ಕರುನಾಡಿನ ಪ್ರವಾಸೋದ್ಯಮಕ್ಕೆ ಹೊಸ ಸೇರ್ಪಡೆ
ದಕ್ಷಿಣ ಭಾರತದ ಅತಿ ದೊಡ್ಡ ಜೈನಧಾಮ ಕೊಡಗಿನ ಗುಂಡುಗುಟ್ಟಿ ಬಳಿ ಸಿದ್ಧಗೊಳ್ಳುತ್ತಿದೆ. ಈ ಜೈನಧಾಮ ಪರಿಪೂರ್ಣವಾದ ಬಳಿಕ ಇದು ಭಾರತದ ಪ್ರಮುಖ ಜೈನ ಪ್ರವಾಸಿ ತಾಣಗಳಲ್ಲಿ ಒಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
- ಅನಿಲ್ ಹೆಚ್.ಟಿ.
ಕುಶಾಲನಗರದ ಮೂಲಕ ಕೊಡಗು ಜಿಲ್ಲೆ ಪ್ರವೇಶಿಸಿ ಹೆದ್ದಾರಿಯಲ್ಲಿ ಸಾಗಿದರೆ ಸಿಗುವ ಊರೇ ಸುಂಟಿಕೊಪ್ಪ. ಇಲ್ಲಿನ ವೖತ್ತದ ಪಕ್ಕದಲ್ಲಿಯೇ ಸಾಗುವ ಪುಟ್ಟ ರಸ್ತೆಯಲ್ಲಿ 6 ಕಿಲೋಮೀಟರ್ ಸಾಗಿದರೆ ಗುಂಡುಗುಟ್ಟಿ ಎಂಬ ಗ್ರಾಮದ ಸರ್ಕಾರಿ ಶಾಲೆ ಬಲಬದಿಯಲ್ಲಿ ಕಾಣುತ್ತದೆ. ಗುಡ್ಡದ ಮೇಲಿನ ಈ ಶಾಲೆಯ ಮುಂದಿನ ಹಾದಿಯಲ್ಲಿ ಕಾಫಿ ತೋಟದ ಮಧ್ಯೆ ಸಾಗುವ ರಸ್ತೆಯಲ್ಲಿ 2 ಕಿ.ಮೀ ಸಾಗಿದರೆ ಅಲ್ಲೊಂದು ದೊಡ್ಡ ಕಮಾನು ಮತ್ತೊಂದು ಗೇಟು. ಅದನ್ನು ದಾಟಿಕೊಂಡು ಆವರಣಕ್ಕೆ ಕಾಲಿಟ್ಟರೆ ಜೈನಧರ್ಮದ ಬೖಹತ್ ಲೋಕದ ಸಿದ್ಧತೆ ಕಣ್ಣಿಗೆ ಬಿದ್ದು ಅಚ್ಚರಿ ಮೂಡಿಸುತ್ತದೆ.
ಹೌದು. ದಕ್ಷಿಣ ಭಾರತದ ಅತಿ ದೊಡ್ಡ ಜೈನಧಾಮ ಕೊಡಗಿನ ಗುಂಡುಗುಟ್ಟಿ ಬಳಿ ಸಿದ್ಧಗೊಳ್ಳುತ್ತಿದೆ. ಈ ಜೈನಧಾಮ ಪರಿಪೂರ್ಣವಾದ ಬಳಿಕ ಇದು ಭಾರತದ ಪ್ರಮುಖ ಜೈನ ಪ್ರವಾಸಿ ತಾಣಗಳಲ್ಲಿ ಒಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಶ್ರೀ ಜೀರಾವಾಲ ಧಾಮ ಎಂಬ ಹೆಸರಿನ ಫಲಕದ ಬದಿಯಲ್ಲಿ ಸಾಗಿದರೆ ಅಲ್ಲಿಯೇ ಜೈನರಿಗೆ ಅತ್ಯಂತ ಪ್ರಮುಖರಾದ ಜೀನಾವಾಲರ ಆಲಯ ಕಂಡುಬರುತ್ತದೆ. ಪ್ರಾರಂಭದಲ್ಲಿ 108 ಕೈಗಳನ್ನು ಹೊಂದಿರುವ ಶ್ರೀ ಪದ್ಮಾವತಿ ದೇವಿಯ ಭವ್ಯವಾದ ಕಪ್ಪುಶಿಲೆಯ ವಿಗ್ರಹ ಇದೆ. ಇಲ್ಲಿ ಪೂಜೆ ಸಲ್ಲಿಸಿ ಪಕ್ಕದಲ್ಲಿನ ಪುಟ್ಟ ದ್ವಾರದ ಮೂಲಕ ಒಳನುಗ್ಗಿದರೆ ಬಿಳಿಶಿಲೆಯಲ್ಲಿ ರೂಪುಗೊಂಡಿರುವ ಭಗವಾನ್ ಬುದ್ಧನ ಪ್ರತಿಮೆ ಕಾಣಸಿಗುತ್ತದೆ. ಇಲ್ಲೆಲ್ಲೂ ಮಾತನಾಡುವಂತಿಲ್ಲ. ಮೌನಕ್ಕೆ ಆದ್ಯತೆ, ಮೌನದಿಂದಲೇ ಭಗವಾನ್ ನನ್ನು ಧ್ಯಾನಿಸಬೇಕು ಎಂಬ ನಿಯಮ ಇಲ್ಲಿ ಇದೆ.

ಇಲ್ಲಿಂದ ಹೊರಬಂದು ಮೇಲಕ್ಕೆ ಗುಡ್ಡ ಏರುತ್ತಾ ಸಾಗಿದರೆ, ಅಲ್ಲಲ್ಲಿ ನಿಸರ್ಗದತ್ತವಾಗಿರುವ ಬೖಹತ್ ಕಲ್ಲುಗಳನ್ನೇ ಆಧಾರವಾಗಿ ಬಳಸಿ ಅದರ ಮೇಲೆ ಯಾತ್ರಿನಿವಾಸ, ಸ್ವಾಗತಕೊಠಡಿಗಳನ್ನು ನಿರ್ಮಿಸಲಾಗಿರುವುದನ್ನು ಕಾಣಬಹುದು. ಇಲ್ಲಿಗೆ ಬರುವ ಯಾತ್ರಿಕರಿಗಾಗಿ ಈಗಾಗಲೇ 12 ಕಾಟೇಜ್ ಗಳು ಸಿದ್ಧಗೊಂಡಿದೆ. ಕಾಫಿ ತೋಟಗಳ ನಡುವಿನ ವಿಶಾಲ ಪ್ರದೇಶದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಹಂತದಲ್ಲಿರುವುದು ಗೋಚರಿಸುತ್ತದೆ. ಈ ಕಟ್ಟಡದ ಸುತ್ತಲೂ ಅನೇಕ ಶಿಲ್ಪಿಗಳು ತನ್ಮಯರಾಗಿ ಕುಸುರಿ ಕೆಲಸದ ಮೂಲಕ ಶಿಲಾಕೆತ್ತನೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಮರಗಳ ಕೆಳಗಡೆ ಬಿಳಿ ಶಿಲೆ ಕೆತ್ತನೆಯಲ್ಲಿ ತನ್ಮಯವಾಗಿರುವ ಶಿಲ್ಪಿಗಳು, ಹಸಿರ ಸಿರಿಯ ನಡುವೆ ರೂಪುಗೊಳ್ಳುತ್ತಿರುವ ವೈಶಿಷ್ಟಪೂರ್ಣ ಶಿಲಾಕೖತಿಗಳನ್ನು ಹೊಂದಿರುವ ಆಲಯ, ಅಲ್ಲಲ್ಲಿ ಕಂಡುಬರುವ ಅಮೂಲ್ಯ ಕಲ್ಲುಗಳು , ಭವ್ಯ ಕುಸುರಿ ಕೆತ್ತನೆಗಳು... ದೇವಾನುದೇವತೆಗಳ ಸುಂದರ ಶಿಲ್ಪಗಳು.. ಈ ಕುಸುರಿ ಕೆಲಸದಲ್ಲಿ ಈಗಾಗಲೇ ಶಿಲ್ಪಿಗಳು ಭರದಿಂದ ತೊಡಗಿಸಿಕೊಂಡಿದ್ದಾರೆ.
ಇವರನ್ನು ದಾಟಿಕೊಂಡು ಮುಂದೆ ಸಾಗಿದಂತೆ, ಅಲ್ಲಿ ಕಂಡುಬರುವುದೇ ಅತ್ಯದ್ಭುತವಾಗಿ ನಿರ್ಮಾಣವಾಗುತ್ತಿರುವ ಶ್ರೀ ಜೀರಾವಾಲ ಪಾರ್ಶ್ವನಾಥ ಅವರ ದೇವಾಲಯ.
ಪದ್ಮಾಸನ ಭಂಗಿಯಲ್ಲಿರುವ ಶ್ರೀ ಜೀರಾವಾಲ ಪಾರ್ಶ್ವನಾಥ ಮೂರ್ತಿ,ಶ್ವೇತಾಂಬರರಾದ ಶ್ರೀ ಜೀರಾವಾಲರ ವಿಗ್ರಹಗಳು ಇಲ್ಲಿನ ವಿಶೇಷ. ಬೆಂಗಳೂರಿನ ಶ್ರೀ ಓಂ ಶಾಂತಿ ಚಾರಿಟೆಬಲ್ ಟ್ರಸ್ಟ್ ನ ನಯಚಂದಸಾಗರ್, ಡಾ. ಅಜಿಚಂದಸಾಗರ್ ನೇತೖತ್ವದಲ್ಲಿ ಜೀರಾವರ ಧಾಮದ ನಿರ್ಮಾಣ ಕಾರ್ಯ ಇದೀಗ ಸಾಗಿದೆ.
ಜೈನರ ಪವಿತ್ರ ದೇವರಾದ ಶ್ರೀ ಜೀರಾವಾಲ ಮಂದಿರ. ಈ ಕಟ್ಟಡದ ಸುತ್ತಲೂ ಜೈಪುರದಿಂದ, , ಒರಿಸ್ಸಾದಿಂದ ತರಲಾದ ಅಮೂಲ್ಯವಾದ ನೂರಾರು ಶಿಲೆಗಳ ವೈಭವ ಕಾಣಬಹುದಾಗಿದೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದ ನಂತರದ ಆವರಣದಲ್ಲಿ 3 ಕಡೆಗಳಲ್ಲಿ ಜೈನರ ದೇವರಾದ ಪಾರ್ಶ್ವನಾಥ, ಪದ್ಮಾವತಿದೇವಿ, ಸರಸ್ವತಿ ದೇವಿಯರ ಮೂರ್ತಿಯನ್ನು ಎಡ ಮತ್ತು ಬಲಬದಿಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯದ ಗರ್ಭಗೖಹದಲ್ಲಿ ಮುಖ್ಯ ದೇವರಾಗಿ ಶ್ರೀ ಜೀರಾವಾಲರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಬೇಲೂರು - ಹಳೇಬೀಡು ಶಿಲ್ಪಗಳೇ ಮಾದರಿ!
ಈ ದೇವಾಲಯ ನಿರ್ಮಾಣಕ್ಕೂ ಮುನ್ನ ಜೈನ ಧರ್ಮದ ಪ್ರಮುಖರು, ವಾಸ್ತುಶಿಲ್ಪಿಗಳು ಕರ್ನಾಟಕದ ಸೋಮನಾಥಪುರ, ಬೇಲೂರು, ಹಳೇಬೀಡುಗಳಿಗೆ ತೆರಳಿ ಅಲ್ಲಿನ ವಾಸ್ತುವೈಭವ ಗಮನಿಸಿ ಅದೇ ಮಾದರಿಯಲ್ಲಿ ಶ್ರೀ ಜೀರಾವಾಲ ಧಾಮದ ಮಂದಿರವನ್ನು ರೂಪಿಸುತ್ತಿದ್ದಾರಂತೆ.
ಶ್ರೀ ಪದ್ಮಾವತಿ ಮಾತೆಯ ವಿಗ್ರಹ 8 ಅಡಿ ಎತ್ತರವಿದ್ದು, 108 ಕೈಗಳನ್ನು ಹೊಂದಿದ್ದು ತನ್ನ ಭವ್ಯತೆಯ ಮೂಲಕ ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪದ್ಮಾವತಿ ದೇವರ ವಿಗ್ರಹ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಸಾವಿರಾರು ಕಿಲೋ ತೂಕದ ಈ ವಿಗ್ರಹವನ್ನು ಲಾರಿಯಿಂದ ಇಳಿಸಿ 50 ಮೀಟರ್ ತರಲು 3 ಗಂಟೆಗಳ ಸಮಯ ತಗುಲಿತಂತೆ.
ಈ ಜೀರಾವಾಲ ಧಾಮದ ನಿರ್ಮಾಣ ಕಾರ್ಯ ಕಳೆದ 3 ವರ್ಷಗಳಿಂದ ಸಾಗಿದೆ. 2020 ರ ಮಾರ್ಚ್ 30 ರಂದು ಭೂಮಿಪೂಜೆ ನೆರವೇರಿತ್ತಾದರೂ ಅದಾಗಿ ಕೆಲವೇ ದಿನಗಳಲ್ಲಿ ಕೋವಿಡ್ ಲಾಕ್ ಡೌನ್ ಉಂಟಾದ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ನಿರೀಕ್ಷೆಯಂತೆ ಕೆಲಸಗಳು ನಡೆದಿಲ್ಲ. ಇದೀಗ ಮೂರು ವರ್ಷಗಳಿಂದ ಬಿರುಸಾಗಿ ದೇವಾಲಯ ನಿರ್ಮಾಣ ಕಾರ್ಯ ಸಾಗಿದ್ದು, ಒಡಿಶಾದಿಂದ ಬಂದಿರುವ 42 ನುರಿತ ಶಿಲ್ಪಿಗಳು ದಿನವಿಡೀ ವೈವಿಧ್ಯಮಯ ಶಿಲ್ಪಗಳ ಕೆತ್ತನೆಯಲ್ಲಿ ಅದರಲ್ಲಿಯೂ ಅತ್ಯಂತ ಸೂಕ್ಷ್ಮ ರೀತಿಯ ಶಿಲ್ಪಕುಸುರಿ ಕೆತ್ತನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಆನೆ, ಸಿಂಹ ಕುದುರೆ, ಜಿಂಕೆ, ನವಿಲು, ಮೊಲ, ಗುಬ್ಬಚ್ಚಿ ಮೊದಲಾದ ವನ್ಯ ಜೀವಿಗಳ ಪುಟ್ಟ ಕೆತ್ತನೆಗಳ ಸಹಿತ ಬೖಹತ್ ಶಿಲಾ ಕೆತ್ತನೆಗಳಲ್ಲಿಯೂ ಶಿಲ್ಪಿಗಳು ತೊಡಗಿಸಿಕೊಂಡಿದ್ದಾರೆ.
ಅಂದಾಜು 50 ಕೋಟಿ ರು. ವೆಚ್ಚದಲ್ಲಿ ಜೀರಾವಾಲ ಧಾಮ ನಿರ್ಮಾಣವಾಗುತ್ತಿದ್ದು, ಯಾತ್ರಿನಿವಾಸ, ಭೋಜನಶಾಲಾ, ವಿವಿಧ ದೇವ ಮಂದಿರಗಳು, ಸ್ವಾಗತಕೋಣೆ, ಪ್ರವೇಶ ದ್ವಾರಗಳನ್ನು ಈ ಧಾಮ ಒಳಗೊಂಡಿದೆ. ಕಾಡು ಕಲ್ಲುಗಳನ್ನೇ ಸಹಜ ಸ್ಥಿತಿಯಲ್ಲಿ ಧಾಮಕ್ಕೆ ಬಳಕೆ ಮಾಡಲಾಗಿದೆ. ಇನ್ನೂ ನಿರ್ಮಾಣವಾಗಬೇಕಾಗಿರುವ ಧಾಮದ ಪ್ರವೇಶ ದ್ವಾರಕ್ಕೆ 2.51 ಕೋಟಿ ರು ಮಂದಿರದ ಮುಖ್ಯ ಪ್ರಾಂಗಣಕ್ಕೆ 1.51 ಕೋಟಿ ರು.ಗಳ ಅಂದಾಜು ವೆಚ್ಚ ತಗುಲಲಿದೆ.
ಇಷ್ಟಕ್ಕೂ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಇಂಥದ್ದೊಂದು ಭವ್ಯ ಜೈನ ದೇವಾಲಯ ನಿರ್ಮಾಣ ಆಗುತ್ತಿರುವುದಾದರೂ ಯಾಕೆ?
ಈ ಧಾಮದಲ್ಲಿ ಮಾತಿಗೆ ಸಿಕ್ಕಿದ ಇಲ್ಲಿನ ಅರ್ಚಕ ಬೆಂಗಳೂರು ಮೂಲದ ಭಾವೇಷ್ ಈ ಬಗ್ಗೆ ಮಾಹಿತಿ ನೀಡಿದರು. ಇಲ್ಲಿರುವ ಅಂಜನಗೇರಿ ಬೆಟ್ಟಕ್ಕೆ 1 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಈ ಬೆಟ್ಟದಲ್ಲಿ ಪೂರ್ವಕಾಲದಿಂದಲೂ ಅನೇಕ ಜೈನವಿಗ್ರಹಗಳು ಕಂಡುಬಂದಿದ್ದವಂತೆ. ಅನೇಕ ಜೈನ ಬಸದಿಗಳು ಕೂಡ ಈ ವ್ಯಾಪ್ತಿಯಲ್ಲಿ ಇದ್ದವು. ಆದರೆ ಕಾಲಾಂತರಗಳಿಂದ ಜೈನದೇವಾಲಯ, ಜೈನಮೂರ್ತಿಗಳು ನಾಶವಾಗಿದ್ದವು. ಹೀಗಾಗಿ ಅಂಜನಗೇರಿ ಬೆಟ್ಟದ ವ್ಯಾಪ್ತಿಯಲ್ಲಿ ಜೈನ ಮೂಲಕ್ಕೆ ಮತ್ತೆ ಕಾಯಕಲ್ಪ ನೀಡುವ ಉದ್ದೇಶದಿಂದ ಇಲ್ಲಿ ಜೈನ ಧಾಮ ಸ್ಥಾಪಿಸಿ ದೇಶವ್ಯಾಪ್ತಿಯಿಂದ ಜೈನರು, ಜೈನ ಪಂಥದ ಅನುಯಾಯಿಗಳು, ಪ್ರವಾಸಿಗರು ಇಲ್ಲಿಗೆ ಬರುವಂತೆ ಆಗಬೇಕೆಂಬ ಉದ್ದೇಶವಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಯಾವುದೇ ಪ್ರವಾಸೀ ತಾಣಗಳಿಲ್ಲ. ಮುಂದಿನ ದಿನಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಬರಲಿರುವ ಜೈನಯಾತ್ರಿಕರಿಂದಾಗಿ ಸುಂಟಿಕೊಪ್ಪ ಮತ್ತು ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೂ ಮಹತ್ವದ ಕೊಡುಗೆ ದೊರಕಿದಂತಾಗುತ್ತದೆ.

ಶ್ರೀ ಜೀರಾವಾಲ ಹೆಸರಿನ ಜೈನ ದೇವರು, ರಾಜಸ್ಥಾನದ ಗ್ರಾಮವೊಂದರಲ್ಲಿ ನೆಲದಲ್ಲಿ ದೊರಕಿದ ಶಿಲಾದೇವರಾಗಿದ್ದು ಇಂದಿಗೂ ರಹಸ್ಯ ಸ್ಥಳದಲ್ಲಿ ಈ ಜೀರಾವಾಲರ ವಿಗ್ರಹ ಸಂರಕ್ಷಿಸಲಾಗಿದೆ. ಕೊಡಗಿನಲ್ಲಿ ಮಂದಿರ ಪೂರ್ಣಗೊಂಡ ಮೇಲೆ ಅತ್ಯಂತ ವೈಭವದಿಂದ ಮೆರವಣಿಗೆ ಮೂಲಕ ಮೂಲ ವಿಗ್ರಹವನ್ನು ಸಾವಿರಾರು ಕಿ.ಮೀ. ದೂರದಿಂದ ಜೀರಾವಾಲ ಕೊಡಗು ಧಾಮಕ್ಕೆ ತರಲಾಗುತ್ತದೆ. ಪ್ರಸ್ತುತ 4.50 ಎಕ್ರೆ ಜಾಗದಲ್ಲಿ ಈ ಧಾಮ ನಿರ್ಮಾಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಕ್ಕಪಕ್ಕದಲ್ಲಿ ಜಾಗ ದೊರತರೆ ಸುಸಜ್ಜಿತ ಗೋಶಾಲೆ ನಿರ್ಮಾಣದ ಉದ್ದೇಶ ಕೂಡ ಇದೆ ಎಂದು ಭಾವೇಶ್ ತಿಳಿಸಿದರು. ಧಾಮ ಉದ್ದೇಶಿತ ರೀತಿಯಲ್ಲಿ ನಿರ್ಮಾಣವಾಗಬೇಕಾದರೆ ಕನಿಷ್ಟ ಇನ್ನೂ 2 ವರ್ಷಗಳಾದರೂ ಬೇಕು ಎಂದು ಭಾವೇಶ್ ಮಾಹಿತಿ ನೀಡಿದರು.
ನಿತ್ಯ ಪ್ರಸಾದ ಲಭ್ಯ
ಕಳೆದ ವಷ೯ 46 ಸಾವಿರ ಪ್ರವಾಸಿಗರು ನಿರ್ಮಾಣ ಹಂತದಲ್ಲಿರುವ ಜೈನ ಮಂದಿರ ವೀಕ್ಷಣೆಗಾಗಿಯೇ ದೇಶದ ಎಲ್ಲೆಡೆಯಿಂದ ಬಂದಿದ್ದರು. ಹೀಗೆ ಬಂದವರಿಗೆ ಇಲ್ಲಿನ ಭೋಜನಶಾಲೆಯಲ್ಲಿ ಪ್ರಸಾದ ನೀಡಲಾಗುತ್ತದೆ. ಪ್ರತಿನಿತ್ಯವೂ ಜೈನ ಭಕ್ತರು ಈ ಧಾಮಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಶ್ರೀ ಜೀರಾವಾಲ ಧಾಮ ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಹೀಗೆ ಬರುವ ಯಾತ್ರಿಕರು ಜೋರಾಗಿ ಮಾತನಾಡುವಂತಿಲ್ಲ. ಮೌನಕ್ಕೇ ಪ್ರಾಧಾನ್ಯ ಮತ್ತು ಕ್ಯಾಮೆರಾ, ಫೋಟೋ ತೆಗೆಯುವಂತಿಲ್ಲ ಎಂಬ ನಿರ್ಬಂಧವನ್ನೂ ಪ್ರವಾಸಿಗರಿಗೆ ವಿಧಿಸಲಾಗಿದೆ.
ಭವೇಶ್ ಭಕ್ತಿ ಸ್ವರೂಪ !
ಹೀಗೆ ಮಾಹಿತಿ ನೀಡಿದ ಸ್ವಯಂಸೇವಕರಾಗಿ ರಜಾದಿನಗಳಲ್ಲಿ ಮತ್ತು ಶನಿವಾರ ಭಾನುವಾರ ಇಲ್ಲಿಗೆ ಬಂದು ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಉದ್ಯಮಿ ಭವೇಶ್, ಶ್ರೀ ಜೀರಾವಾಲ ಧಾಮ ಇಲ್ಲಿ ನಿರ್ಮಾಣವಾಗಿ ದೇಶವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಬೇಕೆಂದು ಸಂಕಲ್ಪ ತೊಟ್ಟಿದ್ದಾರೆ. ಕಳೆದ 17 ವರ್ಷಗಳಿಂದ 48 ಗಂಟೆಗಳಿಗೊಮ್ಮೆ ಅಂದರೆ 2 ದಿನಗಳಿಗೊಮ್ಮೆ ಕೇವಲ ಎಣ್ಣೆರಹಿತ ಚಪಾತಿ, ದಾಲ್ ಇವಿಷ್ಟನ್ನೇ ಒಂದು ಹೊತ್ತು ಮಾತ್ರ ತಿನ್ನುತ್ತಾ ಉಳಿದಂತೆ ಎರಡು ಹೊತ್ತು ನೀರು ಕುಡಿದು ಜೀವಿಸುತ್ತಿರುವ ಭವೇಶ್ ಯಾವಾಗ ಇಲ್ಲಿ ಧಾಮ ಲೋಕಾರ್ಪಣೆಯಾಗುತ್ತದೆಯೋ ಅಂದೇ ಕಬ್ಬಿನ ಹಾಲು ಸೇವನೆ ಮಾಡಿ ತಮ್ಮ ವಿಶಿಷ್ಟ ಆಹಾರಸೇವನೆಗೆ ವಿರಾಮ ಹೇಳುತ್ತಾರಂತೆ. ಈ ರೀತಿ ಎರಡು ದಿನಗಳಿಗೊಮ್ಮೆ ಒಂದು ಹೊತ್ತು ಮಾತ್ರ ಅಲ್ಪ ಆಹಾರ ಸೇವನೆ ಮಾಡುವ ಮೂಲಕ ತಾನು ಮತ್ತಷ್ಟು ಲವಲವಿಕೆಯಿಂದ, ಉತ್ಸಾಹದಿಂದ ಇರುವುದಾಗಿ ಭವೇಶ್ ಹೇಳಿದರು!
ಕೊಡಗಿಗೆ ಬಂದಾಗ ಶುದ್ಧ ಜೈನ ಆಹಾರಕ್ಕಾಗಿ ಜೈನ ಯಾತ್ರಿಕರು ಶ್ರೀ ಜೀರಾವಾಲ ಧಾಮಕ್ಕೆ ಭೇಟಿ ನೀಡಿ ಎಂಬ ಪ್ರಚಾರವೂ ಜೈನಪ್ರವಾಸಿ ವಲಯದಲ್ಲಿ ವ್ಯಾಪಕವಾಗಿದೆ. ಅತ್ಯದ್ಭುತವಾಗಿ ನಿರ್ಮಾಣವಾಗುತ್ತಿರುವ ಜೈನ ಧಾಮ ಸಂಪೂರ್ಣವಾದ ಮೇಲೆ ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗುವುದು ಖಚಿತ.
ಚಿತ್ರಗಳು - ಲಕ್ಷ್ಮೀಶ್.