ಹದಿನೈದೇ ನಿಮಿಷದಲ್ಲಿ ವಿಶ್ವನಾಥನ ಸಾನ್ನಿಧ್ಯ
ವಾರಾಣಸಿಯಲ್ಲಿ (ಕಾಶಿ) ಭಾರತದ ಮೊದಲ ಸಾರ್ವಜನಿಕ ಸಾರಿಗೆ ರೋಪ್‌ವೇ ನಿರ್ಮಾಣವಾಗುತ್ತಿದೆ. ಆ ಮೂಲಕ ಲಾಪಜ್ (Lapaz ) ಹಾಗೂ ಮೆಕ್ಸಿಕೋ (Mexico) ಬಳಿಕ ರೋಪ್ ವೇ ಬಳಕೆ ಮಾಡುವ ವಿಶ್ವದ ಮೂರನೆಯ ನಗರ ಎನ್ನುವ ಖ್ಯಾತಿಗೆ ಕಾಶಿ ಪಾತ್ರವಾಗಲಿದೆ.
- ಶೋಭಾ ಮಳವಳ್ಳಿ
ಕಾಶಿ. ವಿಶ್ವದ ಅತ್ಯಂತ ಜೀವಂತ ನಗರ. ಮೋಕ್ಷ ನಗರಿ ಎಂಬುದು ಕೋಟ್ಯಂತರ ಹಿಂದೂಗಳ ನಂಬಿಕೆ. ಅವಿಮುಕ್ತ ಕ್ಷೇತ್ರವೆಂದೂ, ಕಾಶಿಯಲ್ಲಿ ಜೀವ ಬಿಟ್ಟವರಿಗೆ ಮೋಕ್ಷ ಸಿಗುತ್ತದೆಂದು ಗಾಢವಾಗಿ ನಂಬಿದವರು ಹಿಂದೂಗಳು. ಅಧ್ಯಾತ್ಮದ ಹಾದಿಯಲ್ಲಿ ಸಾಗುವವರಿಗೆ ಕಾಶಿ ಅದ್ಭುತ ಕ್ಷೇತ್ರ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ವಿಶ್ವನಾಥನ ದೇವಾಲಯವೇ ಹಿಂದೂಗಳ ಆಕರ್ಷಣೆ. ವಾರಾಣಸಿ, ಬನಾರಸ್ ಮತ್ತು ಅವಿಮುಕ್ತ ಕ್ಷೇತ್ರ ಎಂಬ ಹೆಸರುಗಳೂ ಕಾಶಿಗೆ ಹೆಗ್ಗುರುತು. ಇಂಥ ಕಾಶಿ ಈಗ ಮತ್ತೊಂದು ಬದಲಾವಣೆ ಸಜ್ಜಾಗಿದೆ. ಕಾರಿಡಾರ್ ಮೂಲಕ ಕಾಶಿಗೆ ಹೊಸ ರೂಪ ನೀಡಿದ ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ, ಈಗ ಕಾಶಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ. ಅದೇ ರೋಪ್‌ವೇ.
ಇದನ್ನೂ ಓದಿ: ಕಾಶಿ ಯಾತ್ರೆಯ ಚೆನ್ನಾಗಿ ಮಾಡೋ
ವಾರಾಣಸಿಯಲ್ಲಿ (ಕಾಶಿ) ಭಾರತದ ಮೊದಲ ಸಾರ್ವಜನಿಕ ಸಾರಿಗೆ ರೋಪ್‌ವೇ ನಿರ್ಮಾಣವಾಗುತ್ತಿದೆ. ಆ ಮೂಲಕ ಲಾಪಜ್ (Lapaz ) ಹಾಗೂ ಮೆಕ್ಸಿಕೋ (Mexico) ಬಳಿಕ ರೋಪ್ ವೇ ಬಳಕೆ ಮಾಡುವ ವಿಶ್ವದ ಮೂರನೆಯ ನಗರ ಎನ್ನುವ ಖ್ಯಾತಿಗೆ ಕಾಶಿ ಪಾತ್ರವಾಗಲಿದೆ.
ಜನದಟ್ಟಣೆ ನಿರ್ವಹಣೆ
ಚಿಕ್ಕ ಚಿಕ್ಕ ದಾರಿಗಳು, ಗಲ್ಲಿಗಳು ಕಾಶಿಯ ಹೆಗ್ಗುರುತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕಾಶಿಗೆ ದಿನವೂ ಭೇಟಿ ನೀಡುವ ಲಕ್ಷಾಂತರ ಭಕ್ತರು, ಕಿರಿದಾದ ರಸ್ತೆ, ಗಲ್ಲಿಗಳಲ್ಲಿ ಓಡಾಡಬೇಕಾದಂಥ ಪರಿಸ್ಥಿತಿ ಇದೆ. ವಿಶ್ವನಾಥನ ದರ್ಶನಕ್ಕೆ ದಿನವೂ ಕಿಲೋಮೀಟರ್‌ಗಟ್ಟಲೆ ಕ್ಯೂ ನಿಲ್ಲುತ್ತಾರೆ, ಕಾಲಭೈರವನ ದರ್ಶನಕ್ಕೂ ಭಕ್ತರ ಸರದಿ ಸಾಲು. ಹಬ್ಬ, ಶ್ರಾವಣ ಮಾಸದಲ್ಲಂತೂ, ಭಕ್ತರ ನೂಕುನುಗ್ಗಲು, ಜನಸಾಗರ, ಪ್ರವಾಸಿಗರ ದಂಡು. ಭಕ್ತರನ್ನು ನಿಯಂತ್ರಿಸಲು ಕಾಶಿ ಪೊಲೀಸರು ಹೈರಾಣಾಗಿ ಬಿಡುತ್ತಾರೆ. ಹಲವು ರಸ್ತೆ ಮಾರ್ಗಗಳನ್ನು ಬಂದ್ ಮಾಡಿದರೂ, ಜನರನ್ನು ನಿಯಂತ್ರಿಸಲಾಗದು. ಮಾರ್ಗ ಬದಲಿಸಿದರಂತೂ, ಕಿರಿದಾದ ರಸ್ತೆಯಲ್ಲಿ ಜನ ನೂಕುನುಗ್ಗಲು ಉಸಿರುಗಟ್ಟಿಸುವಂಥ ಸ್ಥಿತಿ. ಕಾಶಿ ಪ್ರವೇಶಿಸುವ ಮಾರ್ಗದಲ್ಲೇ ವಾಹನಗಳ ಸಂಚಾರ ನಿಷೇಧಿಸಿದರೂ, ಪ್ರಯೋಜನವಾಗದು ಅಷ್ಟು ಜನಸಾಗರ.
ಇದು, ದೇವಸ್ಥಾನದ ರಸ್ತೆಯ ಸ್ಥಿತಿಯಾದರೆ, ಇನ್ನು ಗಂಗಾನದಿ ತಟಗಳೂ ಭಕ್ತರಿಂದ, ಪ್ರವಾಸಿಗರಿಂದ ತುಂಬಿರುತ್ತೆ. ದಶಾಶ್ವಮೇಧ ಘಾಟ್ ಸೇರಿದಂತೆ, ಎಲ್ಲ ಘಾಟ್‌ಗಳಲ್ಲೂ ಜನವೋ ಜನ. ಬೋಟಿಂಗ್, ಗಂಗಾರತಿ ನೋಡಲು ಬರುವ ಭಕ್ತರ ಸಂಖ್ಯೆ ಲೆಕ್ಕಕ್ಕೆ ಸಿಗದು. ಕಾಶಿಯಲ್ಲಿ ಪ್ರವಾಸಿಗರಿಲ್ಲದ ದಿನವೇ ಇಲ್ಲ.
ಈಗಂತೂ ಕಾಶಿ ಕಾರಿಡಾರ್ ನಿರ್ಮಾಣವಾದ ಮೇಲೆ ಕಾಶಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಇದೆ.
ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಯುಪಿ ಸರಕಾರ, ಭಕ್ತರು ಇಡೀ ಕಾಶಿಯನ್ನು ಕಣ್ತುಂಬಿಕೊಳ್ಳುವಂತೆ ಮಾಡಲು ರೋಪ್‌ವೇ ನಿರ್ಮಾಣಕ್ಕೆ ಅಡಿ ಇಟ್ಟಿದೆ.

ಆಗಸದಿಂದ ಕಾಣಿಸುವ ದೇವರು
ಕಾಶಿಯ ಕ್ಯಾಂಟ್ ರೈಲ್ವೆ ನಿಲ್ದಾಣದಿಂದ ಗೊದೌಲಿಯಾವರೆಗೆ (ಸುಮಾರು 3.75 ಕಿ.ಮೀ) ಕೇವಲ 16-17 ನಿಮಿಷಗಳಲ್ಲಿ ತಲುಪುತ್ತದೆ ಈ ರೋಪ್‌ವೇ. ಸುಮಾರ್ ₹800 ಕೋಟಿಗೂ ಅಧಿಕ ವೆಚ್ಚದ ಈ ಯೋಜನೆಯು 150+ ಕ್ಯಾಬಿನ್‌ಗಳೊಂದಿಗೆ ಗಂಟೆಗೆ 3,000 ಪ್ರಯಾಣಿಕರನ್ನು (ಒಂದು ದಿಕ್ಕಿನಲ್ಲಿ) ಸಾಗಿಸುವ ಸಾಮರ್ಥ್ಯ ಹೊಂದಿದೆ.
ಈಗಾಗಲೇ ಕಾಮಗಾರಿ ಭರದಿಂದ ಸಾಗಿದ್ದು, ಕಾಶಿಯ ದೈವ ಪ್ರಪಂಚವನ್ನು ಆಗಸದಿಂದಲೇ ನೋಡಬಹುದು. ರೋಪ್ ವೇ ಕಾಮಗಾರಿ ಮುಗಿದ ಬಳಿಕ ಕಾಶಿಯ ವೈಭವವನ್ನುಆಗಸದಿಂದಲೇ ನೋಡಿ ಸಂಭ್ರಮಿಸಬಹುದು. ವಿಶ್ವನಾಥನ ಸನ್ನಿಧಿಯನ್ನೂ, ಗಂಗಾನದಿಯ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಬಹುದು.
ಈ ರೋಪ್‌ವೇ ಬಳಕೆಯಿಂದ ಟ್ರಾಫಿಕ್ ಜಾಮ್‌ನಲ್ಲಿ ಗಂಟೆಗಟ್ಟಲೆ ಸಿಕ್ಕಿಕೊಳ್ಳುವ, ಗಲ್ಲಿಗಳಲ್ಲಿ ಓಡಾಡುವ ಪರಿಸ್ಥಿತಿ ಇರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಅಲ್ಲದೇ, ವಿಶ್ವನಾಥನ ದೇಗುಲ ಹಾಗೂ ಗಂಗಾ ಘಾಟ್‌ಗೆ ಪ್ರವಾಸಿಗರು ಯಾವುದೇ ಸಮಸ್ಯೆಯಿಲ್ಲದೆ ತೆರಳಲು ಸಾಧ್ಯವಾಗಲಿದೆ.
ಕಾಶಿಯನ್ನು, ವಿಶ್ವನಾಥನನ್ನು, ಗಂಗೆಯನ್ನೂ ಆಗಸದಿಂದಲೇ ನೋಡಿ ಭಕ್ತಿ ಪರವಶವಾಗಲು, ಆ ಅದ್ಭುತವನ್ನು ಅನುಭವಿಸಲು ಇನ್ನೊಂದೆರಡು ವರ್ಷ ಕಾದು ಬಿಡೋಣ.

ರೋಪ್‌ವೇ ವಿಶೇಷತೆ
ಭೂಮಟ್ಟದಿಂದ 45 ಮೀಟರ್ ಎತ್ತರದಲ್ಲಿ ರೋಪ್‌ವೇ ನಿರ್ಮಾಣವಾಗಲಿದೆ. ಒಟ್ಟು ನಾಲ್ಕು ಕಿಲೋಮೀಟರ್ ದೂರದ ಮಾರ್ಗ ಇದಾಗಿರಲಿದೆ. ಇದರಲ್ಲಿ ಒಟ್ಟು 220 ಟ್ರಾಲಿಗಳು ಇರಲಿದ್ದು, ಒಂದು ಟ್ರಾಲಿಯಲ್ಲಿ ಗರಿಷ್ಠ 10 ಜನ ಕುಳಿತು ಪ್ರಯಾಣ ಮಾಡಬಹುದಾಗಿದೆ. ಕಂಟೋನ್ಮೆಂಟ್ ಸ್ಟೇಷನ್‌ನಿಂದ ಗೊದೌಲಿಯಾವರೆಗೆ ಒಟ್ಟು ನಾಲ್ಕು ಸ್ಟೇಷನ್‌ಗಳು ಸಿಗಲಿವೆ. ಕಂಟೋನ್ಮೆಂಟ್ ಹಾಗೂ ಗೊದೌಲಿಯಾ ಅಲ್ಲದೆ, ಸಾಜನ್ ತಿರಾಹಾ ಹಾಗೂ ರಥ ಯಾತ್ರಾ ಸ್ಟೇಷನ್‌ಗಳು ಇರಲಿವೆ. ಪ್ರತಿ ಒಂದೂವರೆ ಅಥವಾ ಎರಡು ನಿಮಿಷಕ್ಕೆ ರೋಪ್‌ವೇ ಟ್ರಾಲಿಯಲ್ಲಿ ಪ್ರಯಾಣಿಸಬಹುದು. ಎರಡೂ ಬದಿಯಿಂದ ಒಟ್ಟು 8 ಸಾವಿರ ಪ್ರಯಾಣಿಕರು ಸಾಗುವ ಮಾರ್ಗ ಇದಾಗಿದೆ. ರಾತ್ರಿಯ ವೇಳೆಯಲ್ಲೂ ರೋಪ್ ವೇ ವ್ಯವಸ್ಥೆ ಇರುವುದರಿಂದ, ಕಾಶಿ ಹಾಗೂ ಗಂಗಾ ನದಿಯ ವೈಭವ ಪ್ರವಾಸಿಗರ ಮನಸು ಮುದಗೊಳಿಸುತ್ತದೆ. ಸದ್ಯಕ್ಕೆ ರೋಪ್‌ವೇ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮುಗಿಯಲು ಇನ್ನೊಂದೆರಡು ವರ್ಷ ಬೇಕಾಗಬಹುದು.
ವರ್ಷಕ್ಕೆ 14 ಕೋಟಿ ಭಕ್ತರ ಭೇಟಿ
ಕಾಶಿ ಕಾರಿಡಾರ್ ನಿರ್ಮಾಣವಾದ ಬಳಿಕ ಕಾಶಿಗೆ ಭೇಟಿ ನೀಡುವ ಪ್ರವಾಸಿಗರು, ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ವರ್ಷ ವರ್ಷಕ್ಕೂ ಈ ಸಂಖ್ಯೆ ದಾಖಲೆ ನಿರ್ಮಿಸುತ್ತಿದೆ. ಸಾಮಾನ್ಯ ದಿನಗಳಲ್ಲಿ ದಿನಂಪ್ರತಿ ಸರಾಸರಿ 1.5 ಲಕ್ಷ ಭಕ್ತರು ಕಾಶಿ ವಿಶ್ವನಾಥನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
2025ರಲ್ಲಿ ಸುಮಾರು 14.7 ಕೋಟಿ ಭಕ್ತರು, ಪ್ರವಾಸಿಗರು ಕಾಶಿಗೆ ಭೇಟಿ ನೀಡಿದ್ದಾರೆ. 2025ರ ಕುಂಭಮೇಳದ ಸಂದರ್ಭದಲ್ಲಂತೂ ಕೇವಲ 45 ದಿನಗಳಲ್ಲಿ ಸುಮಾರು ಮೂರು ಕೋಟಿ ಭಕ್ತರು ಕಾಶಿಗೆ ಭೇಟಿ ನೀಡಿದ್ದರು. 2021ರ ಕಾಶಿ ಕಾರಿಡಾರ್ ನಿರ್ಮಾಣದ ಬಳಿಕ ಕಾಶಿಗೆ ಸುಮಾರು 26 ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರಂತೆ. ಇನ್ನು ಶ್ರಾವಣ ಸೋಮವಾರಗಳಲ್ಲಿ ಭಕ್ತರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚಂತೆ.
ರೋಪ್‌ವೇ ಪ್ರಮುಖ ಅಂಶಗಳು:
- ವಾರಾಣಸಿ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಗೋದೌಲಿಯಾ ಚೌಕದವರೆಗೆ 5 ನಿಲ್ದಾಣಗಳೊಂದಿಗೆ ಸಂಪರ್ಕ
- ಪ್ರಯಾಣದ ಸಮಯ: ಕೇವಲ 15-16 ನಿಮಿಷಗಳಲ್ಲಿ ಟ್ರಾಫಿಕ್ ಇಲ್ಲದೆ ಕಾಶಿ ವಿಶ್ವನಾಥ ದೇವಸ್ಥಾನದ ಪ್ರದೇಶವನ್ನು ತಲುಪಬಹುದು.
- ಸಾಮರ್ಥ್ಯ: ಪ್ರತಿ ಕ್ಯಾಬಿನ್‌ನಲ್ಲಿ 10 ಜನ ಪ್ರಯಾಣಿಕರು ಕುಳಿತುಕೊಳ್ಳಬಹುದು.
ಒಂದಿಷ್ಟು ಮಾಹಿತಿ
ತಂತ್ರಜ್ಞಾನ: ಸ್ವಿಟ್ಜರ್‌ಲ್ಯಾಂಡ್ ನ ಬಾರ್ತೊಲೆಟ್ (Bartholet) ಕಂಪೆನಿಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗುತ್ತಿದೆ.
ವೈಶಿಷ್ಟ್ಯ: ವಿಕಲಚೇತನರು ತಮ್ಮ ಗಾಲಿಕುರ್ಚಿಗಳೊಂದಿಗೆ ಆರಾಮವಾಗಿ ಪ್ರಯಾಣಿಸಲು ಅವಕಾಶವಿದೆ.
ಲೇಖಕರು: ಪತ್ರಕರ್ತರು