- ವಾಣಿಶ್ರೀ ಕಾಸರಗೋಡು

ಅನೇಕ ಜನರು ತಮ್ಮ ಸಂಗಾತಿಯೊಂದಿಗೆ ಅಥವಾ ಒಬ್ಬಂಟಿಯಾಗಿ ವಿದೇಶ ಪ್ರವಾಸ ಮಾಡಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಆದರೆ ಈ ಕನಸನ್ನು ನನಸು ಮಾಡಿಕೊಳ್ಳುವುದು ಕೆಲವೊಂದಿಷ್ಟು ಜನರು ಮಾತ್ರ. ಇನ್ನು ಉಳಿದವರು ವಿದೇಶ ಪ್ರವಾಸ ಮಾಡಲು ತುಂಬಾ ಖರ್ಚಾಗುತ್ತದೆ ಅಂತ ಹಿಂದೇಟು ಹಾಕುತ್ತಾರೆ. ಆದರೆ ನೀವು ಕಡಿಮೆ ಖರ್ಚಿನಲ್ಲಿಯೂ ವಿದೇಶಕ್ಕೆ ಹೋಗಿಬರಬಹುದು. ಅದು ವೀಸಾ ಕೂಡಾ ಇಲ್ಲದೆ. ಇಲ್ಲಿನ ಕರೆನ್ಸಿ ಭಾರತೀಯ ರೂಪಾಯಿಗಿಂತಲೂ ತುಂಬಾ ಕಡಿಮೆಯಿರುವುದರಿಂದ ಇಲ್ಲಿಗೆ ಹೋದರೆ ನಿಮ್ಮ ಹಣವೂ ಉಳಿಯುತ್ತದೆ, ಜತೆಗೆ ನಿಮ್ಮ ವಿದೇಶ ಪ್ರವಾಸದ ಕನಸು ಈಡೇರುತ್ತದೆ. ಪ್ರವಾಸೋದ್ಯಮದಿಂದಲೇ ಸಾಕಷ್ಟು ಹಣ ಗಳಿಸುತ್ತಿರುವ ಅನೇಕ ದೇಶಗಳು ಜಗತ್ತಿನಲ್ಲಿವೆ. ವೀಸಾ ಇಲ್ಲದೆ ವಿದೇಶ ಪ್ರವಾಸ ಮಾಡಲು, ನೀವು ವೀಸಾ-ಫ್ರೀ ಅಥವಾ ವೀಸಾ ಆನ್ ಅರೈವಲ್ ಸೌಲಭ್ಯಗಳನ್ನು ಹೊಂದಿರುವ ದೇಶಗಳನ್ನು ಪರಿಗಣಿಸಬಹುದು. ಅವುಗಳಲ್ಲಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಬಹುದಾದ ಸುಂದರ ವಿದೇಶಿ ತಾಣಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹತ್ತಿರವೇ ಇದೆ ಭೂತಾನ್

ಭೂತಾನ್ ಭಾರತದ ಹತ್ತಿರದ ದೇಶ. ಅಂತಾರಾಷ್ಟ್ರೀಯ ಪ್ರವಾಸ ಮಾಡಬೇಕು ಎಂದು ಬಯಸುವ ಸಾಕಷ್ಟು ಭಾರತೀಯರ ಪ್ರವಾಸದ ಪಟ್ಟಿಯಲ್ಲಿ ಭೂತಾನ್ ಇದ್ದೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ, ಕಡಿಮೆ ಬಜೆಟ್‌ನಲ್ಲಿ ಹೋಗಬಹುದಾದ ದೇಶಗಳಲ್ಲಿ ಭೂತಾನ್ ಕೂಡಾ ಒಂದು. ನೀವು ಇಲ್ಲಿ 50,000 ರುಪಾಯಿ ಇದ್ದರೆ ಸುಲಭವಾಗಿ ಭೇಟಿ ನೀಡಬಹುದು. ಏಕೆಂದರೆ ಇದು ಹತ್ತಿರದಲ್ಲಿದೆ ಮತ್ತು ಅಗ್ಗವಾಗಿದೆ. ಮುಖ್ಯ ವಿಷಯವೆಂದರೆ ಭಾರತೀಯರಿಗೆ ಇಲ್ಲಿ 15 ದಿನಗಳವರೆಗೆ ವೀಸಾ ಮುಕ್ತ ಪ್ರವೇಶ ಸಿಗುತ್ತದೆ. ಆದ್ದರಿಂದ ನೀವು ವೀಸಾ ಇಲ್ಲದೆಯೂ ಭೂತಾನ್‌ಗೆ ಭೇಟಿ ನೀಡಿ ನಿಮ್ಮ ಸುಂದರ ಕ್ಷಣಗಳನ್ನು ಕಳೆಯಬಹುದು. ಹಿಮಾಲಯದಲ್ಲಿರುವ ಈ ದೇಶವು ಹಸಿರು, ಹಿಮದಿಂದ ಆವೃತವಾದ ಶಿಖರಗಳು, ಮಠಗಳು ಮತ್ತು ಅದ್ಭುತ ಸಂಸ್ಕೃತಿಗೆ ಹೆಸರುವಾಸಿಯಾಗಿದೆ.

mauritius


ಮಾರಿಷಸ್ ಮರೆಯದಿರಿ

ಹಿಂದೂ ಮಹಾಸಾಗರದ ಮಧ್ಯದಲ್ಲಿರುವ ಮಾರಿಷಸ್ ತುಂಬಾ ಸುಂದರವಾದ ದೇಶ. ಪ್ರವಾಸೋದ್ಯಮದಿಂದಲೇ ಸಾಕಷ್ಟು ಹಣ ಗಳಿಸುತ್ತಿರುವ ಅನೇಕ ದೇಶಗಳಲ್ಲಿ ಇದೂ ಒಂದು. ಭಾರತೀಯರಿಗೆ ಮಾರಿಷಸ್ ಉಚಿತ ವೀಸಾ ನೀಡಿದೆ. ಆದ್ದರಿಂದ ನೀವು ಕಡಿಮೆ ಖರ್ಚಿನಲ್ಲಿ ವೀಸಾ ಇಲ್ಲದೆ ಇಲ್ಲಿಗೆ ಭೇಟಿ ನೀಡಬಹುದು. ಬೀಚ್ ಹಾಗೂ ಕಡಲತೀರಗಳಲ್ಲಿ ಸಮಯ ಕಳೆಯಲು ಇಷ್ಟ ಪಡುವವರು ನೀವಾಗಿದ್ದರೆ ಮಾರಿಷಸ್‌ ನಿಮ್ಮ ಫೇವರೇಟ್‌ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಲ್ಲಿನ ಸರ್ಕಾರದ ನಿಯಮಗಳ ಪ್ರಕಾರ, ಭಾರತೀಯರಿಗೆ ಪ್ರವಾಸಿ ವೀಸಾ ಲಭ್ಯವಿದೆ. ಇಲ್ಲಿ ನೀವು ಉಚಿತ ವೀಸಾದೊಂದಿಗೆ 90 ದಿನಗಳವರೆಗೆ ಉಳಿಯಬಹುದಾಗಿದೆ.

ಕೈಲಿ ಚಿಕ್ಕ ಥೈಲಿ ಇದ್ರೆ ಥೈಲ್ಯಾಂಡ್!

ದಕ್ಷಿಣ ಏಷ್ಯಾದ ಸ್ವರ್ಗ ಎಂದೇ ಕರೆಯಲ್ಪಡುವ ಥೈಲ್ಯಾಂಡ್‌ಗೆ ನೀವು ಒಂದು ಲಕ್ಷಕ್ಕಿಂತಲೂ ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದು. ಥೈಲ್ಯಾಂಡ್ ಭಾರತೀಯ ಪ್ರವಾಸಿಗರಿಗೆ ವೀಸಾ-ಆನ್-ಅರೈವಲ್ ಸೌಲಭ್ಯವನ್ನು ನೀಡುತ್ತದೆ, ಅಂದರೆ ನೀವು ಅಲ್ಲಿಗೆ ಹೋದ ನಂತರ ವೀಸಾ ಪಡೆಯಬಹುದು. ಥೈಲ್ಯಾಂಡ್ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಲು ಉತ್ತಮ ತಾಣವಾಗಿದೆ. ಇಲ್ಲಿನ ಭವ್ಯವಾದ ದೇವಾಲಯಗಳು ಜತೆಗೆ ಮನರಂಜನೆಯಿಂದ ಹಿಡಿದು ಪ್ರಕೃತಿಯ ಅಸಾಧಾರಣ ದೃಶ್ಯಾವಳಿಗಳು ನಿಮ್ಮನ್ನು ನಿಬ್ಬೆರಗಾಗಿಸುವುದಂತೂ ಖಂಡಿತಾ.

Carribbean islands


ಕೆರಿಬಿಯನ್ ದ್ವೀಪಗಳು

ಪ್ರಕೃತಿ ದ್ವೀಪವಾಗಿರುವ ಈ ಕೆರಿಬಿಯನ್ ದೇಶವು ಭಾರತೀಯರ ನೆಚ್ಚಿನ ದ್ವೀಪವಾಗಿದೆ. ಪಿಟನ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ನೀವು 1,342 ಮೀಟರ್ ಎತ್ತರದ ಜ್ವಾಲಾಮುಖಿಯನ್ನು ನೋಡಬಹುದು. ಇಲ್ಲಿಯೂ ನೀವು 50 ಸಾವಿರದಿಂದ 1 ಲಕ್ಷ ರುಪಾಯಿಗಳಿದ್ದರೆ ಸುಲಭವಾಗಿ ಸುತ್ತಾಡಬಹುದು. ಇಲ್ಲಿ ನೀವು ವೀಸಾ ಇಲ್ಲದೆಯೂ ನಿಮ್ಮ ಸುಂದರ ಕ್ಷಣಗಳನ್ನು ಕಳೆಯಬಹುದು.

ಪ್ರವಾಸದ ವೆಚ್ಚವನ್ನು ಕಡಿಮೆ ಮಾಡಲು ನೀವು ಸಲಹೆಗಳನ್ನು ಅನುಸರಿಸಿ:

- ಫ್ಲೈಟ್ ಟಿಕೆಟ್‌ಗಳನ್ನುಮುಂಚಿತವಾಗಿ ಕಾಯ್ದಿರಿಸಿ.
- ಫೈವ್ ಸ್ಟಾರ್ ಹೊಟೇಲ್‌ಗಳ ಬದಲಾಗಿ ಹಾಸ್ಟೆಲ್‌ಗಳು ಅಥವಾ ಕಡಿಮೆ ಬೆಲೆಯ ಹೊಟೇಲ್‌ಗಳನ್ನು ಆರಿಸಿ.
- ಆಹಾರಕ್ಕಾಗಿ ಸ್ಥಳೀಯ ಸಣ್ಣ ಪುಟ್ಟ ಅಂಗಡಿಗಳನ್ನು ಬಳಸಿ ಆಗ ನೀವು ಕಡಿಮೆ ಬೆಲೆಗೆ ಊಟ ಮಾಡಬಹುದು.
- ಸಾರ್ವಜನಿಕ ಸಾರಿಗೆಯನ್ನು ಬಳಸಿ. ಯಾಕೆಂದರೆ ಸಾರ್ವಜನಿಕ ಸಾರಿಗೆಯು ಖಾಸಗಿ ಸಾರಿಗೆಗಿಂತ ಅಗ್ಗವಾಗಿರುತ್ತದೆ.
- ಪ್ರವಾಸಿ ತಾಣಗಳಲ್ಲಿ ಅನೇಕ ಉಚಿತ ಚಟುವಟಿಕೆಗಳನ್ನು ಆನಂದಿಸಬಹುದು, ಉದಾಹರಣೆಗೆ ಉದ್ಯಾನವನಗಳಿಗೆ ಭೇಟಿ ನೀಡುವುದು