ಬದುಕು ಬವಣೆ ತಿಳಿಸುವ ನರ್ಮದಾ ಪರಿಕ್ರಮ ಯಾತ್ರೆ
ಓಂಕಾರೇಶ್ವರ: ನರ್ಮದಾ ನದಿ ಇಲ್ಲಿ 'ಓಂ' ಆಕಾರದಲ್ಲಿ ಹರಿಯುತ್ತದೆ. ಇಲ್ಲಿನ ದ್ವೀಪದಲ್ಲಿ ಜ್ಯೋತಿರ್ಲಿಂಗವಿದೆ. ಇದು ಆದಿಶಂಕರರು ತಮ್ಮ ಗುರುಗಳಾದ ಗೋವಿಂದ ಭಗವತ್ಪಾದರನ್ನು ಭೇಟಿಯಾಗಿ ವೇದಾಂತದ ಸಾರವನ್ನು ಪಡೆದ ಪುಣ್ಯತಾಣ ಎಂದು ನಂಬಲಾಗಿದೆ. ಮಹೇಶ್ವರ: ಇದು ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ವೈರಾಗ್ಯ ಮತ್ತು ದಕ್ಷ ಆಡಳಿತಕ್ಕೆ ಸಾಕ್ಷಿಯಾದ ತಾಣ. ಇಲ್ಲಿನ ಕೆತ್ತನೆಗಳು ಮತ್ತು ವಿಶಾಲವಾದ ಘಾಟ್‌ಗಳು ಧಾರ್ಮಿಕ ನಂಬಿಕೆಗಳ ಜತೆಗೆ ಇತಿಹಾಸದ ಸಂಕೇತಗಳಾಗಿವೆ.
- ಶಿವರಾಜ್ ಎಸ್ ಸಣಮನಿ ಮುದಗುಣಕಿ
ನದಿಗಳು ತಮ್ಮ ಉಗಮಕ್ಕಷ್ಟೇ ಅಲ್ಲ ನಾಗರೀಕತೆಗಳ ಉಗಮಕ್ಕೂ ಆಧಾರ ಸ್ತಂಬಗಳು. ಅವು ಮನುಷ್ಯ ಮತ್ತು ನಾಗರೀಕತೆಗಳ ಹುಟ್ಟು-ಸಾವು, ಬದುಕು ಬವಣೆಗಳನ್ನು ಹತ್ತಿರದಿಂದ ಕಂಡವುಗಳು. ಅಂಥ ನದಿಗಳ ಸಾಲಿನಲ್ಲಿ ನರ್ಮದಾ ನದಿಗೆ ಒಂದು ವಿಶಿಷ್ಟ ಸ್ಥಾನವಿದೆ. ಮಾನವ ಬದುಕಿನ ಏರಿಳಿತಗಳನ್ನು ಅರ್ಥೈಸುವ ನೆಲೆಯಲ್ಲಿ ನರ್ಮದಾ ಪರಿಕ್ರಮ ಯಾತ್ರೆ ಇದಕ್ಕೊಂದು ವಿಶೇಷ ಆಚರಣೆ.
ಅಮರಕಂಟಕ ನರ್ಮದಾ ಉಗಮ ಕ್ಷೇತ್ರ
ಸಮುದ್ರ ಮಟ್ಟದಿಂದ ಸುಮಾರು 3500 ಅಡಿ ಎತ್ತರದ ಮೈಕಲ್ ಪರ್ವತ ಶ್ರೇಣಿಗಳಲ್ಲಿನ ಅಮರಕಂಟಕದಲ್ಲಿ ನರ್ಮದಾ ನದಿ ಪಯಣ ಆರಂಭವಾಗುತ್ತದೆ. ಅಲ್ಲಿನ ಸಾಲು ಮರಗಳ ದಟ್ಟ ಅರಣ್ಯದಲ್ಲಿ ಬೀಸುವ ಗಾಳಿಯ ಶಬ್ದ ಓಂಕಾರದಂತೆ ಕೇಳಿಸುತ್ತದೆ. ನರ್ಮದಾ ಪಶ್ಚಿಮಾಭಿಮುಖವಾಗಿ ಹರಿಯುವ ನದಿ.
ಇದನ್ನೂ ಓದಿ: ಅತ್ತ ನದಿ ಇತ್ತ ಶರಧಿ!
ಪರಿಕ್ರಮದ ದರ್ಶನ
ಜಗತ್ತಿನ ಆಧ್ಯಾತ್ಮಿಕ ಭೂಪಟದಲ್ಲಿ 'ನರ್ಮದಾ ಪರಿಕ್ರಮ'ಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ನದಿಯ ಮೂಲದಿಂದ ಸಮುದ್ರದವರೆಗೆ ಹೋಗಿ, ಅಲ್ಲಿಂದ ಮತ್ತೆ ನದಿಯ ಮೂಲ ಸ್ಥಾನಕ್ಕೆ ಮರಳುವ ಈ ಸುಮಾರು 3318 ಕಿಮೀ ಸುದೀರ್ಘ ಪಯಣವು ಜೀವನದ ಪೂರ್ಣತೆಯನ್ನು ಪ್ರತಿನಿಧಿಸುತ್ತದೆ. ನಾವು ಎಲ್ಲಿಂದ ಬಂದೆವೋ ಅಲ್ಲಿಗೇ ಮರಳಬೇಕು ಎನ್ನುವ ಸತ್ಯ ಇಲ್ಲಿ ಹೆಜ್ಜೆ ಹೆಜ್ಜೆಗೂ ಅನಾವರಣಗೊಳ್ಳುತ್ತದೆ.

ಈ ಯಾತ್ರೆಗೆ ಒಡ್ಡಿಕೊಳ್ಳುವವನು ಒಬ್ಬ ಸಾಮಾನ್ಯ ಮನುಷ್ಯನಾಗಿ ಹೋಗಿ, ಅಪ್ಪಟ ಮಣ್ಣಿನ ಮಗನಾಗಿ ಮರಳುತ್ತಾನೆ. ಈ ಯಾತ್ರೆಯ ನಿಯಮಗಳು ಕಠಿಣವಾಗಿವೆ. ಯಾತ್ರಿಕನು ನರ್ಮದೆಯನ್ನು ದಾಟುವಂತಿಲ್ಲ. ನದಿ ಇಲ್ಲಿ ಭೌತಿಕ ಗಡಿಯಲ್ಲ, ಅವಳು ಜೀವನದ ಮೂಲಸೆಲೆ. ಮಳೆಗಾಲದ ನಾಲ್ಕು ತಿಂಗಳುಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಈ ವ್ರತ ಸಾಗುತ್ತದೆ.
ಶಬ್ದಾತೀತ ಸಂವಹನ
ಪರಿಕ್ರಮದ ಹಾದಿಯಲ್ಲಿ ಭೇಟಿಯಾಗುವ ಪ್ರತಿಯೊಬ್ಬನೂ ʻನರ್ಮದೇ ಹರ್ʼ ಎಂದು ಉದ್ಗರಿಸುತ್ತಾನೆ. ಈ ಎರಡೇ ಪದಗಳಲ್ಲಿ ತಾತ್ವಿಕತೆ ಇದೆ. ಇದರಂತೆ ಎದುರಿಗಿರುವವನು ಅಪರಿಚಿತನಲ್ಲ, ಆತ ನರ್ಮದೆಯ ಒಂದು ಅಂಶ. ಬಡವ-ಬಲ್ಲಿದ, ಜಾತಿ-ಮತಗಳ ಗೋಡೆಗಳು ಇಲ್ಲಿ ಕರಗಿ ಹೋಗುತ್ತವೆ. ಮಧ್ಯಪ್ರದೇಶ ಮತ್ತು ಗುಜರಾತಿನ ಹಳ್ಳಿಗಳ ನಿವಾಸಿಗಳು ಪರಿಕ್ರಮವಾಸಿಗಳನ್ನು ಗೌರವಿಸುವ ರೀತಿ ಕಂಡಾಗ, ಮನುಷ್ಯತ್ವದ ನಿಜವಾದ ನೆಲೆ ಯಾವುದು ಎಂಬ ಪ್ರಶ್ನೆ ಕಾಡುತ್ತದೆ. ತಮಗೇ ಇಲ್ಲದಿದ್ದರೂ ಯಾತ್ರಿಕರಿಗೆ ಅನ್ನವಿಕ್ಕುವ ಆ ಹಳ್ಳಿಗರ ಕಣ್ಣುಗಳಲ್ಲಿ ನರ್ಮದೆಯ ಕಾರುಣ್ಯ ತುಳುಕುತ್ತಿರುತ್ತದೆ.
ಬದುಕಿನ ಏರಿಳಿತಗಳನ್ನು ಅರ್ಥೈಸುವ ನರ್ಮದಾ
ಭೇಡಾಘಾಟ್: ಜಬಲ್ಪುರದ ಬಳಿಯ ಅಮೃತಶಿಲೆಯ ಬಂಡೆಗಳ ನಡುವೆ ನರ್ಮದೆ ಸಮಾಧಿಸ್ಥಳಾದಂತೆ ಶಾಂತವಾಗಿ ಹರಿಯುತ್ತಾಳೆ. ಚಂದಿರನ ಬೆಳಕಿನಲ್ಲಿ ಈ ಕಣಿವೆಗಳು ಬೆಳ್ಳಿಯಂತೆ ಹೊಳೆಯುವಾಗ ಪ್ರಕೃತಿಯೇ ಒಂದು ದಿವ್ಯ ಕಾವ್ಯವಾಗುತ್ತದೆ.
ಧುಆಂಧಾರ್ ಜಲಪಾತ: ಇಲ್ಲಿ ನರ್ಮದಾ ರೌದ್ರರೂಪಿಣಿಯಾಗಿ ಧುಮುಕುತ್ತಾಳೆ. ಇದು ಬದುಕಿನ ಏರಿಳಿತಗಳಿಗೆ ರೂಪಕದಂತಿದೆ.

ಶೂಲಪಾಣೇಶ್ವರ
ಸಾತ್ಪುರ ಪರ್ವತದ ಈ ಭಾಗವು ಯಾತ್ರಿಕರ ಪಾಲಿಗೆ ದೈಹಿಕ ಮತ್ತು ಮಾನಸಿಕ ಸವಾಲು ಒಡ್ಡುತ್ತದೆ. ದಟ್ಟ ಅರಣ್ಯದ ನಡುವೆ ತನ್ನೊಳಗಿನ ಭಯವನ್ನು ಗೆದ್ದವನಿಗೇ ನರ್ಮದೆಯ ನಿಜವಾದ ಒಲುಮೆ ದಕ್ಕುತ್ತದೆ ಎಂಬುದು ಇಲ್ಲಿನ ನಂಬಿಕೆ.
ಘಾಟ್‌ಗಳಲ್ಲಿ ಅಧ್ಯಾತ್ಮದ ನೆರಳು
ಓಂಕಾರೇಶ್ವರ: ನದಿಯು ಇಲ್ಲಿ 'ಓಂ' ಆಕಾರದಲ್ಲಿ ಹರಿಯುತ್ತದೆ. ಇಲ್ಲಿನ ದ್ವೀಪದಲ್ಲಿ ಜ್ಯೋತಿರ್ಲಿಂಗವಿದೆ. ಇದು ಆದಿಶಂಕರರು ತಮ್ಮ ಗುರುಗಳಾದ ಗೋವಿಂದ ಭಗವತ್ಪಾದರನ್ನು ಭೇಟಿಯಾಗಿ ವೇದಾಂತದ ಸಾರವನ್ನು ಪಡೆದ ಪುಣ್ಯತಾಣ ಎಂದು ನಂಬಲಾಗಿದೆ.

ಮಹೇಶ್ವರ: ಇದು ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ವೈರಾಗ್ಯ ಮತ್ತು ದಕ್ಷ ಆಡಳಿತಕ್ಕೆ ಸಾಕ್ಷಿಯಾದ ತಾಣ. ಇಲ್ಲಿನ ಕೆತ್ತನೆಗಳು ಮತ್ತು ವಿಶಾಲವಾದ ಘಾಟ್‌ಗಳು ಧಾರ್ಮಿಕ ನಂಬಿಕೆಗಳ ಜತೆಗೆ ಇತಿಹಾಸದ ಸಂಕೇತಗಳಾಗಿವೆ.
ಪರಿಕ್ರಮದ ನಂತರದ ಪಲ್ಲಟ
ಯಾರು ನರ್ಮದಾ ಪರಿಕ್ರಮವನ್ನು ಯಶಸ್ವಿಯಾಗಿ ಮುಗಿಸಿ ಮತ್ತೆ ಅಮರಕಂಟಕಕ್ಕೆ ಮರಳುತ್ತಾರೋ, ಅವರಿಗೆ ಜಗತ್ತು ಮೊದಲಿನಂತೆ ಕಾಣುವುದಿಲ್ಲ. ಅವರ ಪಾದಗಳಲ್ಲಿ ಮಣ್ಣಿನ ಸತ್ವವಿರುತ್ತದೆ. ಅವರ ಮೌನದಲ್ಲಿ ನದಿಯ ಆಳವಿರುತ್ತದೆ. ನರ್ಮದೆಯು ಕೇವಲ ಒಂದು ನದಿಯಾಗಿ ಉಳಿಯದೆ, ಯಾತ್ರಿಕನ ಅಂತರಂಗದ ಭಾಗವಾಗಿ ಹೋಗುತ್ತಾಳೆ. ನರ್ಮದಾ ಯಾತ್ರೆ ಎಂಬುದು ನಕ್ಷೆಯ ಮೇಲಿನ ಗುರುತಲ್ಲ, ಅದು ನಮ್ಮ ಅಂತರಂಗದ ಭೂಪಟದಲ್ಲಿ ಮಾಡಬೇಕಾದ ಪಯಣ.