Tuesday, November 3, 2026
Tuesday, November 3, 2026

ಗುಣಾ ಕೇವ್ಸ್‌ ದುರಂತದ ಕಥನ

ಪ್ರಕೃತಿಯ ಸೌಂದರ್ಯ ಸವಿಯಲು ಹೋದ ಉತ್ಸಾಹಿಗಳು ದಾರಿ ತಪ್ಪಿದಾಗ, ಮುಸ್ಸಂಜೆಯ ಕತ್ತಲು ಹಾಗೂ ಅಜ್ಞಾತ ಕಂದಕಗಳು ಎಂತೆಂಥ ಅವಾಂತರಗಳನ್ನು ಸೃಷ್ಟಿಸಬಲ್ಲವು ಎಂಬುದಕ್ಕೆ 2006ರ ಕೊಡೈಕೆನಾಲ್‌ನಲ್ಲಾದ ದುರಂತವೇ ಸಾಕ್ಷಿ.

  • ಪಾರ್ವತಿ ಶಂಭು

ಮಂಜುಮೆಲ್ ಬಾಯ್ಸ್ ಎಂಬುದು 2024ರಲ್ಲಿ ತೆರೆಕಂಡ ಒಂದು ಮಲಯಾಳಂ ಚಿತ್ರ. ಕೊಡೖಕೆನಾಲ್‌ನ ʻಗುಣಾಕೇವ್ಸ್ʻನಲ್ಲಿ 2006ರಲ್ಲಿ ಆದ ಒಂದು ದುರ್ಘಟನೆಯನ್ನು ಆಧಾರವಾಗಿಟ್ಟುಕೊಂಡು ತೆಗೆದ ಚಿತ್ರವಿದು. ಚಿತ್ರಕಥೆ ಹಾಗೂ ನಿರ್ದೇಶನ ಚಿದಂಬರಂ ಅವರದ್ದು.

ಕೊಚ್ಚಿ ಹತ್ತಿರದ ʻಮಂಜುಮೆಲ್ ಗ್ರಾಮʻದ ಯುವಕರ ತಂಡವೊಂದು ಕೊಡೖಕೆನಾಲ್‌ನ ಗುಣಾ ಕೇವ್ಸ್‌ಗೆ ಹೋಗಲು ತೀರ್ಮಾನಿಸಿ ಹೊರಡುತ್ತಾರೆ. ಮೊದಲೇ ಯುವಕರ ತಂಡ, ಉತ್ಸಾಹ, ಸಂಭ್ರಮ, ಖುಷಿಯಲ್ಲಿ ಎಲ್ಲರೂ ಹೊರಟು ಗುಣಾ ಕೇವ್ಸ್‌ ತಲುಪುತ್ತಾರೆ. ಕೇವ್‌ನ ಸುತ್ತಲೂ ಇದ್ದ ಸುಂದರ ಪರಿಸರ, ಪ್ರಕೃತಿ ಹಾಗೂ ಪುರಾತನ ಮರದ ಬೇರುಗಳು ಹರಡಿರುವ ಸ್ಥಳವನ್ನು ಸಂಭ್ರಮಿಸುತ್ತಲೇ, ನಿಷೇಧಿತ ಸ್ಥಳವಾದ ಕೇವ್‌ನ ಒಳ ನುಸುಳುವ ಕುತೂಹಲ ಎಲ್ಲರಲ್ಲೂ ಹುಟ್ಟಿಕೊಳ್ಳುತ್ತದೆ. ಕಾವಲುಗಾರನ ಕಣ್ಣು ತಪ್ಪಿಸಿ ಕುಣಿಯುತ್ತಾ, ನೆಗೆಯುತ್ತಾ, ಗುಹೆಯೊಳಗೆ ಪ್ರವೇಶಿಸಿಬಿಡುತ್ತಾರೆ. ಮುಂದೆ ಮುಂದೆ ಸಾಗುತ್ತಿರುವಾಗ ಗುಂಪಿನ ಸುಭಾಷ್ ಎಂಬ ಹುಡುಗ ಮುಂದಿನ ಕಂದಕವನ್ನು ಗಮನಿಸದೆ ಮುಂದೆ ಸಾಗಿ ಸುಮಾರು 900 ಅಡಿಗಳ ಗುಹೆಯೊಳಗೆ ಬಿದ್ದುಬಿಡುತ್ತಾನೆ. ಹುಡುಗರ ಉತ್ಸಾಹ ಖುಷಿ ಒಮ್ಮೆಲೇ ಸ್ತಬ್ಧವಾಗಿ ಬಿಡುತ್ತದೆ. ಎಷ್ಟು ಕೂಗಿಕೊಂಡರೂ ಗುಹೆ ಒಳಗಿನಿಂದ ಯಾವ ಉತ್ತರವೂ ಬರುವುದಿಲ್ಲ. ದೊಡ್ಡ ದುರಂತವೊಂದು ಆಗಿ ಹೋಗಿದೆ ಎಂಬ ಅರಿವು ಅವರಿಗಾಗುತ್ತದೆ. ಅಸಹಾಯಕರಾಗಿ ಹೊರ ನಡೆದು ಸ್ಥಳೀಯರ, ಪೊಲೀಸರ ಹಾಗೂ ಅರಣ್ಯ ಇಲಾಖೆಯವರ ಸಹಾಯ ಕೋರುತ್ತಾರೆ. ಆದರೆ, ಸ್ಥಳೀಯರು ಈವರೆಗೂ ಈ ಗುಹೆಯಲ್ಲಿ ಸುಮಾರು 13 ಜನರು ಬಿದ್ದಿದ್ದಾರೆ, ಅವರಲ್ಲಿ ಯಾರೊಬ್ಬರೂ ಬದುಕಿ ಬರಲಿಲ್ಲ ಎಂದು ಹೇಳುತ್ತಾರೆ. ಬ್ರಿಟಿಷರು ಈ ಗುಹೆಯನ್ನು ʻಡೆವಿಲ್ಸ್ ಕಿಚನ್ʻ ಎಂದು ಕರೆಯುತ್ತಿದ್ದರೆಂದು ಬಣ್ಣಿಸುತ್ತಾರೆ. ಹುಡುಗರ ದುಃಖ ಮುಗಿಲು ಮುಟ್ಟುತ್ತದೆ. ಪೊಲೀಸರಿಗೆ ವಿಷಯ ತಿಳಿಸಿ, ಹೇಗಾದರೂ ಮಾಡಿ ಗೆಳೆಯನನ್ನು ರಕ್ಷಿಸಿ ಎಂದು ಬೇಡಿಕೊಳ್ಳುತ್ತಾರೆ. ನಿಷೇಧಿತ ಸ್ಥಳವನ್ನು ಪ್ರವೇಶಿಸಿದ ನಿಮ್ಮ ಮೇಲೆ ಎಫ್ಐಆರ್ ಹಾಕುತ್ತೇವೆ ಅಲ್ಲದೇ, ನೀವೇ ಸುಭಾಷ್‌ನನ್ನು ಕೊಲೆಮಾಡಿ ನಾಟಕ ಮಾಡುತ್ತಿದ್ದೀರಿ ಎಂದು ಆ ಹುಡುಗರನ್ನು ಥಳಿಸುತ್ತಾರೆ. ಇದೇ ಸಮಯದಲ್ಲಿ ಮಳೆಯು ಪ್ರಾರಂಭಿಸಿ ಗುಹೆಯೊಳಗೆ ಪ್ರವಾಹ ಶುರುವಾಗುತ್ತದೆ. ಕೊನೆಗೂ ಪೊಲೀಸರ ಮನವೊಲಿಸುವಲ್ಲಿ ಹುಡುಗರು ಸಫಲರಾಗುತ್ತಾರೆ.

ಇದನ್ನೂ ಓದಿ: ಗೋಲ್ಡನ್ ಹವರ್ ಚಿತ್ರಗಳಿಗೆ ಚಿನ್ನದ ಲೇಪ

ಪೊಲೀಸ್ ಆಫೀಸರ್ ಹಾಗೂ ತಂಡ ಘಟನೆ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಗಮನಿಸಿ ಆ ಹುಡುಗ ಬದುಕಿರುವುದಿಲ್ಲವೆಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಅಷ್ಟರಲ್ಲೇ ಗೆಳೆಯನೊಬ್ಬನಿಗೆ ಸುಭಾಷ್ ಪ್ರಪಾತದೊಳಗಿಂದ ಅಳುವ ಸದ್ದು ಕೇಳಿಸುತ್ತದೆ. ಗೆಳೆಯನನ್ನು ಹೇಗಾದರೂ ಜೀವಂತವಾಗಿ ರಕ್ಷಿಸಬೇಕೆಂದು ಪೊಲೀಸರಲ್ಲಿ ಗೋಗರೆಯುತ್ತಾರೆ. ಪೊಲೀಸರು ಸುಭಾಷ್‌ನನ್ನು ರಕ್ಷಿಸುವ ಕೆಲಸಕ್ಕೆ ಕೈಹಾಕುತ್ತಾರೆ. ಹೆಚ್ಚಿನ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳವನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸುತ್ತಾರೆ. ಅವರು ಎದುರಿಸುವ ಸಮಸ್ಯೆಗಳು, ವಿಫಲತೆ ಅವರ ನಿರಾಸೆ ಎಲ್ಲವನ್ನೂ ಸಿನಿಮಾದಲ್ಲಿ ಅತ್ಯಂತ ಸಹಜವಾಗಿ ಚಿತ್ರೀಕರಿಸಲಾಗಿದೆ.

ಸುಭಾಷ್‌ನನ್ನು ರಕ್ಷಿಸಲು ಅವನ ಗೆಳೆಯ ಕುಟ್ಟಾನ್ ಗುಹೆಯೊಳಗೆ ಹೋಗುವ ಸಾಹಸಕ್ಕೆ ಮುಂದಾಗುತ್ತಾನೆ. ಅಲ್ಲಿ ಬರುವ ಅನೇಕ ಸಮಸ್ಯೆಗಳು ಆತಂಕ ಕಷ್ಟ ಎಲ್ಲವೂ ಕಳೆದು ಎಲ್ಲರೂ ಸೇರಿ ಸುಭಾಷ್‌ನನ್ನು ರಕ್ಷಿಸಿ ಮೇಲೆ ತಂದು ಆಸ್ಪತ್ರೆಗೆ ಒಯ್ಯುತ್ತಾರೆ. ಹೀಗೆ ಈ ಸಿನಿಮಾ ಸುಖಾಂತ್ಯ ಕಾಣುತ್ತದೆ. ನೋಡುಗರ ಮುಖದಲ್ಲಿ ಮಂದಹಾಸ ಮಿನುಗುತ್ತದೆ. ಮೂರು ಜನ ನಿರ್ಮಾಪಕರು ಹಣ ಹೂಡಿದ್ದಾರೆ. ಅನೇಕ ದಾಖಲೆಗಳನ್ನು ಈ ಸಿನಿಮಾ ಸೃಷ್ಟಿಸಿದೆ. ಅದರಲ್ಲಿ 200 ಕೋಟಿಯಷ್ಟು ಹಣ ಮಾಡಿದ್ದೂ ಒಂದು. ಕೇರಳ ರಾಜ್ಯ ಪ್ರಶಸ್ತಿಗಳಲ್ಲಿ 10 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು. ಉತ್ತಮ ಚಿತ್ರ, ಉತ್ತಮ ನಿರ್ದೇಶನ, ಉತ್ತಮ ಚಿತ್ರಕಥೆ, ಉತ್ತಮ ಛಾಯಾಗ್ರಹಣ ಹೀಗೆ 10 ಪ್ರಶಸ್ತಿಗಳು ಈ ಚಿತ್ರದ ಪಾಲಾಗಿವೆ.

ಈ ಸಿನಿಮಾ ಎಚ್ಚರ ತಪ್ಪಿದರೆ ಸುಂದರ ನೆನಪಾಗಬೇಕಿದ್ದ ಟ್ರಿಪ್‌ ಎಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಬಲ್ಲದು ಎನ್ನುವುದಕ್ಕೆ ಸಾಕ್ಷಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!