ತಾಯಂದಿರ ದಿನದಂದು ಅಮ್ಮನೊಂದಿಗೆ ಭೇಟಿ ನೀಡಬಹುದಾದ ಭಾರತದ ಪ್ರಮುಖ ದ್ವೀಪಗಳಿವು
ತಾಯಂದಿರ ದಿನದ ಸಂಭ್ರಮಕ್ಕೆ ಇನ್ನು ಉಳಿದಿರುವುದು ಕೆಲವೇ ದಿನಗಳು. ಅದಕ್ಕೂ ಮುನ್ನ ನಿಮ್ಮ ತಾಯಿಯೊಂದಿಗೆ ಭೇಟಿ ನೀಡಬಹುದಾದ ಭಾರತದ ಈ ಪ್ರಮುಖ ದ್ವೀಪಗಳ ಬಗ್ಗೆ ತಿಳಿದುಕೊಳ್ಳಿ.
ಮೇ 11ರಂದು ತಾಯಿಯರಿಗಾಗಿಯೇ ಮೀಸಲಿಟ್ಟಿರುವ ದಿನ. ಈ ದಿನದಂದು ತಾಯಿಯನ್ನು ಖುಷಿ ಪಡಿಸುವುದಕ್ಕಾಗಿ ಹೂವುಗಳು, ಚಾಕೊಲೇಟ್ಗಳು, ಮತ್ತು ಗಿಫ್ಟ್ ಗಳನ್ನು ಕೊಡಬೇಕು ಅಂದುಕೊಂಡಿದ್ದೀರಾ? ಹಾಗಾದರೆ ಬಿಡುವೇ ತೆಗೆದುಕೊಳ್ಳದೇ ತನ್ನವರಿಗಾಗಿ ದುಡಿಯುವ ತಾಯಿಗೆ ವಿರಾಮ ಅವಧಿಯನ್ನು ಕೊಡಿ. ಭಾರತದ ಹೆಸರಾಂತ ದ್ವೀಪಗಳಿಗೆ ಅಮ್ಮನೊಂದಿಗೆ ಪ್ರವಾಸ ತೆರಳಿ, ತಾಯಂದಿರ ದಿನವನ್ನು ಸಂಭ್ರಮಿಸಿ.
ಮಜುಲಿ ದ್ವೀಪ, ಅಸ್ಸಾಂ
ಮಾಜುಲಿ ಅಥವಾ ಮಾಜೋಲಿ ಅಸ್ಸಾಂ ರಾಜ್ಯದಲ್ಲಿ ಬ್ರಹಪುತ್ರ ನದಿಯಲ್ಲಿರುವ ದ್ವೀಪವಾಗಿದೆ. 2016ರಲ್ಲಿ ಇದು ಒಂದು ಜಿಲ್ಲೆಯೆಂದು ಘೋಷಿತವಾದ ಮೊದಲ ದ್ವೀಪವಾಯಿತು. ಅಲ್ಲದೇ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿಯೂ ಗುರುತಿಸಿಕೊಂಡಿದೆ. ಈ ದ್ವೀಪವು ದಕ್ಷಿಣದಲ್ಲಿ ಬ್ರಹ್ಮಪುತ್ರ ನದಿಯಿಂದ ಮತ್ತು ಉತ್ತರದಲ್ಲಿ ಸುಬನ್ಸಿರಿ ನದಿಯಿಂದ ಕೂಡಿಕೊಂಡು ಬ್ರಹ್ಮಪುತ್ರದ ಸಂಗಮಶಾಖೆಯಾದ ಖೇರ್ಕುಟಿಯಾ ಕ್ಷೂಟಿಯಿಂದ ರೂಪಗೊಂಡಿದೆ. ಜೋರ್ಹಾಟ್ ನಗರದಿಂದ ಫೆರಿಗಳ ಮೂಲಕ ಮಾಜುಲಿ ದ್ವೀಪವನ್ನು ತಲುಪಬಹುದು. ಮಾಜುಲಿ ಅಸ್ಸಾಮೀ ನವ ವೈಷ್ಣವ ಸಂಸ್ಕೃತಿಯ ವಾಸಸ್ಥಾನವಾಗಿದೆ.

ದಿವಾರ್ ದ್ವೀಪ, ಗೋವಾ
ಪಣಜಿಯಿಂದ ನದಿಯ ಮೇಲ್ಭಾಗದಲ್ಲಿರುವ ದಿವಾರ್ ದ್ವೀಪವು ಗೋವಾದ ಪ್ರಮುಖ ತಾಣಗಳಲ್ಲಿ ಒಂದು. ಪೋರ್ಚುಗೀಸ್ ಪ್ರಭಾವಿತ ವಾಸ್ತುಶಿಲ್ಪ, ಕಿರಿದಾದ ಅಂಕುಡೊಂಕಾದ ರಸ್ತೆಗಳು ಮತ್ತು ಶತಮಾನಗಳಷ್ಟು ಹಳೆಯದಾದ ಚರ್ಚುಗಳೊಂದಿಗೆ ರೆಟ್ರೋ ಪ್ರಪಂಚವನ್ನು ಇದು ಪರಿಚಯಿಸುತ್ತದೆ. ಒಂದು ಕಾಲದಲ್ಲಿ ಹಿಂದೂ ಯಾತ್ರಾ ಸ್ಥಳವಾಗಿದ್ದ ಈ ದ್ವೀಪವು ವಸಾಹತುಶಾಹಿ ಯುಗದ ಮೊದಲು ಐತಿಹಾಸಿಕವಾಗಿ ಮಹತ್ವದ್ದಾಗಿತ್ತು. ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪಕ್ಕೆ ತೆರಳಲು ದೋಣಿಗಳನ್ನೇ ಅವಲಂಭಿಸಬೇಕಾಗುತ್ತದೆ.
ಮನ್ರೋ ದ್ವೀಪ, ಕೇರಳ
ದಕ್ಷಿಣ ಭಾರತದ ಕೇರಳದ ಕೊಲ್ಲಂ ಜಿಲ್ಲೆಯ ಕಲ್ಲಡ ನದಿ - ಅಷ್ಟಮುಡಿ ಸರೋವರವನ್ನು ಸಂಧಿಸುವ ಸ್ಥಳದಲ್ಲಿರುವ ಮನ್ರೋ ದ್ವೀಪಕ್ಕೆ ಹಿಂದಿನ ತಿರುವಾಂಕೂರು ರಾಜ್ಯದ ಕರ್ನಲ್ ಜಾನ್ ಮನ್ರೋ ಅವರ ಹೆಸರನ್ನು ಇಡಲಾಗಿದೆ. ಈ ದ್ವೀಪಗಳ ಸಮೂಹವು ಕಾಲುವೆಗಳು, ಹಿನ್ನೀರುಗಳಿಗೆ ಹೆಸರು ಮಾಡಿದೆ. ಇದು ಸುಮಾರು 13.4 ಕಿಮೀ ವಿಸ್ತೀರ್ಣವಿರುವ ಪ್ರದೇಶವಾಗಿದ್ದು, ಎಂಟು ಸಣ್ಣ ದ್ವೀಪಗಳ ಗುಂಪನ್ನು ಹೊಂದಿದೆ.

ಸೇಂಟ್ ಮೇರಿ ದ್ವೀಪಗಳು, ಕರ್ನಾಟಕ
ಉಡುಪಿ ಬಳಿಯ ಮಲ್ಪೆ ಕರಾವಳಿಯಲ್ಲಿ ನೆಲೆಗೊಂಡಿರುವ ಸೇಂಟ್ ಮೇರಿ ದ್ವೀಪಗಳು ಅಪರೂಪದ ಷಡ್ಭುಜಾಕೃತಿಯ ಬಸಾಲ್ಟ್ ಶಿಲಾ ರಚನೆಗಳಿಗೆ ಹೆಸರುವಾಸಿಯಾಗಿದೆ. ಸುಮಾರು 88 ಮಿಲಿಯನ್ ವರ್ಷಗಳ ಹಿಂದೆ ಮಡಗಾಸ್ಕರ್ ಭಾರತದಿಂದ ಬೇರ್ಪಟ್ಟಾಗ ಉಪ-ಜ್ವಾಲಾಮುಖಿ ಚಟುವಟಿಕೆಯಿಂದ ಈ ದ್ವೀಪವು ರೂಪುಗೊಂಡಿದೆ. ಈ ದ್ವೀಪದಲ್ಲಿ ಯಾವುದೇ ಜನವಸತಿಯಿಲ್ಲ. ಮಾತ್ರವಲ್ಲದೆ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾಗಿ ಸೇಂಟ್ ಮೇರಿ ದ್ವೀಪವನ್ನು ರಕ್ಷಿಸಲ್ಪಟ್ಟಿವೆ.
ಶ್ರೀರಂಗಂ ದ್ವೀಪ, ತಮಿಳುನಾಡು
ಕಾವೇರಿ ಮತ್ತು ಕೊಲ್ಲಿಡಂ ನದಿಗಳಿಂದ ಆವೃತವಾದ ನದಿ ದ್ವೀಪ ಶ್ರೀರಂಗಂ. ಇದು ವಿಷ್ಣುವಿಗೆ ಸಮರ್ಪಿತವಾದ ಬೃಹತ್ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ನೆಲೆಯಾಗಿದೆ. ಈ ದೇವಾಲಯ ಸಂಕೀರ್ಣವು 156 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ವಿಶ್ವದ ಅತಿದೊಡ್ಡ ದೇವಾಲಯ ಸಂಕೀರ್ಣಗಳಲ್ಲಿ ಒಂದಾಗಿದೆ. ಈ ದ್ವೀಪವು ಶಾಸ್ತ್ರೀಯ ಸಂಗೀತ, ದೇವಾಲಯದ ಆಚರಣೆಗಳು ಮತ್ತು ವಿಶೇಷವಾದ ವಾಸ್ತುಶಿಲ್ಪವನ್ನು ಒಳಗೊಂಡ ತಮಿಳು ವೈಷ್ಣವ ಸಂಪ್ರದಾಯದ ಮಹತ್ವದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.
ಹೋಪ್ ದ್ವೀಪ, ಆಂಧ್ರಪ್ರದೇಶ
ಈ ಕಿರಿದಾದ ಮರಳಿನ ದಿಬ್ಬದಂತಹ ದ್ವೀಪವು ಕಾಕಿನಾಡ ಬಂದರು ನಗರ ಬಳಿ ಬಂಗಾಳಕೊಲ್ಲಿಯಲ್ಲಿದೆ. ಗೋದಾವರಿ ನದಿಯಿಂದ ಕೆಸರು ನಿಕ್ಷೇಪಗಳಿಂದ ರೂಪುಗೊಂಡ ಹೋಪ್ ದ್ವೀಪವು ಆಂಧ್ರ ಕರಾವಳಿಯನ್ನು ರಕ್ಷಿಸುವ ನೈಸರ್ಗಿಕ ಚಂಡಮಾರುತ ತಡೆಗೋಡೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಇಲ್ಲಿರುವ ಮ್ಯಾಂಗ್ರೋವ್ ಕಾಡುಗಳು ಸಮುದ್ರ ಜೀವಿಗಳಿಗೆ ವಿಶಿಷ್ಟ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತದೆ. ಇದು ಆಲಿವ್ ರಿಡ್ಲಿ ಆಮೆಗಳಿಗೆ ಗೂಡುಕಟ್ಟಿಳ್ಳುವ ತಾಣವಾಗಿಯೂ ಜನಪ್ರಿಯವಾಗಿದೆ.

ಉಮಾನಂದ ದ್ವೀಪ, ಅಸ್ಸಾಂ
ಗುವಾಹಟಿಯ ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಉಮಾನಂದ ದ್ವೀಪವು ವಿಶ್ವದ ಅತ್ಯಂತ ಚಿಕ್ಕ ಜನವಸತಿ ನದಿ ದ್ವೀಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಕೇಂದ್ರ ಆಕರ್ಷಣೆ ಉಮಾನಂದ ದೇವಾಲಯ. ಇದು ಭಗವಾನ್ ಕಾಮದೇವನೊಂದಿಗೆ ಪೌರಾಣಿಕ ಸಂಬಂಧಗಳನ್ನು ಹೊಂದಿರುವ ಶಿವ ದೇವಾಲಯವಾಗಿದೆ. ನಗರದೊಳಗೇ ಇದ್ದರೂ ಇಲ್ಲಿಗೆ ತೆರಳಬೇಕಾದರೆ ನೀವು ದೋಣಿ ಪ್ರಯಾಣವನ್ನು ಮಾಡಬೇಕಾಗುತ್ತದೆ.
ಒಟ್ಟಿನಲ್ಲಿ ತಾಯಂದಿರ ದಿನವನ್ನೂ ವಿಶೇಚವಾಗಿ ಆಚರಿಸಬೇಕೆಂದು ಎಂಬುದಾಗಿ ನೀವಂದುಕೊಂಡರೆ ಭಾರತದ ಈ ವಿಶೇಷವಾದ ದ್ವೀಪಗಳಿಗೆ ನಿಮ್ಮ ತಾಯಿಯೊಂದಿಗೆ ಭೇಟಿ ಕೊಟ್ಟು ಬನ್ನಿ..