ಬೆಣ್ಣೆನಗರಿಯ ಆನೆಕೊಂಡ ಬಸವೇಶ್ವರ ದೇವಾಲಯದ ಜಾತ್ರೆ ಗೊತ್ತು. ಇತಿಹಾಸ ಗೊತ್ತಾ?
ನವರಂಗದ ಮಧ್ಯದ ಛಾವಣಿಯಲ್ಲಿ ಗಜಾಸುರ ಸಂಹಾರದ ದೃಶ್ಯವೊಂದನ್ನು ಹೊಂದಿದ್ದು, ಅದರ ಪಕ್ಕದಲ್ಲಿ ವಿಷ್ಣು ಮತ್ತು ಬ್ರಹ್ಮ ದೇವರನ್ನು ಅದ್ಭುತವಾಗಿ ಕೆತ್ತಲಾಗಿದೆ. ಕೆಳಗಿನ ಫಲಕದಲ್ಲಿ ಏಳು ಗಣರು ಭಗವಂತನ ನೃತ್ಯಕ್ಕೆ ಸಂಗೀತ ನುಡಿಸುತ್ತಿರುವ ದೃಶ್ಯವಿದೆ. ಮೇಲಿನ ಫಲಕದಲ್ಲಿ ಆದಿತಿ ದೇವಿಯ 12 ಪುತ್ರರಾದ ಆದಿತ್ಯರ ಶಿಲ್ಪವಿದೆ.
- ಜಯರಾಮ.ಎನ್
ಬೆಣ್ಣೆದೋಸೆ ಅಂದ್ರೆ ಸಾಕು ಬಾಯಿ ನೀರೂರುತ್ತೆ. ಅದರಲ್ಲೂ ದಾವಣಗೆರೆ ಬೆಣ್ಣೆದೋಸೆ ಅಂದ್ರೆ ಕೇಳಬೇಕಾ? ದೇಶ ವಿದೇಶಗಳಿಗೂ ಗೊತ್ತು, ದಾವಣಗೆರೆ ಬೆಣ್ಣೆದೋಸೆ ಗತ್ತು. ಹಾಗಂತ ದಾವಣಗೆರೆ ಬೆಣ್ಣೆದೋಸೆಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ಸುಂದರ ಪ್ರವಾಸಿ ತಾಣಗಳನ್ನು ತನ್ನೊಡಲಲ್ಲಿಟ್ಟುಕೊಂಡು ಪೋಷಿಸುತ್ತಿರುವ ದಾವಣಗೆರೆ ಪ್ರವಾಸಿಗರಿಗೂ ಅಚ್ಚುಮೆಚ್ಚು.
ದಾವಣಗೆರೆ ದಕ್ಷಿಣದ ಫೇಮಸ್ ಹೊಟೇಲೊಂದರಲ್ಲಿ ಬಿಸಿಬಿಸಿ ಬೆಣ್ಣೆದೋಸೆ ಸವಿದು ಹಾಗೆ ಬೇತೂರು ರಸ್ತೆಯಲ್ಲಿ ಹಾದು ಹೋಗುತ್ತಿರುವಾಗ ದೊಡ್ಡದಾದ ನಂದಿ ಮೂರ್ತಿಯನ್ನು ಹೊತ್ತು ನಿಂತಿರುವ ಗೋಪುರವು ತನ್ನೊಳಗಿನ ಗತಕಾಲದ ವೈಭವವನ್ನು ನನ್ನೊಂದಿಗೆ ತೆರೆದಿಡಲು ಆಹ್ವಾನಿಸಿತ್ತು.
ಆನೆಕೊಂಡ ಎಂದು ಕರೆಯಲ್ಪಡುವ ಈ ಸ್ಥಳವು ನಗರ ಪ್ರದೇಶದಲ್ಲಿದ್ದರೂ ತನ್ನ ಗ್ರಾಮೀಣ ಶೈಲಿಯನ್ನು ಉಳಿಸಿಕೊಂಡು ಗ್ರಾಮದಂತೆಯೇ ಇದೆ. ಹಿಂದೊಮ್ಮೆ “ಬೇತೂರು” ಚಾಲುಕ್ಯರ ರಾಜಧಾನಿಯಾಗಿದ್ದಾಗ ಆನೆಗಳ ಹಿಂಡನ್ನು ಇಲ್ಲಿ ಕಟ್ಟಿಹಾಕುತ್ತಿದ್ದರಿಂದ ಈ ಸ್ಥಳಕ್ಕೆ ಆನೆಕೊಂಡ ಎಂಬ ಹೆಸರು ಬಂದಿದೆ ಎನ್ನುತ್ತಾರೆ.

ಇಲ್ಲಿನ ಆನೆಕೊಂಡ ಶ್ರೀ ಬಸವೇಶ್ವರ ದೇವಾಲಯವು ನನ್ನನ್ನು ಹೆಚ್ಚು ಆಕರ್ಷಿಸಲ್ಪಟ್ಟಿತು. ಇದು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ, ನಕ್ಷತ್ರಾಕಾರದ ಸುಂದರ ದೇವಾಲಯವಾಗಿದ್ದು. ಎತ್ತರದ ವೇದಿಕೆಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು 12 ನೇ ಶತಮಾನದ “ಪಾಂಡ್ಯ” ಮತ್ತು 13ನೇ ಶತಮಾನದ “ಹೊಯ್ಸಳ” ಶಾಸನಗಳಲ್ಲಿ ಕಂಡುಬರುತ್ತದೆ.
ಈ ಪ್ರಾಚೀನ ಸ್ಥಳದಲ್ಲಿ ಕಾಲಿಟ್ಟ ಕ್ಷಣ ವೈಭವಯುತ ಗತಕಾಲದ ಕಥೆಗಳನ್ನು ಪಿಸುಗುಟ್ಟುವ ಅದ್ಭುತ ವಾಸ್ತುಶಿಲ್ಪವು ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು. ವೈವಿಧ್ಯಮಯ ಶಿಲ್ಪ ಮತ್ತು ಕಲ್ಲಿನ ಕೆತ್ತನೆಗಳಿಂದ ಸಮೃದ್ಧವಾಗಿರುವ ಶ್ರೀ ಬಸವೇಶ್ವರ ದೇವಾಲಯವು ಹೊಯ್ಸಳರ ಕಥೆಯನ್ನು ನಿರೂಪಿಸುತ್ತದೆ. ಗಜಲಕ್ಷ್ಮಿ, ಶಿವ, ವಿಷ್ಣು, ಗಣೇಶ, ಬ್ರಹ್ಮ ಮತ್ತು ಸುಬ್ರಹ್ಮಣ್ಯ ಮುಂತಾದ ದೇವತೆಗಳ ಉಪಸ್ಥಿತಿಯು ಸುತ್ತಮುತ್ತಲಿನ ಪ್ರದೇಶಗಳಿಗೆ ಆಧ್ಯಾತ್ಮಿಕ ಪ್ರಭಾವಲಯವನ್ನು ನೀಡುತ್ತದೆ. ಈ ಸ್ಥಳ ಹೆಚ್ಚು ಪ್ರಶಾಂತತೆಯಿಂದ ಕೂಡಿದ್ದು ಉತ್ತಮ ಅನುಭವ ನೀಡುತ್ತದೆ.
ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವು ಮುಖ್ಯ ಗರ್ಭಗುಡಿಯಲ್ಲಿ ಶಿವಲಿಂಗವನ್ನು ಹೊಂದಿದೆ. ಆದರೆ ಇನ್ನೊಂದು ಗರ್ಭಗುಡಿಯಲ್ಲಿ ವಿಗ್ರಹವಿಲ್ಲ. ಇದರ ನವರಂಗದ ಮಧ್ಯದ ಛಾವಣಿಯಲ್ಲಿ ಗಜಾಸುರಸಂಹಾರದ ದೃಶ್ಯವೊಂದನ್ನು ಹೊಂದಿದ್ದು, ಅದರ ಪಕ್ಕದಲ್ಲಿ ವಿಷ್ಣು ಮತ್ತು ಬ್ರಹ್ಮ ದೇವರನ್ನು ಅದ್ಭುತವಾಗಿ ಕೆತ್ತಲಾಗಿದೆ. ಕೆಳಗಿನ ಫಲಕದಲ್ಲಿ ಏಳು ಗಣರು ಭಗವಂತನ ನೃತ್ಯಕ್ಕೆ ಸಂಗೀತ ನುಡಿಸುತ್ತಿರುವ ದೃಶ್ಯವಿದೆ. ಮೇಲಿನ ಫಲಕದಲ್ಲಿ ಅದಿತಿ ದೇವಿಯ 12 ಪುತ್ರರಾದ ಆದಿತ್ಯರ ಶಿಲ್ಪವಿದೆ. ನವರಂಗದ ಇತರ ಎಂಟು ಅಂಕಣಗಳು ಆಳವಿಲ್ಲದ ಕಮಲಗಳನ್ನೂ ಹೊಂದಿದ್ದು, ಅವುಗಳ ಪೆಂಡೆಂಟ್‌ಗಳಲ್ಲಿ ದಿಕ್ಪಾಲರ ಶಿಲ್ಪಗಳಿವೆ.

ದೇವಾಲಯದ ಎದುರು ಶಕ್ತಿ ಮತ್ತು ಭಕ್ತಿಯ ಸಂಕೇತವಾದ ಭಗವಾನ್ ನಂದಿಗೆ ಅರ್ಪಿತವಾದ ಒಂದು ಸಣ್ಣ ಮಂಟಪವಿದೆ. ಎರಡೂ ಬದಿಗಳಲ್ಲಿರುವ ಮುಂಭಾಗದ ಮುಖಮಂಟಪದಲ್ಲಿ ಐದು ಅಲಂಕೃತ ಫಲಕಗಳಿದ್ದು, ಮೇಲ್ಭಾಗದಲ್ಲಿ ಶಿಲ್ಪಕಲೆಯ ಕಂಬಿಬೇಲಿ ಕಾಣಿಸುತ್ತದೆ. ಮೇಲಿನ ಫಲಕಗಳಲ್ಲಿ ದ್ವಾರಪಾಲಕರು, ನೃತ್ಯ ಮಾಡುವ ಗಣೇಶ, ಋಷಿಗಳು, ರತಿ-ಮನ್ಮಥ, ತುಂಟಾಟಗಳು ಮತ್ತು ಇತರ ಕಾಮಪ್ರಚೋದಕ ಶಿಲ್ಪಗಳನ್ನು ಉಲ್ಲೇಖಿಸಬಹುದು. ಪೂರ್ವದ ಮುಖಮಂಟಪದ ಛಾವಣಿಯ ಮೇಲೆ ದೇವತಾಶಾಸ್ತ್ರಜ್ಞರು ಸಂಗೀತಗಾರರೊಂದಿಗೆ ಮಧ್ಯದಲ್ಲಿ ಆನೆ ಐರಾವತದ ಮೇಲೆ ಸವಾರಿ ಮಾಡುತ್ತಿರುವ ಇಂದಿರಾ ದೇವಿಯ ಶಿಲ್ಪವಿದೆ. ದೇವಸ್ಥಾನದ ಆವರಣ ತಂಪಾಗಿದ್ದು, ಶಾಂತಿಯುತ ವಾತಾವರಣದಿಂದ ಮನಸ್ಸಿಗೆ ಹಿತಕರ ಅನುಭವ ನೀಡುತ್ತದೆ.
ಪ್ರತಿವರ್ಷ ಶ್ರಾವಣಮಾಸದ ಕಡೆಯ ಸೋಮವಾರದಂದು ಇಲ್ಲಿನ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿಯ ಸಾನ್ನಿಧ್ಯದಲ್ಲಿ ಕಾರ್ಣಿಕ ನುಡಿಯುವುದರೊಂದಿಗೆ ಅದ್ದೂರಿ ಆನೆಕೊಂಡ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಬಹಳಷ್ಟು ಜನರಿಗೆ ತಿಳಿದಿತ್ತಾದರೂ ಈ ದೇವಾಲಯದ ಇತಿಹಾಸದ ಬಗ್ಗೆ ಅಷ್ಟಾಗಿ ತಿಳಿದಿಲ್ಲ.
ಇತಿಹಾಸ ಉತ್ಸಾಹಿಗಳು ಮತ್ತು ಅಧ್ಯಾತ್ಮಿಕ ಅನ್ವೇಷಕರಿಗೆ ಹೇಳಿ ಮಾಡಿಸಿದಂಥ ಪ್ರಯಾಣವಾಗಿದೆ.
ದಾರಿ ಹೇಗೆ?
ಈ ದೇವಾಲಯವು ದಾವಣಗೆರೆ ದಕ್ಷಿಣ ಭಾಗದಲ್ಲಿದ್ದು. ಬೇತೂರು ರಸ್ತೆ ಮಾರ್ಗವಾಗಿ ಅಥವಾ ಬಂಬೂಬಜಾರ್ ರಸ್ತೆ ಮೂಲಕ ತೆರಳಿ ಸ್ಥಳೀಯರನ್ನು ವಿಚಾರಿಸಿದರೆ ಸುಲಭವಾಗಿ ದೇಗುಲವನ್ನು ತಲುಪಬಹುದು.