ಕಲಬುರಗಿ: ಧಾರ್ಮಿಕ ಪ್ರವಾಸವನ್ನು ಕೈಗೊಳ್ಳಬೇಕೆನ್ನುವುದು ಅನೇಕ ಹಿರಿಯರ ಆಗ್ರಹ. ಆದರೆ ಸಾವಿರಾರು ಕಿಮೀ ಕಾಲ್ನಡಿಯ ಮೂಲಕ ತೆರಳಿ ದೇವರ ದರ್ಶನವನ್ನು ಪಡೆಯುವುದೆಂದರೆ ಅದು ಸುಲಭದ ಮಾತಲ್ಲ. ಹೌದು, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಿ ಗ್ರಾಮದ ನಿವಾಸಿಗಳಾದ ಮಡಿವಾಳಪ್ಪಗೌಡ ಪಾಟೀಲ್, ಮಲ್ಲಣ್ಣ ನಾಗನೂರ, ಕಲ್ಯಾಣಿ ಕುರನಳ್ಳಿ, ಶರಣು ಹೊಸಮನಿ, ಮಹಾದೇವ ಪೂಜಾರಿ ಎಂಬವರು ಇಂತಹ ಸಾಹಸವನ್ನು ಮಾಡಿದ್ದಾರೆ.

Kedarnath_Temple_in_Rainy_season

ಕಳೆದ ಮಾರ್ಚ್ 3ರಂದು ಕಲಬುರಗಿಯಿಂದ 2500 ಕಿಮೀ ಪಾದಯಾತ್ರೆ ಕೈಗೊಳ್ಳುವ ಮೂಲಕ ಇವರು ಉತ್ತರಾಖಂಡ್ ರಾಜ್ಯದ ಹಿಮಾಲಯದಲ್ಲಿರುವ ಕೇದಾರನಾಥನ ದರ್ಶನವನ್ನು ಮಾಡಿದ್ದಾರೆ.

ಕಲಬುರಗಿಯ ವಸ್ತಾರಿ ಗ್ರಾಮದಿಂದ ಪಾದಯಾತ್ರೆ ಪ್ರಾರಂಭಿಸಿದ ಅವರು, ಹಿಪ್ಪರಗಿ, ಜೇರಟಗಿ, ಅಫಜಲಪುರ, ದುಧನಿ, ಅಕ್ಕಲಕೋಟ್, ಸೋಲಾಪುರ, ಬೀಡ್ ಮಾರ್ಗದಿಂದ ಔರಂಗಾಬಾದ್‌ನಿಂದ ತೃಷೇಶ್ವರ, ಮಧ್ಯಪ್ರದೇಶದ ಓಂಕಾರೇಶ್ವರ ದರ್ಶನ ಪಡೆದು, ಉಜ್ಜಯಿನಿ ಮಹಾ ಕಾಳೇಶ್ವರನ ದರ್ಶನ ಪಡೆದಿದ್ದಾರೆ. ಮಧ್ಯಪ್ರದೇಶದ ಕಾಲ ಭೈರವನ ದರ್ಶನ ಪಡೆದು ಉತ್ತರಪ್ರದೇಶದ ಮಥುರಾ ಶ್ರೀ ಕೃಷ್ಣನ ದರ್ಶನ ಪಡೆದು ದೆಹಲಿಯಿಂದ ಹರಿದ್ವಾರ, ಹೃಷಿಕೇಶ ತಲುಪಿ ಕೇದಾರನಾಥ ದರ್ಶನ ಪಡೆದಿದ್ದಾರೆ.

ಇಷ್ಟಕ್ಕೇ ಕಾಲ್ನಡಿಗೆಯನ್ನು ನಿಲ್ಲಿಸದೆ ಈ ಹಿರಿಯರು, ಕೇದಾರದಿಂದ ಸುಮಾರು 220 ಕಿಮೀ ದೂರದಲ್ಲಿರುವ ಬದ್ರಿನಾಥನ ದರ್ಶನವನ್ನೂ ಮಾಡಲಿದ್ದಾರಂತೆ. ಬದ್ರಿನಾಥನ ದರ್ಶನ ನಂತರವಷ್ಟೇ ತಮ್ಮ ಊರಿಗೆ ಮರಳುವುದಾಗಿ ಹಿರಿಯ ಯಾತ್ರಿಕರು ತಿಳಿಸಿದ್ದಾರೆ.