ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಹೊಂದಿರುವ ಈ ದೇಶಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಎಲ್ಲರ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಬಸ್, ರೈಲು ಹೀಗೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದರೂ ಸುಗಮ, ಸುಖಕರ ಪ್ರಯಾಣಕ್ಕೆ ದಾರಿ ಮಾಡಿ ಕೊಟ್ಟರೆ ಪ್ರಯಾಣಿಕರೂ ಖುಷಿ ಪಡುತ್ತಾರೆ.
ದೇಶದ ಅಭಿವೃದ್ಧಿಯ ಮೂಲವೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಜನರ ದೈನಂದಿನ ಜೀವನದೊಂದಿಗೆ ಬೆಸದುಕೊಂಡಿರುವ ಈ ಸಾರಿಗೆ ವ್ಯವಸ್ಥೆಯು, ಕಡಿಮೆ ವೆಚ್ಚದಲ್ಲಿ ಎಲ್ಲ ಸೌಕರ್ಯಗಳನ್ನೂ ನೀಡುವ ಮೂಲಕ ಜನಸ್ನೇಹಿಯಾಗಿದ್ದರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿಬಿಡುತ್ತದೆ. ಆದರೆ ನಮ್ಮ ದೇಶವನ್ನು ಹೊರತುಪಡಿಸಿ, ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳ ಬಗ್ಗೆ ನಿಮಗೆ ಗೊತ್ತಾ ? ಇಲ್ಲಿ ಮಾಹಿತಿ.
ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಹೊಂದಿರುವ ಈ 6 ದೇಶಗಳ ಮಾಹಿತಿ ಇಲ್ಲಿವೆ:
ಜಪಾನ್
ಜಪಾನ್‌ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮೆಚ್ಚಿಕೊಳ್ಳದವರಿಲ್ಲ. ಬುಲೆಟ್ ರೈಲು ಎಂದೂ ಕರೆಯಲ್ಪಡುವ ಶಿಂಕಾನ್ಸೆನ್, ಗಂಟೆಗೆ 320 ಕಿ.ಮೀ ವೇಗವನ್ನು ತಲುಪಬಹುದು. ಈ ರೈಲುಗಳು ಸ್ವಚ್ಛವಾಗಿದ್ದು, ಸಮಯಪಾಲನೆಯಲ್ಲೂ ಬುಲೆಟ್ ರೈಲುಗಳೇ ಮೇಲು. ನಂಬಲೇ ಬೇಕಿರುವ ವಿಷಯವೆಂದರೆ, ಈ ರೈಲು ವರ್ಷಕ್ಕೆ ಸರಾಸರಿ ಸೆಕೆಂಡುಗಳಷ್ಟೇ ವಿಳಂಬವಾಗಿದೆಯಂತೆ. ಜಪಾನ್ ನ ರಾಜಧಾನಿ ಟೋಕಿಯೋದಲ್ಲೂ ಸಹ ಮೆಟ್ರೋ ಸಾರಿಗೆ ವ್ಯವಸ್ಥೆ ಹೆಚ್ಚಿಗೆ ಬೇಡಿಕೆಯನ್ನು ಹೊಂದಿದ್ದು, ಟೋಕಿಯೋ ಮೆಟ್ರೋ ಕಂಪನಿಯಿಂದ ನಿರ್ವಹಿಸಲ್ಪಡುತ್ತದೆ. ಇದು ವಿಶ್ವದ ಅತಿದೊಡ್ಡ ಸುರಂಗಮಾರ್ಗ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಸರಾಸರಿಯೆಂದರೂ ದಿನಕ್ಕೆ 6.52 ಮಿಲಿಯನ್ ಪ್ರಯಾಣಿಕರು ಈ ಸಾರಿಗೆ ವ್ಯವಸ್ಥೆಯನ್ನು ಅವಲಂಭಿತರಾಗಿದ್ದಾರೆ.

ಜರ್ಮನ್
ಜರ್ಮನ್ ರೈಲುಗಳನ್ನು ನೋಡಿಕೊಂಡೇ ನೀವು ನಿಮ್ಮ ವಾಚ್ ನ ಸಮಯವನ್ನು ಸೆಟ್ ಮಾಡಿಕೊಳ್ಳಬಹುದು. ಸಮಯಪಾಲನೆಯಲ್ಲಿ ಅಷ್ಟೊಂದು ನಿಷ್ಟೆ ಇಲ್ಲಿನ ರೈಲುಗಳಿಗೆ. ಇಲ್ಲಿನ ಡಾಯ್ಚ ಬಾನ್ ನೆಟ್‌ವರ್ಕ್ ಟ್ರೈನ್ ಗಳು ದೇಶಾದ್ಯಂತ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಅಲ್ಲದೆ ಇದು ಬರ್ಲಿನ್, ಮ್ಯೂನಿಚ್ ಮತ್ತು ಹ್ಯಾಂಬರ್ಗ್‌ನಂತಹ ಪ್ರಮುಖ ನಗರಗಳಲ್ಲಿ ಎಸ್-ಬಾನ್ (ಉಪನಗರ ರೈಲುಗಳು), ಯು-ಬಾನ್ (ಅಂಡರ್ ಗ್ರೌಂಡ್), ಟ್ರಾಮ್‌ಗಳು ಮತ್ತು ಬಸ್‌ಗಳನ್ನು ಸಂಪರ್ಕಿಸಲು ನೆರವಾಗುತ್ತದೆ. ಹೆಚ್ಚುವರಿಯಾಗಿ ಪ್ರಯಾಣಿಕರಿಗಾಗಿ ವೈ-ಫೈ ವ್ಯವಸ್ಥೆಯನ್ನೂ ಇಲ್ಲಿ ಕಲ್ಪಿಸಲಾಗಿದೆ.

ಸಿಂಗಾಪುರ
ಸಿಂಗಾಪುರದ MRT (Mass Rapid Transit) ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೇ ಒಂದು ಮಾಸ್ಟರ್‌ಕ್ಲಾಸ್ ಎಂದರು ತಪ್ಪಾಗಲಾರದು. ಈ ರೈಲುಗಳು ಹವಾನಿಯಂತ್ರಿತವಾಗಿದ್ದು, ಇಲ್ಲಿನ ನಿಲ್ದಾಣಗಳಂತೂ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆವಿಶೇಷವೆಂದರೆ ಇಲ್ಲಿನ ಇಡೀ ವ್ಯವಸ್ಥೆಯು ನಗದುರಹಿತವಾಗಿದ್ದು, ನಿಮ್ಮ ಕಾರ್ಡ್ ಅನ್ನು ಟ್ಯಾಪ್ ಮಾಡುವ ಮೂಲಕವಷ್ಟೇ ಪ್ರಯಾಣಕ್ಕೆ ಅವಕಾಶವಿರುತ್ತದೆ. ಸ್ವಚ್ಛತೆಗೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ರಯವಿರುವುದರಿಂದ ರೈಲಿನ ಒಳಗೆ ಆಹಾರ ಸೇವನೆಯ ಅವಕಾಶವೇ ಇಲ್ಲ. ಇನ್ನು ಸಿಂಗಾಪುರದ ನಗರದ ಉಳಿದ ಭಾಗಗಳೊಂದಿಗೆ ಸಂಪರ್ಕವನ್ನು ಕಲ್ಪಿಸುವ MRT, ಬಸ್ ನಿಲ್ದಾಣಗಳ ಜೊತೆಗೂ ಸೂಕ್ತ ಸಂಪರ್ಕವನ್ನು ಹೊಂದಿದೆ.

ಸ್ವಿಟ್ಜರ್ಲೆಂಡ್
ಸ್ವಿಟ್ಜರ್ಲೆಂಡ್ ಚಾಕೊಲೇಟ್ ಗಳಿಗಷ್ಟೇ ಹೆಸರು ಮಾಡಿರುವುದರಲ್ಲ, ಕಣ್ಮನಸೆಳೆಯುವ ಪರ್ವತಗಳಿಂದಷ್ಟೇ ಗುರುತಿಸಿಕೊಂಡಿರುವುದಲ್ಲ. ಬದಲಾಗಿ ವಿಶ್ವದ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಂದಾಗಿಯೂ ಸ್ವಿಟ್ಜರ್ಲೆಂಡ್ ಎಲ್ಲರ ಗಮನಸೆಳೆದಿದೆ. ಸಮಯಪ್ರಜ್ಞೆಯ ಜೊತೆಗೆ ಸ್ವಚ್ಛ ಮತ್ತು ಸುಂದರವಾದ ವಾತಾವರಣವನ್ನು ಪ್ರಯಾಣಿಕರಿಗೆ ಕಲ್ಪಿಸುವ ಮೂಲಕವೂ ಇಲ್ಲಿನ ರೈಲುಗಳು ಎಲ್ಲರನ್ನು ಬೆರಗುಗೊಳಿಸಿದೆ. ಸ್ವಿಸ್ ನ ಸಾರ್ವಜನಿಕ ಸಾರಿಗೆ ಸಾಕಷ್ಟು ಪ್ರಭಾವಶಾಲಿಯಾಗಿದ್ದು, ರೈಲುಗಳಷ್ಟೇ ಅಲ್ಲದೆ ಬಸ್‌ಗಳು, ದೋಣಿಗಳೂ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನೇ ಕಲ್ಪಿಸಿದೆ. ವಿಶೇಷವೆಂದರೆ ನೀವು ಕೊಂಡುಕೊಳ್ಳುವ ಒಂದು ಟಿಕೆಟ್ ನಲ್ಲಿ ಯಾವುದೇ ಸಾರ್ವಜನಿಕ ಸಾರಿಗೆಯಲ್ಲೂ ಪ್ರಯಾಣ ಮಾಡುವ ಅವಕಾಶ ಇಲ್ಲಿದೆ.

ನೆದರ್ಲ್ಯಾಂಡ್ಸ್
ಡಚ್ಚರು ಸೈಕ್ಲಿಂಗ್‌ಗೆ ಹೆಸರುವಾಸಿಯಾಗಿರಬಹುದು, ಆದರೆ ಅವರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅಷ್ಟೇ ಅದ್ಭುತವಾಗಿದೆ. ನೆದರ್ಲ್ಯಾಂಡ್ಸ್ ಸ್ಪೂರ್ವೆಗೆನ್ (Nederlandse Spoorwegen) ರೈಲು ಜಾಲವು ದೇಶದ ಪ್ರತಿಯೊಂದು ಮೂಲೆಯನ್ನು ಸಂಪರ್ಕಿಸುತ್ತದೆ. ಆಮ್ಸ್ಟರ್‌ಡ್ಯಾಮ್, ರೋಟರ್‌ಡ್ಯಾಮ್ ಮತ್ತು ಇತರ ನಗರಗಳಲ್ಲೂ ಸಹ ಮೆಟ್ರೋ, ಟ್ರಾಮ್ ಮತ್ತು ಬಸ್ ವ್ಯವಸ್ಥೆಗಳು ಹೊಂದಿವೆ. ಇವೆಲ್ಲವೂ OV-ಚಿಪ್‌ಕಾರ್ಟ್ ಎಂಬ ಒಂದೇ ಪ್ರಯಾಣ ಕಾರ್ಡ್‌ನಲ್ಲಿ ಸಾಧ್ಯವೆಂದರೆ ನಂಬಲೇಬೇಕು. ತಡರಾತ್ರಿಯಲ್ಲಿಯೂ ಇಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದ್ದು, ಪ್ರಯಾಣಿಕರು ನೆರವಾಗುತ್ತಿದೆ.

ಹಾಂಗ್ ಕಾಂಗ್ (ಚೀನಾ)
ಹಾಂಗ್ ಕಾಂಗ್‌ನ MTR (ಮಾಸ್ ಟ್ರಾನ್ಸಿಟ್ ರೈಲ್ವೆ) ಅನ್ನು ವಿಶ್ವದ ಅತ್ಯುತ್ತಮ ಮೆಟ್ರೋ ವ್ಯವಸ್ಥೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನಿಗದಿತ ಸಮಯದಲ್ಲಿ ಇಲ್ಲಿ ರೈಲುಗಳ ಸಂಚಾರವಿದ್ದು, ಸ್ವಚ್ಛತೆಗೂ ಇಲ್ಲಿ ಆದ್ಯತೆ ನೀಡಲಾಗಿದೆ. ಕೌಲೂನ್‌ನಿಂದ ಪ್ರಾರಂಭಿಸಿ, ಇಡೀ ನಗರವನ್ನು ಆವರಿಸುವ ಈ ಸಾರ್ವಜನಿಕ ಸಾರಿಗೆಯು ಬಸ್‌ಗಳು, ಮಿನಿಬಸ್‌ಗಳು ಮತ್ತು ದೋಣಿಗಳೊಂದಿಗೂ ಸಂಪರ್ಕ ಕಲ್ಪಿಸುತ್ತದೆ. ವಿಶೇಷವೆಂದರೆ ಆಕ್ಟೋಪಸ್ ಕಾರ್ಡ್ ನಿಮ್ಮ ಬಳಿಯಿದ್ದರೆ ಸಾಕು ಕೈಗೆಟುಕುವ ದರದಲ್ಲಿ ಪ್ರಯಾಣವನ್ನು ಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.