ಸಿಂಗಾಪುರ – ವಿಮಾನ ನಿಲ್ದಾಣದಲ್ಲಿ ಸಮಯ ಕಳೆಯುವುದು ಸಾಮಾನ್ಯವಾಗಿ ಅತ್ಯಂತ ಬೋರ್ ಆಗುವ ವಿಚಾರ, ಆದರೆ ಸಿಂಗಾಪುರದ ಚಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದು ಉಲ್ಟಾ ಏಕೆಂದರೆ ಚಂಗಿ ವಿಮಾನ ನಿಲ್ದಾಣದಲ್ಲಿ ಬೋರ್ ಆಗೋದೇ ಇಲ್ಲ, ಅದೊಂದು ಬೇರೆ ಅನುಭವವೇ. ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣದ ಪಟ್ಟಿಯಲ್ಲಿ 13ನೇ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂಬುದು ಅದಕ್ಕೆ ಸಾಕ್ಷಿ!

changi airport 2

ಸ್ಕೈಟ್ರಾಕ್ಸ್ ಎಂಬ ವಿಮಾನ ಸಾರಿಗೆ ಮೌಲ್ಯಮಾಪನ ಸಂಸ್ಥೆ 2025ರ ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿಗಳನ್ನು ಏಪ್ರಿಲ್ 9ರಂದು ಮ್ಯಾಡ್ರಿಡ್‌ನಲ್ಲಿ ಪ್ರಕಟಿಸಿದೆ. ಇದರ ಪ್ರಕಾರ, ಚಂಗಿ ವಿಮಾನ ನಿಲ್ದಾಣವು ಐತಿಹಾಸಿಕ 13ನೇ ಬಾರಿಗೆ ವಿಶ್ವದ ಶ್ರೇಷ್ಠ ವಿಮಾನ ನಿಲ್ದಾಣ ಎಂಬ ಗೌರವವನ್ನು ಪಡೆದಿದೆ.

ಸಿಂಗಾಪುರದ ಚಂಗಿ, ವಿಮಾನ ನಿಲ್ದಾಣಕ್ಕಿಂತ ಪ್ರವಾಸಿ ತಾಣವೇ ಹೆಚ್ಚು! ಇಲ್ಲಿ ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ವಿಮಾನದ ಸಮಯಕ್ಕೆ 48 ಗಂಟೆಗಳ ಮೊದಲು ಚೆಕ್‌ಇನ್ ಮಾಡಬಹುದು. ಇದರಿಂದ ವಿಮಾನ ನಿಲ್ದಾಣದಲ್ಲಿನ ಸಮಯವನ್ನು ಪ್ರವಾಸದ ಭಾಗವನ್ನಾಗಿಸಬಹುದು.

changi airport 3

'ಜುವೆಲ್ ಮಾಲ್' (Jewel Changi Mall) ಎಂಬ 10 ಮಹಡಿಯ ವ್ಯಾಪಾರದ ಲೋಕ, 2024ರಲ್ಲಿ 80 ಮಿಲಿಯನ್ ಜನರನ್ನು ಆಕರ್ಷಿಸಿದೆ. ಇದೇ ಸ್ಥಳದಲ್ಲಿರುವ 130 ಅಡಿ ಎತ್ತರದ 'ರೈನ್ ವೋರ್ಡೆಕ್ಸ್' ಜಗತ್ತಿನ ಅತಿ ದೊಡ್ಡ ಇಂಡೋರ್ ಜಲಪಾತವಾಗಿದೆ. ಜೊತೆಗೆ ಬಟರ್ಫ್ಲೈ ಗಾರ್ಡನ್, ಸ್ಪಾ, ಚಿತ್ರಮಂದಿರ, ಮ್ಯೂಸಿಯಂ, ಡೈನೋಸಾರ್ ಥೀಮ್ ಪಾರ್ಕ್, ಹೋಟೆಲ್‌ಗಳು ಎಲ್ಲವೂ ಇಲ್ಲಿವೆ!

ಪಾಕಶಾಸ್ತ್ರ, ವಾಶರೂಮ್, ಏಷಿಯಾದಲ್ಲಿ ಶ್ರೇಷ್ಠ!

ಈ ಸಲ ಪ್ರಶಸ್ತಿಗಳ ಪೈಕಿ ವಿಶ್ವದ ಶ್ರೇಷ್ಠ ಆಹಾರ ಸೇವನೆಯ ವಿಮಾನ ನಿಲ್ದಾಣ, ಶ್ರೇಷ್ಠ ಶೌಚಾಲಯ, ಮತ್ತು ಏಷಿಯಾದ ಶ್ರೇಷ್ಠ ವಿಮಾನ ನಿಲ್ದಾಣ ಎಂಬ ಬಹುಮಾನಗಳನ್ನು ಚಂಗಿಯು ತನ್ನದಾಗಿಸಿಕೊಂಡಿದೆ.

ಇದೊಂದೇ ಅಲ್ಲ – ಮುಂದಿನ ಆರು ವರ್ಷಗಳಲ್ಲಿ ಸೇವೆ ಮತ್ತು ಸೌಲಭ್ಯಗಳ ಸುಧಾರಣೆಗೆ 2 ಬಿಲಿಯನ್ ಅಮೇರಿಕನ್ ಡಾಲರ್ (₹16,700 ಕೋಟಿ) ವೆಚ್ಚಮಾಡಲಾಗುತ್ತಿದೆ. ಜೊತೆಗೆ ಟರ್ಮಿನಲ್ 5 ರ (Terminal 5) ನಿರ್ಮಾಣವೂ ಪ್ರಗತಿಯಲ್ಲಿ ಇದೆ.