ಟೀ ಕಿಕ್ ; ಚಹಾ ದಿನದ ಆಚರಣೆ ವೇಳೆ ಭಾರತದ ಪ್ರಮುಖ ಬಗೆಯ ಚಾಯ್ ಗಳ ಬಗ್ಗೆ ತಿಳಿಯಿರಿ
ಒಮ್ಮೆ ನಾಲಿಗೆಗೆ ಚಹಾದ ರುಚಿ ಸಿಕ್ಕರೆ, ಮುಂದೆಂದೂ ಅದನ್ನು ಬೇಡವೆನ್ನುವ ಮಾತೇ ಬರುವುದಿಲ್ಲ..ಹೌದು, ಚಹಾ ಅದೆಷ್ಟು ಹುಚ್ಚು ಹತ್ತಿಸುವುದೆಂದರೆ ಅಲ್ಕೋಹಾಲ್ ಬಿಟ್ಟು ಚಹಾವನ್ನೇ ಚಟವಾಗಿಸಿಕೊಳ್ಳುವಷ್ಟರ ಮಟ್ಟಿಗೆ. ಅಷ್ಟಕ್ಕೂ ಚಹಾ ಈ ಪರಿಯ ಮೋಡಿ ಮಾಡಲು ಏನು ಕಾರಣ ಗೊತ್ತಾ ? ಭಾರತದ ಪ್ರಮುಖ ಬಗೆಯ ಚಹಾಗಳನ್ನು ನೀವು ತಿಳಿಯಲೇ ಬೇಕು.
ಬೆಳಗಿನ ಸೂರ್ಯನನ್ನು ಕಾಣುವ ಮುನ್ನ ಕೈಯಲ್ಲಿ ಚಹಾ ಕಪ್ ಇರಬೇಕು..ಮನೆಯಲ್ಲಿ ಬೇಕೆನಿಸಿದಾಗೆಲ್ಲ, ಆಫೀಸ್ ಅವಧಿಯಲ್ಲಿ ತಲೆ ಕೆಟ್ಟಾಗ, ಕೆಲಸದ ಒತ್ತಡ ಹೆಚ್ಚೆನಿಸಿದಾಗ, ಮುಂದೇನು ಎಂಬ ಗೊಂದಲ ಹುಟ್ಟಿಕೊಂಡಾಗ.. ಹೀಗೆ ಚಹಾ ಹೀರಲು ಯಾವುದೇ ಸಮಯ ಮಿತಿಯಿಲ್ಲ. ಚಹಾ ಮಾಡಿರುವ ಮೋಡಿಯೇ ಹಾಗೆ..
ಚಹಾ ಪ್ರಿಯರೇ..ನಿಮಗೆ ಗೊತ್ತಾ ಇಂದು ಅಂತಾರಾಷ್ಟ್ರೀಯ ಚಹಾ ದಿನ..ಭಾರತ ಮತ್ತು ಇತರ ದೇಶಗಳಿಗೆ ಡಿಸೆಂಬರ್ 15ರಂದು ಅಂತಾರಾಷ್ಟ್ರೀಯ ಚಹಾ ದಿನವಾದರೆ, ಇನ್ನೂ ಕೆಲವು ದೇಶಗಳಲ್ಲಿ ವಿಶ್ವ ಸಂಸ್ಥೆ ಘೋಷಿಸಿರುವಂತೆ ಮೇ 21 ಅಂತಾರಾಷ್ಟ್ರೀಯ ಚಹಾ ದಿನವನ್ನಾಗಿ ಸಂಭ್ರಮಿಸುತ್ತಾರೆ. ಯಾಕೆಂದರೆ ಚಹಾ ಬೆಳೆಯುವ ಹೆಚ್ಚಿನ ದೇಶಗಳಲ್ಲಿ ಚಹಾ ಕೊಯ್ಲು ಅವಧಿಯೂ ಮೇ ತಿಂಗಳಿನಲ್ಲಿ ಆರಂಭವಾಗುತ್ತದೆ. ಅದೇನೇ ಇದ್ದರೂ ಚಹಾ ಪ್ರಿಯರಿಗೆ ಸಂಭ್ರಮಿಸಲು ಇದೊಂದು ವಿಶೇಷ ದಿನ..

ಚೀನಾದ ಬಳಿಕ ಭಾರತ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದ್ದು, ಅಸ್ಸಾಂ, ಡಾರ್ಜಿಲಿಂಗ್, ಕರ್ನಾಟಕ ಹೀಗೆ ದೇಶದ ಪ್ರಮುಖ ರಾಜ್ಯಗಳು ಟೀ ಉತ್ಪಾದನೆಯಲ್ಲಿ ವಿಶ್ವದ ಗಮನ ಸೆಳೆದಿದೆ. ಆದರೆ ಭಾರತದ ಯಾವ್ಯಾವ ರಾಜ್ಯಗಳಲ್ಲಿ ಯಾವೆಲ್ಲಾ ವಿಶೇಷ ಬಗೆಯ ಚಹಾಗಳು ಲಭ್ಯವಿದೆಯೆಂಬ ಮಾಹಿತಿ ನಿಮಗಿದೆಯಾ?
ಅಸ್ಸಾಂ ಚಹಾ
ಅಸ್ಸಾಂ ಚಹಾ, ಹೆಸರೇ ಸೂಚಿಸುವಂತೆ ಅಸ್ಸಾಂನಲ್ಲಿ ಬೆಳೆಯುವ ಚಹಾ ಎಲೆಗಳಿಂದಲೇ ಸಿದ್ಧವಾಗುವ ಪರಿಮಳಯುಕ್ತ ಚಹಾವಿದು. ಬಹು ಬೇಡಿಕೆ ಹೊಂದಿರುವ ಅಸ್ಸಾಂ ಟೀ ಕುಡಿಯುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆಯಾಗುತ್ತದೆ. ಶ್ವಾಸಕೋಶ ಮತ್ತು ಅಂಡಾಶಯದ ಕ್ಯಾನ್ಸರ್ ಅನ್ನು ತಡೆಯಲು ನೆರವಾಗುತ್ತದೆ. ಹೀಗೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಅಸ್ಸಾ ಚಹಾದ ರುಚಿಯನ್ನು ನೀವು ನೋಡದಿದ್ದರೆ ಹೇಗೆ ?
ಡಾರ್ಜಿಲಿಂಗ್ ಚಹಾ
ಬ್ರಿಟಿಷರು ಚೀನಾದಿಂದ ಭಾರತದ ಡಾರ್ಜಿಲಿಂಗ್ ಗೆ ತಂದ ಕ್ಯಾಮಿಲಿಯಾ ಸಿನೆನ್ಸಿಸ್ ಎಂಬ ಚಹಾ ಗಿಡಗಳ ಎಲೆಗಳಿಂದ ತಯಾರಿಸುವ ವಿಭಿನ್ನ ಬಗೆಯ, ಬಹು ಬೇಡಿಕೆಯ ಚಹಾವಿದು. ವಿಶಿಷ್ಟ ಪರಿಮಳ ಮತ್ತು ರುಚಿಗೆ ಹೆಸರುವಾಸಿಯಾಗಿರುವ ಡಾರ್ಜಿಲಿಂಗ್ ಚಹಾ, ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆಯೊಳಗಿನ ಹುಣ್ಣುಗಳಿಂದ ಮುಕ್ತಿ ಹೊಂದಲು ಹಾಗೂ ಬೊಜ್ಜು ಕರಗಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

ನೀಲಗಿರಿ ಚಹಾ
ನೀಲಗಿರಿ ಅಥವಾ ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದಲ್ಲಿ ಹುಟ್ಟಿಕೊಂಡ ಈ ಚಹಾ ವಿಶೇಷವಾದ ಪರಿಮಳ ಹಾಗೂ ಗಾಢ ಬಣ್ಣದಿಂದಾಗಿ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ..ಈ ಚಹಾವನ್ನು ಕುಡಿಯುವುದರಿಂದ ಅಧಿಕ ತೂಕದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬಾಯಿಯ ಆರೋಗ್ಯವನ್ನು ಸುಧಾರಿಸುವುದಷ್ಟೇ ಅಲ್ಲ ಮಧುಮೇಹದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಗ್ರೀನ್ ಟೀ
ಭಾರತದಲ್ಲಿ ಹೆಚ್ಚು ಸೇವಿಸುವ ಪಾನೀಯಗಳಲ್ಲಿ ಗ್ರೀನ್ ಟೀ ಪ್ರಮುಖವಾದುದು. ಅದರ ಉತ್ಕರ್ಷಣ ನಿರೋಧಕ ಮೌಲ್ಯಗಳು ಮತ್ತು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಹೊರಬರಲು ಗ್ರೀನ್ ಟೀ ರಾಮಬಾಣ. ಮೂಡ್ ಸ್ವಿಂಗ್ ಕಡಿಮೆ ಮಾಡಲು, ಉತ್ಸಾಹ ಭರಿತರಾಗಿರಲು ಗ್ರೀನ್ ಟೀ ಕುಡಿಯುವುದು ಅತೀ ಅಗತ್ಯ.
ವೈಟ್ ಟೀ
ಬಿಳಿ ಚಹಾವು ತಿಳಿ ಬಣ್ಣ ಮತ್ತು ಪರಿಮಳ ಭರಿತವಾಗಿದ್ದು, ಶುದ್ಧ ಮತ್ತು ಕಡಿಮೆ ಸಂಸ್ಕರಿಸಿದ ಚಹಾವೆಂದು ಗುರಿತಿಸಿಕೊಂಡಿದೆ. ಬಿಳಿ ಚಹಾವು ಕಡಿಮೆ ಸಂಸ್ಕರಿಸಲ್ಪಟ್ಟಿರುವುದರಿಂದ, ಹಸಿರು ಚಹಾಕ್ಕಿಂತಲೂ ಹೆಚ್ಚು ಉತ್ಕರ್ಷಣ ನಿರೋಧಕಗಳಾಗಿ ಇದನ್ನು ಬಳಕೆ ಮಾಡಲಾಗುತ್ತದೆ.

ಭಾರತದಲ್ಲಿ ಚಹಾವನ್ನು ತಯಾರಿಸುವ ವಿಧಾನವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಲೇ ಹೋಗುತ್ತದೆ. ಪ್ರತಿಯೊಂದು ಸ್ಥಳವು ತನ್ನದೇ ಆದ ವಿಶಿಷ್ಟ ಶೈಲಿ ಮತ್ತು ರುಚಿಯನ್ನು ಹೊಂದಿರುತ್ತದೆ.
ಬೆಣ್ಣೆ ಚಹಾ
ಲಡಾಖ್ ಮತ್ತು ಸಿಕ್ಕಿಂನಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಬೆಣ್ಣೆ ಚಹಾವನ್ನು ಹೆಚ್ಚಾಗಿ ಸವಿಯಬಹುದು.. ಸ್ಥಳೀಯರು ಇದನ್ನು ಗುರ್-ಗುರ್ ಚಾಯ್ ಎಂದೂ ಕರೆಯುತ್ತಾರೆ. ಟಿಬೆಟ್‌ನಲ್ಲಿ, ಈ ಚಹಾವನ್ನು ಪೋ ಚಾ ಎಂದು ಕರೆಯಲಾಗುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ಚಹಾ ಎಲೆಗಳು, ಬೆಣ್ಣೆ, ನೀರು ಮತ್ತು ಉಪ್ಪಿನಿಂದ ತಯಾರಿಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಸಣ್ಣ ಮಣ್ಣಿನ ಕಪ್‌ಗಳಲ್ಲಿ ಸರ್ವ್ ಮಾಡಲಾಗುತ್ತದೆ
ಕಹ್ವಾ
ಕಾಶ್ಮೀರಕ್ಕೆ ತೆರಳುವವರು ಕುಡಿಯಲೇ ಬೇಕಿರುವ ಪಾನೀಯಗಳ ಪೈಕಿ ಕಹ್ವಾ ಅತಿ ಮುಖ್ಯವಾದುದು. ಸಾಂಪ್ರದಾಯಿಕವಾಗಿ ಸಮೋವರ್ ಎಂದು ಕರೆಯಲ್ಪಡುವ ತಾಮ್ರದ ಪಾತ್ರೆಯಲ್ಲಿ ತಯಾರಿಸಲಾಗುವ ಕಹ್ವಾ ಆರೋಗ್ಯಕರವೂ ಹೌದು. ಕುದಿಯುವ ನೀರು ಮತ್ತು ದಾಲ್ಚಿನ್ನಿ, ಏಲಕ್ಕಿ, ಕೇಸರಿ ಮತ್ತು ಒಣಗಿದ ಗುಲಾಬಿ ದಳಗಳಂತಹ ಮಸಾಲೆಗಳಿಂದ ತಯಾರಿಸಿದ ವಿಶೇಷವಾದ ಚಹಾವಿದು. ಬಣ್ಣಕ್ಕಾಗಿ ಚಹಾ ಎಲೆಗಳನ್ನು ಕೊನೆಯಲ್ಲಿ ನೀರಿಗೆ ಸೇರಿಸಲಾಗುತ್ತದೆ. ಬಾದಾಮಿ ಚೂರುಗಳನ್ನು ಚಹಾದ ಮೇಲೆ ಅಲಂಕರಿಸಿ, ಜೇನುತುಪ್ಪದ ಜೊತೆಗೆ ಕುಡಿಯುವುದಕ್ಕೆ ನೀಡಲಾಗುತ್ತದೆ.
ನೂನ್ ಚಾಯ್
ಕಾಶ್ಮೀರದಲ್ಲಿ ಲಭ್ಯವಾಗುವ ಮತ್ತೊಂದು ಬಗೆಯ ಚಹಾ ನೂನ್ ಚಾಯ್, ಇದನ್ನು ಶೀರ್ ಚಾಯ್ ಎಂದೂ ಕರೆಯಲಾಗುತ್ತದೆ. ಇದು ಗುಲಾಬಿ ಬಣ್ಣದಲ್ಲಿದ್ದು, ಚಹಾ ಎಲೆಗಳು, ಏಲಕ್ಕಿ ಮತ್ತು ಅಡಿಗೆ ಸೋಡಾವನ್ನು ಗುಲಾಬಿ ಬಣ್ಣಕ್ಕೆ ಬರುವರೆಗೂ ಕುದಿಸಿ ತಯಾರಿಸಲಾಗುತ್ತದೆ. ಈ ಚಹಾವನ್ನು ಸಾಮಾನ್ಯವಾಗಿ ಹಾಲು, ಉಪ್ಪು, ಬಾದಾಮಿ ಮತ್ತು ಪಿಸ್ತಾದ ತುಂಡುಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ರಾಜಸ್ಥಾನ ಮತ್ತು ನೇಪಾಳದ ಅನೇಕ ಭಾಗಗಳಲ್ಲಿಯೂ ನೀವು ನೂನ್ ಚಾಯ್ ಅನ್ನು ಸವಿಯಬಹುದು.

ಮಸಾಲಾ ಚಾಯ್
ಅನೇಕ ಚಹಾ ಪ್ರಿಯರಿಗೆ ಅಚ್ಚುಮೆಚ್ಚಿನದಾದ ಮಸಾಲಾ ಚಾಯ್ ಅನ್ನು ಕಪ್ಪು ಚಹಾ ಎಲೆಗಳಿಂದ ತಯಾರಿಸಲಾಗುತ್ತದೆ. ಈ ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಹಾಲು, ಸಕ್ಕರೆ ಮತ್ತು ಶುಂಠಿ, ಏಲಕ್ಕಿ ಮತ್ತು ದಾಲ್ಚಿನ್ನಿಯಂತಹ ಮಸಾಲೆಗಳೊಂದಿಗೆ ಕುದಿಸಿ ತಯಾರಿಸಲಾಗುತ್ತದೆ. ಶುಂಠಿ ಚಹಾ ಮತ್ತು ಏಲಕ್ಕಿ ಚಹಾವು ದೇಶದಲ್ಲಿ ಲಭ್ಯವಾಗುವ ಮಸಾಲಾ ಚಾಯ್‌ನ ಕೆಲವು ವಿಧಗಳು.
ಅಮೃತ ತುಲ್ಯ ಚಹಾ
ಸಾಮಾನ್ಯವಾಗಿ ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ಪುಣೆಗೆ ಭೇಟಿ ಕೊಟ್ಟರೆ ಅಮೃತ ತುಲ್ಯ ಚಹಾವನ್ನು ಸವಿಯಬಹುದು. ಇದನ್ನು ಶುಂಠಿ, ಏಲಕ್ಕಿ ಪುಡಿ ಮತ್ತು ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಲಾಗುತ್ತದೆ. ಅಮೃತ ತುಲ್ಯ ಚಹಾವನ್ನು ಸಾಂಪ್ರದಾಯಿಕವಾಗಿ ಹಿತ್ತಾಳೆಯ ಪಾತ್ರೆಯಲ್ಲಿ ತಯಾರಿಸಲಾಗುತ್ತಿದ್ದು, ಆರೋಗ್ಯಕರವೆಂದು ಪರಿಗಣಿಸಲಾಗಿದೆ.
ಇವಿಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾದ ರೂಯಿಬೋಸ್ ಚಹಾ, ಅರ್ಜೆಂಟೀನಾದ ಮೇಟ್ ಟೀ, ಹೀಗೆ ಸಾಕಷ್ಟು ಬಗೆಯ ಚಹಾಗಳನ್ನು ಸ್ಥಳೀಯವಾಗಿ ತೆರಳಿ, ಸವಿಯುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.