-ಶಂಕರ್ ಅಜ್ಜಂಪುರ

ನನಗೆ ಅಲ್ಲಿಗೆ ಹೋದಾಗ ಒಂದು ಅನುಮಾನ ಬಿಡದೇ ಕಾಡುತ್ತಿತ್ತು. ಈ ಚಿತ್ರ ಸಂತೆಗೆ ಬೆಂಗಳೂರು ಸ್ಫೂರ್ತಿಯಾಯಿತೋ ಅಥವಾ ನಾವು ಇವರ ನಕಲು ಮಾಡಿದೆವೋ ಎನ್ನುವುದೇ ಆ ಅನುಮಾನ. ಸ್ವಲ್ಪಹೊತ್ತಿನ ನಂತರ ಅದಕ್ಕೆ ಪರಿಹಾರ ದೊರೆಯಿತು. ಅಲ್ಲಿನ ಕಲಾವಿದರೊಬ್ಬರನ್ನು ಮಾತನಾಡಿಸಿದಾಗ ಇದಕ್ಕೆ ನಲವತ್ತು ವರ್ಷಗಳ ಇತಿಹಾಸವಿದೆ ಎಂದರು. ಬೆಂಗಳೂರಿನ ಚಿತ್ರಸಂತೆಗೆ ಹನ್ನೊಂದು ಹನ್ನೆರಡರ ಪ್ರಾಯವಿದ್ದೀತು. ಈ ಹೋಲಿಸಿ ನೋಡುವ ಸ್ವಭಾವವನ್ನು ನಾನೆಷ್ಟು ಬಿಡಬೇಕೆಂದರೂ ಮನ ಕೇಳದು. ಅದರಲ್ಲೂ ಹೋಲಿಕೆಯ ಹಣಕಾಸಿನ ವಿಷಯಕ್ಕೆ ಬಂದಾಗ, ಡಾಲರುಗಳನ್ನು ರುಪಾಯಿಯೆದುರು ತೂಗಿನೋಡಿ, ವಸ್ತುಗಳ ಬೆಲೆಯನ್ನು ಎಣಿಸಿಕೊಂಡರೆ ಗಾಬರಿಯಾಗುತ್ತದೆ, ಭಾರತದಲ್ಲೇ ಸೋವಿ ಎಂದೆನಿಸುತ್ತದೆ. ಹೀಗಾಗಿ ಅವರು ಖರೀದಿಸುವ ವಸ್ತುಗಳಿಗೆ ನಾನು ಇಂತಿಷ್ಟು ರುಪಾಯಿ ಎಂದೇ ಹೇಳುತ್ತೇನಲ್ಲದೆ, ಅಪ್ಪಿತಪ್ಪಿ ಡಾಲರು ಎಂದು ಹೇಳುವುದಿಲ್ಲ.

ಉತ್ತಮವಾದದ್ದೆಲ್ಲ ಅನುಕರಣೀಯವೇ ಸರಿ. ಚಿತ್ರಸಂತೆಯ ವಿಷಯಕ್ಕೂ ಅದು ಅನ್ವಯಿಸುತ್ತದೆ. ಹಾಗಿಲ್ಲದಿದ್ದಲ್ಲಿ ನಾವು ಬೆಂಗಳೂರಿನಲ್ಲಿ ನಮ್ಮ ಮುಖಚಿತ್ರ ಬರೆಸಿಕೊಳ್ಳಲು ಆಗುತ್ತಿರಲಿಲ್ಲ. ಕಲಾವಿದರಿಗೆ ಕಾಸೂ ಹುಟ್ಟುತ್ತಿರಲಿಲ್ಲ. ಆದರೆ ನಮಗೆ ದೊರೆಯುವ ಕಲಾವಿದನ ಗುಣಮಟ್ಟಕ್ಕೆ ಅನ್ವಯವಾಗುವಂತೆ ನಮ್ಮ ಮುಖ ಮೂಡಿಬರುತ್ತದೆ.

Chitra sante at Missourie

ಇಲ್ಲೊಬ್ಬ ಕಲಾವಿದ ತರುಣಿಯ ಚಿತ್ರ ಬಿಡಿಸುತ್ತಿದ್ದ. ಅದಕ್ಕೆ ಆತ ಹಾಕಿಕೊಂಡ ಸಮಯದ ಮಿತಿ ಕೇವಲ ಐದು ನಿಮಿಷಗಳು. ನೋಡನೋಡುತ್ತಿದ್ದಂತೆಯೇ ಆಕೆಯ ಮುಖಚಿತ್ರ ರಚನೆಯಾಯಿತು. ಅದರ ಬೆಲೆ ಭಾರತದ ರುಪಾಯಿಗಳಲ್ಲಿ ಸಾವಿರಗಳನ್ನು ದಾಟುತ್ತದೆಂದು ಲೆಕ್ಕ ಹಾಕಲಾದೀತೇ. ಸುಂದರವಾಗಿ ಮೂಡಿಬಂದ ಆ ಚಿತ್ರವನ್ನು ಸೊಗಸಾದ ಕಟ್ಟಿನಲ್ಲಿ ಕೂಡಿಸಿ ಪ್ಯಾಕ್ ಮಾಡಿ ಕೊಟ್ಟ. ಆಕೆ 15 ಡಾಲರುಗಳನ್ನು ನೀಡಿ ಆಕೆ ಅದನ್ನು ತೆಗೆದುಕೊಂಡಳು.

ಈ ಚಿತ್ರ ಸಂತೆಯಲ್ಲಿ ನಾನು ಗಮನಿಸಿದ ಅಂಶವೆಂದರೆ, ಇಲ್ಲಿ ಅಮೂರ್ತ ಕಲೆಗೆ ಹೆಚ್ಚಿನ ಪ್ರಾಶಸ್ತ್ಯ. ವಿವಿಧ ಮರಗಳ ನಾಲ್ಕೈದು ಅಡಿ ವಿಸ್ತಾರದ ಭಾಗಗಳನ್ನು ನುಣುಪಾಗಿ ಪಾಲಿಷ್ ಮಾಡಿ ಗೋಡೆಗೆ ನೇತುಹಾಕುವಂತೆ ರಚಿಸಿರುತ್ತಾರೆ. ದೂರದಿಂದ ನೋಡಿದಾಗ ಅದರಲ್ಲಿ ನಮ್ಮ ಕಲ್ಪನೆಗನುಗುಣವಾಗಿ ಚಿತ್ರ ಗೋಚರವಾಗುತ್ತದೆಂದು ಹೇಳುತ್ತಾರೆ. ತೀರ ಹತ್ತಿರದಿಂದ ನೋಡಿದ ನಮಗೆ ಅದೊಂದು ಮರದ ಚೂರೆಂದು ಮಾತ್ರ ಕಾಣಿಸಿತು. ಕಲೆಯ ವಸ್ತು - ವಿಷಯಗಳಲ್ಲಿ ಭಾರತವೇ ಚೆನ್ನಾಗಿದೆ ಎಂದು ಭಾವಿಸುತ್ತೇನೆ. ನಮ್ಮ ಕಲೆಗೆ ಮಾನವೀಯ ಸ್ಪರ್ಶ, ರಸಿಕತೆ ಹಾಗೂ ಪುರಾಣದಿಂದ ಹಿಡಿದು, ಆಧುನಿಕ ಕಾಲದ ಹಲವಾರು ಸಂಗತಿಗಳ ವೈವಿಧ್ಯತೆಯಿರುತ್ತದೆ. ಆದರೆ ಬಳಸುವ ಪದಾರ್ಥಗಳ ವಿಷಯದಲ್ಲಿ ಇಲ್ಲಿನವರೇ ಮುಂದು ಎನ್ನಬೇಕು. ಏಕೆಂದರೆ ಕಲೆಯ ಮಾಧ್ಯಮವಾಗಿ ಇಲ್ಲಿ ಗಾಜು, ಪಿಂಗಾಣಿ, ಲೋಹ, ಚರ್ಮ, ಮರ ಮುಂತಾದ ವಿವಿಧ ವಸ್ತುಗಳನ್ನು ಬಳಸುತ್ತಾರೆ. ಪ್ರತಿಯೊಬ್ಬ ಕಲಾವಿದನೂ ತನ್ನ ಮಳಿಗೆಯ ಮುಂದೆ, ತಾನು ಯಾವುದರಲ್ಲಿ ಪರಿಣತ, ಎಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿದ್ದೇನೆ, ತನ್ನ ಸಾಧನೆಗಳೇನು ಎಂದು ಬಿಂಬಿಸುವ ವಿವರಗಳನ್ನು ಪ್ರದರ್ಶಿಸಿರುತ್ತಾರೆ. ಫೋನ್ ಸಂಖ್ಯೆ, ಈ-ಮೇಲ್ ವಿಳಾಸಗಳನ್ನೂ ನೀಡಿರುತ್ತಾರೆ. ಗುಜರಿಯಲ್ಲಿ ದೊರಕುವ ಹಳೆಯ ಯಂತ್ರಭಾಗಗಳನ್ನು ಜೋಡಿಸಿ ನಿರ್ಮಿಸಿರುವ ಹಕ್ಕಿಗಳು, ಪ್ರಾಣಿಗಳ ಲೋಹಶಿಲ್ಪಗಳು ಜನಪ್ರಿಯ. ಹಜಾರದ ಮೂಲೆಗಳಲ್ಲಿ ಎದ್ದು ಕಾಣುವಂತೆ ಪ್ರದರ್ಶಿತವಾಗಿರುವ ಇಂಥ ಶಿಲ್ಪಗಳಿಗೆ ನಿರ್ವಹಣೆಯ ವೆಚ್ಚವೆಂಬುದಿಲ್ಲ.

ಗಾಜಿನಿಂದ ತಯಾರಿಸಿದ ಹಲವಾರು ಕೃತಿಗಳಲ್ಲಿ ಶ್ರಮದ ಅಂಶವೇನೂ ಕಂಡುಬಾರದು. ಆದರೆ ಕಲ್ಪನೆ ಮತ್ತು ವಿವಿಧ ವರ್ಣಗಳ ಗಾಜಿನ ತುಂಡುಗಳನ್ನು ಸೂಕ್ತವಾಗಿ ಸಂಯೋಜಿಸಿ, ಭಾವನೆಗಳನ್ನು ವ್ಯಕ್ತಪಡಿಸಿರುವ ಪರಿ ಮೆಚ್ಚುವಂತಿದೆ. ಮರದ ಕೃತಿಗಳಲ್ಲಿ ಹೆಚ್ಚಿನಂಶ ಮೋಟಾರು ವಾಹನಗಳು, ಬಂದೂಕು, ಮನೆ, ಮಕ್ಕಳ ಆಟದ ಪದಾರ್ಥಗಳಂತಹ ವಸ್ತುಗಳಿದ್ದವೇ ವಿನಾ, ನಮ್ಮಲ್ಲಿನ ಕುಶಲಕೆತ್ತನೆಯುಳ್ಳ ರಚನೆಗಳು ಇರಲಿಲ್ಲ. ಫೊಟೋಗ್ರಫಿಯ ಜತೆ ಕರಕುಶಲ ಕಲೆಯನ್ನು ಸಮ್ಮಿಶ್ರಗೊಳಿಸಿದ ಚಿತ್ರಗಳು ಅದ್ಭುತವಾಗಿದ್ದವು. ಏಕೆಂದರೆ ದೂರದಿಂದ ನೋಡುವಾಗ ಪರಿಣತ ಕಲಾವಿದನ ಪ್ರಾಕೃತಿಕ ಚಿತ್ರದಂತೆ ಕಂಡುಬಂದರೆ, ಹತ್ತಿರದಿಂದ ನೋಡಿದಾಗ ಅವು ಫೊಟೋಗಳು ಮತ್ತು ಅವುಗಳ ಮೇಲೆ ಕುಂಚದಿಂದ ಸ್ಥೂಲವಾಗಿ ಎಳೆದ ರೇಖೆಗಳು ದೂರದಿಂದ ಚಿತ್ರದ ಅರ್ಥವನ್ನೇ ಬದಲಾಯಿಸಿರುತ್ತಿದ್ದವು.

ತರುಣ ಕಲಾವಿದರಿಗಿಂತ ಹೆಚ್ಚಿಗೆ ವೃದ್ಧರೇ ಹೆಚ್ಚಿಗೆ ಇದ್ದರು. ತಮ್ಮ ಕೃತಿಗಳ ಚಿತ್ರಗಳನ್ನು ತೆಗೆಯುತ್ತೇವೆಂದು ಕೇಳಿದಾಗ, ಸಂತೋಷದಿಂದ ಒಪ್ಪಿದರು. ಕೆಲವರು ತಮ್ಮ ಅಮೂರ್ತ ಕೃತಿಗಳ ಬಗ್ಗೆ ವಿವರಿಸುತ್ತಿದ್ದರು. ಬೆಂಗಳೂರಿನಂತೆ ಇಲ್ಲೂ ತಿಂಡಿ-ತಿನಿಸುಗಳ ಚಿಕ್ಕ ಅಂಗಡಿಗಳು, ಐಸ್ ಕ್ಯಾಂಡಿಗಳು ಮಾರಾಟವಾಗುತ್ತಿದ್ದರೂ, ನಮ್ಮ ಚಿತ್ರ ಸಂತೆಯ ಸೊಬಗಾಗಲೀ, ಉತ್ಸಾಹಭರಿತ ಜನರ ಓಡಾಟ, ಗದ್ದಲ-ಗೌಜುಗಳಾಗಲೀ ಕಂಡುಬರಲಿಲ್ಲ.

ಅಂದಾಜು 80-90 ಮಳಿಗೆಗಳಿದ್ದ ಇಲ್ಲಿನ ವಿಹಂಗಮ ನೋಟ ನಿಮಗಾಗಿ ಇಲ್ಲಿದೆ. ಬೇಸಗೆಯೆಂದರೂ ಆಗೀಗ ಮಳೆ ಬರುವ ಹವಾಮಾನವಿರುವುದರಿಂದ, ಕಲಾಕೃತಿಗಳಿಗೆ ರಕ್ಷಣೆ ನೀಡುವಂಥ ಮಳಿಗೆಗಳು ಇಲ್ಲಿನ ವಿಶೇಷ.

Chitra sante

ಈ ಚಿತ್ರ ಸಂತೆ ನಡೆಯುತ್ತಿದ್ದುದು ಮಿಸೌರಿ ನದಿಯ ದಂಡೆಯ ಮೇಲೆ. ಇದನ್ನು ಬಿಟ್ಟು ಅಮೆರಿಕೆಯ ಇನ್ನೊಂದು ಪ್ರಮುಖ ನದಿಯೆಂದರೆ ಮಿಸಿಸಿಪ್ಪಿ. ಮಿಸೌರಿ ಒಮಾಹಾದಲ್ಲೂ ಹಾದುಹೋಗುತ್ತದೆ. ಪಕ್ಕದ ಅಯೋವಾ ಮತ್ತು ನೆಬ್ರಾಸ್ಕಾ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸಲೆಂದು ಮೂರುಸಾವಿರ ಅಡಿಗಳ ಒಂದು ತೂಗು ಸೇತುವೆಯನ್ನು ನಿರ್ಮಿಸಿದ್ದಾರೆ. ದೂರದಿಂದ ನೋಡುವಾಗ ಅಂಕುಡೊಂಕಾಗಿ ಕಾಣುವ ಈ ಸೇತುವೆ ಇಲ್ಲದಿದ್ದಲ್ಲಿ ಎರಡು ರಾಜ್ಯಗಳ ಜನ ೧೭ ಮೈಲಿ ಸುತ್ತಿಕೊಂಡು ಬರಬೇಕಿತ್ತು. ಈ ಮಾರ್ಗದಲ್ಲಿ ಕೇವಲ ಸೈಕಲ್ ಸವಾರಿ ಹಾಗೂ ನಡೆದಾಡಲು ಪರವಾನಗಿ ನೀಡಲಾಗಿದೆ. ಸರಿಸುಮಾರು ಸೇತುವೆಯ ಮಧ್ಯಭಾಗದಲ್ಲಿ ಅಯೋವಾ ರಾಜ್ಯ ಮತ್ತು ಒಮಾಹಾ ನಗರಗಳ ಗಡಿಯನ್ನು ಗುರುತಿಸಲಾಗಿದೆ. ಇಲ್ಲಿ ನಿಂತು ಒಂದು ರಾಜ್ಯದ ಗಡಿಯಿಂದ ಮತ್ತೊಂದು ರಾಜ್ಯಕ್ಕೆ ಪ್ರವೇಶ ಕಲ್ಪಿಸುವ ವ್ಯವಸ್ಥೆಯನ್ನು ಇಲ್ಲಿಗೆ ಬಂದ ಜನ ಗುರುತಿಗೆ ಇರಲೆಂದು ಫೊಟೋ ತೆಗೆಸಿಕೊಳ್ಳುತ್ತಾರೆ. 3000 ಮೈಲು ಹರಿಯುವ ಈ ನದಿಯನ್ನೂ ರಾಜ್ಯದ ಗುಂಟ ಹಂಚಿಕೊಂಡಿರುವುದರಿಂದ, ನಮ್ಮಲ್ಲಿನ ಕಾವೇರಿ ಅಂತರರಾಜ್ಯ ಜಲವಿವಾದ ಮೂಡದಂತೆ ಎಚ್ಚರವಹಿಸಲಾಗಿದೆ. ಹಿಂದೆಲ್ಲ ತುಂಬ ರಭಸವಾಗಿ ಹರಿಯುತ್ತ ವ್ಯವಸಾಯ ಪ್ರದೇಶಗಳನ್ನು ನಾಶಗೊಳಿಸುತ್ತಿದ್ದ ಈ ನದಿಯನ್ನು ಹಲವಾರು ಯೋಜನೆಗಳ ಮೂಲಕ ಹದ್ದುಬಸ್ತಿನಲ್ಲಿ ಇಡಲಾಗಿದೆ. ಇದನ್ನು ಹೇಗೆ ಪಳಗಿಸಲಾಯಿತೆಂಬುದನ್ನೂ, ಅದಕ್ಕೆಂದು ಶ್ರಮಿಸಿದವರ ವಿವರಗಳನ್ನು ಸೇತುವೆಯ ಒಂದು ಹಂತದಲ್ಲಿ ಪ್ರದರ್ಶಿಸಲಾಗಿದೆ.

ಇದರ ಸಮೀಪವೇ ಇರುವ ಹಾರ್ಟ್ ಲ್ಯಾಂಡ್ ಉದ್ಯಾನವನ 31 ಎಕರೆ ವಿಸ್ತಾರವಾಗಿದೆ. 1990ರಲ್ಲಿ ಆರಂಭವಾದ ಈ ಉದ್ಯಾನದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿರುವ ಕಾರಂಜಿ. ಎತ್ತರಕ್ಕೆ ಹಾರುವ ಈ ಕಾರಂಜಿಯ ನೋಟ ನಗರದ ಮುಖ್ಯಬೀದಿಯಿಂದ ದೂರದಿಂದಲೇ ಕಾಣುವಂತೆ ನಿರ್ಮಿಸಲಾಗಿದೆ. 1884ಕ್ಕಿಂತ ಮುಂಚಿತವಾಗಿ ಈ ನಗರವೇ ಇರಲಿಲ್ಲವಾಗಿ ಪ್ರಾಚೀನವೆಂದಾಗಲೀ, ಐತಿಹಾಸಿಕ ಮಹತ್ವವುಳ್ಳ ವಸ್ತು, ನಿರ್ಮಾಣಗಳನ್ನಾಗಲೀ ನಿರೀಕ್ಷಿಸಲಾಗದು.