ಟೂರಿಸ್ಟ್ ಪೊಲೀಸ್ ಅಂದ್ರೇನು ಗೊತ್ತಾ?
ಟ್ರಾಫಿಕ್ ಪೊಲೀಸರ ಕೆಲಸ ಏನು ಎಂದು ಪ್ರಶ್ನೆ ಮಾಡಿದರೆ ಉತ್ತರಿಸೋದು ಸುಲಭ. ನಗರ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳೋದು ಇವರ ಕೆಲಸ. ಅದೇ ರೀತಿ ಟೂರಿಸ್ಟ್ ಪೊಲೀಸರು ಪ್ರವಾಸಿಗರಿಗೆ ಸುರಕ್ಷತೆ ಒದಗಿಸುವ ಧ್ಯೇಯ ಹೊಂದಿರಲಿದ್ದಾರೆ. ಹೊಸ ಟೂರಿಸ್ಟ್ ಪೊಲೀಸ್ ಸ್ಟೇಷನ್‌ಗಳ ನಿರ್ಮಾಣ ಕೂಡ ಆಗಲಿದೆ.
ಟೂರಿಸಂ ನಂಬಿಕೊಂಡು ಅದೆಷ್ಟೋ ದೇಶಗಳು ಹಾಗೂ ರಾಜ್ಯಗಳು ಇವೆ. ಅಲ್ಲಿ ಪ್ರವಾಸಿಗರು ಬಂದಿಲ್ಲ ಎಂದರೆ ಅದನ್ನೇ ನಂಬಿಕೊಂಡಿರೋ ಜನರು ಬೀದಿಗೆ ಬರುತ್ತಾರೆ. ಇದರಿಂದ ಸರ್ಕಾರದ ಆದಾಯಕ್ಕೂ ಹೊಡೆತ. ಪ್ರವಾಸಿಗರು ಹೆಚ್ಚೆಚ್ಚು ಬರಬೇಕು ಎಂದರೆ ಆ ಭಾಗದಲ್ಲಿ ಸುರಕ್ಷೆ ಅನ್ನೋದು ತುಂಬಾ ಮುಖ್ಯ. ಇದನ್ನೇ ಗಮನದಲ್ಲಿ ಇಟ್ಟುಕೊಂಡು ಅಸ್ಸಾಂ ರಾಜ್ಯದ ಪ್ರವಾಸೋದ್ಯಮ ಸಚಿವಾಲಯ ‘ಟೂರಿಸ್ಟ್ ಪೊಲೀಸ್ʼ ಉಪಕ್ರಮ ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ಅಸ್ಸಾಂಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಅಸ್ಸಾಂನಲ್ಲಿದೆ ಹಲವು ಟೂರಿಸ್ಟ್ ಪ್ಲೇಸಸ್
ದೇಶದ ಈಶಾನ್ಯ ಭಾಗದಲ್ಲಿರುವ ಅಸ್ಸಾಂನಲ್ಲಿ ನೋಡಲು ಸಾಕಷ್ಟು ಪ್ರವಾಸಿ ತಾಣಗಳು ಇವೆ. ಈ ಭಾಗದಲ್ಲಿ ವಿವಿಧ ನ್ಯಾಷನಲ್ ಪಾರ್ಕ್, ಕಾಮಾಕ್ಯ ದೇವಾಲಯ, ಮುಜಲಿ ಐಲ್ಯಾಂಡ್, ಟೀ ಪ್ಲಾಂಟೇಷನ್ ಇಲ್ಲಿನ ಪ್ರಮುಖ ಸ್ಥಳಗಳು. ಕೋವಿಡ್ ಸಂದರ್ಭದಲ್ಲಿ ಈ ಭಾಗದ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚಿತ್ತು. ಆದರೆ, ಕೋವಿಡ್ ಕಳೆದು ಕೆಲವು ವರ್ಷಗಳು ಉರುಳಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಪ್ರವಾಸೋದ್ಯಮ ಇಲಾಖೆ ‘ನ್ಯೂ ಅಸ್ಸಾಂ ಟೂರಿಸಂ ವಿಧೇಯಕ 2024ʼ ಎಂಬ ವಿಧೇಯಕವನ್ನು ಪಾಸ್ ಮಾಡಿದೆ. ಇದರಲ್ಲಿ ‘ಟೂರಿಸ್ಟ್ ಪೊಲೀಸ್ʼ ಕೂಡ ಸೇರ್ಪಡೆ ಆಗಿದೆ. ಈ ಮೂಲಕ ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಸುರಕ್ಷತೆ ಸಿಗಲಿದೆ.
ಸದ್ಯ ಈ ಯೋಜನೆ ಬಾಲ್ಯಾವಸ್ಥೆಯಲ್ಲಿದ್ದು, ಇದರ ರೂಪುರೇಷೆಗಳು ಸಿದ್ಧವಾಗುತ್ತಿವೆ. ಈ ಉಪಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ‘ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ. ಸುರಕ್ಷಿತ ಮತ್ತು ಸುಭದ್ರ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಸ್ಸಾಂಗೆ ಪ್ರತಿ ವರ್ಷ ಕೋಟ್ಯಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಸುರಕ್ಷತಾ ದೃಷ್ಟಿಯಿಂದ ಈ ರೀತಿಯ ಕ್ರಮ ಅತ್ಯಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಟ್ರಾಫಿಕ್ ಪೊಲೀಸ್ ಮಾದರಿ
ಟ್ರಾಫಿಕ್ ಪೊಲೀಸರ ಕೆಲಸ ಏನು ಎಂದು ಪ್ರಶ್ನೆ ಮಾಡಿದರೆ ಉತ್ತರಿಸೋದು ಸುಲಭ. ನಗರ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳೋದು ಇವರ ಕೆಲಸ. ಅದೇ ರೀತಿ ಟೂರಿಸ್ಟ್ ಪೊಲೀಸರು ಪ್ರವಾಸಿಗರಿಗೆ ಸುರಕ್ಷತೆ ಒದಗಿಸುವ ಧ್ಯೇಯ ಹೊಂದಿರಲಿದ್ದಾರೆ. ಹೊಸ ಟೂರಿಸ್ಟ್ ಪೊಲೀಸ್ ಸ್ಟೇಷನ್‌ಗಳ ನಿರ್ಮಾಣ ಕೂಡ ಆಗಲಿದೆ.
ಕೇಂದ್ರ ಸರ್ಕಾರದ ಯೋಜನೆ
ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ‘ಪ್ರವಾಸಿ ಪೊಲೀಸ್ ಘಟಕಗಳನ್ನು ಸ್ಥಾಪಿಸಲು ನಿರ್ದೇಶಿಸಿತು. ಹೀಗಾಗಿ, 2022ರಲ್ಲಿ ‘ಪ್ರವಾಸಿ ಪೊಲೀಸ್' ಯೋಜನೆ ರಾಷ್ಟ್ರವ್ಯಾಪಿ ಪರಿಚಯಿಸಲಾಯಿತು. ಕರ್ನಾಟಕ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಯೋಜನೆ ಜಾರಿ ಆಗಿದೆ.

ಕರ್ನಾಟಕದಲ್ಲೂ ಇದೆ...
ಕರ್ನಾಟಕ ಕೂಡ ಪ್ರವಾಸಿ ಪೊಲೀಸ್ ಪಡೆ ಹೊಂದಿದೆ. ಈ ಘಟಕಕ್ಕೆ ‘ಟೂರಿಸ್ಟ್ ಮಿತ್ರʼ ಎಂದು ಹೆಸರು ಇಡಲಾಗಿದೆ. ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗೆ ಇದನ್ನು ಸ್ಥಾಪಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮತ್ತು ಗೃಹ ಇಲಾಖೆಯ ನಡುವಿನ ಸಹಯೋಗದೊಂದಿಗೆ ಈ ಘಟಕವನ್ನು ಸ್ಥಾಪಿಸಲಾಗಿದೆ. ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ನೆರವು ಮತ್ತು ರಕ್ಷಣೆ ಒದಗಿಸಲು ಪ್ರವಾಸಿ ಮಿತ್ರರನ್ನು ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿಯೋಜಿಸಲಾಗಿದೆ.
ಆರಂಭಿಕ ಹಂತದಲ್ಲಿ, ಪ್ರವಾಸಿ ಮಿತ್ರರನ್ನು ಮೈಸೂರು, ಕೊಡಗು, ಮಂಡ್ಯ, ಬಳ್ಳಾರಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಹಂಪಿ ಮತ್ತು ಇತರ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ.