ಇಂದು ವಿಶ್ವ ಕತ್ತೆ ದಿನ: ಕತ್ತೆಗೂ ಪ್ರವಾಸಕ್ಕೂ ಇದೆ ನಂಟು!
ಇಂದು ವಿಶ್ವ ಕತ್ತೆ ದಿನ. ಶತಮಾನಗಳಿಂದಲೂ ಕತ್ತೆಗೆ ಅದರದ್ದೇ ಆದ ಮಹತ್ವವಿದೆ. ಕತ್ತೆ ಮೇಲೆಯೇ ಕೂತು ಊರೂರು ತಿರುಗಿದವರಿದ್ದಾರೆ. ಪ್ರವಾಸ ಮಾಡಿದವರಿದ್ದಾರೆ.
ಇಂದು(ಮೇ 8) ವಿಶ್ವ ಕತ್ತೆ ದಿನ. ಕತ್ತೆಗಳ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಶತಮಾನಗಳಿಂದಲೂ ಕತ್ತೆಗೆ ಅದರದ್ದೇ ಆದ ಮಹತ್ವವಿದೆ. ಈ ಹಿಂದೆಯೆಲ್ಲ ಕತ್ತೆಯನ್ನು ಸರಕುಗಳನ್ನು ಸಾಗಿಸಲು ಬಳಸುತ್ತಿದ್ದರು. ಈಗಲೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕತ್ತೆಗಳನ್ನು ವಸ್ತುಗಳನ್ನು ಸಾಗಿಸಲು ಬಳಸುತ್ತಿದ್ದಾರೆ. ಹಾಗೆ ಕತ್ತೆಯನ್ನು ಪೂಜಿಸುವ ಜನರಿದ್ದಾರೆ. ಬಹುಮುಖ್ಯವಾಗಿ ಕತ್ತೆಗೂ ಪ್ರವಾಸಕ್ಕೂ ಅವಿನಾಭಾವ ನಂಟಿದೆ. ಕತ್ತೆ ಮೇಲೆಯೇ ಕೂತು ಊರೂರು ತಿರುಗಿದವರಿದ್ದಾರೆ. ಪ್ರವಾಸ ಮಾಡಿದವರಿದ್ದಾರೆ. ʼಕತ್ತೆಗೇನು ಗೊತ್ತು ಕಸ್ತೂರಿ ಪರಿಮಳʼ ಎಂಬ ಮಾತಿದೆ. ಆದರೆ ಕತ್ತೆಗೆ ಎಲ್ಲವೂ ಗೊತ್ತು. ಅದು ಚುರುಕಿನ ಪ್ರಾಣಿ. ಕತ್ತೆ ಮತ್ತು ಮಾನವನ ನಡುವೆ ಬೆಚ್ಚಗಿನ ಸಂಬಂಧವಿದೆ.
18ನೇ ಶತಮಾನಗಳಿಂದಲೂ ಕತ್ತೆಗಳನ್ನು ಮಾನವರು ಅವಲಂಬಿಸಿದ್ದಾರೆ. ಕತ್ತೆಗೆ ಪ್ರಾಚೀನ ಇತಿಹಾಸವಿದೆ. ಸದ್ಯ ಜಗತ್ತಿನಲ್ಲಿ 40 ಮಿಲಿಯನ್‌ಗಿಂತಲೂ ಹೆಚ್ಚು ಕತ್ತೆಗಳಿವೆ ಎಂಬ ಮಾಹಿತಿಯಿದೆ., ಹೆಚ್ಚಾಗಿ ಅಭಿವೃದ್ಧಿ ಹೊಂದದ ದೇಶಗಳಲ್ಲಿ ಅವುಗಳನ್ನು ಡ್ರಾಫ್ಟ್ ಅಥವಾ ಪ್ಯಾಕ್ ಪ್ರಾಣಿಗಳಾಗಿ ಬಳಸಲಾಗುತ್ತದೆ . ಎಷ್ಟೋ ಜನರ ಪಾಲಿಗೆ ಕತ್ತೆಗಳು ಜೀವಾನಾಧಾರವಾಗಿದೆ. ಅವುಗಳನ್ನು ನಂಬಿಕೊಂಡೇ ಜೀವನ ನಡೆಸುವವರಿದ್ದಾರೆ. ಇನ್ನು ಕತ್ತೆಗಳನ್ನು ಸಂತಾನೋತ್ಪತ್ತಿಗಾಗಿ, ಸಾಕುಪ್ರಾಣಿಯಾಗಿ ಮತ್ತು ಜಾನುವಾರು ರಕ್ಷಣೆಗಾಗಿ ಸಾಕಲಾಗುತ್ತದೆ. ಕತ್ತೆ ಹಾಲಿಗೂ ಭಾರೀ ಬೇಡಿಕೆಯಿದೆ.
ಕತ್ತೆ-ಪ್ರವಾಸಕ್ಕೂ ನಂಟು!
ಈ ಹಿಂದೆಯೆಲ್ಲ ಹಲವರು ಕತ್ತೆ ಮೇಲೆ ಕೂತು ಊರೂರು ತಿರುಗುತ್ತಿದ್ದರು. ಟ್ರಾನ್‌ಸ್ಪೋರ್ಟ್ ಸೇವೆಗಾಗಿಯೂ ಕತ್ತೆಗಳನ್ನು ಬಳಸಲಾಗುತ್ತಿತ್ತು. ಗ್ರೀಕ್ ಮತ್ತು ರೋಮ್ ದೇಶಗಳಲ್ಲಿ ಕತ್ತೆಗಳನ್ನು ಹೆಚ್ಚಾಗಿ ಅವಲಂಬಿಸಲಾಗಿತ್ತು. ಒಂದು ಊರಿನಿಂದ ಮತ್ತೊಂದು ಊರಿಗೆ ಸರಕುಗಳನ್ನು ಸಾಗಿಸಲು ಕತ್ತೆ ಬಳಕೆಯಾಗುತ್ತಿತ್ತು. ಅದರಲ್ಲೂ ಬಟ್ಟೆ, ದವಸ-ಧಾನ್ಯಗಳ ಮೂಟೆಗಳನ್ನು ಕತ್ತೆಯ ಮೇಲೆ ಹೊರಿಸಿ ಕಳುಹಿಸಲಾಗುತ್ತಿತ್ತು. ಅದೆಲ್ಲದರ ಹೊರತಾಗಿ ಕತ್ತೆ ಈ ಹಿಂದೆ ಹಲವರ ಟ್ರಾವೆಲ್ ಫ್ರೆಂಡ್ ಆಗಿತ್ತು. ಕಾರು,ಬಸ್ಸು,ರೈಲು ಮತ್ತು ಇನ್ನಿತರ ವಾಹನಗಳಿಲ್ಲದ ಸಮಯದಲ್ಲಿ ಜನರು ಕತ್ತೆಯ ಮೇಲೆ ಕುಳಿತುಕೊಂಡೇ ಕಿಲೋಮೀಟರ್‌ಗಟ್ಟಲೆ ಪ್ರವಾಸಕ್ಕೆ ಹೋಗುತ್ತಿದ್ದರು. ಕತ್ತೆ ಮತ್ತು ಪ್ರವಾಸಕ್ಕೆ ಸಂಬಂಧಿಸಿದಂತೆಯೇ ನೂರಾರು ಕತೆಗಳಿವೆ. ʼTravels with a Donkey in the Cévennesʼ ಈ ಪ್ರಾಚೀನ ಪುಸ್ತಕವು ಕತ್ತೆ ಮತ್ತು ಪ್ರವಾಸದ ಸುತ್ತಲಿನ ಕತೆಗಳನ್ನು ತೆರೆದಿಟ್ಟಿದೆ.
ಕತ್ತೆಯೊಂದಿಗಿನ ಬಾಂಧವ್ಯ
ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾಗಳಲ್ಲಿ ಕತ್ತೆಯ ವಿಡಿಯೊವೊಂದು ಸಾಕಷ್ಟು ವೈರಲ್ ಆಗಿದೆ. ಹಲವು ವರ್ಷಗಳ ನಂತರ ಕತ್ತೆಯು ತನ್ನನ್ನು ಸಾಕಿದ ಹುಡುಗಿಯನ್ನು ನೋಡುತ್ತದೆ. ದೂರದಿಂದಲೇ ಹುಡುಗಿಯನ್ನು ನೋಡುತ್ತಾ ಕತ್ತೆ ಜೋರಾಗಿ ಕೂಗುತ್ತಾ ಅವಳಿದ್ದ ಕಡೆಗೆ ಓಡುತ್ತದೆ. ಪ್ರೀತಿಯಿಂದ ಹುಡುಗಿಯನ್ನು ಅಪ್ಪಿಕೊಳ್ಳುತ್ತದೆ. ಕತ್ತೆ ತನ್ನ ಪ್ರೀತಿ ಮತ್ತು ಹಂಬಲವನ್ನು ವ್ಯಕ್ತಪಡಿಸಲು ತನ್ನ ಮೂತಿಯನ್ನು ಹುಡುಗಿಯ ಭುಜದ ಮೇಲೆ ಇಡುತ್ತದೆ. ಕತ್ತೆ ಮತ್ತು ಹುಡುಗಿಯ ನಡುವಿನ ಭಾವುಕ ಕ್ಷಣಗಳನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಆ ವಿಡಿಯೊವನ್ನು ನೋಡಿದರೆ ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಬಂಧದ ಗಟ್ಟಿತನ ತಿಳಿಯುತ್ತದೆ.