Tuesday, November 11, 2025
Tuesday, November 11, 2025

ಶರಾವತಿಯ ಮಡಿಲಲ್ಲಿ ಸಿಗಂದೂರು ದೇವಿ

ಸ್ಥಳ ಪುರಾಣದ ಪ್ರಕಾರ, ಮೊದಲಿಗೆ ಸಿಗಂದೂರು ಸಮೀಪದ ಗ್ರಾಮ ಶೀಗೆ ಕಣಿವೆಯಲ್ಲಿ 300 ವರ್ಷಗಳಷ್ಟು ಪುರಾತನ ಚೌಡೇಶ್ವರಿ ದೇವಾಲಯವಿತ್ತು. ಇದು ಇಂದಿಗೆ ಶರಾವತಿಯ ನೀರಿನಲ್ಲಿ ಮುಳುಗಡೆಯಾಗಿದೆ. ಅಂದಿನ ಟ್ರಸ್ಟಿ ಶೇಷಪ್ಪ ಮತ್ತು ಅರ್ಚಕರು ದುಗ್ಗಜ್ಜ ಎಂಬುವವರು ಇದನ್ನು ಕಟ್ಟಿಸಿದ್ದರು ಎನ್ನಲಾಗಿದೆ.

ಎಷ್ಟು ಸುತ್ತಿದರೂ ಸಿಗಂದೂರಿನಂಥ ಊರು ಮತ್ತೊಂದು ಸಿಗದು. ಇದು, ಹಿಂದೂ ಧಾರ್ಮಿಕ ಪವಿತ್ರಧಾಮ, ಹಸಿರಿನ ಜತೆಗೆ ನಿತ್ಯವೂ ಹರಿಯುವ ಶರಾವತಿ ನದಿಯ ಸಂಗಮ. ಇವೆಲ್ಲದಕ್ಕೂ ಕಳಶವಿಟ್ಟಂತೆ ಸಿಗಂದೂರಿನ ಸಿರಿವಂತೆ, ನವಶಕ್ತಿ ಪೀಠಗಳಲ್ಲಿ ಒಂದಾದ ಚೌಡೇಶ್ವರಿಯ ದೇವಸ್ಥಾನ.

ಈ ಶ್ರೀಚೌಡೇಶ್ವರಿ ದೇವಿಯು ಬನ ವಾಸಿ.. ಆದ್ದರಿಂದ ವನದೇವಿ ಎಂದೇ ಪೂಜಿಸಲ್ಪಡುತ್ತಿದ್ದಾಳೆ. ʻನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ’ ಕಾಣುವ ಈ ದೇವಿಯು ಮಂದಸ್ಮಿತಳಾಗಿದ್ದು, ನಾಡಿನ ಜನಮನಗಳಲ್ಲೂ ನೆಲೆಸಿದ್ದಾಳೆ. ಹಲವು ವಿಶ್ವ ಪಾರಂಪರಿಕ ತಾಣಗಳಿಗೆ ತಾಯಿಯಾದ ಶರಾವತಿಯು ಈ ತಾಣವನ್ನು ಅಗಾಧ ಪ್ರೇಮದಿಂದ ಅಪ್ಪಿಕೊಂಡಿದ್ದಾಳೆ. ಇವೆಲ್ಲದರ ಅನುಭವವಾಗಲು ನೀವು ಸಿಗಂದೂರಿಗೆ ಹೋಗಬೇಕು. ಪ್ರಕೃತಿ ಮಡಿಲಿನಲ್ಲಿನ ಪವಿತ್ರ ಮಾಣಿಕ್ಯದಂತೆ ಸಿಗಂದೂರು ನಿಮಗೆ ಭಾಸವಾಗುತ್ತದೆ.

ನಿತ್ಯಹರಿದ್ವರ್ಣ ವನದ ನಿತ್ಯೋತ್ಸವ

ಸಿಗಂದೂರು ಚೌಡೇಶ್ವರಿಯ ದೇವಾಲಯವು, ಸುತ್ತಲೂ ನಿತ್ಯ ಹಸಿರಿನ ಕಾಡು, ಪಶ್ಚಿಮ ಘಟ್ಟಗಳ ಸಾಲುಗಳಿಂದ ಸುತ್ತುವರಿದುಕೊಂಡಿದೆ. ಮಲೆನಾಡಿನ ಮಡಿಲಲ್ಲಿ ಇರುವ ತಾಣದ ವನಗಳ ಕುರಿತು ಕೇಳಬೇಕೆ? ಸುತ್ತಲೂ ಶರಾವತಿ, ಶರಾವತಿ ಮತ್ತದೇ ಶರಾವತಿ, ನಿತ್ಯ ಹರಿದ್ವರ್ಣದಿಂದ ತುಂಬಿ ಪ್ರಕೃತಿ ಪ್ರಿಯರಿಗೆ ಪ್ರೇಮಾಂಕುರವಾಗಿಸುವ ಅಗಾಧ ಶಕ್ತಿ ಅಲ್ಲಿ ಅಡಕವಾಗಿದೆ. ಅಲ್ಲಿರುವ ವನ-ತರು- ಲತೆಗಳೆಷ್ಟೋ, ಮೃಗ-ಖಗಗಳ ಪ್ರಭೇದಗಳು ಎಷ್ಟೋ? ಎಲ್ಲವೂ ಆನಂದದ ರಾಗವನ್ನು ಹಾಡುವ ನಾಡದು.

siganduru choudeshwari

ಶರಾವತಿಯೇ ಹಾಗೆ; ತಾನು ಸಾಗುವ ದಾರಿಯುದ್ದಕ್ಕೂ ಹಲವು ಜಲಾನಯನ, ವಿಶ್ವ ಪರಂಪರೆಯ ತಾಣ, ಜಾಗತಿಕ ಜೀವವೈವಿಧ್ಯದ ತಾಣ, ಹೀಗೆ ಹತ್ತು ಹಲವು ಅಪರೂಪಗಳನ್ನು ಹುಟ್ಟುಹಾಕಿದ್ದಾಳೆ. ಆದರೆ ಈ ಸಿಗಂದೂರು ಪ್ರದೇಶವನ್ನು ಅಪ್ಪಟ ಪ್ರೇಮದಿಂದ ಅಪ್ಪಿಕೊಂಡಿದ್ದಾಳೆ. ಇಲ್ಲಿಗೆ ಹೋಗುವವರು 10 ನಿಮಿಷವಾದರೂ ಈ ಶರಾವತಿಯ ನೀಲ ಜಲದ ಮೇಲೆ ಹಾದು ಹೋಗಲೇಬೇಕು. ಇನ್ನು ಇಲ್ಲಿನ ಕಾನನ ಮಳೆಗಾಲಕ್ಕುಂಟು ಬೇಸಗೆಗಿಲ್ಲ ಎನ್ನುವಂಥದ್ದಲ್ಲ. ಸದಾ ಹಸಿರಿನ ಸಾಂಗತ್ಯದಲ್ಲೇ ಇರುವಂಥದ್ದು. ಪಶ್ಚಿಮಘಟ್ಟಗಳ ಸಾಲು, ನಿತ್ಯ ಹರಿದ್ವರ್ಣದ ಕಾಡು, ಶಾಂತ/ಪ್ರಶಾಂತ ವಾತಾವರಣದ ನಾಡಾಗಿ ಹಸಿರಿನ ಅದ್ಭುತಗಳೊಂದಿಗೆ ಕಂಗೊಳಿಸುತ್ತಾ ತನ್ನಲ್ಲಿಗೆ ಬರುವವರು ಕಣ್ಣರಳಿಸಿ ನೋಡುವಂತೆ ಮಾಡುವ ತಾಣವದು.

ಸ್ಥಳ ಪುರಾಣ ಮತ್ತು ನಂಬಿಕೆ

ಸ್ಥಳ ಪುರಾಣದ ಪ್ರಕಾರ, ಮೊದಲಿಗೆ ಸಿಗಂದೂರು ಸಮೀಪದ ಗ್ರಾಮ ಶೀಗೆ ಕಣಿವೆಯಲ್ಲಿ 300 ವರ್ಷಗಳಷ್ಟು ಪುರಾತನ ಚೌಡೇಶ್ವರಿ ದೇವಾಲಯವಿತ್ತು. ಇದು ಇಂದಿಗೆ ಶರಾವತಿಯ ನೀರಿನಲ್ಲಿ ಮುಳುಗಡೆಯಾಗಿದೆ. ಅಂದಿನ ಟ್ರಸ್ಟಿ ಶೇಷಪ್ಪ ಮತ್ತು ಅರ್ಚಕರು ದುಗ್ಗಜ್ಜ ಎಂಬುವವರು ಇದನ್ನು ಕಟ್ಟಿಸಿದ್ದರು ಎನ್ನಲಾಗಿದೆ.

ದಟ್ಟ ಕಾನನದಲ್ಲಿ ಶೇಷಪ್ಪ ಅವರಿಗೆ ವನದೇವಿ ಚೌಡೇಶ್ವರಿಯ ವಿಗ್ರಹ ದೊರಕಿತ್ತು. ಮರುದಿನ ಕನಸಿನಲ್ಲಿ ಪ್ರತ್ಯಕ್ಷಳಾಗಿ ತನಗೆ ದೇವಾಲಯವನ್ನು ನಿರ್ಮಿಸುವಂತೆ ಆದೇಶ ನೀಡಿದ್ದಳಂತೆ. ಅದರಂತೆ ಅಂದು ಅಂದರೆ ಸುಮಾರು 300 ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಿಸಲಾಗಿತ್ತು ಎನ್ನಲಾಗಿದೆ. ಆದರೆ, ಲಿಂಗನಮಕ್ಕಿ ಜಲಾಶಯ ನಿರ್ಮಾಣದ ನಂತರ ಹಿನ್ನೀರಿನಲ್ಲಿ ಶೀಗೆ ಕಣಿವೆಯಲ್ಲಿದ್ದ ಪುರಾತನ ದೇವಾಲಯ ಮುಳುಗಡೆಯಾಗಿದೆ. ಅದರ ನಂತರ 1990ರಲ್ಲಿ ಧರ್ಮದರ್ಶಿಗಳಾದ ರಾಮಪ್ಪ ಅವರು ದೇವಿಯ ಹೇಳಿಕೆ ಪಡೆದು ದೇವಿ ಸಿಗಂದೂರಿನಲ್ಲಿ ಪುನಃ ಪ್ರತಿಷ್ಠಾಪನೆ ಮಾಡಿಸಿ ದೇವಾಲಯವನ್ನು ನಿರ್ಮಿಸಿದ್ದಾರೆ. ಅಂದಿನಿಂದ ಆಯಾ ಮನೆತನದವರು ಆಯಾ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ವನದೇವಿಯಾಗಿ ನೆಲೆ ನಿಂತಿರುವ ಸಿಗಂದೂರು ಚೌಡೇಶ್ವರಿ ದೇವಿಯನ್ನು ʻಕಳ್ಳರ ಭೀತಿ ನಿವಾರಕಿʼ, ʼನ್ಯಾಯದೇವತೆʼ ಎಂದೂ ನಂಬಲಾಗಿದೆ. ಆದ್ದರಿಂದಲೇ ನಾಡಿನ ಸಾಕಷ್ಟು ಅಂಗಡಿ-ಮುಂಗಟ್ಟು, ಮನೆಗಳು, ವಾಹನಗಳ ಮೇಲೆ ಸಿಗಂದೂರು ಚೌಡೇಶ್ವರಿಯ ರಕ್ಷೆ ಇದೆ ಎಂದು ಬರೆದ ಭಿತ್ತಿಚಿತ್ರಗಳನ್ನು ನೀವು ಕಾಣಬಹುದು.

ಕ್ಷೇತ್ರಪಾಲ ಭೂತರಾಯ

ಕರಾವಳಿ, ಮಲೆನಾಡುಗಳಲ್ಲಿ ದೈವಾರಾಧನೆ, ಭೂತಾರಾಧನೆ ಪದ್ದತಿಗಳು ಅಗಾಧ ಸಂಖ್ಯೆಯಲ್ಲಿವೆ. ಜನರಿಗೆ ಅವುಗಳ ಮೇಲೆ ಅಪಾರ ನಂಬಿಕೆ. ತಾವು ಉಳಿದಿರುವ ಕ್ಷೇತ್ರಗಳನ್ನು ರಕ್ಷಿಸಲು, ನ್ಯಾಯದಾನಗಳಿಗೆ ಈ ಕ್ಷೇತ್ರ ಪಾಲಕರನ್ನು ಹೆಚ್ಚಾಗಿ ಪೂಜಿಸುತ್ತಾರೆ. ಸಿಗಂದೂರಿನಲ್ಲಿರುವ ಕ್ಷೇತ್ರಪಾಲಕ ಭೂತರಾಯ. ಚೌಡೇಶ್ವರಿ ದೇವಾಲಯದ ಎಡ ಪಕ್ಕದಲ್ಲಿಯೇ ಈ ದೈವಸ್ಥಾನವಿದೆ. ಇಲ್ಲಿ ಒಂದು ಅರಳಿಮರದ ನೆರಳಲ್ಲಿ ಭೂತರಾಯರನ್ನು ಪೂಜಿಸಲಾಗುತ್ತದೆ. ಈ ದೈವಸ್ಥಾನಕ್ಕೆ ಯಾವ ಕಿಟಕಿ ಬಾಗಿಲುಗಳಿಲ್ಲ ಮುಕ್ತ ವಾತಾವರಣ ಮಾತ್ರ. ಜನರು ಇಲ್ಲಿ ತಮ್ಮ ಇಷ್ಟಕಾಮ್ಯಗಳನ್ನು ಚೀಟಿಗಳಲ್ಲಿ ಬರೆದು ಅಲ್ಲಿರುವ ತ್ರಿಶೂಲಗಳಿಗೆ ಕಟ್ಟುತ್ತಾರೆ. ಹೆಚ್ಚಾಗಿ ನ್ಯಾಯದಾನಕ್ಕೆ ಭಕ್ತರು ಹರಕೆ ಕಟ್ಟಿಕೊಳ್ಳುವ, ತೀರಿಸುವ ದೃಶ್ಯಗಳು ಇಲ್ಲಿ ದಿನವೂ ಕಾಣಬಹುದು. ಕೋರ್ಟ್‌ ಕಚೇರಿ ಅಲೆದಾಡಿದರೂ ಬಗೆಹರಿಯದ ಅದೆಷ್ಟೋ ಕಲಹಗಳು ಇಲ್ಲಿ ಹರಕೆ ಹೊತ್ತ ನಂತರ ಬಗೆಹರಿದ ಉದಾಹರಣೆಗಳಿವೆ. ಈ ಕುರಿತು ನೀವು ಅಲ್ಲಿಗೆ ಬರುವ ಭಕ್ತರನ್ನು ಕೇಳಿ ತಿಳಿಯಬಹುದು.

ವ್ಯವಸ್ಥೆಗಳು ಏನೇನಿದೆ?

ಇಲ್ಲಿಗೆ ಪ್ರತಿದಿನವೂ ಸುಮಾರು ಐದರಿಂದ ಆರು ಸಾವಿರ ಜನರು ಭೇಟಿ ನೀಡುತ್ತಾರೆ. ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟೂ ಹೆಚ್ಚುತ್ತದೆ. ಬಂದವರು ಭಕ್ತರಾದರೂ ಸರಿ, ಪ್ರವಾಸಿಯಾದರೂ ಸರಿ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಇದ್ದು, ಇದಕ್ಕಾಗಿ ದೇವಾಲಯದ ಹಿಂಭಾಗದಲ್ಲಿ ಬೃಹತ್‌ ಪ್ರಸಾದ ನಿಲಯವಿದೆ. ಇಲ್ಲಿ ಮೂರು ಹೊತ್ತು ಪ್ರಸಾದ ಸೇವೆ ಇದ್ದೇ ಇರುತ್ತದೆ.

ಉಳಿದುಕೊಳ್ಳಲು ವಸತಿ ಗೃಹಗಳು

ಇಲ್ಲಿರುವ ಶರಾವತಿ, ಶ್ರೀಮಾತಾ ವಸತಿಗೃಹಗಳಲ್ಲಿ ಬಂದ ಜನರಿಗೆ ವಸತಿ ವ್ಯವಸ್ಥೆ ಇದೆ. ಬಿಸಿನೀರಿನ ವ್ಯವಸ್ಥೆ, ಅಟ್ಯಾಚ್ಡ್‌ ಬಾತ್‌ರೂಮ್‌ನೊಂದಿಗೆ ಶುಭ್ರ ಕೊಠಡಿಗಳು ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟಿವೆ. ಶುಭ ಸಮಾರಂಭಗಳನ್ನು ಆಚರಿಸಲು ಇಲ್ಲಿ ಅಂದರೆ ಪ್ರಸಾದ ನಿಲಯಕ್ಕೆ ಹೊರಡುವ ಮಾರ್ಗ ಮಧ್ಯದಲ್ಲಿಯೇ ಚೌಡೇಶ್ವರಿ ಕಲ್ಯಾಣ ಮಂಟಪವಿದೆ. ಇಲ್ಲಿಯೂ ಜನರು ವಿಶ್ರಾಂತಿ ಪಡೆದುಕೊಳ್ಳಬಹುದು. ಮಹಿಳೆಯರಿಗೆ ಪ್ರತ್ಯೇಕ ಶೌಚ ಗೃಹಗಳೂ ಇವೆ.

siganduru choudeshwari  3

ದಾರಿಹೇಗೆ?

ಇಷ್ಟು ಪವಿತ್ರವಾಗಿರುವ ಹಾಗೂ ಮಹಿಮೆಯುಳ್ಳ ಈ ಕ್ಷೇತ್ರಕ್ಕೆ ನೀವು ಹೋಗಲು ಬಯಸಿದರೆ, ಬೆಂಗಳೂರಿನಿಂದ ನೇರವಾಗಿ ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಆನ್‌ಲೈನ್‌ ಮೂಲಕ ಆಸನ ಕಾಯ್ದಿರಿಸುವುದು ಉತ್ತಮ. ಉಳಿದಂತೆ ಶಿವಮೊಗ್ಗ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಸಾಗರ ಹತ್ತಿರದ ರೈಲು ನಿಲ್ದಾಣವಾಗಿದೆ. ಸಾಗರದಿಂದಲೂ ಸಾರಿಗೆ ವ್ಯವಸ್ಥೆ ಸಾಕಷ್ಟಿದೆ. ಅರ್ಧ ಗಂಟೆಯ ಹಾದಿ ಸವೆಸಿ ಸಿಗಂದೂರು ಸೇರಬಹುದು.

ವಸ್ತ್ರ ಸಂಹಿತೆ

ದೇವಾಲಯದ ಒಳಗೆ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು ಸ್ತ್ರೀ – ಪುರುಷರಿಬ್ಬರೂ ಮೈತುಂಬಾ ಬಟ್ಟೆಯನ್ನು ಧರಿಸಿ ಬರುವುದು ಕಡ್ಡಾಯವಾಗಿದೆ. ಪ್ಲಾಸ್ಟಿಕ್‌ ಅಥವಾ ಇತ್ಯಾದಿ ಕಸಗಳನ್ನು ದೇವಾಲಯದ ಆವರಣದಲ್ಲಿ ಎಸೆಯುವುದನ್ನು ನಿಷೇಧಿಸಲಾಗಿದೆ.

ಸೇವಾ ವಿವರ

ಇಲ್ಲಿ ಭಕ್ತಾದಿಗಳು ಪ್ರಸಾದ ಸೇವೆ, ಹಣ್ಣುಕಾಯಿ, ತೀರ್ಥ ಪ್ರಸಾದ, ಅರ್ಚನೆ, ಮಂಗಳಾರತಿ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ ಪೂಜೆ, ಮಹಾಭಿಷೇಕ ಪೂಜೆ, ಸರ್ವಸೇವೆ ಹೀಗೆ ಹಲವು ಸೇವೆಗಳನ್ನು ಮಾಡಿಸಬಹುದಾಗಿದ್ದು, ಎಲ್ಲದಕ್ಕೂ ಆಡಳಿತ ಮಂಡಳಿಯಿಂದ ರಶೀದಿ ಪಡೆಯಬಹುದು.

ಪೂಜಾ ಸಮಯ

ಬೆಳಗಿನ ಜಾವ 2-30 ರಿಂದ 4-30ರವರೆಗೆ

ಬೆಳಗ್ಗೆ 7-30 ರಿಂದ ಮಧ್ಯಾಹ್ನ 2-30ರವರೆಗೆ

ಸಂಜೆ ಏಳು ಗಂಟೆಗೆ ಮಂಗಳಾರತಿ

ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ರಾತ್ರಿ 12-30ರಿಂದ ಬೆಳಗಿನ ಜಾವ 4-30ರವರೆಗೆ ವಿಶೇಷ ಪೂಜೆಗಳಿರುತ್ತವೆ.

ಕುಲದೇವತೆಯಾಗಿದ್ದರಿಂದ ದೇವಾಲಯವನ್ನು ಪುನಃ ಪ್ರತಿಷ್ಠಾಪಿಸಿ, ಆಡಳಿತವನ್ನು ನಡೆಸಿಕೊಂಡು ಬಂದಿದ್ದೇನೆ. ಈಗ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಕಾರಣ ಭಕ್ತರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಕಾರಣಕ್ಕೆ ಶರಾವತಿ ನದಿಗೆ ಸೇತುವೆ ನಿರ್ಮಾಣವಾಗಿದೆ. ರಸ್ತೆಗಳು ನಿರ್ಮಾಣವಾಗಿವೆ. ತ್ರಿಕಾಲ ಪ್ರಸಾದ, ವಸತಿ ಎಲ್ಲಾ ಮೂಲ ಸೌಕರ್ಯಗಳನ್ನು ವ್ಯವಸ್ಥಿತಗೊಳಿಸಲಾಗಿದೆ. ದೇವಾಲಯದ ವತಿಯಿಂದ ಸುತ್ತಮುತ್ತಲಿನ ಶಾಲೆಗಳಿಗೆ, ದೇವಾಲಯಗಳಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಗೋಶಾಲೆಯೂ ಇದ್ದು, 50-60 ಗೋವುಗಳಿವೆ. ಈ ದೇವಾಲಯದ ಆಡಳಿತ ಮಂಡಳಿ ಎಲ್ಲವನ್ನೂ ಸುವ್ಯವಸ್ಥಿತವಾಗಿ ಮಾಡುತ್ತಿದೆ. ಪ್ರವಾಸ ಪ್ರೇಮಿಗಳಿಗೆ ಈ ಕ್ಷೇತ್ರ ಕೇಂದ್ರ ಸ್ಥಳವಾಗಿದ್ದು, ಜೋಗ ಜಲಪಾತ, ಮುರುಡೇಶ್ವರ, ಗೋಕರ್ಣ, ಕೊಲ್ಲೂರು ಹೀಗೆ ಹಲವು ತಾಣಗಳನ್ನೂ ಕಂಡು ಹೋಗಬಹುದು.
ರಾಮಪ್ಪ ಎಸ್‌. ದೇವಾಲಯದ ಧರ್ಮದರ್ಶಿಗಳು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಈ ಚೌಡೇಶ್ವರಿ ದೇವಾಲಯವೂ ಒಂದು. ಇದೊಂದು ವನದೇವತೆ. ಮೂಲ ದೇವಾಲಯ ಶರಾವತಿಯಲ್ಲಿ ಮುಳುಗಡೆಯಾಗಿದೆ. 1990ರಲ್ಲಿ ಈ ದೇವಾಲಯದಲ್ಲಿ ದೇವಿಯನ್ನು ಪುನಃ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿದಿನ ಇಲ್ಲಿಗೆ ಸಾವಿರಾರು ಭಕ್ತರು ಬೇಟಿ ನೀಡುತ್ತಿದ್ದಾರೆ. ಇಲ್ಲಿ ಶರಾವತಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೇರಿ ಸೇತುವೆ ನಿರ್ಮಾಣ ಮಾಡಿದ್ದು, ಅರವತ್ತು ವರ್ಷಗಳ ಕನಸು ನನಸಾದಂತಾಗಿದೆ. ಸಾರಿಗೆ ವ್ಯವಸ್ಥೆಯೂ ಸುಧಾರಿಸಿದೆ. ಇಲ್ಲಿಗೆ ಬರುವ ಎಲ್ಲಿರಿಗೂ ಪ್ರಸಾದ, ವಸತಿ, ಶೌಚಾಲಯದಂಥ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.
ರವಿಕುಮಾರ್‌, ದೇವಾಲಯದ ಕಾರ್ಯದರ್ಶಿಗಳು

ಕುಟುಂಬ ಸಮೇತ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಬಂದಿದ್ದೇನೆ. ಶಿವಮೊಗ್ಗಕ್ಕೆ ಬಂದಾಗಲೆಲ್ಲ ಈ ದೇವಾಯಕ್ಕೆ ಭೇಟಿ ನೀಡುತ್ತೇನೆ. ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ದೇವಿಯನ್ನು ಪ್ರಾರ್ಥಿಸಲು ಬಂದೇ ಬರುತ್ತೇನೆ. ಇಲ್ಲಿ ಎಲ್ಲ ಮೂಲಸೌಕರ್ಯಗಳನ್ನು ಆಡಳಿತ ಮಂಡಳಿ ತುಂಬಾ ಚೆನ್ನಾಗಿ ನಿರ್ವಹಿಸುತ್ತಿದೆ.
ಧನರಾಜ್‌ , ಬಿಗ್‌ಬಾಸ್‌ ಸ್ಪರ್ಧಿ
Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ