ಸುತ್ತಾಡಲಿಕ್ಕೆಂದೇ ಹೈ ಕ್ಲಾಸ್ ಜಾಬ್ ಬಿಟ್ಟ ಮಹಿಳೆ: ಇದು ಪ್ರವಾಸದ ಜೊತೆಗಿನ ಪ್ರೇಮ್ ಕಹಾನಿ!
ಕೆಲವೊಬ್ಬರ ಪಾಲಿಗೆ ಪ್ರವಾಸವೇ ಸ್ವರ್ಗ. ಸುತ್ತಾಟ ಹಲವರಿಗೆ ಥೆರಪಿ. ಇಲ್ಲೊಬ್ಬ ಮಹಿಳೆ ಸುತ್ತಾಡಲಿಕ್ಕೆಂದೇ ಹೈ ಕ್ಲಾಸ್ ಜಾಬ್ ಬಿಟ್ಟಿದ್ದಾರೆ. ಈವರೆಗೂ 24 ದೇಶ ಸುತ್ತಿದ್ದಾರೆ.
ಕೆಲವೊಬ್ಬರ ಪಾಲಿಗೆ ಪ್ರವಾಸವೇ ಪ್ರಪಂಚ ಮತ್ತು ಪ್ರವಾಸವೇ ಸ್ವರ್ಗ. ಸುತ್ತಾಟ ಹಲವರಿಗೆ ಥೆರಪಿ. ಬದುಕಿನ ಜಂಜಾಟಗಳಿಂದ ದೂರ ಉಳಿದು ಹಗುರಾಗಲು ಸುತ್ತಾಡುವವರಿದ್ದಾರೆ. ಸುತ್ತಾಟ ಅವರಿಗೆ ಪ್ಯಾಷನ್. ಹಲವರಿಗಂತೂ ಕೋಶ ಓದುವುದಕ್ಕಿಂತ ದೇಶ ಸುತ್ತುವುದರಲ್ಲೇ ಹೆಚ್ಚು ಸುಖ. ಇಲ್ಲೊಬ್ಬ ಮಹಿಳೆ ಸುತ್ತಾಡುವ ಸಲುವಾಗಿಯೇ ಅಂಗೈಯಲ್ಲಿದ್ದ ಹೈಕ್ಲಾಸ್ ಜಾಬ್ ಬಿಟ್ಟಿದ್ದಾರೆ. ಅದರ ಬಗ್ಗೆ ಅವರಿಗೆ ಕೊರಗಿಲ್ಲ."ಟ್ರಾವೆಲಿಂಗ್ ಇಸ್ ಮೈ ಪ್ಯಾಷನ್. ಅದರಲ್ಲಿ ಮಜಾ ಇದೆ" ಎನ್ನುತ್ತಾರೆ. ಇದು ಪ್ರವಾಸದ ಜೊತೆಗಿನ ಪ್ರೇಮ್ ಕಹಾನಿ ಎನ್ನಬಹುದು.
ಜೂಹಿ ಪಿಕಾಲೆ ಎಂಬ ಮಹಿಳೆ ಹತ್ತಾರು ವರ್ಷಗಳ ತಮ್ಮ ವೃತ್ತಿ ಜೀವನಕ್ಕೆ 2023 ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ನಂತರ ಅವರು ಆಯ್ಕೆ ಮಾಡಿಕೊಂಡಿದ್ದು ಸೊಲೋ ಟ್ರಿಪ್. ಸುತ್ತಾಡುವುದು ನನ್ನ ಆಸೆ ಎನ್ನುತ್ತಾರೆ ಪಿಕಾಲೆ. ವಿದೇಶದಲ್ಲಿ ಡಾಲರ್‌ಗಟ್ಟಲೆ ಸಂಬಳ ಗಳಿಸುತ್ತಿದ್ದ ಅವರು ಟ್ರಾವೆಲಿಂಗ್ ಪ್ಯಾಷನ್‌ನಿಂದ ಭಾರತಕ್ಕೆ ಮರಳಿದ್ದಾರೆ. 2024 ರಲ್ಲಿ ಪಿಕಾಲೆ 24 ದೇಶಗಳು ಮತ್ತು 45 ನಗರಗಳಿಗೆ ಪ್ರಯಾಣಿಸುವ ಮೂಲಕ ತಮ್ಮ ಬದುಕನ್ನು ಬದಲಾಯಿಸಿಕೊಂಡರು. ಸೊಲೋ ಟ್ರಿಪ್ ಅವರಿಗೆ ಥ್ರಿಲ್ಲಾದ ಅನುಭವವನ್ನು ನೀಡಿತು. ಪಿಕಾಲೆ ಈ ವರ್ಷವೂ ಹತ್ತಾರು ದೇಶಗಳನ್ನು ಸುತ್ತುವ ಬಯಕೆ ಹೊಂದಿದ್ದಾರೆ.
ಅವರ ಪ್ರಯಾಣದ ಗಮನಾರ್ಹ ಅಂಶವೆಂದರೆ ಅವರು ಸ್ಥಳೀಯರೊಂದಿಗೆ ಮಾತಿಗಿಳಿಯುತ್ತಾರೆ. ಅಲ್ಲಿನ ಕಲೆ-ಸಂಸ್ಕೃತಿ ಮತ್ತು ವಿಶೇಷತೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಾರೆ. ಅವರದ್ದೇ ಮಾತಿನಲ್ಲಿ ಕೇಳುವುದಾದರೆ "ನಾನು ಹೆಲ್ಸಿಂಕಿಯಲ್ಲಿ ಸ್ಥಳೀಯರೊಂದಿಗೆ ಬೈಕಿಂಗ್ ಹೋಗಿದ್ದೆ. ಅದು ಮಜಾವಾಗಿತ್ತು. ರೋಮ್ ಮತ್ತು ಶ್ರೀಲಂಕಾದಲ್ಲಿ ಐತಿಹಾಸಿಕ ಪ್ರವಾಸಗಳನ್ನು ಮಾಡಿದೆ. ಮೊರಾಕೊದಲ್ಲಿ ಸ್ಟ್ರೀಟ್ ಶಾಪಿಂಗ್‌ಗೆ ಸ್ಥಳೀಯನೊಬ್ಬ ನನ್ನೊಂದಿಗೆ ಬಂದನು. ಅವನು ಶಾಪಿಂಗ್ ವೇಳೆ ಸಾಕಷ್ಟು ಚೌಕಾಶಿ ಮಾಡಿ ನನಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡಿಸುತ್ತಿದ್ದನು. ಪ್ರತಿ ದೇಶದ ಪ್ರವಾಸದಲ್ಲೂ ನನಗೆ ಹೊಸ ತೆರನಾದ ಅನುಭವ ಸಿಕ್ಕಿತು" ಎನ್ನುತ್ತಾರೆ.
ಇನ್ನು ಜೂಹಿ ಪಿಕಾಲೆ ತಮ್ಮ ಪ್ರತಿ ದೇಶದ ಪ್ರವಾಸವನ್ನು ಅನುಭವ ಕಥನವನ್ನಾಗಿಸುತ್ತಿದ್ದಾರೆ. "ಪ್ರತಿ ನೆನಪನ್ನು ಹಾಳೆಗಿಳಿಸಬೇಕು. ಮುಂದೊಮ್ಮೆ ಹಳೆಯ ನೆನಪುಗಳೆಲ್ಲವೂ ನನ್ನನ್ನು ಜೀವಂತವಾಗಿರಿಸಬಹುದು" ಎನ್ನುತ್ತಾ ತೆಳ್ಳಗೆ ನಗುತ್ತಾರೆ ಜೂಹಿ ಪಿಕಾಲೆ.