- ಮಂಜುನಾಥ ಡಿ. ಎಸ್.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿರುವ ಸ್ವರ್ಣಮಯ ಶ್ರೀ ಆಶಾಪುರಾ ಮಾತಾ ಮಂದಿರ ಅತ್ಯಂತ ಸುಂದರವಾಗಿದೆ.

ಸಾವಿರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ದೇವಿಯ ಮೂಲ ದೇಗುಲ ಗುಜರಾತ್‌ನ ಭುಜ್ ನಗರದಿಂದ ಸುಮಾರು 80ಕಿಮೀ ದೂರದಲ್ಲಿದೆ ಎನ್ನಲಾಗಿದೆ. ದೇವಿಯನ್ನು ಕಚ್ ಪ್ರದೇಶದ ರಕ್ಷಕಿ ಎಂದು ನಂಬಲಾಗಿದೆ. ಕಚ್ ಪ್ರದೇಶದ ಜಡೇಜ ರಾಜಮನೆತನ ದೇವಿಯ ಅನುಗ್ರಹದಿಂದ ಯುದ್ಧಗಳನ್ನು ಗೆದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಅವರು ಈ ಮಾತೆಯನ್ನು ತಮ್ಮ ಕುಲದೇವತೆಯಾಗಿ ಸ್ವೀಕರಿಸಿ ಆರಾಧಿಸುತ್ತಿದ್ದಾರೆ. ಹಲವಾರು ಸಿಂಧಿ ಮಂದಿಗೂ ಆಶಾಪುರಾ ಮಾತೆಯು ಕುಲದೇವತೆಯಾಗಿದೆ.

ಕಾಲಾನುಕ್ರಮದಲ್ಲಿ ಆಶಾಪುರಾ ಮಾತೆಯ ಮಂದಿರಗಳು ಗುಜರಾತ್‌, ರಾಜಸ್ತಾನ, ಮಹಾರಾಷ್ಟ್ರಗಳಲ್ಲೂ ಕಾಣಬಹುದು. ಆದರೆ ಬೆಂಗಳೂರಿನ ಈ ದೇಗುಲವು ಕರ್ನಾಟಕದಲ್ಲಿ ಆಶಾಪುರಾ ಮಾತೆಯ ಮೊದಲ ಮಂದಿರವಾಗಿದೆ. ಶ್ರೀ ಆಶಾಪುರಾ ಮಾತಾ ಭಂಡಾರಿ ಜೈನ್ ಟ್ರಸ್ಟ್ 2012ರಲ್ಲಿ ಈ ದೇಗುಲದ ನಿರ್ಮಾಣ ಕಾರ್ಯ ಆರಂಭಿಸಿ, 2013ರ ಅಕ್ಟೋಬರ್‌ನಲ್ಲಿ ಲೋಕಾರ್ಪಣೆ ಕಂಡಿತು.

Swarnamaya asha mandir

ಆಕರ್ಷಕ ಗೋಪುರ, ಕಂಬ, ಕಮಾನು, ಕಲಾತ್ಮಕ ಚಿತ್ತಾರಗಳಿಂದ ಕೂಡಿರುವ ಈ ಆಲಯ ಕಣ್ಸೆಳೆಯುತ್ತದೆ. ಮಧ್ಯೆ ಇದರ ಗರ್ಭಗುಡಿಯಲ್ಲಿ ಅಮೃತಶಿಲೆಯ ದೇವಿಯ ವಿಗ್ರಹವಿದೆ. ದೇವಿ ಮೂರ್ತಿಯ ಇಕ್ಕೆಲಗಳಲ್ಲಿ ಲೋಹದ ಸಿಂಹಗಳಿವೆ. ಪ್ರಭಾವಳಿಯಲ್ಲಿ ದೇವಿಯ ಹಲವು ರೂಪಗಳನ್ನು ಕಾಣಬಹುದು. ಹೊರಾಂಗಣದಲ್ಲಿ ದುರ್ಗೆ, ಕಾಳಿಯ ವಿಗ್ರಹಗಳಿವೆ. ಕುಳಿತ ಭಂಗಿಯಲ್ಲಿರುವ ಕೇಸರಿಯ ವಿಗ್ರಹ ದೇವಿಯ ಎದುರಿಗಿದೆ. ಸಿಂಹದ ಹಿಂದಿರುವ ಗೋವಿನ ಪಾದದ ಬಳಿ ಪಾರಿವಾಳದ ವಿಗ್ರಹವಿದೆ.

ಈ ಆಲಯದಲ್ಲಿ ರಿದ್ಧಿ ಸಿದ್ಧಿ ವಿನಾಯಕ ಹಾಗೂ ಕ್ಷೇತ್ರಪಾಲ ಸೋನಾಣಾ ಖೇತಲಾಜಿ, ಹೊರಾಂಗಣದಲ್ಲಿ ಬೃಹದಾಕಾರದ ತ್ರಿಶೂಲವಿದೆ. ದೇಗುಲದ ನಡುವಿನ ಗುಮ್ಮಟದಲ್ಲಿ ಬಿಡಿಸಿರುವ ಚಿತ್ತಾರಗಳು ಮತ್ತು ನಾನಾ ಬಗೆಯ ವಾದ್ಯಗಳನ್ನು ನುಡಿಸುತ್ತಿರುವ ಸ್ತ್ರೀಯರ ಪುತ್ಥಳಿಗಳು ಗಮನಾರ್ಹವಾಗಿವೆ.

ವಸತಿ ಗೃಹ, ಸುಸಜ್ಜಿತ ಪಾಕಶಾಲೆ, ಭೋಜನಾಲಯ ಈ ಆಲಯದ ಆವರಣದಲ್ಲಿವೆ. ಬೆಳಗ್ಗೆ 7ರಿಂದ ಸಂಜೆ 8ರ ತನಕ ಈ ಆಲಯ ಭಕ್ತರ ದರ್ಶನಕ್ಕೆ ತೆರೆದಿರುತ್ತದೆ. ಬೆಳಗ್ಗೆ 8:30 ಮತ್ತು ಸಂಜೆ 6:30 ಆರತಿಯ ಸಮಯವಾಗಿರುತ್ತದೆ. ನವರಾತ್ರಿಯಲ್ಲಿ ದೇವಿಗೆ ವಿಶೇಷ ಪೂಜೆ ಆಯೋಜಿಸಲ್ಪಡುತ್ತದೆ.