ಅಪಘಾತ ತಪ್ಪಿಸುವ ಬುಲೆಟ್ ಬಾಬಾ... ಮದ್ಯಪಾನ ಅರ್ಪಿಸಿ ಚಾಲನೆ ಮಾಡಿ!
ಬುಲೆಟ್ ಬೈಕ್ ಅನ್ನು ಪೂಜಿಸುವ ಈ ದೇವಾಲಯದ ಹೆಸರು 'ಓಂ ಬನ್ನಾ ಧಾಮ್'. ಆದರೆ ಜನರು ಇದನ್ನು ಬುಲೆಟ್ ಬಾಬಾ ದೇವಾಲಯ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ದೇವಾಲಯ ರಾಜಸ್ಥಾನದ ಜೋಧ್‌ಪುರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಪಾಲಿ ನಗರದ ಬಳಿಯ ಚೋಟಿಲಾ ಗ್ರಾಮದಲ್ಲಿದೆ. ವಾಸ್ತವವಾಗಿ, ಸುಮಾರು 30 ವರ್ಷಗಳಿಂದ ಇಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗೆ ಪೂಜೆ ನಡೆಸಲಾಗುತ್ತಿದೆ.
- ದಿವಿಜ್ ಬಿ ಎಂ
ಸಾಮಾನ್ಯವಾಗಿ ದೇವಾಲಯಗಳಲ್ಲಿ ವಿವಿಧ ದೇವರಗಳ ಮೂರ್ತಿಗಳನ್ನಿಟ್ಟು ಪೂಜಿಸುವುದನ್ನು ಕಾಣಬಹುದು. ಆದರೆ ಎಂದಾದರೂ ಬೈಕನ್ನೇ ದೇವರಂತೆ ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಹೌದು, ಬುಲೆಟ್ ಬೈಕ್ ಅನ್ನು ಪೂಜಿಸುವ ದೇವಾಲಯವಿದೆ. ಒಂದು ಕ್ಷಣ ನಿಮಗಿದು ವಿಚಿತ್ರವೆಂದೆನಿಸಬಹುದು. ಆದರೆ ಈ ಬೈಕ್ ಪೂಜಿಸಲು ದೂರದ ಸ್ಥಳಗಳಿಂದ ಪ್ರತೀ ವರ್ಷ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.
ದೇವಸ್ಥಾನದ ಹೆಸರೇನು?
ಬುಲೆಟ್ ಬೈಕ್ ಅನ್ನು ಪೂಜಿಸುವ ಈ ದೇವಾಲಯದ ಹೆಸರು 'ಓಂ ಬನ್ನಾ ಧಾಮ್'. ಆದರೆ ಜನರು ಇದನ್ನು ಬುಲೆಟ್ ಬಾಬಾ ದೇವಾಲಯ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ದೇವಾಲಯ ರಾಜಸ್ಥಾನದ ಜೋಧ್‌ಪುರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಪಾಲಿ ನಗರದ ಬಳಿಯ ಚೋಟಿಲಾ ಗ್ರಾಮದಲ್ಲಿದೆ. ವಾಸ್ತವವಾಗಿ, ಸುಮಾರು 30 ವರ್ಷಗಳಿಂದ ಇಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗೆ ಪೂಜೆ ನಡೆಸಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡಿದರೆ ದೇವರ ಬದಲಾಗಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಅನ್ನು ಪೂಜಿಸುವುದನ್ನು ಕಾಣಬಹುದು.

ಪೂಜೆ ಸಲ್ಲಿಸುವುದರ ಹಿಂದಿನ ರಹಸ್ಯ
ಇಲ್ಲಿನ ಸ್ಥಳೀಯರು ಹೇಳುವಂತೆ, ಬುಲೆಟ್ ಬಾಬಾ ದೇವಾಲಯದ ಹಿಂದೆ ಒಂದು ಆಸಕ್ತಿದಾಯಕ ಮತ್ತು ಭಾವನಾತ್ಮಕ ಕಥೆ ಇದೆ. ಇದು 1988 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ. ಓಂ ಸಿಂಗ್ ರಾಥೋಡ್ (ಸ್ಥಳೀಯರು ಅವರನ್ನು 'ಓಂ ಬನ್ನಾ' ಎಂದು ಕರೆಯುತ್ತಾರೆ) ತಮ್ಮ ರಾಯಲ್ ಎನ್‌ಫೀಲ್ಡ್ ಮೋಟಾರ್ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಾಲಿಯಿಂದ ಸ್ವಲ್ಪ ದೂರದಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಅಪಘಾತದ ನಂತರ, ಅವರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ ಬಳಿಕ, ಪೊಲೀಸರು ಅವರ ಬುಲೆಟ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಅಲ್ಲೇ ಇಡುತ್ತಾರೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಮರುದಿನ ಬೈಕ್ ಠಾಣೆಯಿಂದ ನಾಪತ್ತೆಯಾಗಿರುತ್ತದೆ. ಹುಡುಕಿದಾಗ, ಬೈಕ್ ಅಪಘಾತ ನಡೆದ ಸ್ಥಳದಲ್ಲಿಯೇ ಪತ್ತೆಯಾಗಿರುತ್ತದೆ. ಬೈಕನ್ನು ಮತ್ತೆ ಪೊಲೀಸ್ ಠಾಣೆಗೆ ತಂದರೂ ಕೂಡ, ಆ ರಾತ್ರಿ ಅದೇ ಘಟನೆ ಮತ್ತೆ ಸಂಭವಿಸುತ್ತದೆ. ರಾತ್ರಿ ಬೈಕ್ ತನ್ನಷ್ಟಕ್ಕೆ ತಾನೇ ಸ್ಟಾರ್ಟ್ ಆಗಿ ಅಪಘಾತ ಸ್ಥಳಕ್ಕೆ ಹೋಗುತ್ತಿರುವದನ್ನು ಪೊಲೀಸರು ನೋಡಿದ್ದರು. ಇದಾದ ನಂತರ ಪೊಲೀಸರು ಬುಲೆಟ್ ಅನ್ನು ಸರಪಳಿಯಲ್ಲಿ ಕಟ್ಟಿದ್ದರು. ಅದಾಗ್ಯೂ, ಅದು ಅಪಘಾತವಾದ ಸ್ಥಳದಲ್ಲಿತ್ತು. ಈ ಘಟನೆಯ ನಂತರ, ಸ್ಥಳೀಯ ಜನರು ಇದನ್ನು ದೈವಿಕ ಶಕ್ತಿ ಎಂದು ಪರಿಗಣಿಸಿ ಓಂ ಬನ್ನಾ ಮತ್ತು ಅವರ ಬುಲೆಟ್ ಅನ್ನು ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುವ ಮೂಲಕ ಪೂಜಿಸಲು ಪ್ರಾರಂಭಿಸಿದರು.

ನೈವೇದ್ಯವಾಗಿ ಮದ್ಯ ಅರ್ಪಣೆ
ಅತ್ಯಂತ ಕುತೂಹಲಕಾರಿ ವಿಷಯವೆಂದರೆ ಈ ದೇವಾಲಯದಲ್ಲಿ, ಹೂಮಾಲೆ, ತೆಂಗಿನಕಾಯಿ ಜತೆಗೆ ಮದ್ಯವನ್ನು ದೇವರಿಗೆ ಅರ್ಪಿಸುತ್ತಾರೆ. ನಂತರ ಅದನ್ನೇ ಪ್ರಸಾದವಾಗಿ ಜನರಿಗೆ ವಿತರಿಸಲಾಗುತ್ತದೆ. ರಾಜಸ್ಥಾನದಲ್ಲಿರುವ ಈ ದೇವಾಲಯದ ಮುಂದಿನಿಂದ ಹೋಗುವ ಪ್ರತಿಯೊಬ್ಬರೂ ಇಲ್ಲಿ ಗಾಡಿ ನಿಲ್ಲಿಸಿ ನಮಸ್ಕರಿಸಿ, ಬಳಿಕ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಾರೆ. ಇದರಿಂದ ಅಪಘಾತಗಳು ಸಹ ಸಂಭವಿಸುವುದಿಲ್ಲ ಎಂದು ಹೇಳಲಾಗುತ್ತದೆ.
ಸುರಕ್ಷಿತ ಪ್ರಯಾಣಕ್ಕಾಗಿ ಪೂಜೆ
ರಾಜಸ್ಥಾನ ಮಾತ್ರವಲ್ಲದೇ ದೇಶದ ಮೂಲೆ ಮೂಲೆಯಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದು, ದಿನದಿಂದ ದಿನಕ್ಕೆ ಈ ದೇವಾಲಯದ ಮನ್ನಣೆ ಹೆಚ್ಚುತ್ತಿದೆ. ವಿಶೇಷವಾಗಿ ಪ್ರಯಾಣಿಕರು ಮತ್ತು ಬೈಕ್ ಸವಾರರು ತಮ್ಮ ಸುರಕ್ಷಿತ ಪ್ರಯಾಣಕ್ಕಾಗಿ ಇಲ್ಲಿ ಬುಲೆಟ್ ಅನ್ನು ಪೂಜಿಸಲು ಬರುತ್ತಾರೆ. ಇಲ್ಲಿ ಕೆಂಪು ದಾರಗಳನ್ನು ಕಟ್ಟಿ ಪ್ರಾರ್ಥಿಸಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಜನರು ನಂಬುತ್ತಾರೆ. ಪ್ರತಿ ವರ್ಷ ಸಾವಿರಾರು ಜನರು ಈ ದೇವಾಲಯಕ್ಕೆ ದರ್ಶನ ಪಡೆಯಲು ಬರುತ್ತಿರುವುದು ವಿಶೇಷ.