Saturday, October 17, 2026
Saturday, October 17, 2026

ಗಂಗೆಯಂತೆ ಪಾಪ ತೊಳೆವ ಗಂಗಾವತಿಯ ಶ್ರೀ ಉಚ್ಛಾಂಜನೇಯ ಸ್ವಾಮಿ

ಕೋಟೆಯೊಳಗೆ ಎತ್ತರವಾಗಿ ನಿಂತು ಭಕ್ತರ ಮೊರೆಯನ್ನು ಆಲಿಸುವ ಆಂಜನೇಯ… ತಪ್ಪುಗಳನ್ನು ಪರಿಹರಿಸಿ, ಕಷ್ಟಗಳನ್ನು ಕಳೆಯುವ ಕರುಣಾಮೂರ್ತಿಯೇ ಗಂಗಾವತಿಯ ಶ್ರೀ ಕೋಟೆ ಉಚ್ಛಾಂಜನೇಯ ಸ್ವಾಮಿ.

  • ವಿ. ಮಲ್ಲಿಕಾರ್ಜುನ ಜೋಷಿ, ಶಹಪುರ

ಹರಿದಾಸರು ʼತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೇ ನೀನು?' ಎಂದು ಶ್ರೀಹರಿಯನ್ನು ಪ್ರಶ್ನಿಸಿದ್ದಾರೆ. ಶ್ರೀರಾಮನ ಬಂಟನಾಗಿರುವ ಶ್ರೀ ಹನುಮಂತ ದೇವರು ತನ್ನನ್ನು ನಂಬಿರುವ ಭಕ್ತರ ತಪ್ಪುಗಳನ್ನು ಪರಿಹರಿಸಿ ಪಾರಮಾರ್ಥ ಜೀವನ ಕರುಣಿಸುತ್ತಾನೆ ಎನ್ನುವ ನಂಬಿಕೆ ಹಂಪಿ- ಕಿಷ್ಕಿಂದೆಯ ಪರಿಸರದಲ್ಲಿರುವ ಭಕ್ತರಲ್ಲಿದೆ. ಹೀಗಾಗಿ ಯುನೆಸ್ಕೋ ಪಟ್ಟಿಯಲ್ಲಿ ಸೇರಿರುವ ಹಂಪಿಯ ಪರಿಸರದುದ್ದಕ್ಕೂ ಹನುಮಂತನ ಯಥೇಚ್ಛ ಪ್ರತಿಮೆಗಳು, ಮೂರ್ತಿಗಳು, ದೇವಾಲಯಗಳು ಇರುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಗಂಗಾವತಿಯ ಶ್ರೀ ಕೋಟೆ ಆಂಜನೇಯ ಸ್ವಾಮಿಯೂ ಹೊರತಲ್ಲ. ಈ ಸ್ವಾಮಿ ಆಳೆತ್ತರದಲ್ಲಿ ನೆಲೆ ನಿಂತಿರುವುದರಿಂದ ಶ್ರೀ ಉಚ್ಛಾಂಜನೇಯ ಸ್ವಾಮಿ ಎಂದು ಭಕ್ತರು ಕರೆಯುವುದು ವಾಡಿಕೆ. ಅದು ಇತ್ತೀಚಿನ ದಿನಗಳಲ್ಲಿ ಹುಚ್ಚಾಂಜನೇಯ ಎಂದು ಕರೆಯುತ್ತಿರುವುದು ತಪ್ಪು ಕಲ್ಪನೆ. ಏನೇ ಇರಲಿ, ಇಲ್ಲಿನ ಆಂಜನೇಯನನ್ನು ಸ್ಮರಿಸಿ, ಪ್ರಾರ್ಥಿಸಿದರೆ ಕಷ್ಟವನ್ನು ನೀಗಿ ಸುಖ ಸೂರೆಗೊಳ್ಳುತ್ತಾನೆ. ಮಾಡಿದ ತಪ್ಪನ್ನು ಮನ್ನಿಸಿ ಭಕ್ತರನ್ನು ಭವದ ಕಡಲಿನಿಂದ ಮುಕ್ತಗೊಳಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಬೇರೂರಿದೆ.

ಇದನ್ನೂ ಓದಿ: ಬೆಟ್ಟದ ಮೇಲಿನ ಎರಡು ಮಲ್ಲೇಶ್ವರ ದೇಗುಲಗಳು

ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ

ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯನ ಕಾಲದಲ್ಲಿದ್ದ ರಾಜಗುರು ಶ್ರೀ ವ್ಯಾಸರಾಯ ಪ್ರತಿಷ್ಠಾಪಿತ 732 ಶ್ರೀ ಪ್ರಾಣದೇವರಲ್ಲಿ ಈ ಕೋಟೆ ಶ್ರೀ ಆಂಜನೇಯನೂ ಒಬ್ಬ ಎನ್ನುವುದು ಹೆಮ್ಮೆಯ ಸಂಗತಿ. ಕಲ್ಲಿನಲ್ಲಿ ಒಡಮೂಡಿದರೇನಂತೆ? ಕರುಣೆ ತುಂಬಿದ ಕಡಲು ಈ ಉಚ್ಛಾಂಜನೇಯ ಸ್ವಾಮಿಯದ್ದು ಎನ್ನುತ್ತಾರೆ ಇಲ್ಲಿನ ಭಕ್ತರು. ಪಟ್ಟಣದ ಮಧ್ಯದಲ್ಲಿರುವ ಹಳೆಯ ಕೋಟೆ ಪ್ರದೇಶದಲ್ಲಿರುವುದರಿಂದ ಕೋಟೆ ಆಂಜನೇಯ ಅಂತಲೂ ಕರೆಯುತ್ತಾರೆ. ನಂಬಿಕೆಯ ಪ್ರಕಾರ, ಇಲ್ಲಿ ಒಂದು ಕೋಟಿ ಬಾರಿ ರಾಮನಾಮ ಜಪ ಮಾಡಿ ಪ್ರತಿಷ್ಠಾಪನೆ ಮಾಡಿದ್ದರಿಂದ ಕೋಟಿ ಆಂಜನೇಯ ಎಂದು ಕರೆಯುತ್ತಾರೆ.

ಜೀರ್ಣೋದ್ಧಾರ:

ಹನುಮಂತನ ಮೇಲಿನ ಅಪಾರ ಭಕ್ತಿಯಿಂದಾಗಿ ನಾಗೇಶ ಆಪ್ಟೆ ಎನ್ನುವವರು ಮಂದಿರವನ್ನು 1992-93ರ ಅವಧಿಯಲ್ಲಿ ಪುನರ್ ಪ್ರತಿಷ್ಠಾಪಿಸಿ ಜೀರ್ಣೋದ್ಧಾರಗೊಳಿಸಿದ್ದಾರೆ. ಪ್ರತಿ ಶನಿವಾರ 3500 ಅಧಿಕ ಭಕ್ತರು ಮಂದಿರಕ್ಕೆ ಬರುತ್ತಾರೆ. ಬೆಳ್ಳಿ ಕವಚ ಸೇವೆ, ರಥೋತ್ಸವ, ಪಾಲಕಿ, ತೊಟ್ಟಿಲು ಸೇವೆ ಇರುತ್ತದೆ. ವಿಶೇಷ ದಿನಗಳಲ್ಲಿ 10 ಸಾವಿರಕ್ಕೂ ಮಿಗಿಲು ಭಕ್ತಸಂದಣಿ ನೆರೆದಿರುತ್ತದೆ. ಈವೇಳೆ ನಿರಂತರ ಅನ್ನಸಂತರ್ಪಣೆ ಇರುತ್ತದೆ. ಪೌರ್ಣಿಮೆಯ ಪೂರ್ವದಲ್ಲಿ ಏಕಾದಶಿ ದಿನ ಕುಂಭ ಪೂಜೆ ಮಾಡಿ, ಮರುದಿನ ದ್ವಾದಶದಂದು ಗಣ ಹೋಮ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ನೆರವೇರಿಸಲಾಗುತ್ತದೆ. ಹುಣ್ಣಿಮೆ ದಿನ ಪವಮಾನ ಹೋಮ, ಜತೆಗೆ ಹನುಮ ಜಯಂತಿ ದಿನ 108 ಲೀಟರ್ ಕ್ಷೀರಾಭಿಷೇಕ, ಪಂಚ ಕಜ್ಜಾಯ, ಫಲಹಾರ, ಪಂಚಭಕ್ಷ ಪರಮಾನ್ನಗಳ ಸೇವೆ ಇರುತ್ತದೆ. ಕೆಲ ಶತಮಾನಗಳ ಹಿಂದೆ ಈ ಉಚ್ಛಾಂಜನೇಯನಿಗೆ ಅನೇಕ ಸಂತರು, ಸಾಧುಗಳು ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ದ್ವಿಜೋತ್ತಮರೆನಿಸಿದ ಪುರೋಹಿತರು ಇಲ್ಲಿ ಪಾರಂಪರಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ.

Untitled design (78)

ಆಕರ್ಷಣ ಆಂಜನೇಯ:

ಇಲ್ಲಿನ ಶ್ರೀ ಉಚ್ಛಾಂಜನೇಯ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾನೆ. ಸುಂದರ ಮೈಕಟ್ಟು ಹೊಂದಿರುವ ದಷ್ಟಪುಷ್ಟನಾದ ಆಂಜನೇಯನಿಗೆ ಜುಟ್ಟು, ಅಭಯ ಹಸ್ತ, ಇಡೀ ದೇಹ ಆವರಿಸಿಕೊಂಡಿರುವ ಉದ್ದನೆಯ ಬಾಲ, ದುಷ್ಟ ದೈತ್ಯನ ವಧೆ ಮಾಡಿದ ಭಂಗಿಯಲ್ಲಿ ನಿಂತಿದ್ದಾನೆ. ಪರಂಪರೆಯಂತೆ ದಸರಾ ಸಮಯದಲ್ಲಿ ಮಂದಿರದಿಂದ ಪಲ್ಲಕ್ಕಿಯಲ್ಲಿ ಶ್ರೀ ಆಂಜನೇಯಸ್ವಾಮಿಯನ್ನು ಬನ್ನಿ ಮಹಾಂಕಾಳಿ ಕಟ್ಟೆಯವರೆಗೆ ಮೆರೆವಣಿಗೆಯಲ್ಲಿ ತೆರಳಿ, ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಮಂದಿರಕ್ಕೆ ಆಗಮಿಸಿದ ನಂತರ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ದೈಹಿಕ ಮತ್ತು ಮಾನಸಿಕ ವ್ಯಾಧಿಗಳಿರುವವರು ಈ ಸ್ವಾಮಿಯ ದರ್ಶನ, ಪೂಜೆ ಮಾಡಿದರೆ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.

ಪೂಜೋಪಾಚಾರಕ್ಕೆ ಜೋಷಿ ಪರಿವಾರ:

ವಿಪ್ರ ಸಮುದಾಯದ ಖ್ಯಾತ ವಿದ್ವಾಂಸರು, ಚಿಂತಕರು ಆದ ಅಳವಂಡಿಯ ಶ್ರೀಚಿದಂಬರ ಭಟ್ಟ ಜೋಷಿ ಇವರ ಪುತ್ರರಾದ ಲಿಂಗರಾಜ ಜೋಷಿ ಅವರು ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಶ್ರೀ ಕೋಟೆ ಆಂಜನೇಯ ಸ್ವಾಮಿಯ ಸೇವೆಯನ್ನು ಕಳೆದ 21 ವರ್ಷಗಳಿಂದ ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ಮತ್ತು ಜೋಷಿ ಪರಿವಾರದ ಪ್ರಸನ್ನ ಮತ್ತು ಸೀತಾರಾಮ್ ಇವರೊಂದಿಗೆ ಪ್ರತಿನಿತ್ಯ ದೇವಸ್ಥಾನದ ಸನಾತನ, ಆಗಮ ಪದ್ಧತಿಗಳನ್ವಯ ಶ್ರೀ ಉಚ್ಛಾಂಜನೇಯನ ಪೂಜೆ, ಅರ್ಚನೆ, ಅಭಿಷೇಕ, ದೀಪಾರತಿ ಮೊದಲಾದ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ದಸರಾ ಸಮಯದಲ್ಲಿ ಪಾಡ್ಯದ ದಿನ ಘಟ ಸ್ಥಾಪನೆ ಮಾಡಿ ವಿಜಯದಶಮಿಯವರೆಗೆ ವಿಶೇಷ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಗುತ್ತಿದೆ. ಪ್ರತಿನಿತ್ಯ ಅನ್ನಸಂತರ್ಪಣೆ, ಶ್ರೀ ವೆಂಕಟೇಶ ಮಹಾತ್ಮೆ ಪುರಾಣ ಪ್ರವಚನ, ದಾಸವಾಣಿ, ಸಂಗೀತ, ಸಾಂಸ್ಕೃತಿಕ ಹಾಗೂ ವಿವಿಧ ವಿಶೇಷ ಕಾರ್ಯಕ್ರಮಗಳು ಮಂದಿರದಲ್ಲಿ ಜರುಗುತ್ತವೆ.

ಚಿರಂಜೀವಿಯಾಗಿದ್ದಾನೆ:

ಹನುಮಂತ ದೇವರು ಸಪ್ತ ಚಿರಂಜೀವಿಗಳಲ್ಲಿ ಓರ್ವನಾದ್ದರಿಂದ ಕ್ಷಿಪ್ರ ಫಲದಾಯಕನಾಗಿದ್ದಾನೆಂದು ಭಕ್ತರ ನಂಬಿಕೆಯಾಗಿದೆ. ಪರಶುರಾಮ, ಬಲಿ ಚಕ್ರವರ್ತಿ, ವ್ಯಾಸ ಮಹರ್ಷಿ, ಕೃಪಾಚಾರ್ಯ, ಅಶ್ವತ್ಥಾಮ ಮತ್ತು ವಿಭೀಷಣರು ಈ ಸಪ್ತ ಚಿರಂಜೀವಿಗಳಲ್ಲಿ ಪ್ರಮುಖರು. ಪ್ರಾಣದೇವರು ಕೂಡ ಇವರೊಂದಿಗೆ ಪ್ರಖ್ಯಾತಿ ಪಡೆದಿದ್ದಾನೆ. ಇಂದಿಗೂ ನೈಮಿಷಾರಣ್ಯದಲ್ಲಿ ರಾಮಜಪ ಮಾಡುತ್ತ ಶಾಂತ ಚಿತ್ತನಾಗಿ ಕುಳಿತಿದ್ದಾನೆ. ಯಾವುದೇ ತಾಣದಿಂದ, ಯಾವುದೇ ಭಕ್ತರು ಅನನ್ಯ ಭಕ್ತಿಯಿಂದ ಆಂಜನೇಯನನ್ನು ಪ್ರಾರ್ಥಿಸಿದರೆ ಅವರ ಇಚ್ಛಿತ ಕಾಮನೆಗಳನ್ನು ಪೂರೈಸುತ್ತಾನೆ. ಸಕಾಲಕ್ಕೆ ಸಂರಕ್ಷಿಸುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಈ ಕಾರಣಕ್ಕಾಗಿ ಗಂಗಾವತಿಯ ಶ್ರೀ ಕೋಟೆ ಆಂಜನೇಯ ಪ್ರಚಲಿತ ಮತ್ತು ಕ್ಷಿಪ್ರ ಫಲಪ್ರದ ದೈವವಾಗಿದ್ದಾನೆ.

-

ವಿಶೇಷ ಮಾಹಿತಿ

ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಗಂಗಾವತಿ ಪ್ರಮುಖ ಪಟ್ಟಣವಾಗಿದ್ದು, ಕೋಟೆಯೊಳಗಿನ ಈ ದೇವಸ್ಥಾನವೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅಂಜನಾದ್ರಿ ಬೆಟ್ಟದ ಸಮೀಪದಲ್ಲಿರುವುದರಿಂದ ಕ್ಷೇತ್ರದ ಮಹತ್ವ ಮತ್ತಷ್ಟು ಹೆಚ್ಚಿದೆ. ದೇವಸ್ಥಾನವು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ. ಸುಮಾರು 8–9 ಅಡಿ ಎತ್ತರದ ನಿಂತ ಭಂಗಿಯ ಆಂಜನೇಯನಿಗೆ ಸಿಂಧೂರಾರ್ಚನೆ, ವಡೆಮಾಲೆ, ಬೆಣ್ಣೆ ಅಲಂಕಾರ, ಅಭಿಷೇಕ, ತುಪ್ಪದ ದೀಪಾರಾಧನೆ ಮತ್ತು ಮಹಾಮಂಗಳಾರತಿ ಸೇರಿದಂತೆ ವಿವಿಧ ಸೇವೆಗಳು ನಡೆಯುತ್ತವೆ. ಪ್ರತಿ ಶನಿವಾರ ವಿಶೇಷ ಪೂಜೆ ಹಾಗೂ ಬೆಳ್ಳಿ ಕವಚ ಧಾರಣೆ ನೆರವೇರುತ್ತದೆ.

-

ಶ್ರೀರಾಮನ ಪರಮಭಕ್ತನಾದ ಹನುಮಂತನ ಮಹತ್ವದ ವಿಶೇಷತೆಯೇ ಶ್ರೀರಾಮಭಕ್ತಿ. ಲಕ್ಷ್ಮಣನಿಗೆ ಚಿಕಿತ್ಸೆ ಅಗತ್ಯವಾದಾಗ ಸಂಜೀವಿನಿ ಔಷಧಿಯನ್ನು ತರಲು ಪರ್ವತವನ್ನೇ ಹೊತ್ತು ತಂದ ಧೀರ ವೀರ. ತನ್ನಲ್ಲಿ ಅಪಾರ ಶಕ್ತಿ ಇದ್ದರೂ, ಆ ಶಕ್ತಿಯ ಬಗ್ಗೆ ಅಹಂಕಾರ ಇರದ ವಿನೀತ. ಆತನ ಶಕ್ತಿ ಕೇವಲ ದೈಹಿಕ ಶಕ್ತಿಯಲ್ಲ. ಮನಸಿನ ಸ್ಥೈರ್ಯ, ಸಂಕಷ್ಟ ಎದುರಿಸುವ ಧೈರ್ಯ, ಗುರಿಯ ಮೇಲಿನ ಏಕಾಗ್ರತೆ ಮತ್ತು ಕರ್ತವ್ಯನಿಷ್ಠೆ ಆತನ ಅಂಶ.

- ಲಿಂಗರಾಜ ಚಿದಂಬರ ಭಟ್ಟ ಜೋಷಿ,

ಪ್ರಧಾನ ಅರ್ಚಕರು,

ಶ್ರೀ ಉಚ್ಛಾಂಜನೇಯ ಸ್ವಾಮಿ ದೇವಸ್ಥಾನ,

ಗಂಗಾವತಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ