ಪಾಸ್ ಪೋರ್ಟ್ ಪಡೆಯೋದಕ್ಕೆ ತಿಂಗಳುಗಟ್ಟಲೆ ಕಾಯಬೇಕಾ?
ನಿಮ್ಮ ವ್ಯಾಪ್ತಿಯಲ್ಲಿ ಬರುವ ಪಾಸ್ ಪೋರ್ಟ್ ಸೇವಾಕೇಂದ್ರಕ್ಕೆ ಹೋಗಬಹುದು. ಅಲ್ಲಿ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ, ಸೂಕ್ತ ದಾಖಲೆಗಳನ್ನು ನೀಡಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಪ್ರಕ್ರಿಯೆಗಳನ್ನು ಮುಗಿಸಿದರೆ ಕೆಲದಿನಗಳ ನಂತರ ಪಾಸ್ ಪೋರ್ಟ್ ವೆರಿಫಿಕೇಶನ್ ನಡೆಯುತ್ತದೆ. ಆ ನಂತರ ಎಲ್ಲವೂ ಸರಿಯಾಗಿದ್ದರೆ ಪಾಸ್ ಪೋರ್ಟ್ ನಿಮ್ಮ ವಿಳಾಸಕ್ಕೆ ಬಂದು ತಲುಪುತ್ತದೆ.
ಜೀವನದಲ್ಲಿ ಒಂದು ಬಾರಿಯಾದರೂ ವಿದೇಶ ಪ್ರಯಾಣ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ ವಿದೇಶಕ್ಕೆ ಹಾರಬೇಕೆಂದುಕೊಂಡರೆ ನಿಮ್ಮ ಬಳಿ ಕಡ್ಡಾಯವಾಗಿ ಪಾಸ್‌ಪೋರ್ಟ್ ಇರಲೇಬೇಕು. ಪಾಸ್‌ಪೋರ್ಟ್ ಇಲ್ಲದಿದ್ದರೆ ಯಾವುದೇ ಅನ್ಯದೇಶಗಳಿಗೆ ಭೇಟಿ ಕೊಡಲು ಸಾಧ್ಯವಿಲ್ಲ. ಬಹಳಷ್ಟು ಮಂದಿ ಪಾಸ್ ಪೋರ್ಟ್ ಮಾಡಿಸಬೇಕು ಅನ್ನೋ ಕಾರಣಕ್ಕೆ, ಅದು ಬಹಳ ಕಷ್ಟ ಎಂಬ ಆಲೋಚನೆಯಲ್ಲಿ ವಿದೇಶಕ್ಕೆ ಹೋಗೋ ಆಸೆಯನ್ನೇ ಕೈಬಿಟ್ಟಿರುತ್ತಾರೆ. ಪಾಸ್ ಪೋರ್ಟ್ ಪಡೆಯುವುದು ನಿಜಕ್ಕೂ ಕಷ್ಟವಾ ಅಂತ ಕೇಳಿದರೆ ಉತ್ತರ ಯೆಸ್ ಮತ್ತು ನೋ! ಅಗತ್ಯ ದಾಖಲಾತಿಗಳು ನಮ್ಮೊಂದಿಗಿದ್ದರೆ, ನಮ್ಮ ಜೀವನದ ಟ್ರ್ಯಾಕ್ ರೆಕಾರ್ಡ್ ಸರಿಯಾಗಿದ್ದರೆ, ಪಾಸ್ ಪೋರ್ಟ್ ಪಡೆಯುವ ಮಾರ್ಗಸೂಚಿಯನ್ನು ಯಥಾವತ್ ಪಾಲಿಸಿದರೆ ಪಾಸ್ ಪೋರ್ಟ್ ಪಡೆಯುವುದು ಅತಿ ಸುಲಭ. ಇಲ್ಲವಾದಲ್ಲಿ ಕಷ್ಟಕ್ಕಿಂತ ಕಷ್ಟ.
ಹಾಗಾದರೆ ಪಾಸ್ ಪೋರ್ಟ್ ಪಡೆಯುವುದು ಹೇಗೆ? ಮಧ್ಯವರ್ತಿಗಳ ಸಹಾಯ ಬೇಕೇಬೇಕಾ? ಅಡ್ರೆಸ್ ಪ್ರೂಫ್ ಇರಲೇಬೇಕಾ? ಐಡಿ ಪ್ರೂಫಲ್ಲಿ ಮಿಸ್ಟೇಕ್ ಇದ್ರೆ ಪಾಸ್ ಪೋರ್ಟ್ ರಿಜೆಕ್ಟ್ ಆಗತ್ತಾ? ಪಾಸ್ ಪೋರ್ಟ್ ವೆರಿಫಿಕೇಶನ್ ಗೆ ಬರುವ ಪೊಲೀಸರು ಏನು ಕೇಳ್ತಾರೆ? ವೆರಿಫಿಕೇಶನ್ ಗೆ ಬಂದಾಗ ನಾವು ಸಿಗದೇ ಹೋದರೆ ಏನಾಗುತ್ತೆ? ಒಂದೇ ದಿನಕ್ಕೆ ಪಾಸ್ ಪೋರ್ಟ್ ಪಡೆಯೋದು ಸಾಧ್ಯ ಇದೆಯಾ? ಆಗಷ್ಟೇ ಹುಟ್ಟಿದ ಮಗುವಿನ ಹೆಸರಿಗೆ ಪಾಸ್ ಪೋರ್ಟ್ ಪಡೆಯಬಹುದಾ? ಇನ್ನೂ ಹುಟ್ಟೋದರಲ್ಲಿರುವ ಮಗುವಿಗೆ ಪಾಸ್ ಪೋರ್ಟ್ ತಗೋಬೇಕಾ? ಹೇಗೆ? ಇಂಥ ಹತ್ತು ಹಲವಾರು ಪ್ರಶ್ನೆಗಳು ಒಬ್ಬರಲ್ಲ ಒಬ್ಬರಲ್ಲಿ ಉದ್ಭವವಾಗುತ್ತಲೇ ಇರುತ್ತವೆ.
ಈ ಲೇಖನ ನಿಮ್ಮ ಗೊಂದಲಗಳಿಗೆ ಪೂರ್ಣವಿರಾಮ ಹಾಕಬಹುದು.

ಹಾಗಾದ್ರೆ ಪಾಸ್ ಪೋರ್ಟ್ ಮಾಡಿಸೋದು ಹೇಗೆ?
ನಿಮಗೆ ಆನ್ ಲೈನ್ ಮಾರ್ಗ ಸುಲಭವಲ್ಲ ಅಂತಾದಲ್ಲಿ, ನಿಮ್ಮ ವ್ಯಾಪ್ತಿಯಲ್ಲಿ ಬರುವ ಪಾಸ್ ಪೋರ್ಟ್ ಸೇವಾಕೇಂದ್ರಕ್ಕೆ ಹೋಗಬಹುದು. ಅಲ್ಲಿ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ, ಸೂಕ್ತ ದಾಖಲೆಗಳನ್ನು ನೀಡಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಪ್ರಕ್ರಿಯೆಗಳನ್ನು ಮುಗಿಸಿದರೆ ಕೆಲದಿನಗಳ ನಂತರ ಪಾಸ್ ಪೋರ್ಟ್ ವೆರಿಫಿಕೇಶನ್ ನಡೆಯುತ್ತದೆ. ಆ ನಂತರ ಎಲ್ಲವೂ ಸರಿಯಾಗಿದ್ದರೆ ಪಾಸ್ ಪೋರ್ಟ್ ನಿಮ್ಮ ವಿಳಾಸಕ್ಕೆ ಬಂದು ತಲುಪುತ್ತದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಈಗ ನಾವು ಆನ್ ಲೈನ್ ಯುಗದಲ್ಲಿದ್ದೇವೆ. ಆನ್ ಲೈನ್ ಮಾದರಿಯೇ ಸುಲಭ.
ಹಾಗಾದರೆ ನಾವು ಅನುಸರಿಸಬೇಕಾದ ಮಾರ್ಗ ಯಾವುದು?
- ಮೊದಲು ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು
- ನಂತರ ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ನಲ್ಲಿ ಲಾಗಿನ್ ಮಾಡಬೇಕು.
- Apply for Background varification for GEP ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಇದರ ನಂತರ ಫಾರ್ಮ್‌ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿದರೆ ಆಯ್ತು.
- ಈಗ Pay And Schedule Appointment ಎಂಬ ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
- ಇಲ್ಲಿ ಯಾವ ಸ್ಥಳದ Appointment ಬೇಕೋ ಆ ಸ್ಥಳವನ್ನು ಆರಿಸಿಕೊಳ್ಳಬೇಕು.
- ಅಪಾಯಿಂಟ್‌ಮೆಂಟ್ ಬುಕ್ ಮಾಡಲು ಆನ್‌ಲೈನ್ ಪೇಮೆಂಟ್ ಮಾಡುವುದು ಅನಿವಾರ್ಯ.
- ಇದರ ನಂತರ, Print Application Receipt ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಪ್ರಿಂಟರ್‌ನಿಂದ ಅಪ್ಲಿಕೇಶನ್‌ನ ಪ್ರಿಂಟ್ ಹೊರಬರುತ್ತದೆ. ನಿಮ್ಮ ಮೊಬೈಲ್ ನಲ್ಲಿ ಅಪಾಯಿಂಟ್‌ಮೆಂಟ್ ಸಂದೇಶವೂ ಬರುತ್ತದೆ. ಅದನ್ನು ಸೇವ್ ಮಾಡಿಕೊಳ್ಳಬೇಕು.
- ಪಾಸ್‌ಪೋರ್ಟ್ ಪರಿಶೀಲನೆಯ ಸೌಲಭ್ಯವು ಸಂಪೂರ್ಣವಾಗಿ ಆನ್‌ಲೈನ್ ಆಗಿದ್ದರೆ, ನಂತರ ದೈಹಿಕವಾಗಿ ಪೊಲೀಸ್ ವೆರಿಫಿಕೇಶನ್ ಅಗತ್ಯವೂ ಇರುವುದಿಲ್ಲ.
ಪಾಸ್ ಪೋರ್ಟ್ ಪಡೆಯೋದಕ್ಕೆ ತಿಂಗಳುಗಟ್ಟಲೆ ಕಾಯಬೇಕಾ?
ಇಲ್ಲ ಈಗ ಪ್ರಕ್ರಿಯೆ ಬಹಳ ಚುರುಕಾಗಿದ್ದು ಐದು ದಿನಗಳ ಒಳಗಾಗಿ ಪಾಸ್ ಪೋರ್ಟ್ ಪಡೆಯಬಹುದು.
ಇನ್ನೂ ಬೇಗ ಪಾಸ್ ಪೋರ್ಟ್ ಬೇಗನೆ ಪಡೆಯುವುದು ಹೇಗೆ?
ಇನ್ನೂ ಬೇಗ ಅಂದರೆ ತತ್ಕಾಲ್ ವ್ಯವಸ್ಥೆಯಲ್ಲಿ ಮೂರುನಾಲ್ಕು ದಿನಗಳ ಒಳಗೆ ಪಡೆಯಬಹುದು.
ಒಂದೇ ದಿನದಲ್ಲಿ ತತ್ಕಾಲ್ ಪಾಸ್ ಪೋರ್ಟ್ ಸಿಗುವುದಿಲ್ಲವೇ?
ನಿಮ್ಮ ಎಲ್ಲ ದಾಖಲೆಗಳು ಸರಿಯಾಗಿದ್ದು ತತ್ಕಾಲ್ ನಲ್ಲಿ ಅರ್ಜಿ ಸಲ್ಲಿಸಿದರೂ ಒಂದೇ ದಿನದಲ್ಲಿ ಸಿಗುವುದು ಕಷ್ಟ.

ನವಜಾತ ಶಿಶುವಿಗು ಬೇಕು ಪಾಸ್ ಪೋರ್ಟ್ ಸಿಗುತ್ತದೆಯೇ?
ತಂದೆಯ ಪಾಸ್‌ಪೋರ್ಟ್‌ನಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರನ್ನು ಸೇರಿಸಿ ವಿದೇಶ ಯಾನ ಕೈಗೊಳ್ಳುವ ಕಾಲವಿತ್ತು.ಇತ್ತೀಚಿನ ಮಾರ್ಗಸೂಚಿಯಂತೆ, ಅಪ್ರಾಪ್ತರಿದ್ದರೆ ಅವರ ಹೆಸರಿನಲ್ಲಿ ಬೇರೆಯೇ ಪಾಸ್‌ಪೋರ್ಟ್ ಮಾಡಿಸಬೇಕು. ಆದರೆ, ನವಜಾತ ಶಿಶುವಿಗೆ ಪಾಸ್ಪೋರ್ಟ್ ಅರ್ಜಿ ಸಲ್ಲಿಸುವ ವಿಧಾನ ವಯಸ್ಕರ ಅರ್ಜಿ ಸಲ್ಲಿಕೆ ವಿಧಾನಕ್ಕಿಂತ ಸ್ವಲ್ಪ ಭಿನ್ನ. ಇಲ್ಲಿ ಪಾಲಕರು ಅಥವಾ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ‘ಅನುಬಂಧ ಡಿ’ಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಶಿಶುವಿನ ವಿವರಗಳನ್ನು ದೃಢೀಕರಿಸುವ ಘೋಷಣಾ ಪತ್ರವನ್ನು ಅರ್ಜಿ ಜತೆ ಸಲ್ಲಿಸಬೇಕಾಗುತ್ತದೆ. ಪೌರತ್ವ ಪುರಾವೆಗಾಗಿ ಜನನ ಪ್ರಮಾಣ ಪತ್ರ, ಅಡ್ರೆಸ್ ಪ್ರೂಫ್, ಪಾಸ್ ಪೋರ್ಟ್ ಗಾತ್ರದ ಫೊಟೋ ನಿಮ್ಮ ಜೊತೆಗಿರಬೇಕು. ಈ ದಾಖಲೆಗಳನ್ನು ನೀಡುವ ಮೂಲಕ ಮಕ್ಕಳ ಪಾಸ್‌ಪೋರ್ಟ್ ಪಡೆದುಕೊಳ್ಳಬಹುದು.
ಇನ್ನೂ ಹೊಟ್ಟೆಯಲ್ಲಿರುವ ಮಗುವಿಗೆ ಪಾಸ್ ಪೋರ್ಟ್ ಸಿಗುತ್ತದೆಯೇ?
ಇದರ ಅಗತ್ಯ ಬರುವುದೇ ಇಲ್ಲ. ಕಾನೂನಾತ್ಮಕವಾಗಿ ಮಗು ಹುಟ್ಟುವ ತನಕ ಅದು ಗಣನೆಗೆ ಬರುವುದಿಲ್ಲ. ಹೀಗಾಗಿ ಗರ್ಭಾವಸ್ಥೆಯಲ್ಲಿ ಮಗು ಪಾಸ್ ಪೋರ್ಟ್ ಇಲ್ಲದೇ ವಿದೇಶಕ್ಕೆ ಹೋಗಬಹುದು.