ತೆ ಆರಂಭಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಗುರುವಾರ(ಮೇ.15) ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಪ್ರವಾಸೋದ್ಯಮ, ಆರ್ಥಿಕತೆ ಮತ್ತು ವ್ಯವಹಾರದ ವಿಷಯದಲ್ಲಿ ಇಲ್ಲಿನ ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಶ್ರೀನಗರದ ಎಲ್ಲಾ ವಿಮಾನ ಸಂಪರ್ಕವನ್ನು ಮತ್ತೆ ಆರಂಭ ಮಾಡಲಾಗಿದೆ. ಕಾಶ್ಮೀರ ಈಗ ಸುರಕ್ಷಿತವಾಗಿದ್ದು, ಪ್ರವಾಸಿಗರು ಮತ್ತೆ ಇಲ್ಲಿಗೆ ಬರಬೇಕೆಂದು ನಾವು ಬಯಸುತ್ತೇವೆ. ಕಾಶ್ಮೀರದ ಆರ್ಥಿಕತೆಯನ್ನು ಬಲಗೊಲಿಸುವ ಜವಾಬ್ದಾರಿ ನಮಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಬೇಕೆಂದು ಹೇಲಿದ ಕೆಲವು ಸ್ಥಳೀಯರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಈ ದಿಸೆಯಲ್ಲಿ ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಮೋಹನ್‌ ನಾಯ್ಡು ಹೇಳಿದರು.

ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ನಾಯ್ಡು ಅವರು ಕೆಲಕಾಲ ಶ್ರೀನಗರದಲ್ಲಿದ್ದರು. "ಆಪರೇಷನ್ ಸಿಂದೂರ್" ನಲ್ಲಿ ಸಶಸ್ತ್ರ ಪಡೆಗಳ ಶೌರ್ಯವನ್ನು ಅವರು ಶ್ಲಾಘಿಸಿದ್ದಾರೆ.