ಪಾರೋ: ರಾಜ್ಯವಾಳುವವರು, ಗಣ್ಯ ವ್ಯಕ್ತಿಗಳು, ಅಧಿಕಾರಿಗಳು ಊರಿನೊಳಗೆ, ಊರಿಂದಾಚೆಗೆ ಪ್ರಯಾಣಿಸುವಾಗ, ಅಥವಾ ದೂರದೂರುಗಳಿಗೆ ಪ್ರವಾಸ ಕೈಗೊಳ್ಳುವಾಗ ಸಾಮಾನ್ಯವಾಗಿ ವಾಹನ ಚಾಲಕರು, ಅಂಗರಕ್ಷಕರು, ಬಿಗಿ ಭದ್ರತೆಯನ್ನು ಹೊಂದುವುದು ಹಿಂದಿನಿಂದಲೂ ಬಂದಿರುವ ರೂಢಿ. ಆದರೆ ಅಂತಹ ಎಲ್ಲ ಸವತ್ತುಗಳನ್ನು ಬಿಟ್ಟು ಥಾಯ್ಲೆಂಡ್ ರಾಜ ಹಾಗೂ ರಾಣಿ ಸ್ವತಃ ತಾವೇ ವಿಮಾನ ಚಲಾಯಿಸಿ ಭೂತಾನ್‌ಗೆ ಭೇಟಿ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಅರೆರೆ..ಇದು ನಿಜವಾ ಎಂದು ಪ್ರಶ್ನಿಸಬೇಡಿ. ಕಳೆದ ಕೆಲವು ದಿನಗಳ ಹಿಂದಷ್ಟೇ ಭೂತಾನ್‌ನ ಪಾರೋಗೆ ಥಾಯ್ಲೆಂಡ್ ರಾಜ ವಜಿರಲಾಂಗ್‌ ಕಾರ್ನ್ ಭೇಟಿ ನೀಡಿದ್ದು, ತಾವೇ ವಿಮಾನ ಚಲಾಯಿಸಿದ್ದಾರೆ. ಇವರಿಗೆ ಸಹ-ಪೈಲಟ್ ಆಗಿ ನೆರವು ನೀಡಿದ್ದು, ಖುದ್ದು ಅವರ ಪತ್ನಿ ರಾಣಿ ಸುತಿದಾ. ದಂಪತಿ ತಮ್ಮ ಬೋಯಿಂಗ್ 737-800 ವಿಮಾನದಲ್ಲಿ ವಿಶ್ವದ ಅತ್ಯಂತ ಸವಾಲಿನ ವಿಮಾನ ನಿಲ್ದಾಣವಾದ ಪಾರೋದಲ್ಲಿ ಇಳಿಯುವುದನ್ನು ಅಲ್ಲಿ ನೆರೆದಿದ್ದವರೆಲ್ಲರೂ ಅಚ್ಚರಿಗೊಂಡಿದ್ದರಂತೆ.

thai-crown-prince-0

ಸೇನೆಯಲ್ಲಿ ಪೈಲೆಟ್‌ ಆಗಿ ಅನುಭವ :

ರಾಜನಾಗಿದ್ದವರು ಅದ್ಹೇಗೆ ವಿಮಾನ ಚಲಾಯಿಸಿದರು ಅಂದುಕೊಳ್ಳಬೇಡಿ. ಯಾಕೆಂದರೆ ವಜಿರಲಾಂಗ್‌ ಕಾರ್ನ್ ಈ ಹಿಂದೆ ಸೇನೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದವರು. ಅವರು ನಾರ್ಥ್ರಾಪ್ ಎಫ್ -5, ಎಫ್ -16 ಮತ್ತು ಬೋಯಿಂಗ್ 737-400 ವಿಮಾನಗಳನ್ನು ಹಾರಿಸಲು ಅರ್ಹತೆ ಪಡೆದ ಸೇನಾ ಪೈಲಟ್ ಕೂಡಾ ಹೌದು. 2019ರಲ್ಲಿ ಥಾಯ್ಲೆಂಡ್ ರಾಜನಾಗಿ ಅಧಿಕಾರಕ್ಕೇರಿದ ಬಳಿಕ ಇದು ಅವರ ಮೊದಲ ಅಧಿಕೃತ ವಿದೇಶ ಭೇಟಿಯಾಗಿದೆ.

ಅದೆನೇ ಇರಲಿ, ಅಧಿಕಾರ ಬಂದ ಮೇಲೆ ದರ್ಪ ಮೆರೆಯುವ ಅದೆಷ್ಟೋ ಮಂದಿಯ ನಡುವೆ, ಥಾಯ್ಲೆಂಡ್ ರಾಜನಾದ ಮೇಲೂ ಆ ಸವಲತ್ತುಗಳನ್ನು ಬಳಸಿಕೊಳ್ಳದೆ, ತಾನೇ ವಿಮಾನ ಚಲಾಯಿಸಿಕೊಂಡು ವಿದೇಶಿ ಪ್ರಯಾಣ ಕೈಗೊಂಡಿರುವ ರಾಜನ ಬಗ್ಗೆ ಎಲ್ಲರು ಮೆಚ್ಚಿಕೊಂಡಿರುವುದು ಸುಳ್ಳಲ್ಲ.