ನುಡಿ ನಮನ

ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಜಾತಶತ್ರು ಎಂದೇ ಹೆಸರು ಮಾಡಿದ್ದ ಹಿರಿಯ ಹಾಗೂ ಅನುಭವಿ ಅಧಿಕಾರಿ, ಹೆಚ್ ಟಿ ರತ್ನಾಕರ್ ಅವರ ಹಠಾತ್ ನಿಧನದ ಸುದ್ದಿ ಒಟ್ಟಾರೆ ಪ್ರವಾಸೋದ್ಯಮ ಮತ್ತು ಅತಿಥ್ಯಕ್ಷೇತ್ರಕ್ಕೆ ಆಘಾತ ತಂದಿದೆ.

ಕಳೆದ ವಾರ ಅಂದರೆ ನವೆಂಬರ್ 3, ರಂದು ಕೊಂಚ ಅನಾರೋಗ್ಯಕ್ಕೊಳಗಾದ ರತ್ನಾಕರ್ ಅದೇ ರಾತ್ರಿ ತೀವ್ರ ಹೃದಯಾಘಾತಕ್ಕೀಡಾಗಿ ಇಹಲೋಕದ ಯಾತ್ರೆ ಮುಗಿಸಿದರು. ಎಪ್ಪತ್ತು ವರ್ಷ ವಯಸ್ಸಿನ ರತ್ನಾಕರ್ ಅವರ ನಿಧನ ಸುದ್ದಿ ನಿಜಕ್ಕೂ ಯಾರಿಂದಲೂ ನಂಬಲಾಗದ್ದು.

ಬಹಳ ಆರೋಗ್ಯದಿಂದಿದ್ದ, ಶಿಸ್ತುಬದ್ಧ ಜೀವನಶೈಲಿ ರೂಪಿಸಿಕೊಂಡಿದ್ದ ರತ್ನಾಕರ್, ತಮ್ಮ ಕಾರ್ಯವೈಖರಿಯಿಂದ, ಅಪಾರ ಅನುಭವದಿಂದ, ತಾಳ್ಮೆ ಮತ್ತು ಸ್ನೇಹಶೀಲತೆಯಿಂದ ಬಹುದೊಡ್ಡ ಆಪ್ತವಲಯ ಹೊಂದಿದವರು. ಹೀಗಾಗಿ ಅವರ ನಿಧನವಾರ್ತೆ ಬಹಳಷ್ಟು ಮಂದಿಗೆ ಈ ಕ್ಷಣಕ್ಕೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.

ಮಿತಭಾಷಿ ಹಾಗೂ ಅತ್ಯುತ್ತಮ ಕೆಲಸಗಾರರೆಂದೇ ಗುರುತಿಸಿಕೊಂಡಿದ್ದ ಹೆಚ್ ಟಿ ರತ್ನಾಕರ್ ಅವರ ಪರಿಚಯ ಕೇವಲ ಕೆ ಎಸ್ ಟಿ ಡಿಸಿಗೆ ಸೀಮಿತವಾಗಿರಲಿಲ್ಲ. ರಾಜ್ಯದ ಮುಖ್ಯಮಂತ್ರಿಗಳ ತನಕ ಎಲ್ಲ ರಾಜಕೀಯ ವ್ಯಕ್ತಿಗಳಿಗೆ ರತ್ನಾಕರ್ ಪರಿಚಯವಿತ್ತು. ಮಾತಾಡುವಷ್ಟು ಸಲುಗೆ ಇತ್ತು. ರಾಜ್ಯದ ಹಾಸ್ಪಿಟಾಲಿಟಿ ಇಂಡಸ್ಟ್ರಿ, ಟೂರಿಸಂ ಇಂಡಸ್ಟ್ರಿಯ ಪ್ರತಿಯೊಬ್ಬರಿಗೂ ರತ್ನಾಕರ್ ಚಿರಪರಿಚಿತರು. ಅವರೆಲ್ಲರಿಗೂ ಅತ್ಯುತ್ತಮ ಮಾರ್ಗದರ್ಶಿ ಆಗಿದ್ದವರು.

ನಿವೃತ್ತಿಯ ನಂತರವೂ ಇಲಾಖೆಯೊಂದು ಅವರ ಸೇವೆ ಬಯಸಿ ಹುದ್ದೆ ಆಫರ್ ಮಾಡುತ್ತದೆ ಅಂದರೆ ಅದಕ್ಕಿಂತ ದೊಡ್ಡ ಸರ್ಟಿಫಿಕೇಟ್ ಇನ್ನೇನಿರಲು ಸಾಧ್ಯ?

Untitled design (52)

ಬಿಕಾಂ ಪದವಿ ಪಡೆದು 1978ರಲ್ಲಿ ಕೆ ಎಸ್ ಟಿ ಡಿ ಸಿ ಯಲ್ಲಿ ಟ್ರೇನಿಯಾಗಿ ಭರ್ತಿಯಾದ ರತ್ನಾಕರ್ ಅವರು ಕೊನೆಯುಸಿರಿನ ತನಕ ಅದೇ ಸಂಸ್ಥೆಗೆ ದುಡಿದರು. ವಿವಿಧ ಹುದ್ದೆಗಳನ್ನು ಅಲಂಕರಿಸಿದ ಅವರು ಇಪ್ಪತ್ತು ವರ್ಷಗಳ ಅನುಭವದ ನಂತರ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಬಡ್ತಿ ಪಡೆದರು. ಹೊಟೇಲ್, ರೆಸಾರ್ಟ್ ಉದ್ಯಮಿಗಳನ್ನು ಸಂಪರ್ಕಕ್ಕೆ ತಂದು ಕೆಎಸ್ ಟಿ ಡಿಸಿ ಉನ್ನತಿಗಾಗಿ ದುಡಿದರು. ಆನಂತರ ಗೋಲ್ಡನ್ ಚಾರಿಯಟ್ ನ ಪ್ರಾಜೆಕ್ಟ್ ಡೈರೆಕ್ಟರ್ ಆಗಿಯೂ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ ಕನ್ಸಲ್ಟಿಂಗ್ ಪ್ರೊಫೆಷನಲ್ ಎಕ್ಸ್ ಪರ್ಟ್ ಮತ್ತು ಅಡ್ವೈಸರ್ ಆಗಿ ತಮ್ಮ ಸೇವೆಯನ್ನು ಮುಂದುವರಿಸಿದ ರತ್ನಾಕರ್, ವಿಶ್ರಾಂತ ಬದುಕು ನೋಡಲೇ ಇಲ್ಲ. ಕೊನೆಘಳಿಗೆಯ ತನಕ ಸಂಸ್ಥೆಗಾಗಿ ನೂರು ಪ್ರತಿಶತಃ ತಮ್ಮ ಸೇವೆ ಸಲ್ಲಿಸಿಯೇ ಹೋದರು.

ಮೂವತ್ತೇಳು ವರ್ಷದ ಅವಿರತ ಸೇವೆಯನ್ನು ಕೆ ಎಸ್ ಟಿ ಡಿ ಸಿ ಎಂದಿಗೂ ಮರೆಯಲಾರದು. ಕೆ ಎಸ್ ಟಿಡಿಸಿ ಗೆ ಯಾರೇ ಹೊಸ ಅಧಿಕಾರಿ ಬಂದರೂ ಅವರಿಗೆ ಸರ್ವರೀತಿಯಲ್ಲೂ ಮಾಹಿತಿ, ಮಾರ್ಗದರ್ಶನ ನೀಡುತ್ತಾ ಬಂದವರು ರತ್ನಾಕರ್. ಕರ್ನಾಟಕ ಮಾತ್ರವಲ್ಲ ಭಾರತ ಪ್ರವಾಸೋದ್ಯಮದ ಅಂಕಿಅಂಶಗಳು ಮತ್ತು ಮಾಹಿತಿಗಳು ರತ್ನಾಕರ್ ಅವರ ನಾಲಗೆ ತುದಿಯಲ್ಲಿ ಅಥವಾ ಬೆರಳ ತುದಿಯಲ್ಲಿ ಇರುತ್ತಿದ್ದವು.

ಕೆಎಸ್ ಡಿಸಿ ಆಯೋಜಿಸಿದ ಹಲವು ಮೇಳಗಳು, ಫೆಸ್ಟಿವಲ್ ಗಳು, ರೋಡ್ ಶೋ, ,ಮುಂತಾದ ಕಾರ್ಯಕ್ರಮಗಳ ಹಿಂದೆ ರತ್ನಾಕರ್ ಅವರ ಅನುಭವದ ಹೆಜ್ಜೆಗುರುತುಗಳಿರುತ್ತಿದ್ದವು.

ರೋಮ್, ಮಿಲಾನ್, ಲಿಸ್ಬನ್, ಬ್ರುಸೆಲ್ಸ್, ವಿಯೆನ್ನಾ, ಪ್ಯಾರಿಸ್, ಲಂಡನ್ ಹೀಗೆ ಹಲವಾರು ಕಡೆ ನಡೆದ ಕರ್ನಾಟಕ ಟೂರಿಸಂ ರೋಡ್ ಶೋಗಳಲ್ಲಿ ರತ್ನಾಕರ್ ಸಕ್ರಿಯವಾಗಿ ಭಾಗವಹಿಸಿದ್ದರು.

IATO, TAAI, TAFI, SKALL, FHRAI ಸೇರಿದಂತೆ, ಹಲವು ವಾರ್ಷಿಕ ಇವೆಂಟುಗಳಲ್ಲಿ ರತ್ನಾಕರ್ ಅವರ ಛಾಪು ಇತ್ತು.

ವಿದೇಶಗಳಲ್ಲಿ ಜರುಗುವ ಅಂತಾರಾಷ್ಟ್ರೀಯ ಟ್ರಾವೆಲ್ ಮಾರ್ಟ್ ಗಳಲ್ಲಿ ತಪ್ಪದೇ ಭಾಗವಹಿಸಿ ಕೋ ಆರ್ಡಿನೇಟ್ ಮಾಡುತ್ತಿದ್ದರು ರತ್ನಾಕರ್.

ಗೋಲ್ಡನ್ ಚಾರಿಯಟ್ ಎಂಬ ಐಷಾರಾಮಿ ರೈಲಿನ ಯೋಜನೆ ನಿರ್ವಹಿಸಿದ್ದು ರತ್ನಾಕರ್. ಇದು ಅವರಿಗೆ ಮಾತ್ರವಲ್ಲ ಅವರನ್ನು ಬಲ್ಲವರೆಲ್ಲರಿಗೆ ಹೆಮ್ಮೆಯ ವಿಷಯ.

ಯಾವುದೇ ಕಾರ್ಯಕ್ರಮ, ಸಭೆ, ಇವೆಂಟ್ ಇರಲಿ, ವಿಐಪಿ, ವಿವಿಐಪಿಗಳನ್ನು ನಿಭಾಯಿಸುವ ಹೊಣೆ ರತ್ನಾಕರ್ ಅವರದಾಗಿರುತ್ತಿತ್ತು. ಫ್ಯಾಮ್ ಟ್ರಿಪ್ ಗಳ ಪ್ಲಾನಿಂಗ್ ಮತ್ತು ನಿರ್ವಹಣೆಗೆ ಮೊದಲು ಕಾಣುತ್ತಿದ್ದ ಹೆಸರು ರತ್ನಾಕರ್ ಅವರದಾಗಿರುತ್ತಿತ್ತು.

ಕ್ರೆಡಿಟ್ ಗಾಗಿ, ಹೆಸರಿಗಾಗಿ ಎಂದಿಗೂ ಹಪಹಪಿಸದ ರತ್ನಾಕರ್, ಸದಾ ಎಲೆಮರೆಯ ಕಾಯಿಯಂತೆಯೇ ದುಡಿಯುತ್ತಿದ್ದವರು.

ಪ್ರವಾಸಿ ಪ್ರಪಂಚ ಪತ್ರಿಕೆಯ ಬಗ್ಗೆ, ಅಪಾರ ಭರವಸೆ ಹೊಂದಿದ್ದ ರತ್ನಾಕರ್, ಬಹಳಷ್ಟು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಸುದ್ದಿಗಳ ಬಗ್ಗೆ, ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.

ರತ್ನಾಕರ್ ಅವರ ನಿಧನ ಪ್ರವಾಸೋದ್ಯಮಕ್ಕೆ, ಕೆಎಸ್ ಟಿ ಡಿ ಸಿಗೆ ಮತ್ತು ಹಾಸ್ಪಿಟಾಲಿಟಿ ಇಂಡಸ್ಟ್ರಿಗೆ ನಿಜಾರ್ಥದಲ್ಲಿ ತುಂಬಲಾರದ ನಷ್ಟ. ಅವರ ಅನುಭವವನ್ನು ಮತ್ತು ಸಲಹೆಸೂಚನೆ ಹಾಗೂ ಸಹಕಾರವನ್ನು ರಾಜ್ಯ ಮಿಸ್ ಮಾಡಿಕೊಳ್ಳಲಿದೆ.

ಪುಟ್ಟ ಕುಟುಂಬ ಹೊಂದಿದ್ದ ರತ್ನಾಕರ್ ಅವರ ಏಕೈಕ ಪುತ್ರ ರಿಷಿ, ಆಸ್ಟ್ರೇಲಿಯಾದಲ್ಲಿ ವಾಸವಿದ್ದಾರೆ. ಬೆಂಗಳೂರಿನ ಜಾಲಹಳ್ಳಿಯ ಬಳಿ ನೆಲೆಗೊಂಡಿದ್ದ ಅವರ ಹಠಾತ್ ನಿಧನ ಕುಟುಂಬವಲಯಕ್ಕೂ ಬಹಳ ದುಃಖ ತಂದಿದೆ. ರತ್ನಾಕರ್ ಅವರ ನಿಧನಕ್ಕೆ ಪ್ರವಾಸಿ ಪ್ರಪಂಚ ಪತ್ರಿಕೆಯ ಸಿಬ್ಬಂದಿವರ್ಗ ಕಂಬನಿ ಮಿಡಿಯುತ್ತದೆ.


ಸೇವಾ ಅವಧಿಯಲ್ಲಿ ಅವರು ತೋರಿದ ತ್ಯಾಗ, ನಿಷ್ಠೆ ಮತ್ತು ಕಾರ್ಯನಿಷ್ಠೆ ಶ್ಲಾಘನಾರ್ಹ. ಪ್ರವಾಸೋದ್ಯಮ ಇಲಾಖೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ನಿವೃತ್ತಿಯ ನಂತರವೂ ತಮ್ಮ ಅಮೂಲ್ಯ ಜ್ಞಾನ ಮತ್ತು ಅನುಭವವನ್ನು ಸರ್ಕಾರದ ವಿನಂತಿಯ ಮೇರೆಗೆ ಹಂಚಿಕೊಂಡು, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಷ್ಟೋ ಬಾರಿ ತುಂಬಾ ಜೋರಾಗಿ ಮಾತಾಡುವ ಸಂದರ್ಭದಲ್ಲಿ ಸಮಾಧಾನ ಮಾಡುತ್ತಿದ್ದರು. ಸರ್ಕಾರದ ಜೊತೆಗೆ ಸಂಯಮನಿಂದ ವ್ಯವಹಾರ ಮಾಡೋಕೆ ಹೇಳಿ ಕೊಡುತ್ತಿದ್ದರು. ಕರ್ನಾಟಕದ ಪ್ರವಾಸೋದ್ಯಮ, ಅತಿಥ್ಯ ಕ್ಷೇತ್ರದ ನೂರಾರು ಜನರಿಗೆ ಅವರೊಂದಿಗೆ ಆಪ್ತತೆ ಇದೆ. ಎಲ್ಲಾ ಸಚಿವರಿಗೆ ಅವರು ಅಪ್ತರಾಗಿದ್ದರು. Karnataka tourism policy ಎರಡುಬಾರಿ ಕರಡು ನಡೆಯುವಾಗ ಅವರು ಇದ್ದರು. ಸಚಿವರಲ್ಲಿ, ಅಧಿಕಾರಿಗಳಲ್ಲಿ ಇಲ್ಲದ ಮಾಹಿತಿ ರತ್ನಾಕರ್ ಅವರ ಬಳಿ ಇರುತ್ತಿತ್ತು. ಅವರಿಗಿದ್ದ ಎರಡೇ ದುರಭ್ಯಾಸ ಅಂದ್ರೆ ತಾಳ್ಮೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವ ಗುಣ.
-ರಾಧಾಕೃಷ್ಣ ಹೊಳ್ಳ