ಬಳ್ಳಾರಿ ಸುತ್ತಮುತ್ತಲು ಓಡಾಟಕ್ಕೆ ಸಾಕಷ್ಟು ತಾಣಗಳಿವೆ. ಆಗ ಇಲ್ಲಿ ಹೀಗಿತ್ತು ಎಂದು ಹೇಳುವ ಮತ್ತು ತೋರುವ ಸಾಕಷ್ಟು ಇತಿಹಾಸ ಪುರಾವೆಗಳು ಈ ಅವಿಭಜಿತ ಬಳ್ಳಾರಿ ಜಿಲ್ಲೆಯ ಸುತ್ತೆಲ್ಲ ಎಗ್ಗಿಲ್ಲದೆ ದೊರೆತಿವೆ ಮತ್ತು ದೊರೆಯುತ್ತಲೆ ಇವೆ. ಹಾಂ..ಅಶೋಕನ ಶಾಸನಗಳು ದೊರೆತ ಸನ್ನತಿ, ಸಂಗನಕಲ್ಲು, ಅಶೋಕನೇ ದೇವಾನಾಂಪ್ರಿಯ, ಪ್ರಿಯದರ್ಶಿ ರಾಜ ಎಂಬುದಕ್ಕೆ ದೇವಾನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು ಬರೆದಿರುವ.. ಅಲ್ಲ ಅಲ್ಲ ಕೆತ್ತಿಸಲಾದ ಶಾಸನವೂ ಇದೇ ಜಿಲ್ಲೆಯ ಚಿತ್ರದುರ್ಗದ ಬ್ರಹ್ಮಗಿರಿಯಲ್ಲಿ ದೊರೆತಿದೆ. ಅಷ್ಟೇ ಏಕೆ ರೋಮ್‌ನಂತರ ಭೂಮಿಯ ಮೇಲಿನ ಅತಿ ಶ್ರೀಮಂತ ನಗರ ಎಂದು ವಿದೇಶಿ ಯಾತ್ರಿಕ ತನ್ನ ಪ್ರವಾಸಿ ಪುಟಗಳಲ್ಲಿ ಅಚ್ಚಳಿಯದ ಹೊಗಳಿಕೆ ಮಾತುಗಳನ್ನು ಬರೆಯುವಂತೆ ಮಾಡಿದ ವಿಜಯನಗರ ಸಾಮ್ರಾಜ್ಯ ಅಂದರೆ ಈಗಿನ ಹಂಪಿ ಇಲ್ಲಿದೆ. ಇವುಗಳ ಜತೆಗೆ ಪ್ರಕೃತಿ ಸೌಂದರ್ಯ ಸವಿಯಲು ಗುಡ್ಡಗಾಡು, ಅಡವಿಗಳನ್ನೆಲ್ಲ ಅಲೆದು, ಹಂಪಿಯಲ್ಲಿ ಸ್ನಾನ ದೇವರ ಧ್ಯಾನ ಅಂತ ಹಾಡಿಕೊಂಡು ತುಂಗಭದ್ರೆಯಲ್ಲಿ ಸ್ನಾನ, ಪಾನ ಮಾಡುತ್ತಾ, ಅಲ್ಲಲ್ಲಿ ದೈವೋದ್ಯಾನಗಳಂಥ ಸುಂದರ ತಾಣಗಳಲ್ಲಿ ಓಡಾಟದ ಕಾಲ ಸುಗಮವಾಗಿ ಸಾಗುತ್ತದೆ. ಈ ಮಧ್ಯೆ ಹೊಸದಾಗಿ ತಾಲ್ಲೂಕು ಕೇಂದ್ರವಾಗಿ ಗುರುತಿಸಿಕೊಂಡಿರುವ ಕುರುಗೋಡಿಗೆ ನೀವೊಮ್ಮೆ ಭೇಟಿ ಕೊಡಬೇಕು.

ಇದನ್ನೂ ಓದಿ: ವಾಸ್ತವ್ಯಕ್ಕಿದೆ ಜೆಎಲ್‌ಆರ್‌ನ ಹಂಪಿ ಹೆರಿಟೇಜ್ & ವೈಲ್ಡರ್‌ನೆಸ್ ರೆಸಾರ್ಟ್‌

ಇಲ್ಲಿನ ಜನ ಜೀವನದ ಸೊಗಡನ್ನು ಹಾಸುಹೊಕ್ಕಾಗಿ ಕಟ್ಟಿಕೊಡುವ ಗಂಗಾವತಿ ಪ್ರಾಣೇಶ್ ಅವರು ವಿಶ್ವದ ಪರ್ಯಟನೆ ಮಾಡಿ ಹಂಚಿರುವ ಮಾತುಗಳು ನಿಮ್ಮನ್ನು ತಾಕದೆ ಬಿಡದು. ʻರವಿ ಕಾಣದ್ದನ್ನು ಕವಿ ಕಂಡ' ಎನ್ನುವಂತೆ ಕಣ್ಣ್ಮುಚ್ಚಿ ತೆರೆದ ಮನಸ್ಸಿನಿಂದ ಕಂಡರೆ, ಇಲ್ಲಿನ ಜನರಲ್ಲಿ ಇತಿಹಾಸಕ್ಕಿಂತ ಹೆಚ್ಚಿನ ವಿಶ್ವಾಸವನ್ನು ಕಾಣಬಹುದು. ನಗರವಾಸಿಗಳಂತೆ ವೇಷಭೂಷ ತೊಟ್ಟು ಇಲ್ಲಿಗೆ ಬಂದಾಗ ಯಾವ ಟಿ, ತಿಂಡಿ ಅಂಗಡಿ ಹೊಕ್ಕು ʻಅಕ್ಕಾರೆ ಸ್ವಲ್ಪ ನೀರು ಕೊಡ್ರಿ' ಅಂತ ಕೇಳಿದರು, ಒಮ್ಮೆ ಕಿಲ್ಲನೆ ನಕ್ಕು ʻತಗರಿ ಸಾರ್' ಎಂದು ಕೈಗಿಡುತ್ತಾ, ʻಚಾ- ಕಾಪಿ, ಬಿಸೆ ಇಡ್ಲಿ-ಮೆಸಿಂಕಾಯಿ ಅದಾವ ಸಾರ್ ಏನ್ ಕೊಡ್ಲಿʼ ಅಂತ ಮುಗ್ಧರಂತೆ ಕೇಳುವಾಗ ತುಂಬಿದ ಹೊಟ್ಟೆಗೂ ಹಸಿವಾಗದಿರದು. ಹಾಂ..ನಿಮಗಲ್ಲಿ ಅರ್ಧ ತಾಸು ಕಾಯಬೇಕೆಂದೇನಿಲ್ಲ ಆರ್ಡರ್‌ಮಾಡಿದ ಕ್ಷಣಾರ್ಧದಲ್ಲೆ ಸರ್ವ್‌ಆಗಿರುತ್ತದೆ. ತಿಂಡಿ ತಿಂದು ತಿರುಗಲು ತೆರಳಬಹುದು.

kurungodu

ಈ ದೊಡ್ಡ ಬಸವೇಶ್ವರನ ಕಾಣಲು ಚಾರಣ, ಆಟೋ, ಬೈಕ್‌ಯಾವುದೂ ಬೇಕಿಲ್ಲ. ಸುಖಕರ ಪ್ರಯಾಣಕ್ಕೆ ಸರಕಾರಿ ಸಾರಿಗೆ ಅಂತ ಬಸ್‌ಹತ್ತಿ ಬಳ್ಳಾರಿಯಿಂದ ಹೊರಟರೆ ಒಂದೇ ಬಸ್‌ಒಂದು ಗಂಟೆ ಪ್ರಯಾಣ, ಬಂದು ಈ ದೊಡ್ಡಬಸವೇಶ್ವರನ ದೇವಸ್ಥಾನದ ಮುಂದೆಯೇ ಇಳಿಯಬಹುದು. ಈ ದೇವಸ್ಥಾನ ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿತ್ತು ಎಂಬುದಕ್ಕೆ ಇಲ್ಲಿನ ಇತಿಹಾಸ ತಜ್ಞರು, ಸಂಶೋಧಕರು ಪುರಾವೆಗಳನ್ನು ನೀಡಿದ್ದಾರೆ, ಆದರು ಸ್ಥಳೀಯವಾಗಿಯು ಸಾಕಷ್ಟು ಕಥೆಗಳಿವೆ ಅವುಗಳನ್ನೆಲ್ಲ ನಂಬಲಾಗದಿದ್ದರು ಸಾಧ್ಯವಾದರೆ ಕೇಳಿ ಆಲಿಸಿದರೆ, ಅಲ್ಲಿನ ಜನರ ಮುಗ್ಧ ಮನಸ್ಥಿತಿ, ದೈವಭಕ್ತಿ, ನಡೆನುಡಿಗಳು, ನಂಬಿಕೆ ಹಾಗೆ ಹೊಂದಾಣಿಕೆ ಮನೋಭಾವ ಗಮನಿಸಬಹುದು. ಬಿಳಿಯ ಸುಣ್ಣ ಬಳಿದ ವಿಮಾನ (ಗೋಪುರ) ಒಳಹೊಕ್ಕರೆ ಕಲ್ಲುಗಳಿಂದ ಕಟ್ಟಿದ ಆವರಣ, ದೇವಸ್ಥಾನ ನಿಮಗೆ ಭದ್ರ ಕೋಟೆಯೊಳಗೆ ಸಾಗುವ ಅನುಭವ ನೀಡುತ್ತದೆ.

ಮಹಾಭಾರತ ಕಾಲದ ಇತಿಹಾಸವನ್ನು ಕಟ್ಟೆಳೆದು ತರುವ ಈ ಊರು ಆಗ ಕುಂತಲ ರಾಜ್ಯದ ರಾಜಧಾನಿಯಾಗಿತ್ತು, ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ-ಬುಕ್ಕರ ತಂದೆಯ ಊರಾಗಿತ್ತು ಎಂಬುದಕ್ಕೆ ಉಲ್ಲೇಖಗಳಿದ್ದು, ಇಂದು ಇದು ಹೊಸ ತಾಲ್ಲೂಕು ಕೇಂದ್ರವಾಗಿದೆ. ಪ್ರತಿ ವರ್ಷ ಯುಗಾದಿ ಪಾಡ್ಯದಂದು (ಹಿಂದೂಗಳ ಹೊಸವರ್ಷ) ಸೂರ್ಯನ ಮೊದಲ ಕಿರಣಗಳು ಹಂಪಿ ವಿರೂಪಾಕ್ಷನನ್ನು ತಾಕಿದರೆ ಸಂಜೆಯ ಕಿರಣಗಳು ಕುರುಗೋಡು ದೊಡ್ಡ ಬಸವೇಶ್ವರನಿಗೆ ತಾಕುತ್ತವೆ ಎನ್ನಲಾಗಿದೆ. ಮಾರ್ಚ್‌ಅವಧಿಗೆ ಅಂದರೆ ಯುಗಾದಿಯ 15 ದಿನಗಳ ಮೊದಲು ಇಲ್ಲಿ ಮಹಾರಥೋತ್ಸವ ನಡೆಯುತಿದ್ದು, ಒಂಬತ್ತು ದಿನಗಳ ಜಾತ್ರೆ ಮತ್ತು ವಿಶೇಷ ಪೂಜಾ- ಪುನಸ್ಕಾರ, ಅಲಂಕಾರಗಳು ನಡೆಯುತ್ತವೆ. ಇದು ಈಗಿನ ಬಳ್ಳಾರಿ ಜಿಲ್ಲೆಯ ಅತಿದೊಡ್ಡ ಜಾತ್ರಾ ಮಹೋತ್ಸವವಾಗಿದೆ.

Untitled design (78)

ಇಲ್ಲಿರುವ ದೊಡ್ಡಬಸವೇಶ್ವರನಿಂದಲೇ ಈ ಊರಿಗೆ ಕುರುಗೋಡು ಎಂಬ ಹೆಸರು ಬಂದಿದೆ ಎನ್ನಲಾಗಿದೆ, ಅದೇಗೆ ಅಂದಿರಾ? ಬೃಹದಾಕಾರದ ಈ ನಂದಿಯ ವಿಗ್ರಹವು 13 ಅಡಿ ಎತ್ತರವಿದ್ದು, ದಕ್ಷಿಣ ಭಾರತದಲ್ಲಿನ ಎರಡನೇ ಅತಿದೊಡ್ಡ ಏಕಶಿಲಾ ನಂದಿಯ ವಿಗ್ರಹವಾಗಿದೆ. ಕೊಂಬುಗಳು ಅಂದರೆ ಸ್ಥಳೀಯ ಮಾತಿನಲ್ಲಿ ಕೋಡುಗಳು ಕಿರಿಯದಾಗಿವೆ. ಹೀಗೆ ದೊಡ್ಡಬಸವನಿಗೆ ಕಿರು ಕೋಡುಗಳಿರುವುದು ಆಕರ್ಷಣೀಯವಾಗಿದ್ದು. ಕಿರು ಕೊಡು ದೊಡ್ಡಬಸವ ಎಂಬುದಾಗಿಯೇ ನಂದಿ ಪೂಜಿಸಲ್ಪಟ್ಟಿತು ಕಾಲ ನಂತರ ಈ ಹೆಸರು ಜನರ ಬಾಯಿಂದ ಬಾಯಿಗೆ ಅಲೆದಾಡಿ ಕುರುಗೋಡು ಆಗಿದೆ ಎಂಬುದು ಇಲ್ಲಿನ ಇತಿಹಾಸ ತಜ್ಞರ ಮಾತು. ಇಂದಿಗೂ ಬಿಸಿಲನಾಡು ಬಳ್ಳಾರಿ ಸೇರಿ ಗಡಿನಾಡು ಆಂಧ್ರದಲ್ಲೂ ಕುರುಗೋಡು ದೊಡ್ಡ ಬಸವೇಶ್ವರ ಸಾಕಷ್ಟು ಜನರ ಮನೆಯ ದೇವರಾಗಿ ಪೂಜಿಸಲ್ಪಡುತ್ತಿದ್ದಾನೆ.

ಈ ದೊಡ್ಡಬಸವೇಶ್ವರನ ವಿಗ್ರಹವು ಪಶ್ಚಿಮಕ್ಕೆ ತಿರುಗಿದ್ದು ಅಭಿಮುಖವಾಗಿ ಹಂಪಿಯಲ್ಲಿ ವಿರುಪಾಕ್ಷೇಶ್ವರನ ಲಿಂಗವಿರುವುದರಿಂದ ಇದನ್ನು ಹಂಪಿ ವಿರುಪಾಕ್ಷನಿಗಿರುವ ಎದುರು ಬಸವಣ್ಣ ಎಂದು ಹೇಳಲಾಗಿದೆ. ಲಾಜಿಕ್‌ನನಗೂ ಅರ್ಥವಾಗಲಿಲ್ಲ ಈ ನಂದಿ ವಿಗ್ರಹ ಮುಖ ಮಾಡಿರುವ ದಿಕ್ಕಿನಲ್ಲೆ ನನ್ನ ಊರು ಇದೆ. ಅಲ್ಲಿರುವ ಲಿಂಗರೂಪಿ ಶಿವನನ್ನು ಈ ಬಸವಣ್ಣ ನೋಡುವುದಿಲ್ಲವೆ? ಏನೋ ಇರಲಿ. ಈ ಬಸವನ ಕುರಿತು ಇರುವ ವಿಷಯಗಳನ್ನೆಲ್ಲ ತಿಳಿದರೆ ಇಲ್ಲಿನ ಪ್ರವಾಸ ಮುಗಿಯದು. ನೀವಿನ್ನು ಇಲ್ಲಿನ ಶಿವಶರಣೆ ನೀಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಬೇಕು, ಬೃಹದಾಕಾರದ ಬಂಡೆಗಳ ಬೆಟ್ಟವನ್ನು ಹತ್ತಿ ಇಳಿಯಬೇಕು, ಇಲ್ಲಿನ ಜನರ ಮಧ್ಯೆ ಆದಷ್ಟು ತಿರುಗಾಡಬೇಕು ಎಲ್ಲವನ್ನು ಇನ್ನೊಮ್ಮೆ ನಿಮ್ಮ ಮುಂದೆ ತಂದಿಡಲು ಪ್ರಯತ್ನಿಸುತ್ತೇನೆ.