ಜೋಗ ಜಲಪಾತದಲ್ಲಿ ಕಾಮಗಾರಿ ಪೂರ್ಣ; ಮೇ 1ರಿಂದ ಪ್ರವಾಸಿಗರಿಗೆ ಮುಕ್ತ
ಜೋಗ ಜಲಪಾತವು ಕಳೆದ ನಾಲ್ಕು ತಿಂಗಳಿನಿಂದಲೂ ಪ್ರವಾಸಿಗರಿಗೆ ನಿರ್ಬಂಧಿತ ಪ್ರದೇಶವಾಗಿತ್ತು. ಜೋಗದಲ್ಲಿ ಪ್ರವಾಸಿಗರಿಗೆ ಸೂಕ್ತ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮಳೆಗಾಲಕ್ಕೂ ಮುನ್ನವೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಮೇ 1ರಿಂದ ಈ ಪ್ರವಾಸಿತಾಣ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿರುವ ಶಿವಮೊಗ್ಗದ ಸಾಗರ ತಾಲೂಕಿನಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ನೋಡುವುದೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಮಳೆಗಾಲದಲ್ಲಿ ತನ್ನ ನಿಜವಾದ ವೈಭವದ ಮೂಲಕ ಜಲಪಾತದ ಪ್ರೇಮಿಗಳನ್ನು ಸೆಳೆಯುತ್ತದ್ದ ಈ ಜಲಪಾತ, ಮಳೆಗಾಲಕ್ಕೂ ಮುನ್ನ ಶಾಂತ ರೂಪದಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಮೋಡಿ ಮಾಡುತ್ತಿತ್ತು. ಆದರೆ ಕಳೆದ ನಾಲ್ಕು ತಿಂಗಳಿನಿಂದಲೂ ಜೋಗ ಜಲಪಾತದ ಪ್ರವೇಶ ದ್ವಾರದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಏಪ್ರಿಲ್ 30ರ ವರೆಗೆ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಕಾಮಗಾರಿ ಪೂರ್ಣವಾದ ಹಿನ್ನಲೆಯಲ್ಲಿ ಪ್ರವೇಶವನ್ನು ಮೇ 1 ರಿಂದ ಪುನರಾರಂಭಿಸುತ್ತಿರುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

4 ತಿಂಗಳಿಂದಲೂ ಅಭಿವೃದ್ಧಿ ಕಾಮಗಾರಿ:
ಅನೇಕ ವರ್ಷಗಳಿಂದಲೂ ಜೋಗಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದರು. ಪಾರ್ಕಿಂಗ್ ಸಮಸ್ಯೆಯು ಪ್ರಮುಖವಾಗಿ ಕಾಡುತ್ತಿತ್ತು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡ ಇಲಾಖೆ, ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿದ್ದು, ಜನವರಿ 1ರಿಂದ ಎಪ್ರಿಲ್ 30ರ ತನಕ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರಿಗೆ ಪ್ರವೇಶ ಬಂದ್ ಮಾಡಲಾಗಿತ್ತು. ಜೋಗ ಜಲಪಾತದ ಮುಖ್ಯದ್ವಾರದ ಕಾಮಗಾರಿ, ಪ್ರವಾಸಿಗರಿಗೆ ವೀಕ್ಷಣಾ ಗೋಪುರ, ಪಾರ್ಕಿಂಗ್, ಸೇರಿದಂತೆ ಇತರ ಕಾಮಗಾರಿಗಳನ್ನು ಸದ್ಯ ಪೂರ್ಣಗೊಳಿಸಿರುವ ಹಿನ್ನಲೆ ಮೇ 1 ರಿಂದ ಜೋಗ ಜಲಪಾತ ಪ್ರವಾಸಿಗರಿಗೆ ಮುಕ್ತಗೊಳಿಸುವುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂಟ್ರಿ ಫೀಸ್ ಹಾಗೂ ಟೈಮ್ ವಿಚಾರದಲ್ಲಿ ಹೊಸ ರೂಲ್ಸ್ :
ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಬರುತ್ತಿದ್ದ ಪ್ರವಾಸಿಗರು ಇನ್ಮುಂದೆ 20 ರೂಪಾಯಿ ಪ್ರವೇಶ ಶುಲ್ಕವನ್ನು ತೆರಲೇಬೇಕು. ಇದರ ಜೊತೆಗೆ ಪಾರ್ಕಿಂಗ್ ದರವನ್ನು ಏರಿಸಲಾಗಿದೆ. ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಗಂಟೆಗಟ್ಟಲೆ ಇಲ್ಲಿ ಕಾಲ ಕಳೆಯುತ್ತಿದ್ದ ಪ್ರವಾಸಿಗರು ಇನ್ಮುಂದೆ 2 ಗಂಟೆಗಳಿಗಿಂತ ಹೆಚ್ಚಿಗೆ ಇಲ್ಲಿ ಉಳಿದುಕೊಳ್ಳುವಂತಿಲ್ಲ ಎನ್ನುವ ಹೊಸ ರೂಲ್ಸ್ ತರಲಾಗಿದೆ.