ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಪಾಕ್‌ ಗಡಿ ಉದ್ವಿಗ್ನತೆಯಿಂದಾಗಿ ಇಡೀ ಕಾಶ್ಮೀರ ಮಂಕಾಗಿದೆ. ಈ ಮಧ್ಯೆಯೂ ಜಮ್ಮುವಿನ ಪಟ್ನಿಟಾಪ್‌ಗೆ ನೂರಾರು ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಇದರಿಂದ ಅಲ್ಲಿನ ಪ್ರವಾಸೋದ್ಯಮದಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದೆ. ಪಹಲ್ಗಾಮ್‌ ದಾಳಿ ಮತ್ತು ಆಪರೇಷನ್‌ ಸಿಂದೂರ್‌ ನಂತರ ಇಡೀ ಕಾಶ್ಮೀರ ಮೌನವಾಗಿತ್ತು. ಆದರೆ ಈಗ ಗಡಿ ಉದ್ವಿಗ್ನತೆಯ ಮಧ್ಯೆಯೂ ಜಮ್ಮುವಿನ ಪಟ್ನಿಟಾಪ್‌ ಮತ್ತು ಬಟೋಟ್‌ಗೆ ಪ್ರವಾಸಿಗರು ಬರುತ್ತಿದ್ದಾರೆ ಎಂಬ ಮಾಹಿತಿಯಿದೆ.

ಪಹಲ್ಗಾಮ್ ದಾಳಿಯ ನಂತರದ ಭಾರತ-ಪಾಕಿಸ್ತಾನದ ಗಡಿ ಉದ್ವಿಗ್ನತೆಯಿಂದಾಗಿ ಕಾಶ್ಮೀರ ಪ್ರವಾಸೋದ್ಯಮದಲ್ಲಿ ಏರುಪೇರುಗಳಾಗಿದ್ದವು. ಇದೀಗ ಜಮ್ಮುವಿನಲ್ಲಿರುವ ಪಟ್ನಿಟಾಪ್ ಮತ್ತು ಬಟೋಟ್‌ನ ಕೆಲವು ಪ್ರೇಕ್ಷಣೀಯ ತಾಣಗಳಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಆರ್ಥಿಕತೆಯಲ್ಲಿ ಚೇತರಿಕೆ ಕಂಡಿದೆ. ಕಾಶ್ಮೀರದಿಂದ ಸ್ಥಳಾಂತರಗೊಂಡ ಜನರು ಭದ್ರತೆ ಮತ್ತು ಸುರಕ್ಷತೆಯ ಸಲುವಾಗಿ ಇಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಅವರ ಆಗಮನದಿಂದಾಗಿ ಹೊಟೇಲ್‌ಗಳು ಲಾಭಗಳಿಸಿವೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಅಲ್ಲಿನ ಸ್ಥಳೀಯ ಹೋಟೆಲ್ ಉದ್ಯಮಿ ರಾಜೇಶ್ ಕುಮಾರ್ ಮಾತನಾಡಿದ್ದು, ಪಹಲ್ಗಾಮ್ ಘಟನೆಯಿಂದಾಗಿ ಜಮ್ಮುವಿನಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ಇದರಿಂದಾಗಿ ಪ್ರವಾಸೋದ್ಯಮ ವ್ಯವಹಾರದಲ್ಲೂ ಇಳಿಕೆಯಾಗಿತ್ತು. ಈ ಮಧ್ಯೆ ಅನೇಕ ಜನರು ಜಮ್ಮುವನ್ನು ತೊರೆದು ಉಧಂಪುರ ಜಿಲ್ಲೆಯ ಗಿರಿಧಾಮವಾದ ಪಟ್ನಿಟಾಪ್‌ಗೆ ಬಂದರು. ಈ ಜಾಗವು ಎಲ್ಲರಿಗೂ ಸುರಕ್ಷತೆಯನ್ನು ಒದಗಿಸಿದೆ. ಈಗ ನಮ್ಮ ಹೊಟೇಲ್‌ ಉದ್ಯಮದಲ್ಲೂ ಲಾಭವಿದೆ ಎಂದರು.

ಪಟ್ನಿಟಾಪ್‌ಗೆ ಬಂದಿರುವ ಪ್ರವಾಸಿಗೊಬ್ಬರು ಕೂಡ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು,ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಗುಜರಾತ್‌ನಿಂದ ಬಂದಿದ್ದೇವೆ. ನಾವು ಹೊರಟಾಗ ಇಲ್ಲಿನ ಪರಿಸ್ಥಿತಿ ಗಂಭೀರವಾಗಿತ್ತು. ನಾವು ಶ್ರೀನಗರಕ್ಕೆ ಹೋದೆವು. ಅಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿತ್ತು. ನಾವು ಸೋನಾಮಾರ್ಗ್‌ ಮೂಲಕ ಮಾತ್ರ ತಲುಪಲು ಅವಕಾಶವಿತ್ತು. ನಾವು ಪಟ್ನಿಟಾಪ್‌ಗೆ ಬಂದು ಎರಡು ರಾತ್ರಿ ಇಲ್ಲಿನ ಹೋಟೆಲ್‌ನಲ್ಲಿ ತಂಗಿದ್ದೇವೆ. ನಾವು ಇಲ್ಲಿನ ಎಲ್ಲಾ ಸ್ಥಳಗಳನ್ನು ನೋಡಿದ್ದೇವೆ. ನಮಗೆ ಇಲ್ಲಿ ತುಂಬಾ ಸುರಕ್ಷಿತ ಭಾವನೆ ಇದೆ ಎಂದು ಹೇಳಿದರು.

ಪಟ್ನಿಟಾಪ್‌ ಎಂಬ ಸ್ವರ್ಗಸೀಮೆ
ಪಟ್ನಿಟಾಪ್‌ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಸುಪ್ರಸಿದ್ಧವಾದ ಗಿರಿಧಾಮ. ಚಳಿಗಾಲದಲ್ಲಿ ಹಿಮದಿಂದ ಆವೃತವಾಗುವ ಈ ಜಾಗವನ್ನು ನೋಡುವುದೇ ಚಂದ. ಇಲ್ಲಿಗೆ ಬರುವ ಪ್ರವಾಸಿಗರು ಹುಚ್ಚೆದ್ದು ಕುಣಿಯುತ್ತಾರೆ. ಅಲ್ಲಿನ ಹಚ್ಚ ಹಸುರಿನ ವಾತಾವರಣವು ಮನಸ್ಸಿಗೆ ಮುದ ನೀಡುತ್ತದೆ. ಚಾರಣ ಪ್ರಿಯರಿಗೂ ಪಟ್ನಿಟಾಪ್‌ ಹೇಳಿ ಮಾಡಿಸಿದ ತಾಣ. ಇದು ಸರಿ ಸುಮಾರು ಇದು 2,024 ಮೀಟರ್ (6,640 ಅಡಿ) ಎತ್ತರದಲ್ಲಿದೆ. ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ, ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿಯೇ ಪಟ್ನಿಟಾಪ್‌ ಇದೆ. ಈ ಪ್ರದೇಶದಲ್ಲಿ ಹುಲ್ಲುಗಾವಲು, ದಟ್ಟವಾದ ಕಾಡುಗಳು ಮತ್ತು ಚೆನಾಬ್ ನದಿ ಇದೆ. ಹಿಮದಿಂದ ಆವೃತವಾದ ಪರ್ವತಗಳು ಕಣ್ಮನ ಸೆಳೆಯುತ್ತವೆ.

ಇನ್ನು ಪಟ್ನಿಟಾಪ್‌ ಎಂಬ ಹೆಸರಿನ ಹಿಂದೆ ಒಂದು ದಂತಕತೆಯೇ ಇದೆ. ಪಟ್ನಿಟಾಪ್ ಎಂಬ ಹೆಸರು ʼರಾಜಕುಮಾರಿಯ ಕೊಳʼ ಎಂಬ ಅರ್ಥವನ್ನು ಕೊಡುತ್ತದೆ. ಇದರ ಮೂಲ ಹೆಸರು ʼಪತನ್ ದಾ ತಲಾಬ್ʼ ನಿಂದ ಬಂದಿದೆ. ಸ್ಥಳೀಯ ಆಡಳಿತ ಕುಟುಂಬದ ರಾಜಕುಮಾರಿ ಹುಲ್ಲುಗಾವಲಿನಲ್ಲಿ ಇರುವ ಕೊಳದಲ್ಲಿ ಸ್ನಾನ ಮಾಡುತ್ತಿದ್ದರು ಎಂಬ ದಂತಕಥೆ ಇದೆ. ಈ ಕೊಳವೇ ಈ ಪ್ರದೇಶದ ಹೆಸರಿನ ಮೂಲ ಎಂದು ನಂಬಲಾಗಿದೆ. ಕಾಲಾನಂತರದಲ್ಲಿ ಪಟ್ನಿಟಾಪ್‌ ಎಂದು ಬದಲಾಗಿದೆ ಎನ್ನುತ್ತಾರೆ ಸ್ಥಳೀಯರು.