ರಾಜಧಾನಿ ಬೆಂಗಳೂರಿನಿಂದ(Bengaluru) 60 ಕಿ.ಮೀ ದೂರದಲ್ಲಿ ತಟ್ಟೆಕೆರೆ(Thattekere) ಎಂಬ ವಿಸ್ಮಯ ತಾಣವೊಂದಿದೆ. ಬನ್ನೇರುಘಟ್ಟಕ್ಕೆ(Bannerughatta) ಅಂಟಿಕೊಂಡಂತೆಯೇ ಇರುವ ಈ ಜಾಗದ ಬಗ್ಗೆ ಬಹುತೇಕ ಪ್ರವಾಸಿಗರಿಗೆ ಗೊತ್ತಿಲ್ಲ. ತಿಳಿ ಮುಂಜಾನೆಯಲ್ಲಿ ಈ ತಾಣಕ್ಕೆ ಹೋದರೆ ದಿವ್ಯಾನುಭವ ಸಿಗುತ್ತದೆ. ಬೆಂಗಳೂರಿನಿಂದ ಇಲ್ಲಿಗೆ ತಲುಪಲು ಸರಿ ಸುಮಾರು ಒಂದೂವರೆ ಗಂಟೆಗಳು ತೆಗೆದುಕೊಳ್ಳಬಹುದು. ಆದ್ದರಿಂದ ವೀಕೆಂಡ್‌ ರಜೆಯಲ್ಲಿ ಪ್ರವಾಸಿಗರು ಇಲ್ಲಿಗೆ ಹೋಗಬಹುದು. ಕೆರೆ ದಟ್ಟವಾದ ಕಾಡಿನ ಮಧ್ಯದಲ್ಲಿದೆ. ಈ ಪ್ರದೇಶವು ಆನೆಗಳ ಪ್ರವೇಶ ಕೇಂದ್ರವೂ ಆಗಿದೆ.

ತಟ್ಟೆಕೆರೆ

ಕೆರೆ ಅದರ ವೃತ್ತಾಕಾರದ ಆಕಾರದಿಂದ ಪ್ರಸಿದ್ಧಿ ಪಡೆದಿದೆ. ತಟ್ಟೆಕೆರೆಯು ಒಂದು ದೊಡ್ಡ ಕೆರೆ. ಕೆರೆಯ ಸಮೀಪದಲ್ಲಿಯೇ ಪುರಾತನ ಮಹದೇಶ್ವರ ದೇವಾಲಯವಿದೆ. ಹತ್ತಿರದಲ್ಲಿ ಕೆಲವು ಕಾವಲು ಗೋಪುರಗಳಿದ್ದು, ಪಕ್ಷಿಗಳನ್ನೂ ಕಾಣಬಹುದು. ತಟ್ಟೆಕೆರೆ ಕೆರೆಯನ್ನು ತಲುಪಲು ರಸ್ತೆಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಸುಮಾರು ಒಂದು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕು. ಈ ಪ್ರದೇಶದಲ್ಲಿ ಲ್ಯಾಪ್‌ವಿಂಗ್‌ಗಳು, ಬೀ ಈಟರ್ಸ್, ಕೈಟ್ಸ್, ಕೊಕ್ಕರೆಗಳು ಮತ್ತು ಮಿಂಚುಳ್ಳಿಗಳಿವೆ. ಅಲ್ಲಿನ ಪ್ರಶಾಂತತೆ ಪ್ರವಾಸಿಗರಿಗೆ ಇಷ್ಟವಾಗುತ್ತದೆ. ಪಕ್ಷಿ ವೀಕ್ಷಣೆಯಲ್ಲಿ ಆಸಕ್ತಿ ಉಳ್ಳವರು ಅದ್ಭುತ ಫೋಟೊಶೂಟ್‌ಗಾಗಿ ಕ್ಯಾಮೆರಾ ಒಯ್ಯಬಹುದು. ವಿಶೇಷವಾಗಿ ಬೆಳಗಿನ ಜಾವದಲ್ಲಿ ಕೆರೆ ರಮಣೀಯವಾಗಿ ಕಾಣುತ್ತದೆ. ಅದರಲ್ಲೂ ಸೂರ್ಯೋದಯದ ಸಮಯದಲ್ಲಿ ತಟ್ಟೆಕೆರೆಗೆ ತಲುಪಿದರಂತೂ ಕಣ್ಣಿಗೆ ಹಬ್ಬ.

ಬನ್ನೇರುಘಟ್ಟ ರಸ್ತೆ ಮತ್ತು ಕನಕಪುರ ರಸ್ತೆಯ ಮೂಲಕ ತಟ್ಟೆಕೆರೆಯನ್ನು ತಲುಪಬಹುದು. ಹತ್ತಿರದಲ್ಲಿ ಯಾವುದೇ ಸೌಲಭ್ಯಗಳು ಲಭ್ಯವಿಲ್ಲದ ಕಾರಣ ಆಹಾರ ಮತ್ತು ನೀರನ್ನು ಒಯ್ಯುವುದು ಸೂಕ್ತ. ಹತ್ತಿರದಲ್ಲೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಭೀಮೇಶ್ವರಿ ತಾಣವಿದೆ. ಬಿಡುವು ಮಾಡಿಕೊಂಡು ಅಲ್ಲಿಗೆ ಹೋದರೆ ವಾರಾಂತ್ಯದ ರಜೆ ಸಂಪನ್ನ!