ಯುರೋಪ್‌ನಲ್ಲಿರುವ ಈ ಅಸಾಮಾನ್ಯ ಸ್ಮಾರಕಗಳ ಬಗ್ಗೆ ನಿಮಗೆ ಗೊತ್ತಾ?
ಯುರೋಪಿಯನ್ ದೇಶಗಳನ್ನು ಸುತ್ತಬೇಕೆಂದುಕೊಂಡಿದ್ದೀರಾ? ಹಾಗಾದರೆ ಅಲ್ಲಿನ ಕೆಲವು ಅಸಾಮಾನ್ಯ ಸ್ಮಾರಕಗಳು, ಅವುಗಳ ವಾಸ್ತುಶಿಲ್ಪಗಳನ್ನು ಮೊದಲು ತಿಳಿದುಕೊಳ್ಳಿ. ನೀವೂ ಅಚ್ಚರಿಪಡುತ್ತೀರಿ..
ಯುರೋಪಿಯನ್ ದೇಶಗಳು ಒಂದಕ್ಕಿಂತ ಒಂದು ಭಿನ್ನ ನೋಟವನ್ನು, ಅನುಭವವನ್ನು ಪ್ರವಾಸಿಗರಿಗೆ ನೀಡುತ್ತವೆ. ಇಲ್ಲಿಗೆ ಜೀವನದಲ್ಲಿ ಒಂದು ಬಾರಿಯಾದರೂ ಪ್ರಯಾಣ ಮಾಡಬೇಕೆಂಬುದು ಭಾರತೀಯ ಪ್ರವಾಸಿಗರ ಕನಸಾಗಿರುತ್ತದೆ. ಯಾಕೆಂದರೆ ಅದರ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಬೆರಗುಗೊಳಿಸುವ ಭೂದೃಶ್ಯಗಳು ಇದಕ್ಕೆ ಕಾರಣ. ಆದರೆ ಫ್ರಾನ್ಸ್, ಫಿನ್ಲ್ಯಾಂಡ್, ಜರ್ಮನಿ, ಗ್ರೀಸ್, ಹಂಗೇರಿ, ಪೋರ್ಚುಗಲ್ ಸೇರಿದಂತೆ 27 ಯುರೋಪಿಯನ್ ದೇಶಗಳ ಪ್ರಮುಖ ಸ್ಮಾರಕಗಳು ಯಾವುವು ನಿಮಗೆ ಗೊತ್ತಾ? ಅಲ್ಲಿನ ವಾಸ್ತುಶಿಲ್ಪಗಳು ಹೇಗೆ ವ್ಯತ್ಯಸ್ಥವಾಗಿವೆ ಎಂಬುದರ ಮಾಹಿತಿ ನಿಮಗಾಗಿ.
ಅಟೋಮಿಯಂ (Atomium), ಬೆಲ್ಜಿಯಂ
ಯುರೋಪ್ ರಾಜಧಾನಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆ, ಆಧುನಿಕ ವಾಸ್ತುಶಿಲ್ಪವನ್ನು ಪ್ರತಿಬಿಂಭಿಸುವ ಅಟೋಮಿಯಂ.1958 ರ ಬ್ರಸೆಲ್ಸ್‌ನಲ್ಲಿ ನಡೆದ ವಿಶ್ವ ಮೇಳಕ್ಕಾಗಿ ಆಂಡ್ರೆ ವಾಟರ್‌ಕೀನ್ ವಿನ್ಯಾಸಗೊಳಿಸಿದ ಈ ರಚನೆಯಾಗಿದೆ. 102ಮೀ ಎತ್ತರದ ಆಟೋಮಿಯಂ, ಸ್ಫಟಿಕದಂತಹ ಜಾಲರಿಯಲ್ಲಿ ಸಂಪರ್ಕಗೊಂಡಿರುವ 9 ಪರಸ್ಪರ ಸಂಪರ್ಕಿತ ಉಕ್ಕಿನ ಗೋಳಗಳಿಂದ ಮಾಡಲ್ಪಟ್ಟಿದೆ.

ಈ ಗೋಳಾಕಾರದ ಒಳಭಾಗದಲ್ಲಿ ರೆಸ್ಟೋರೆಂಟ್, ವೀಕ್ಷಣಾ ವೇದಿಕೆ ಮಾತ್ರವಲ್ಲದೆ ಮೆಟ್ಟಿಲುಗಳು, ಎಸ್ಕಲೇಟರ್‌ಗಳಿದ್ದು, ಪ್ರವಾಸಿಗರು, ಒಂದು ಗೋಳದಿಂದ ಇನ್ನೊಂದರೊಳಗೆ ಸುತ್ತಾಡಬಹುದು. ಅಟೋಮಿಯಂ ಅನ್ನು ಮೂಲತಃ ವಿಶ್ವ ಮೇಳಕ್ಕಾಗಿ ತಾತ್ಕಾಲಿಕವಾಗಿ ಸಿದ್ಧಪಡಿಸಿದ್ದ ಸ್ಮಾರಕವಾದರೂ ಹೆಚ್ಚು ಜನಪ್ರಿಯವಾದ ಕಾರಣದಿಂದಾಗಿ ಸದ್ಯ ಇದರ ನಿರ್ಮಾಣವಾಗಿ 50 ವರ್ಷಗಳಿಗೂ ಹೆಚ್ಚು ಸಮಯದ ನಂತರವೂ ಅದೇ ಆಕರ್ಷಣೆಯೊಂದಿಗೆ ನೆಲೆ ನಿಂತಿದೆ.
ಪಲೈಸ್ ಐಡಿಯಲ್ ಡು ಫ್ಯಾಕ್ಚರ್ ಚೆವಲ್ (Palais ideal du facteur Cheval), ಫ್ರಾನ್ಸ್
ಮೂಲತಃ "ಪ್ರಕೃತಿಯ ದೇವಾಲಯ" ಎಂದು ಕರೆಯಲ್ಪಡುತ್ತಿದ್ದ ಈ ಮಾನವ ನಿರ್ಮಿತ ಅದ್ಭುತವನ್ನು ಪೋಸ್ಟ್ ಮ್ಯಾನ್ ಫರ್ಡಿನಾಂಡ್ ಚೆವಲ್ ( 1879-1912) ಅವರು ಫ್ರಾನ್ಸ್ ನ ಹಾಟೆರಿವ್ಸ್ ನಲ್ಲಿ ನಿರ್ಮಿಸಿದರು. 33 ವರ್ಷಗಳ ಕಾಲ ತಾವು ಸಂಗ್ರಹಿಸಿದ ಬೆಣಚುಕಲ್ಲುಗಳಿಂದ ಈ ಅರಮನೆಯನ್ನು ಅವರೇ ನಿರ್ಮಿಸಿದ್ದು, ಇದು ಹಿಂದೂ, ಈಜಿಪ್ಟ್ ಮತ್ತು ಮಧ್ಯಕಾಲೀನ ಶೈಲಿಗಳನ್ನು ಬೆಸೆಯುತ್ತವೆ.

ಹಂಡರ್‌ಟ್ವಾಸ್ಸರ್ (Hundertwasser), ಆಸ್ಟ್ರಿಯಾ
ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಹಂಡರ್‌ಟ್ವಾಸ್ಸರ್ ಹೌಸ್ನ ವಾಸ್ತುಶಿಲ್ಪ ಎಲ್ಲರಲ್ಲೂ ಬೆರಗುಮೂಡಿಸಿದೆ. 1983 ರಿಂದ1985ರ ನಡುವೆ ಕಲಾವಿದ ಫ್ರೀಡೆನ್‌ಸ್ರೀಚ್ ಹಂಡರ್‌ಟ್ವಾಸ್ಸರ್ ವಿನ್ಯಾಸಗೊಳಿಸಿದ ಈ ಅಪಾರ್ಟ್ಮೆಂಟ್ ಸಂಕೀರ್ಣವು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲೆಅಲೆಯಾದ ಮಹಡಿಗಳು, ಗಿಡ ಮರದಿಂದ ಆವೃತವಾದ ಬಾಲ್ಕನಿಗಳು ಮಾತ್ರವಲ್ಲದೆ ವಿಶೇಷವಾದ ಅಂಕುಡೊಂಕಿನ ರೂಪವನ್ನು ಹೊಂದಿದೆ.

ಬುಜ್ಲುಡ್ಜಾ ಸ್ಮಾರಕ (Monumento Buzludja), ಬಲ್ಗೇರಿಯಾ
ಬುಜ್ಲುಡ್ಜಾ ಪರ್ವತದ ಮೇಲಿರುವ ಈ ಸ್ಮಾರಕವು ಬಲ್ಗೇರಿಯಾದ ಅತಿದೊಡ್ಡ ಸೈದ್ಧಾಂತಿಕ ಸ್ಮಾರಕವಾಗಿದೆ. 1974ರಲ್ಲಿ ಪ್ರಾರಂಭವಾದ ಈ ಕಟ್ಟಡದ ನಿರ್ಮಾಣವು, 1981ರಲ್ಲಿ ಬಲ್ಗೇರಿಯನ್ ಸಮಾಜವಾದಿ ಚಳವಳಿಯ 90 ನೇ ವಾರ್ಷಿಕೋತ್ಸವದ ಸಂಕೇತವಾಗಿ ಪೂರ್ಣಗೊಳಿಸಲಾಯಿತು.

ಕಾಸಾ ಬ್ಯಾಟ್ಲೋ (Casa Batllo) , ಸ್ಪೇನ್
ಕಾಸಾ ಬ್ಯಾಟ್ಲೋ ಎಂಬುದು ಸ್ಪೇನ್‌ನ ಬಾರ್ಸಿಲೋನಾದ ಮಧ್ಯಭಾಗದಲ್ಲಿರುವ ಒಂದು ಕಟ್ಟಡವಾಗಿದೆ. ಇದನ್ನು ಆಂಟೋನಿ ಗೌಡಿ ವಿನ್ಯಾಸಗೊಳಿಸಿದ್ದಾರೆ ಮತ್ತು ಇದು ಅವರ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಹಿಂದೆ ನಿರ್ಮಿಸಲಾದ ಮನೆಯ ನವೀಕರಣವಾದ ಇದನ್ನು 1904ರಲ್ಲಿ ಗೌಡಿ ಮರುವಿನ್ಯಾಸಗೊಳಿಸಿದರು ಮತ್ತು ಅಂದಿನಿಂದ ಹಲವಾರು ಬಾರಿ ನವೀಕರಿಸಲಾಗಿದೆ.

ದಿ ಕ್ರೂಕ್ಡ್ ಹೌಸ್ (ಕ್ಸಿವಿ ಡೊಮೆಕ್) (Krzywy Domek), ಪೋಲೆಂಡ್
ಪೋಲೆಂಡ್ ನ ಸೋಪಾಟ್ ನಲ್ಲಿ 2004ರಲ್ಲಿ ನಿರ್ಮಿಸಲಾಯಿತು. ಇದು 4000 ಚದರ ಮೀ ವಾಣಿಜ್ಯ ಕಟ್ಟಡವಾಗಿದೆ. ಇದರಲ್ಲಿ ಅಂಗಡಿಗಳು ಮತ್ತು ರೆಸ್ಟೊರೆಂಟ್‌ಗಳಿದ್ದು, ಕಾಲ್ಪನಿಕ ಕಥೆಯ ಚಿತ್ರಣವನ್ನು ನೀಡುತ್ತದೆ.

ಪಲಾವ್ ಡಿ ಲೆಸ್ ಆರ್ಟ್ ರೀನಾ ಸೋಫಿಯಾ (palau de les arts reina sofia), ಸ್ಪೇನ್
2005ರ ಅಕ್ಟೋಬರ್ 8 ರಂದು ಕಲಾವಿದ ಸ್ಯಾಂಟಿಯಾಗೊ ಕ್ಯಾಲಟ್ರಾವಾ ವಿನ್ಯಾಸಗೊಳಿಸಿದ ಈ 75 ಮೀ ಎತ್ತರದ ಪ್ರದರ್ಶನ ಕಲಾ ಕೇಂದ್ರ ಫ್ಯೂಚರಿಸ್ಟಿಕ್ ಶೆಲ್ ರೀತಿಯ ರಚನೆಯನ್ನು ಹೊಂದಿದೆ.

ಟೊರ್ರೆ ವೆಲಾಸ್ಕಾ(Torre velasca) , ಇಟಲಿ
1950ರ ದಶಕದಲ್ಲಿ ಇಟಲಿಯ ಮಿಲನ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಗಗನಚುಂಬಿ ಕಟ್ಟಡ ಟೊರ್ರೆ ವೆಲಾಸ್ಕಾ 1958ರಲ್ಲಿ ಪೂರ್ಣಗೊಂಡಿತು. ಇದು ಮಧ್ಯಕಾಲೀನ ಕೋಟೆಯನ್ನು ಹೋಲುವಂತಿದ್ದು, ನಗರದ ರಕ್ಷಣಾತ್ಮಕ ವಾಸ್ತುಶಿಲ್ಪದ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.