Saturday, July 4, 2026
Saturday, July 4, 2026

ಮೂರು ಯುಗಗಳ ಮಹಿಮೆಯ ತಾಣ ಕಣಿಪುರ ಕೃಷ್ಣನ ಕ್ಷೇತ್ರ

ಕೃಷ್ಣನ ಊರು ದ್ವಾರಕೆಯಿಂದ ಬಂದು ಯಕ್ಷಗಾನದ ತವರೂರಲ್ಲಿ ನೆಲೆನಿಂತವನು ಈ ಯಶೋಧಾಕರಾರ್ಚಿತ ಗೋಪಾಲಕೃಷ್ಣ. ಇದು ಸುಮಾರು ಮೂರು ಯುಗಗಳ ಇತಿಹಾಸವುಳ್ಳ ದಕ್ಷಿಣ ಭಾರತದ ಪರಮ ಪವಿತ್ರ ಕೃಷ್ಣ ಕ್ಷೇತ್ರ. ದಕ್ಷಿಣದ ದ್ವಾರಕೆಯೆಂದೇ ಕರೆಸಿಕೊಳ್ಳುವ, ಉಡುಪಿ ಮತ್ತು ಗುರುವಾಯೂರು ಕ್ಷೇತ್ರಗಳಷ್ಟೆ ಪವಿತ್ರವಾಗಿರುವ ತಾಣವಿದು.

  • ಶ್ರೀಕರ ಬಿ

ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರನ ದರ್ಶನಕ್ಕೆ ಕಾದು, ತಪಸ್ಸನ್ನಾಚರಿಸುತ್ತಾ ಯುಗವನ್ನೇ ಕಳೆದ ಮಹರ್ಷಿಗಳಿಗೆ, ದ್ವಾಪರಯುಗದಲ್ಲಿ ಶ್ರೀಕೃಷ್ಣನಾಗಿ ದರ್ಶನ ನೀಡಿದ ಪುಣ್ಯಕ್ಷೇತ್ರ ಈ ಕಣಿಪುರ. ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಸ್ಥಾನಗಳಲ್ಲಿ ಒಂದಾಗಿರುವ ಈ ಕ್ಷೇತ್ರಕ್ಕೆ ಬ್ರಿಟಿಷರ ರೈಲ್ವೇ ಹಳಿಯಾಗಲಿ, ಇತ್ತೀಚಿನ ರಾಷ್ಟ್ರೀಯ ಹೆದ್ದಾರಿಯಾಗಲಿ ಒಂದಿಂಚೂ ಧಕ್ಕೆ ತರಲಾಗಲಿಲ್ಲ. ಅಚಲವಾಗಿ ಅಲ್ಲೇ ನೆಲೆನಿಂತು ಭಕ್ತರನ್ನು ಪೊರೆಯುತ್ತಿರುವ ಕಾರಣಿಕ ಶಕ್ತಿ ಈ ಗೋಪಾಲಕೃಷ್ಣ. ರಾತ್ರಿಯ ಹೊತ್ತು ಪೇಟೆಯಲ್ಲಿ ಬಿಳಿ ಕುದುರೆಯನ್ನು ಏರಿ ಸವಾರಿ ಮಾಡುವ ರಹಸ್ಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಈ ಕ್ಷೇತ್ರವೇ ಕಾಸರಗೋಡಿನ ʼಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನʼ.

ಮೂರು ಯುಗಗಳ ಕಥೆ

ಅದು ತ್ರೇತಾಯುಗ. ಭಗಾವನ್ ವಿಷ್ಣುವಿನ ಏಳನೆಯ ಅವತಾರ ಮರ್ಯಾದಾ ಪುರಷೋತ್ತಮ ಪ್ರಭು ಶ್ರೀರಾಮಚಂದ್ರನ ದರ್ಶನಕ್ಕಾಗಿ ತಪಸ್ಸನ್ನು ಮಾಡುತ್ತಿದ್ದವರು ಕಣ್ವ ಮಹರ್ಷಿಗಳು. ಅವರಿಗೆ ಲಂಕೆಯಿಂದ ಬರುವಾಗ ದರ್ಶನ ನೀಡುವುದಾಗಿ ಪ್ರಭು ಶ್ರೀರಾಮಚಂದ್ರ ಅಭಯದಾನವನ್ನು ನೀಡುತ್ತಾನೆ. ಮತ್ತೆ ಕಾಯುತ್ತಾ ತಪಸ್ಸನ್ನು ಮಾಡುತ್ತಿರುವಾಗ ಮಹರ್ಷಿಗಳಿಗೆ ಸಮಯದ ಅರಿವೇ ಆಗಲಿಲ್ಲ! ತನ್ನ ಸಹೋದರ ಭರತನಿಗೆ ಕೊಟ್ಟ ಮಾತಿನಂತೆ ಆದಷ್ಟು ಬೇಗ ಅಯೋಧ್ಯೆಗೆ ಮರಳಿ ಹೋಗಲೇಬೇಕಾದ ಕಾರಣ ರಾಮನಿಗೆ ಕಣ್ವ ಮಹರ್ಷಿಗಳನ್ನು ಭೇಟಿಯಾಗಲು ಆಗಲಿಲ್ಲ. ಹೀಗೆ ದಿನಗಳು ಹೋದಂತೆ ಒಂದು ಯುಗವೇ ಕಳೆದು ಹೋಯಿತು. ರಾಮನ ಅವತಾರ ಸಮಾಪ್ತಿಯಾಯಿತು. ತ್ರೇತಾಯುಗ ಮುಗಿದು ದ್ವಾಪರಯುಗ ಬಂತು. ಲೋಕದಲ್ಲಿ ಅಧರ್ಮ ತಾಂಡವ ಆಡುತ್ತಿದ್ದಾಗ ಧರ್ಮದ ಪುನರ್ಸ್ಥಾಪನೆಗೆ ಭಗವಾನ್ ವಿಷ್ಣು ಕೃಷ್ಣನಾಗಿ ಅವತಾರ ಎತ್ತಿದ್ದರು. ತಮ್ಮ ಬಾಲ್ಯದ ಜೀವನವನ್ನು ಗೋಕುಲ, ವೃಂದಾವನದಲ್ಲಿ ಯಶೋಧೆ-ನಂದಗೋಪನ ಜತೆಗೆ ಕಳೆದು ಮರಳಿ ಮಥುರೆ ಸೇರುವ ಸಂದರ್ಭದಲ್ಲಿ ಯಶೋಧೆಗೆ ಒಂದು ತನ್ನದೆ ವಿಗ್ರಹವನ್ನು ನೀಡಿದ ಕೃಷ್ಣ ಈ ವಿಗ್ರಹದಲ್ಲಿ ಸದಾಕಾಲ ನಾನು ಇರುತ್ತೇನೆ, ನನ್ನನ್ನು ಇದೇ ವಿಗ್ರಹದಲ್ಲಿ ನೀನು ಕಾಣು ಎಂದು ಹೇಳಿದನಂತೆ. ನಂತರ ಯಶೋಧೆಯು ಈ ವಿಗ್ರಹದಲ್ಲಿ ಕೃಷ್ಣನನ್ನು ಗೋಪಾಲಕೃಷ್ಣನಾಗಿ ಪೂಜಿಸಿದಳು. ಹೀಗೆ ಸಮಯ ಹೋದಂತೆ, ರಾಮಾವತಾರ ಮುಗಿದು ದ್ವಾಪರಯುಗದಲ್ಲಿ ಕೃಷ್ಣನಾಗಿ ಭಗವಾನ್ ವಿಷ್ಣು ಅವತಾರ ಎತ್ತಿರುವುದು ಕಣ್ವ ಮಹರ್ಷಿಗಳ ಅರಿವಿಗೆ ಬರುತ್ತದೆ. ಹೀಗಾಗಿ ಕೃಷ್ಣನನ್ನು ಕಾಣಲು ದ್ವಾರಕೆಗೆ ಹೋಗುತ್ತಾರೆ. ಆಗ ಕೃಷ್ಣನು, ಈ ವಿಗ್ರಹವನ್ನು ನೀವು ಪೂಜಿಸಿ ಎಂದು ಕಣ್ವ ಮಹರ್ಷಿಗಳಿಗೆ ನೀಡುತ್ತಾನೆ. ಹೀಗೆ ಗೋಪಾಲಕೃಷ್ಣನ ವಿಗ್ರಹ ಪಡೆದ ಮಹರ್ಷಿ ಕಣ್ವರು ಈ ವಿಗ್ರಹವನ್ನು ತೆಗೆದುಕೊಂಡು ದ್ವಾರಕೆಯಿಂದ ಹೊರಟು ವಿವಿಧೆಡೆ ಸಂಚರಿಸುತ್ತಾ ದಕ್ಷಿಣ ಭಾರತದ ಕಡೆಗೆ ಬಂದಾಗ ವಾಸುಕಿ ಕುಂಡ ಇರುವ ಈ ಸ್ಥಳವನ್ನು ಕಂಡಾಗ ಇದಕ್ಕಿಂತ ಯೋಗ್ಯ ಸ್ಥಳ ಇನ್ನು ಯಾವುದು ಇಲ್ಲವೆಂದು ಗೋಪಾಲಕೃಷ್ಣ ದೇವರ ವಿಗ್ರಹವನ್ನು ಇಲ್ಲಿಯೇ ಪ್ರತಿಷ್ಠಾಪಿಸುತ್ತಾರೆ. ಸಮುದ್ರ ಮಥನದ ಸಂದರ್ಭದಲ್ಲಿ ವಾಸುಕಿಯು ಅಡಗಿ ಕುಳಿತಿದ್ದ ಸ್ಥಳ ಇದೇ ವಾಸುಕಿ ಕುಂಡ! ಇಂಥ ಪವಿತ್ರ ಸ್ಥಳದಲ್ಲಿ ಗೋಪಾಲಕೃಷ್ಣ ನೆಲೆನಿಂತ. ಕಣ್ವ ಮಹರ್ಷಿಗಳಿಂದಾಗಿ ʼಕಣ್ವಪುರʼ ಎಂಬ ಹೆಸರನ್ನು ಪಡೆದ ಊರು ಬಳಿಕ ʼಕಣಿಪುರʼ ಎಂದಾಯಿತು. ಹೀಗೆ ಮಹರ್ಷಿ ಕಣ್ವರಿಂದ ಪ್ರತಿಷ್ಠಾನೆಗೊಂಡ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿಕ ಹಲವು ರಾಜರ ಆಡಳಿತಕ್ಕೆ ಒಳಪಟ್ಟು 1600ರ ಬಳಿಕ ಮಾಯಿಪ್ಪಾಡಿ ಅರಸರ ಆಡಳಿತಕ್ಕೆ ಒಳಪಟ್ಟಿತು.

ಇದನ್ನೂ ಓದಿ: ದೇವರಿಲ್ಲದ ದೇವಾಲಯ... ಇಲ್ಲಿ ಅಖಂಡ ಭಾರತ ನಕ್ಷೆಯೇ ದೇವರು!

ಬ್ರಿಟಿಷರಿಗೂ ಜಗ್ಗದ ದೈವಶಕ್ತಿ

1800ರ ದಶಕದಲ್ಲಿ ಭಾರತ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಾಗ ಕೋಜಿ಼ಕ್ಕೋಡಿನಿಂದ ಮಂಗಳೂರಿಗೆ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಸರ್ವೆ ಮಾಡಿ ವರದಿಯನ್ನೂ ತಯಾರಿಸಿಯಾಗಿತ್ತು. ಇದರ ಪ್ರಕಾರ ರೈಲ್ವೇ ಮಾರ್ಗ ಈ ದೇವಸ್ಥಾನದ ಜಾಗದಲ್ಲೇ ಹಾದುಹೋಗುವುದು ಎನ್ನಲಾಗಿತ್ತು. ಈ ವರದಿ ಒಪ್ಪಿಗೆ ಪಡೆಯಲು ಮುಖ್ಯ ಅಭಿಯಂತರರ ಸಹಿ ಒಂದೇ ಬಾಕಿ ಉಳಿದಿತ್ತು . ಒಪ್ಪಿಗೆ ನೀಡಿ ಇನ್ನೇನು ಸಹಿ ಮಾಡಲು ಹೊರಟಾಗ ಆ ಮುಖ್ಯ ಅಭಿಯಂತರರ ಎರಡು ಕಣ್ಣುಗಳೇ ನಷ್ಟಗೊಂಡು ತನ್ನ ಜೀವನವೇ ಹಾಳಾಗುವಂತೆ ಆಗಿ ಹೋಯಿತು ಎನ್ನಲಾಗಿದೆ. ಕೊನೆಗೆ ರೈಲ್ವೇ ಹಳಿ ಪ್ರಸ್ತಾವನೆಯನ್ನು ಮರುಪರಿಶೀಲಿಸಿದ ಬ್ರಿಟಿಷ್ ಸರಕಾರ ತನ್ನ ಪ್ರಸ್ತಾವನೆಯನ್ನು ತಿದ್ದಿ ದೇವಸ್ಥಾನದ ಸಮೀಪದ ಬದಲು ಈಗ ಇರುವ ಸ್ಥಳದ ಮೂಲಕ ಹಾದುಹೋಗುವಂತೆ ಪ್ರಸ್ತಾವನೆ ಮಾಡಿತು ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ರಾ.ಹೆ 66 ಪನ್ವೇಲ್-ತಿರುವನಂತಪುರ ರಸ್ತೆ ಅಗಲೀಕರಣದ ಕೆಲಸಕ್ಕೆ ಪ್ರಸ್ತಾಪಿಸಿದಾಗ ಕಣಿಪುರ ದೇವಸ್ಥಾನದ ಕೊಡಿಮರದ ತನಕ ದೇವಸ್ಥಾನವನ್ನೇ ತೆಗೆಯಬೇಕಾಗುತ್ತದೆ ಎಂದು ಗೊತ್ತಾಯಿತು. ಆಗ ಹಿಂದಿನ ಪೇಜಾವರ ಸ್ವಾಮಿಗಳು ಸೇರಿದಂತೆ ಲಕ್ಷಾಂತರ ಜನರು ದೇವಸ್ಥಾನವನ್ನು ಉಳಿಸಲು ಪ್ರತಿಭಟನೆ ಮಾಡಿದರು. ಕೊನೆಗೆ ರಸ್ತೆಯನ್ನೇ ದೇವಸ್ಥಾನದ ಸ್ಥಳದ ಬದಲು ಹಿಂದೆ ಹಾದುಹೋಗುವಂತೆ ಮಾಡಲಾಯಿತು. ಇತ್ತೀಚೆಗೆ ನಡೆದ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸದ ಮೊದಲು ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ʼನಾನು ಇಲ್ಲಿಂದ ಏಳುವುದಿಲ್ಲ, ಸಾಧ್ಯವಿದ್ದವರು ನನ್ನನ್ನು ಎಬ್ಬಿಸಿಕೊಳ್ಳಿ!ʼ ಎಂದು ದೇವರ ತೀರ್ಮಾನ ಕಂಡು ಬಂತು ಎನ್ನಲಾಗಿದೆ. ಯಾರು ಎಷ್ಟೇ ಪ್ರಯತ್ನ ಮಾಡಿದರೂ ಅಲ್ಲಿಂದ ದೇವರನ್ನು ಸ್ಥಳಾಂತರಿಸಲು, ದೇವಸ್ಥಾನವನ್ನು ತೆರವು ಮಾಡಲು ಸಾಧ್ಯವಾಗಿಲ್ಲ. ಇದು ಕಣಿಪುರ ಶ್ರೀ ಗೋಪಾಲಕೃಷ್ಣನ ಮಹಿಮೆ!

Untitled design (20)

ಸತ್ಯ ಚಾವಡಿ ಮತ್ತು ಬಿಳಿ ಕುದುರೆ

ಇಲ್ಲಿಯ ಹಿರಿಯರು ಹೇಳುವ ಪ್ರಕಾರ ಹಿಂದಿನ ಕಾಲದಲ್ಲಿ ಮಧ್ಯರಾತ್ರಿಯ ವೇಳೆ ಬಿಳಿ ಕುದುರೆಯನ್ನು ಏರಿ ಕೃಷ್ಣ ದೇವರು ಕುಂಬಳೆ ಪೇಟೆಯನ್ನು ತಿರುಗಿದ್ದರು ಎನ್ನಲಾಗಿದೆ. ಇದರ ಅರ್ಥವೇನಂದರೆ ಸಾಕ್ಷಾತ್ ಕೃಷ್ಣನೇ ಇಲ್ಲಿದ್ದಾನೆ. ಮಾತ್ರವಲ್ಲದೆ ತನ್ನನ್ನು ಪೂಜಿಸುವ ಜನರ ಯೋಗಕ್ಷೇಮವನ್ನು, ತನ್ನ ಊರಿನ ಸ್ಥಿತಿಗತಿಯನ್ನು ನೋಡಲು ಸ್ವತಃ ಹೋಗಿ ನೋಡಿಬರುತ್ತಾನೆ ಎನ್ನುವುದು ನಂಬಿಕೆ. ಹೀಗಾಗಿ ಕಣಿಪುರದ ಗೋಪಾಲಕೃಷ್ಣ ಸಾಮಾನ್ಯನಲ್ಲ, ಅತ್ಯಂತ ಶಕ್ತಿಶಾಲಿ ದೇವರು ಎಂಬುದು ಇಲ್ಲಿಯವರ ನಂಬಿಕೆ. ಇಲ್ಲಿಯ ಜನರ ಹೇಳುವ ಹಾಗೆ ಕಣಿಪುರ ದೇವಸ್ಥಾನಕ್ಕೆ ಮತ್ತೊಂದು ಹೆಸರು ʼಸತ್ಯ ಚಾವಡಿ. ಏಕೆಂದರೆ ಅಲ್ಲಿ ಯಾರು ಸುಳ್ಳು ಹೇಳುವ ಹಾಗಿಲ್ಲ. ತುಳುನಾಡಿನ ದೇವಸ್ಥಾನಗಳ ಶಾಸ್ತ್ರದ ಪ್ರಕಾರ ಪ್ರತಿ 12 ವರ್ಷಗಳಿಗೊಮ್ಮೆ ಅಥವಾ 18 ವರ್ಷಕ್ಕೊಮ್ಮೆ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆಯುತ್ತದೆ. 1971 ಹಾಗೂ 1989ರಲ್ಲಿ ನಡೆದ ಅಭಿವೃದ್ಧಿ ಕಾರ್ಯ, ಬ್ರಹ್ಮಕಲಶೋತ್ಸದ ಬಳಿಕ ಬರೋಬ್ಬರಿ 36 ವರ್ಷಗಳ ಕಾಲ ಯಾವುದೇ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಆಗಲಿಲ್ಲ. ಎರಡು ವರ್ಷಗಳ ಹಿಂದೆ ದೇವರ ಪುನರ್‌ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶೋತ್ಸವ ನಡೆಯಿತು. ಇನ್ನು ಗೋಪಾಲಕೃಷ್ಣ ನೆಲೆನಿಂತ ಕಣಿಪುರ ಊರಿಗೆ ಮತ್ತೊಂದು ವಿಶೇಷತೆಯಿದೆ. ಅದುವೇ ಯಕ್ಷಗಾನ!

ಯಕ್ಷಗಾನದ ತವರು

ಪಾರ್ಥಿಸುಬ್ಬ, ಇವನ ಹೆಸರನ್ನು ಕೇಳದ ಯಕ್ಷಗಾನದ ಅಭಿಮಾನಿಗಳು ಯಾರು ಇದ್ದಾರೆ ಹೇಳಿ. ಪಾರ್ಥಿಸುಬ್ಬನನ್ನು ತೆಂಕುತಿಟ್ಟಿನ ಯಕ್ಷಗಾನದ ಪಿತಾಮಹ ಎಂದೇ ಗುರುತಿಸುತ್ತಾರೆ. ಕಣಿಪುರ ಗೋಪಾಲಕೃಷ್ಣ, ಮಧೂರು ಗಣಪತಿಯನ್ನು ಸ್ಮರಿಸಿ ಹಲವಾರು ಪದ್ಯಗಳನ್ನು, ಯಕ್ಷಗಾನದಲ್ಲಿ ಅನೇಕ ಪ್ರಸಂಗಗಳನ್ನು ರಚಿಸಿರುವ ಪಾರ್ಥಿಸುಬ್ಬನ ಊರೇ ಕಣಿಪುರ! ಹೀಗಾಗಿ ಕಣಿಪುರವನ್ನು ಯಕ್ಷಗಾನದ ತವರೂರು ಎಂದು ಗುರುತಿಸುತ್ತಾರೆ. ಯಕ್ಷಗಾನಕ್ಕೂ ಕಣಿಪುರಕ್ಕೂ ಅವಿನಾಭಾವ ಸಂಬಂಧವಿದೆ. ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಯಕ್ಷಗಾನ ಸೇವೆ ಪ್ರತಿ ವರ್ಷವೂ ನಡೆಯುತ್ತದೆ. ಇಲ್ಲಿನ ವಿಗ್ರಹವು ಉಡುಪಿ ಮತ್ತು ಗುರುವಾಯೂರಿನಂತೆಯೇ ಬಾಲಕೃಷ್ಣನ ರೂಪದಲ್ಲಿದೆ. ಒಂದು ಕೈಯಲ್ಲಿ ಬೆಣ್ಣೆ ಹಿಡಿದುಕೊಂಡು ನಿಂತಿರುವ ಮನಮೋಹಕ ವಿಗ್ರಹವಿದು. ಪ್ರತಿ ವರ್ಷ ಮಕರ ಸಂಕ್ರಮಣದ ದಿನದಿಂದ ಆರಂಭಗೊಂಡು ಐದು ದಿನಗಳ ಕಾಲ ವಾರ್ಷಿಕ ಜಾತ್ರೋತ್ಸವ ನಡೆಯುತ್ತದೆ. ದರ್ಶನ ಬಲಿ, ಬೆಡಿ, ಆರಾಟ್ ಸವಾರಿ ಇಲ್ಲಿಯ ಪ್ರಮುಖ ಉತ್ಸವಗಳು. ನಾಲ್ಕನೆಯ ದಿನ ನಡೆಯುವ ವೈಭವದ ʼಕುಂಬಳೆ ಬೆಡಿʼ (ಸಿಡಿಮದ್ದು ಪ್ರದರ್ಶನ) ಕರಾವಳಿಯಾದ್ಯಂತ ಪ್ರಸಿದ್ಧ.

ದಾರಿ ಹೇಗೆ?

ಮಂಗಳೂರಿನಿಂದ ಸುಮಾರು 39 ಕಿ.ಮೀ., ಕಾಸರಗೋಡಿನಿಂದ 15 ಕಿಮೀ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66ರ ಸಮೀಪವೇ ಇರುವುದರಿಂದ ಬಸ್ ಸೌಕರ್ಯವಿದೆ. ಕುಂಬಳೆ ರೈಲು ನಿಲ್ದಾಣವೂ ಹತ್ತಿರದಲ್ಲಿದೆ.

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ