ಯಾವುದೇ ದೇಶವಾದರೂ ಅಲ್ಲಿನ ಪ್ರವಾಸಿ ತಾಣಗಳಷ್ಟೇ ಅಲ್ಲಿನ ಸಂಸ್ಕೃತಿ, ಪರಂಪರೆ, ಆಹಾರ ಪದ್ಧತಿಯಿಂದಲೂ ಗುರುತಿಸಿಕೊಳ್ಳುವುತ್ತದೆ. ಅಂತಹ ದೇಶಗಳ ಪೈಕಿ ಸೌದಿ ಅರೇಬಿಯಾ ಕೂಡ ಪ್ರಮುಖವಾದುದು. ಸೌದಿಯು ಅದರ ಶ್ರೀಮಂತ ಸಂಸ್ಕೃತಿ ಹಾಗೂ ಇತಿಹಾಸದ ಮೂಲಕ ಗುರುತಿಸಿಕೊಂಡಿದ್ದು, ಇಲ್ಲಿನ ಆಹಾರ ಪದ್ಧತಿಯೂ ವಿಶ್ವದಾದ್ಯಂತ ಹೆಸರುಮಾಡಿದೆ. ಹಬ್ಬದ ವೇಳೆ ಇಲ್ಲವೇ ವಿಶೇಷ ದಿನಗಳಲ್ಲಿ ತಯಾರಿಸುವ ರುಚಿಕರವಾದ ಮಾಮೌಲ್, ಸಾಂಪ್ರದಾಯಿಕ ಶಾರ್ಟ್‌ಬ್ರೆಡ್ ಕುಕ್ಕೀಸ್‌, ಕುನಾಫಾ, ಮೃದುವಾದ ಚೀಸ್ ಅಥವಾ ಸಿಹಿ ಕೆನೆಯಿಂದ ಕೂಡಿರುವ ಲೇಯರ್ಡ್ ಪೇಸ್ಟ್ರಿಯಂತಹ ಸಿಹಿ ಖಾದ್ಯಗಳು ಸೌದಿ ಅರೇಬಿಯಾದ ಶ್ರೀಮಂತ ಸಾಂಸ್ಕೃತಿಕ ಆಹಾರ ಶೈಲಿಗೆ ಹಿಡಿಯ ಕೈಗನ್ನಡಿಯಾಗಿದೆ.

ಸೌದಿ ಅರೇಬಿಯಾದ ಜನಪ್ರಿಯ ಸಿಹಿತಿಂಡಿಗಳು:

ಬಸ್ಬೌಸಾ (Basbousa)

ಸೌದಿ ಅರೇಬಿಯಾದ ಸಿಹಿತಿನಿಸುಗಳ ಪೈಕಿ ಪ್ರಮುಖವಾದುದು ಬಸ್ಬೌಸಾ.

ವಿಶೇಷವಾದ ಪರಿಮಳ ಮತ್ತು ವಿನ್ಯಾಸಗಳ ಮೂಲಕ ಹೆಸರುವಾಸಿಯಾಗಿರುವ ಬಸ್ಬೌಸಾ, ಮೆತ್ತನೆಯ ರವೆ ಕೇಕ್ ಆಗಿದ್ದು, ಇದರ ಪರಿಮಳವನ್ನು ಹೆಚ್ಚಿಸಲು ರೋಸ್ ವಾಟರ್ ಅಥವಾ ಕಿತ್ತಳೆ ರಸವನ್ನು ಹಾಕಲಾಗುತ್ತದೆ. ಇದು ಗರಿಗರಿಯಾದ, ರವೆ ಆಧಾರಿತ ಹೊರಭಾಗ ಮತ್ತು ಮೃದುವಾದ, ಸಿರಪ್-ನೆನೆಸಿದ ಒಳಭಾಗವನ್ನು ಹೊಂದಿ, ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ.

basbousa sweet

ಮಾಮೌಲ್ (Maamoul)

ಸೌದಿ ಅರೇಬಿಯಾದಲ್ಲಿ ಬಹು ಬೇಡಿಕೆಯನ್ನು ಹೊಂದಿರುವ ಸಿಹಿತಿಂಡಿ ಮಾಮೌಲ್, ಅದರ ವಿಶಿಷ್ಟವಾದ ವಿನ್ಯಾಸ ಮತ್ತು ಸುವಾಸನೆಯಿಂದಲೇ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಶಾರ್ಟ್‌ಬ್ರೆಡ್ ಅನ್ನು ಹೋಲುವ ಈ ಕುಕೀಗಳು ಸಾಮಾನ್ಯವಾಗಿ ಖರ್ಜೂರ, ಪಿಸ್ತಾ ಅಥವಾ ವಾಲ್ನಟ್‌ಗಳಿಂದ ತುಂಬಿರುತ್ತವೆ. ಸೌದಿ ಅರೇಬಿಯಾದ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಕುಕ್ಕೀಸ್‌, ವಿಶೇಷವಾಗಿ ಈದ್‌ನಂತಹ ಸಂದರ್ಭಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುತ್ತದೆ.

maamoul sweet

ಲುಖೈಮತ್ (Luqaimat)

ಮೊದಲ ನೋಟದಲ್ಲಿ ಗುಲಾಬ್‌ ಜಾಮೂನ್‌ನಂತೆ ಕಾಣುವ ಸೌದಿ ಅರೇಬಿಯಾ ಈ ಸಿಹಿ ತಿನಿಸು, ಖರ್ಜೂರದ ಸಿರಪ್ ಅಥವಾ ಜೇನುತುಪ್ಪದಿಂದ ಲೇಪಿತವಾಗಿರುತ್ತದೆ. ಇದು ಗರಿಗರಿಯಾದ ಹೊರಭಾಗ ಮತ್ತು ಮೃದುವಾದ, ಗಾಳಿಯಾಡುವ ಒಳಭಾಗವನ್ನು ಹೊಂದಿರುತ್ತದೆ. ಇದನ್ನು ವಿಶೇಷವಾಗಿ ರಂಜಾನ್ ಮತ್ತು ಇತರ ಹಬ್ಬದ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ.

luqaimat

ಖತಾಯೆಫ್ (Qatayef)

ವಿಶಿಷ್ಟ ಬಗೆಯ ಈ ಯೀಸ್ಟ್ ಪ್ಯಾನ್‌ಕೇಕ್‌ಗಳನ್ನು ಒಂದು ಬದಿಯಲ್ಲಿ ಬೇಯಿಸಲಾಗುತ್ತದೆ, ಇದು ಗರಿಗರಿಯಾದ ಬಾಹ್ಯ ಮತ್ತು ನಯವಾದ ಒಳಭಾಗವನ್ನು ಹೊಂದಿದೆ. ಅವುಗಳನ್ನು ಸಾಮಾನ್ಯವಾಗಿ ಸಿಹಿ ಚೀಸ್ ಅಥವಾ ಕ್ರೀಮ್‌ನಂತಹ ಫಿಲ್ಲರ್‌ ಗಳಿಂದ ತುಂಬಿ ನಂತರ ಹುರಿಯಲಾಗುತ್ತದೆ ಅಥವಾ ಬೇಯಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಸಿಹಿ ಸಿರಪ್‌ನೊಂದಿಗೆ ಬಡಿಸಲಾಗುತ್ತದೆ. ವಿಶೇಷವಾಗಿ ರಂಜಾನ್ ಸಂದರ್ಭದಲ್ಲಿ ಹಾಗೂ ವಿಶೇಷ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಖತಾಯೆಫ್ ಖಮ ಮನೆ ತುಂಬ ತುಂಬಿಕೊಳ್ಳುತ್ತದೆ.

Qatayef

ಕುನಾಫಾ (Kunafa)

ಮಧ್ಯಪ್ರಾಚ್ಯದ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಸಿಹಿತಿಂಡಿಗಳಲ್ಲಿ ಕುನಾಫಾ ಪ್ರಮುಖವಾದುದು. ಇದು ಗರಿಗರಿಯಾದ, ಹೊಂಬಣ್ಣದ ರುಚಿಕರ ಖಾದ್ಯ. ಇದನ್ನು ಹೆಚ್ಚಾಗಿ ಸಿಹಿ ಸಿರಪ್‌ನಲ್ಲಿ ನೆನೆಸಿ, ಕೆನೆ ಅಥವಾ ಚೀಸ್ ಫಿಲ್ಲಿಂಗ್‌ ಮಾಡುವ ಮೂಲಕ ಸವಿಯಬಹುದು. ತೆಳುವಾದ, ನೂಡಲ್ ತರಹದ ಪೇಸ್ಟ್ರಿ (ಕಟೈಫಿ) ಕುನಾಫಾದ ಅಡಿಪಾಯವಾಗಿದ್ದು, ರುಚಿಕರವಾದ ಕ್ರಂಚಿಯನ್ನು ನೀಡುತ್ತದೆ. ಪೇಸ್ಟ್ರಿಯನ್ನು ಸಕ್ಕರೆ ಆಧಾರಿತ ಸಿರಪ್‌ನಲ್ಲಿ ಹದವಾಗಿ ನೆನೆಸಿ ತಿನ್ನುವ ಖುಷಿಯೇ ಬೇರೆ.

Kunafa

ಬಕ್ಲಾವಾ (Baklava)

ಮಧ್ಯಪ್ರಾಚ್ಯದ ಮತ್ತೊಂದು ಪ್ರಸಿದ್ಧ ಸಿಹಿತಿಂಡಿ ಬಕ್ಲಾವಾ. ಡ್ರೈ ಫ್ರುಟ್ಸ್‌ ಆಧಾರಿತವಾದ ಈ ವಿಶೇಷ ಖಾದ್ಯವು ಜೇನುತುಪ್ಪ ಆಧಾರಿತ ಸಿರಪ್ ನೊಂದಿಗೆ ಸೇವಿಸಬಹುದು. ಬಕ್ಲಾವಾ ಸೌದಿ ಅರೇಬಿಯಾದಲ್ಲಿ ಬರಿಯ ಸಿಹಿತಿಂಡಿಯೆನ್ನಿಸಿಕೊಳ್ಳದೆ, ಅಲ್ಲಿನ ಆಹಾರ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ವಿಶೇಷ ಆಚರಣೆಗಳು ಮತ್ತು ಸಂದರ್ಭಗಳಲ್ಲಿ ಈ ಸಿಹಿತಿಂಡಿಗೆ ಹೆಚ್ಚಿನ ಬೇಡಿಕೆಯಿದೆ.

Baklava

ಕ್ಲೀಚಾ (Kleicha)

ಕ್ಲೀಚಾ ಎಂಬುದು ಅಲ್-ಕಾಸಿಮ್ ಪ್ರದೇಶದ ಸಾಂಪ್ರದಾಯಿಕ ಸೌದಿ ಅರೇಬಿಯನ್ ಪೇಸ್ಟ್ರಿ. ಮೊದಲ ನೋಟಕ್ಕೆ ಬಾಕ್ರವಾಡಿಯಂತೆ ಕಾಣುವ ಈ ಸಿಹಿತಿನಿಸು, ಖರ್ಜೂರ, ಬೀಜಗಳು ಅಥವಾ ತೆಂಗಿನಕಾಯಿಯಂತಹ ಪದಾರ್ಥಗಳಿಂದ ಕೂಡಿದೆ. ಈ ರುಚಿಕರವಾದ ಖಾದ್ಯವನ್ನು ಈದ್ ಸಮಯದಲ್ಲಿ ಮತ್ತು ಇತರ ಸಮಾರಂಭಗಳಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.

Kleicha

ಒಟ್ಟಿನಲ್ಲಿ ಸೌದಿ ಅರೇಬಿಯಾ ಪ್ರವಾಸದ ವೇಳೆ ಅಲ್ಲಿನ ಈ ಹೆಸರಾಂತ ಸಿಹಿತಿನಿಸುಗಳನ್ನು ತಪ್ಪದೇ ಟೇಸ್ಟ್‌ ಮಾಡಿ.