ಅಂಡಮಾನ್‌ ಅನೇಕರ ಕನಸಿನ ಪ್ರದೇಶ. ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ದ್ವೀಪಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಿಬರಬೇಕೆನ್ನುವುದು ಅನೇಕರ ಬಯಕೆ. ಮಧುಚಂದ್ರಕ್ಕೆ, ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರಯಾಣ ಬೆಳೆಸುವುದಕ್ಕೆ ಉತ್ತಮ ಇದು. ವಿಶೇಷವಾದ ಕಡಲ ತೀರಗಳು, ಸ್ಪಟಿಕ ಸ್ಪಷ್ಟವಾದ ನೀರು, ಬಿಳಿ ಮರಳಿಗೆ ಮನಸೋಲುವ ಪ್ರವಾಸಿಗರು ಗೋವಾ ಬದಲು ಅಂಡಮಾನ್‌ನತ್ತ ಮುಖ ಮಾಡುತ್ತಿದ್ದಾರೆ.

ಆದರೆ ಅಂಡಮಾನ್‌ ಗೆ ಪ್ರವಾಸ ಕೈಗೊಳ್ಳುವ ಮುನ್ನ ನೀವು ತಿಳಿದಿರಲೇಬೇಕಿರುವ ವಿಚಾರಗಳು ಹಲವಿದೆ. ಅಲ್ಲಿ ವಸತಿ ವ್ಯವಸ್ಥೆ ಹೇಗಿರುತ್ತದೆ, ಆಹಾರಕ್ಕೆ ಏನೇನು ಆಯ್ಕೆಗಳಿರುತ್ತವೆ, ಸಾರಿಗೆ ಸೌಕರ್ಯ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ಖರ್ಚಿನ ಅಂದಾಜು ಮಾಡಿಕೊಳ್ಳಬೇಕಾಗುತ್ತದೆ.

andaman

ಅಂಡಮಾನ್ ದ್ವೀಪಗಳಿಗೆ ಭೇಟಿ ನೀಡಲು ಯಾವ ಕಾಲ ಸೂಕ್ತ ಎಂಬುದು ಅನೇಕರ ಪ್ರಶ್ನೆ. ಸಾಮಾನ್ಯವಾಗಿ ನವೆಂಬರ್‌ನಿಂದ ಏಪ್ರಿಲ್‌ ತಿಂಗಳ ನಡುವೆ ಅಂಡಮಾನ್‌ನ ಹವಾಮಾನ ಉತ್ತಮವಾಗಿರುವುದರಿಂದ ಈ ಸಂದರ್ಭದಲ್ಲಿ ಭೇಟಿ ನೀಡಬಹುದು. ಈ ಸಮಯದಲ್ಲಿ ನೀವು ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಗೆ ಹೆಚ್ಚಿನ ಅವಕಾಶವಿರುತ್ತದೆ.

ಅಂಡಮಾನ್‌ಗೆ ಸುತ್ತಾಡಲು ಎಷ್ಟು ದಿನಗಳು ಬೇಕಾಗುತ್ತೆ ?

ಪ್ರವಾಸವನ್ನು ಆನಂದಿಸಬೇಕೆಂದರೆ ಸಾಕಷ್ಟು ಸಮಯವನ್ನು ಅಲ್ಲಿ ಕಳೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಂಡಮಾನ್‌ ಪ್ರವಾಸಕ್ಕೆ ಏನಿಲ್ಲವೆಂದರೂ 5 ರಿಂದ 7 ದಿನಗಳು ಬೇಕಾಗುತ್ತದೆ. ಇಲ್ಲಿರುವ ಪೋರ್ಟ್ ಬ್ಲೇರ್, ಹ್ಯಾವ್ಲಾಕ್ ದ್ವೀಪ ಮತ್ತು ನೀಲ್ ದ್ವೀಪದಂತಹ ಜನಪ್ರಿಯ ದ್ವೀಪಗಳಿಗೆ ಭೇಟಿ ಕೊಟ್ಟು, ಅಲ್ಲಿನ ಜನಪ್ರಿಯ ಜನಕ್ರೀಡೆಗಳಲ್ಲಿ ಭಾಗಿಯಾಗಲು ಸಮಯಾವಕಾಶ ಬೇಕಾಗುತ್ತದೆ.

vitaly-sacred-V7LLCN8EjDY-unsplash-Large-990x490

ಅಂಡಮಾನ್‌ನ ಪ್ರವಾಸಿ ತಾಣಗಳಿವು:

ಅಂಡಮಾನ್‌ ಹಾಗೂ ನಿಕೋಬಾರ್‌ ದ್ವೀಪ ಸಮೂಹದಲ್ಲಿ ಭೇಟಿ ನೀಡಲು ಅನೇಕ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಸ್ನಾರ್ಕ್ಲಿಂಗ್ ಮತ್ತು ಡೈವಿಂಗ್‌ ಚಟುವಟಿಕೆಗಳಿಗೆ ಹೆಸರಾಗಿರುವ ರಾಧಾನಗರ ಬೀಚ್, ಪೋರ್ಟ್ ಬ್ಲೇರ್‌ನಲ್ಲಿರುವ ಸೆಲ್ಯುಲಾರ್ ಜೈಲು, ಗ್ರ್ಯಾಂಡ್ ಕ್ಲಾಕ್ ಟವರ್ ಮತ್ತು ಹಳೆಯ ಚರ್ಚ್‌ಗಳನ್ನು ಒಳಗೊಂಡ ರಾಸ್ ಐಲ್ಯಾಂಡ್ ಗೆ ಭೇಟಿ ನೀಡಲು ಮರೆಯಬೇಡಿ. ಇದಲ್ಲದೆ ಪ್ರಶಾಂತವಾಗಿರುವ ನೀಲ್ ದ್ವೀಪ, ಸುಣ್ಣದ ಗುಹೆಗಳು ಮತ್ತು ಗಿಳಿ ದ್ವೀಪಕ್ಕೆ ಹೆಸರುವಾಸಿಯಾಗಿರುವ ಬಾರಾತಾಂಗ್ ದ್ವೀಪಕ್ಕೂ ಹೋಗಿಬನ್ನಿ.

ಆಹಾರಕ್ಕಾಗಿ ಎಷ್ಟು ಖರ್ಚು ಮಾಡಬೇಕು ?

ಸ್ಥಳೀಯ ಆಹಾರ ಮಳಿಗೆಗಳಲ್ಲಿ ಆಹಾರ ಸೇವಿಸುವುದಾದರೆ ಒಬ್ಬ ವ್ಯಕ್ತಿಗೆ ಸುಮಾರು 100 ರಿಂದ 300 ರೂ ವೆಚ್ಚವಾಗುತ್ತದೆ. ಸಾಮಾನ್ಯ ರೆಸ್ಟೋರೆಂಟ್‌ಗಳಿಗೆ ಹೋಗುವವರು ನೀವಾದರೆ ಒಬ್ಬ ವ್ಯಕ್ತಿಗೆ 300 ರಿಂದ 700ರೂ ವರೆಗೆ ಊಟದ ವೆಚ್ಚವಾಗಬಹುದು. ದುಬಾರಿ ರೆಸ್ಟೋರೆಂಟ್‌ಗಳು ಪ್ರತಿ ವ್ಯಕ್ತಿಗೆ ಅಂದಾಜು 1,500ರೂ ವರೆಗೂ ಚಾರ್ಜ್‌ ಮಾಡಬಹುದು.

andaman-thai-seafood

ವಸತಿಯಾಗಿ ಎಷ್ಟು ಹಣ ಕೂಡಿಟ್ಟುಕೊಳ್ಳಬೇಕು ?

ಕಡಿಮೆ ವೆಚ್ಚದಲ್ಲಿ ವಸತಿ ಸೌಲಭ್ಯವನ್ನು ಹುಡುಕುತ್ತಿದ್ದೀರಾ? ಬಜೆಟ್ ಹೋಟೆಲ್‌ಗಳು ಮತ್ತು ಅತಿಥಿಗೃಹಗಳಲ್ಲಿ ಪ್ರತಿ ರಾತ್ರಿಗೆ 1,000-3,000 ರೂ ವೆಚ್ಚವಾಗುತ್ತದೆ. ಸೆಮಿ ಡೀಲೆಕ್ಸ್‌ ಹೊಟೇಲ್‌ ಗಳಲ್ಲಿ 3,000 ರಿಂದ 7,000 ರೂ ಹಾಗೂ ಡೀಲೆಕ್ಸ್‌ ಹೊಟೇಲ್‌ ಗಳು 7,000ರೂ ನಿಂದ ಪ್ರಾರಂಭಿಸಿ 20,000 ರೂಪಾಯಿಯವರೆಗೂ ಜಾರ್ಜ್‌ ಮಾಡುತ್ತದೆ.

ಅಂಡಮಾನ್‌ ಗೆ ತೆರಳಲು ವಿಮಾನ ವೆಚ್ಚವೆಷ್ಟು ?

ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಿಂದ ಅಂಡಮಾನ್‌ ನ ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ, ಇಂಡಿಗೋ ಮತ್ತು ಗೋಏರ್‌ನಂತಹ ಏರ್‌ಲೈನ್‌ಗಳು ನೇರ ಸಂಪರ್ಕವನ್ನು ಕಲ್ಪಿಸಿಕೊಡುತ್ತವೆ. ಅಂದಾಜು 6 ರಿಂದ 8 ಗಂಟೆಗಳ ವಿಮಾನ ಪ್ರಯಾಣವನ್ನು ಕೈಗೊಂಡರೆ ಅಂಡಮಾನ್‌ ಸೇರಬಹುದು. ಆದರೆ ನೇರ ವಿಮಾನಗಳ ಪ್ರಯಾಣಕ್ಕೆ ಏನಿಲ್ಲವೆಂದರೂ 8,000 ರಿಂದ 20,000 ವರೆಗೆ ಟಿಕೆಟ್‌ ಬೆಲೆ ತೆರಬೇಕಾಗುತ್ತದೆ.