ಭಾರತವು ತನ್ನ ಭೂ ಗಡಿಗಳನ್ನು ನೇಪಾಳ, ಭೂತಾನ್, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಈ ಆರು ದೇಶಗಳೊಂದಿಗೆ ಹಂಚಿಕೊಂಡಿದೆ. ಶ್ರೀಲಂಕಾದೊಂದಿಗೆ ಸಮುದ್ರ ಗಡಿಯೂ ಇದೆ. ಈ ಪ್ರತಿಯೊಂದು ದೇಶಗಳು ವಿಶಿಷ್ಟವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವಗಳನ್ನು ನೀಡುತ್ತವೆ. ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಅದ್ಭುತಗಳ ಸಮ್ಮಿಲನದಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಬೆರಗಾಗುವಂತೆ ಮಾಡಿದೆ.

ನೇಪಾಳ

ನೇಪಾಳ ಮತ್ತು ಭಾರತದ ನಡುವಿನ ಗಡಿಯು ನಿಮಗೆ ಸಾಂಸ್ಕೃತಿಕವಾಗಿ ಶ್ರೀಮಂತ ಅನುಭವಗಳನ್ನು ನೀಡುತ್ತದೆ. ಸುತ್ತಲೂ ಪರ್ವತಗಳಿಂದ ಕೂಡಿರುವ ಈ ಪ್ರದೇಶವು ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್‌ನ ನೆಲೆಯಾಗಿದೆ. ಪಶುಪತಿನಾಥ ದೇವಾಲಯ, ಸಾಗರ್ಮಾತಾ ರಾಷ್ಟ್ರೀಯ ಉದ್ಯಾನವನ, ಫೇವಾ ಸರೋವರ, ಲಾಂಗ್ಟಾಂಗ್ ರಾಷ್ಟ್ರೀಯ ಉದ್ಯಾನವನ, ಸ್ವಯಂಭೂನಾಥ ಸ್ತೂಪ, ನಾಗರಕೋಟ್ , ಚಂದ್ರಗಿರಿ, ಜಾನಕಿ ದೇವಾಲಯ ಹಾಗೂ ಚಿತ್ವಾನ್ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳು ಇಲ್ಲಿವೆ.

nepal city

ಭೂತಾನ್

ಭಾರತದೊಂದಿಗೆ ಭೂತಾನ್ ಪ್ರಶಾಂತ ಗಡಿಯನ್ನು ಹಂಚಿಕೊಂಡಿದೆ. ನೀವು ಭೂತಾನ್‌ಗೆ ರಸ್ತೆ ಪ್ರವಾಸ ಮಾಡುವ ಅನುಭವವೇ ಬೇರೆ. ಹಚ್ಚ ಹಸಿರಿನ ಭೂದೃಶ್ಯಗಳು, ಸಾಂಪ್ರದಾಯಿಕ ಭೂತಾನ್ ವಾಸ್ತುಶಿಲ್ಪ ಮತ್ತು ಪೂರ್ವ ಹಿಮಾಲಯದ ಎತ್ತರದ ಶಿಖರಗಳು ಈ ತಾಣಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ.

ಚೀನಾ

ಭಾರತ ಮತ್ತು ಚೀನಾ ನಡುವಿನ ಗಡಿಯು ಹಿಮಾಲಯವನ್ನು ವ್ಯಾಪಿಸಿದ್ದು, ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ವ್ಯಾಪಿಸಿದೆ. ಈ ಗಡಿ ಪ್ರದೇಶವು ಭವ್ಯವಾದ ಪರ್ವತ ಪ್ರದೇಶಗಳು ಮತ್ತು ವಿಶೇಷವಾದ ಸರೋವರಗಳೊಂದಿಗೆ ಪ್ರಕೃತಿ ಪ್ರಿಯರನ್ನು ಸೆಳೆಯುತ್ತವೆ. ಶಾಂಘೈ, ಕ್ಸಿಯಾನ್‌, ಬೀಜಿಂಗ್‌ ಸೇರಿದಂತೆ ಇಲ್ಲಿ ಭೇಟಿ ನೀಡಲು ಅನೇಕ ಪ್ರವಾಸಿ ಸ್ಥಳಗಳಿದ್ದು, ಪ್ರವಾಸದ ವೇಳೆ ಯಾವುದನ್ನೂ ಮಿಸ್‌ ಮಾಡಿಕೊಳ್ಳಬೇಡಿ.

china

ಬಾಂಗ್ಲಾದೇಶ

ಭಾರತವು ಪೂರ್ವದಲ್ಲಿ ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇದು ಗಂಗಾ-ಬ್ರಹ್ಮಪುತ್ರ ಡೆಲ್ಟಾದ ಫಲವತ್ತಾದ ಬಯಲು ಪ್ರದೇಶಗಳಿಂದ ಗುರುತಿಸಲ್ಪಟ್ಟಿದೆ. ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯವಾದ ಸುಂದರಬನ್ಸ್ ಅನ್ನು ಸಹ ಭಾರತ ಹಾಗೂ ಬಾಂಗ್ಲಾ ಹಂಚಿಕೊಂಡಿದೆ. ಇಲ್ಲಿ ಭೇಟಿ ನೀಡುವುದಕ್ಕೆ ಸಂಸತ್ ಭವನ, ಧಾಕೇಶ್ವರಿ ದೇವಸ್ಥಾನ ಮತ್ತು ಲಾಲ್‌ಬಾಗ್ ಕೋಟೆ, ಬಂಗಾಳದ ತಾಜ್‌ಮಹಲ್, ಮೇಘನಾ ನದಿಗೆ ದೋಣಿ ವಿಹಾರ ಹೀಗೆ ಸಾಕಷ್ಟು ಸ್ಥಳಗಳಿವೆ.

ಮ್ಯಾನ್ಮಾರ್

ಭಾರತದ ಈಶಾನ್ಯ ಗಡಿಯು ಮ್ಯಾನ್ಮಾರ್ ಅನ್ನು ಸಂಧಿಸುತ್ತದೆ. ಮಣಿಪುರ ಮತ್ತು ಮಿಜೋರಾಂನ ಗಡಿ ಪ್ರದೇಶಗಳು ಹಚ್ಚ ಹಸಿರಿನಿಂದ ಪರ್ವತ ಪ್ರದೇಶಗಳಿಂದ ಕೂಡಿದೆ. ಇಲ್ಲಿ ಯಾಂಗೂನ್‌, ಬಗಾನ್‌ ಡಿಸ್ಕವರಿ, ಮೌಂಟ್‌ ಪೋಪಾ, ಬಗಾನ್‌, ಕಲಾವ್‌, ಇನ್ಲೆ ಸರೋವರ ಹೀಗೆ ಸಾಕಷ್ಟು ಪ್ರವಾಸಿ ತಾಣಗಳಿವೆ.

myanmar

ಪಾಕಿಸ್ತಾನ

ಭಾರತದ ಪಾಕಿಸ್ತಾನದ ಗಡಿಯು ಜಮ್ಮು ಮತ್ತು ಕಾಶ್ಮೀರದ ಎತ್ತರದ ಪರ್ವತಗಳಿಂದ ಹಿಡಿದು ರಾಜಸ್ಥಾನದ ವಿಶಾಲವಾದ ಮರುಭೂಮಿಗಳು ಮತ್ತು ಗುಜರಾತ್‌ನ ಬಯಲು ಪ್ರದೇಶಗಳವರೆಗೆ ವ್ಯಾಪಿಸಿದೆ. ಮಲಮ್‌ ಜಬ್ಬಾ, ಕಘನ್‌ ಕಣಿವೆ, ಸ್ಕರ್ದು, ಹುಂಜಾ ಕಣಿವೆ, ಶೋಗ್ರಾನ್‌ ಹಿಲ್ಸ್‌ ಹೀಗೆ ಪ್ರವಾಸಿಗರನ್ನು ಸೆಳೆಯುವ ಅನೇಕ ತಾಣಗಳು ಇಲ್ಲಿವೆ.

ಶ್ರೀಲಂಕಾ

ಭಾರತವು ಶ್ರೀಲಂಕಾದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳದಿದ್ದರೂ, ಆಕರ್ಷಕವಾದ ಸಮುದ್ರ ಗಡಿಯಿದೆ. ತಮಿಳುನಾಡಿನ ರಾಮೇಶ್ವರಂ ಮತ್ತು ಶ್ರೀಲಂಕಾದ ನಡುವಿನ ಮನ್ನಾರ್ ಕೊಲ್ಲಿಯು ಅತ್ಯಂತ ವೈವಿಧ್ಯಮಯವಾದ ಪರಿಸರವನ್ನು ಪ್ರವಾಸಿಗರಿಗೆ ಒದಗಿಸುತ್ತದೆ.