Thursday, May 28, 2026
Thursday, May 28, 2026

ಅಗಸ್ತ್ಯರ ತಾಳೆಪತ್ರದಲ್ಲಿತ್ತು ಏಲಿಯನ್‌ ಹುಟ್ಟಿನ ರಹಸ್ಯ

ತಮಿಳುನಾಡು ‘ದೇವಾಲಯಗಳ ಬೀಡು’ ಎಂಬುದಾಗಿಯೇ ಪ್ರಸಿದ್ಧವಾಗಿದೆ. ಮಧುರೈ ಮೀನಾಕ್ಷಿ, ತಂಜಾವೂರಿನ ಬೃಹದೇಶ್ವರ, ರಾಮೇಶ್ವರಂ, ಚಿದಂಬರಂ, ಶ್ರೀರಂಗಂ ಹೀಗೆ ದೇಶದಲ್ಲಿ ದ್ರಾವಿಡ ವಾಸ್ತುಶಿಲ್ಪ, ಇತಿಹಾಸ ಮತ್ತು ಆಧ್ಯಾತ್ಮಿಕತೆಗೆ ಪ್ರಸಿದ್ಧವಾದ ಅನೇಕ ದೇವಾಲಯಗಳಿವೆಯಾದರೂ ಇಲ್ಲಿನ ಏಲಿಯನ್‌ ದೇವಾಲಯ ಸದ್ಯ ದೇಶವೇ ತಮಿಳುನಾಡಿನತ್ತ ತಿರುಗಿ ನೋಡುವಂತೆ ಮಾಡಿದೆ.

ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗೆಗಿನ ಚರ್ಚೆ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಈ ಕುರಿತು ಚರ್ಚೆಗಳು ನಡೆಸುತ್ತಲೇ ಇವೆ. ಅದರಲ್ಲೂ ʻಏಲಿಯನ್ʼಗಳ ಬಗೆಗೆ ಬಾಲಿವುಡ್‌ನಲ್ಲಿ ʻಕೋಯಿ ಮಿಲ್‌ ಗಯಾʼ, ʻಪಿಕೆʼಯಂಥ ಸಿನಿಮಾಗಳು ಮಾತ್ರವಲ್ಲದೇ ಹಾಲಿವುಡ್‌ನಲ್ಲಿ ಸಾಲು ಸಾಲು ಚಿತ್ರಗಳು ತೆರೆಕಂಡಿವೆ. ಏಲಿಯನ್ ಅಸ್ತಿತ್ವದ ಬಗ್ಗೆ ಇದುವರೆಗೂ ನಮ್ಮ ಖಗೋಳ ವಿಜ್ಞಾನ ಖಚಿತ ಸಿದ್ಧಾಂತವನ್ನು ಮಂಡಿಸಿಲ್ಲ. ಆದರೆ ಈ ಕುರಿತ ಅಂತೆ ಕಂತೆಗಳ ಕಥೆಗಳಿಗೆ ಬರವೇನಿಲ್ಲ. ಇಂಥ ಸಂದರ್ಭದಲ್ಲಿ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಏಲಿಯನ್‌ಗಾಗಿಯೇ ವಿಶೇಷ ದೇವಾಲಯವೊಂದು ನಿರ್ಮಾಣವಾಗಿದೆ ಎಂದರೆ ನಂಬಲೇಬೇಕು. ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಸೇಲಂ ನಿವಾಸಿ ಲೋಕನಾಥನ್‌ ಎಂಬ ವ್ಯಕ್ತಿ ಸೇಲಂನ ತಮ್ಮ ನಿವಾಸದ ಬಳಿಯೇ ಏಲಿಯನ್‌ಗಾಗಿ ವಿಶೇಷ ಗುಹಾ ದೇವಾಲಯವನ್ನು ನಿರ್ಮಾಣ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದ ಶಾಪಗ್ರಸ್ಥ ಕೋಟೆ...ರಾತ್ರಿ ವೇಳೆ ಆಗುತ್ತೆ ವಿಚಿತ್ರ ಅನುಭವ

ಅಷ್ಟಕ್ಕೂ ಅನ್ಯಗ್ರಹ ಜೀವಿಗಳಾಗಿರುವ ಏಲಿಯನ್‌ಗಳನ್ನು ದೇವರನ್ನಾಗಿ ಪೂಜಿಸಲು ಕಾರಣವೇನು ಗೊತ್ತಾ? ವಿಶ್ವದಲ್ಲಿ ಶಿವ, ವಿಷ್ಣು, ಮಹೇಶ್ವರ, ಗಣಪತಿ, ಹನುಮಂತ ಹೀಗೆ ವಿವಿಧ ರೂಪಗಳಲ್ಲಿ ದೇವರನ್ನು ಪೂಜಿಸುವುದು, ಅವರಿಗಾಗಿ ಗುಡಿ, ಗೋಪುರ, ದೇವಾಲಯಗಳನ್ನು ನಿರ್ಮಿಸುವುದು ಸಾಮಾನ್ಯ ವಿಚಾರ. ಇದಕ್ಕೆ ಹೊರತಾಗಿ ದೇವರ ವಾಹನಗಳಾಗಿಯೂ ಪೂಜಿಸಲ್ಪಡುವ ಇಲಿ, ಕಾಗೆ, ಶ್ವಾನ, ಎತ್ತು, ಗರುಡ, ಸಿಂಹಗಳನ್ನೂ ದೇವಾಲಯಗಳಲ್ಲಿ ಗೌರವದಿಂದ ಕಾಣುವುದು, ಅವುಗಳಿಗೂ ಪೂಜೆ ಪುನಸ್ಕಾರ ಸಾಮಾನ್ಯ ಸಂಗತಿ. ಆದರೆ ಏಲಿಯನ್‌ಗಳ ಹುಟ್ಟು, ಅವುಗಳ ರೂಪಗಳ ಬಗೆಗೆ ಮಾಹಿತಿಯಿಲ್ಲದಿದ್ದರೂ ಅವುಗಳನ್ನು ಕಾಲ್ಪನಿಕವಾಗಿ ಕಂಡು ಅವುಗಳಿಗಾಗಿ ಗುಡಿಯನ್ನು ನಿರ್ಮಾಣವಾಗಿರುವುದು ಅಚ್ಚರಿಯ ಸಂಗತಿ.

Untitled design (47)

ಏಲಿಯನ್‌ ದೇವಾಲಯದ ಹುಟ್ಟು

ಸೇಲಂ ಮೂಲದ ಲೋಕನಾಥನ್‌ ಅವರು ದೇವರು, ಧಾರ್ಮಿಕ ವಿಚಾರಗಳ ಬಗ್ಗೆ ಅಪಾರ ಆಸಕ್ತಿಯುಳ್ಳವರು. ಅದಾಗಲೇ ಶಿವ, ನಂದಿ, ವಾರಾಹಿಗಾಗಿಯೇ ಗುಡಿಗಳನ್ನು ನಿರ್ಮಿಸಿ ನಿತ್ಯವೂ ಖುದ್ದು ಪೂಜೆ ಸಲ್ಲಿಸುತ್ತಲೇ ಬಂದವವರು. ಆದರೆ ಅದೊಂದು ದಿನ ಅವರ ಕನಸಿನಲ್ಲಿ ಕಾಣಿಸಿಕೊಂಡಿದ್ದ ಏಲಿಯನ್‌, ತನ್ನ ಅಸ್ಥಿತ್ವದ ಬಗ್ಗೆ ಮಾತನಾಡಿತ್ತಂತೆ. ಅಲ್ಲದೆ ತನಗಾಗಿ ಭೂಮಿಯಲ್ಲಿ ದೇವಾಲಯವೊಂದು ನಿರ್ಮಾಣವಾಗಬೇಕೆಂಬ ನಿರ್ದೇಶನ ನೀಡಿತ್ತಂತೆ. ಆದರೆ ಇದನ್ನು ಸುಲಭದಲ್ಲಿ ಒಪ್ಪಿಕೊಳ್ಳದ ಲೋಕನಾಥನ್‌ ಅನೇಕ ಅಧ್ಯಯನಗಳನ್ನು ಮಾಡಿ ಕೊನೆಗೆ ತಲುಪಿದ್ದು ಅಗಸ್ತ್ಯ ಮುನಿಗಳು ಬರೆದ ತಾಳೆ ಪತ್ರಗಳ ಬಳಿಗೆ. ಅದರ ಅನುಸಾರ ಏಲಿಯನ್‌ಗಳು ಶಿವನ ಸೃಷ್ಟಿಯೆಂದು ತಿಳಿದ ಅವರು, ಏಲಿಯನ್‌ ದೇವಸ್ಥಾನವನ್ನು ನಿರ್ಮಿಸಿದರು. ಅಲ್ಲದೆ ದೇವಾಲಯದಲ್ಲಿ ಅಗಸ್ತ್ಯ ಮುನಿಗಳ ಮೂರ್ತಿಯನ್ನು ಸ್ಥಾಪಿಸಿ ನಿತ್ಯವೂ ಪೂಜೆ ಸಲ್ಲಿಸುತ್ತಲೇ ಬಂದಿದ್ದಾರೆ. ಏಲಿಯನ್‌ ದೇವಾಲಯ ನಿರ್ಮಾಣವಾದ ನಂತರ ಅನೇಕ ಬಾರಿ ಏಲಿಯನ್‌ ದೇವರು ದೇವಾಲಯದ ಸ್ಥಾಪಕರ ಕಣ್ಣಿಗೆ ಕಾಣಿಸಿಕೊಂಡಿದ್ದು, ಲೋಕಕ್ಕೆ ಕಂಟಕ ಬರುವ ಸಂದರ್ಭದಲ್ಲಿ ತಾನು ನೆರವಿಗೆ ಬರುವಾಗಿ ಹೇಳಿದ್ದಾರೆ ಎಂದು ಖುದ್ದು ಲೋಕನಾಥನ್‌ ಅವರು ಹೇಳಿಕೊಂಡಿದ್ದಾರೆ.

Untitled design (44)

ದಿನಕ್ಕೆ ಎರಡು ಬಾರಿ ಪೂಜೆ

ಏಲಿಯನ್‌ ಕೋವಿಲ್‌ ಎಂದೇ ಖ್ಯಾತವಾಗಿರುವ ಈ ದೇವಾಲಯ, ಹೊರನೋಟದಲ್ಲಿ ಎಲ್ಲ ದೇವಾಲಯಗಳಂತಿಲ್ಲ, ಅದ್ಧೂರಿಯಾಗಿಯೂ ಇಲ್ಲ. ಸುರಂಗ ಮಾರ್ಗದಂತಿರುವ ಕಿರಿದಾದ ಹಾದಿಯಲ್ಲಿ ಮೆಟ್ಟಿಲುಗಳನ್ನಿಳಿದು ಗುಡಿಯ ಕೆಳಮಹಡಿ ತಲುಪಿದರೆ ಸುಮಾರು 6 ಅಡಿ ಎತ್ತರದ ಕಪ್ಪು ಏಕಶಿಲೆಯ ಏಲಿಯನ್‌ ವಿಗ್ರಹ ಕಾಣಸಿಗುತ್ತದೆ. ದೊಡ್ಡ ತಲೆ, ಉದ್ದವಾದ ಕಣ್ಣುಗಳು ಮತ್ತು ವಿಚಿತ್ರ ದೇಹಾಕೃತಿಯಂತೂ ಇಂಥ ಸೃಷ್ಟಿಯೂ ಇತ್ತಾ ಎಂಬ ಯೋಜನೆಯನ್ನು ಹುಟ್ಟುಹಾಕುತ್ತದೆ.

ಒಟ್ಟಿನಲ್ಲಿ, ತಮಿಳುನಾಡಿನ ಈ ರಹಸ್ಯವಾದ ಏಲಿಯನ್ ದೇವಾಲಯ ನಂಬಿಕೆಗಳಿಗೂ ವಿಜ್ಞಾನಕ್ಕೂ ನಡುವೆ ಸೃಷ್ಟಿಯಾಗಿದೆಯಾದರೂ ವಿಶ್ವದ ಮೊದಲ ಏಲಿಯನ್‌ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಏಲಿಯನ್‌ ದೇವಾಲಯ ನಿರ್ಮಾಣವಾದಾಗ ಸುತ್ತ ಹಳ್ಳಿಯವರು, ಸ್ಥಳೀಯರು, ಮಾಧ್ಯಮದವರೆಲ್ಲರೂ ನನಗೆ ಹುಚ್ಚು ಹಿಡಿದೆ. ಹಣದ ಆಸೆಗಾಗಿ ದೇವಾಲಯ ನಿರ್ಮಿಸಿದ್ದೇನೆ ಎಂದು ಅಪಪ್ರಚಾರ ಮಾಡಿದ್ದರು. ಆದರೆ ನನ್ನ ಉದ್ದೇಶ ಹಣವಲ್ಲ. ಭೂಮಿಯ ರಕ್ಷಕನಾಗಿರುವ ಏಲಿಯನ್‌ಗಳನ್ನು ಸಮಾಜಕ್ಕೆ ಪರಿಚಯಿಸುವುದಾಗಿದೆ. ನನ್ನ ಶ್ರಮವನ್ನು ಗುರುತಿಸಿದ ನಾಸಾ ಸಿಬ್ಬಂದಿ ದೇವಾಲಯ ಹಾಗೂ ಏಲಿಯನ್‌ ಬಗೆಗೆ ದೂರವಾಣಿಯ ಮೂಲಕವೇ ನನ್ನೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೆ ದೇಶ ವಿದೇಶಗಳಿಂದ ಏಲಿಯನ್‌ ಅನ್ನು ನಂಬುವ ಹಾಗೂ ಆರಾಧಿಸುವ ಭಕ್ತರು, ಇತಿಹಾಸಕಾರರು, ವಿಜ್ಞಾನಿಗಳು ಸೇರಿದಂತೆ ಅನೇಕರು ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲಿ ಈ ದೇವಾಲಯವನ್ನು ಅಭಿವೃದ್ಧಿಪಡಿಸುವ ಯೋಜನೆಯಿದೆ.
- ಲೋಕನಾಥನ್‌, ಏಲಿಯನ್‌ ದೇವಾಲಯದ ನಿರ್ಮಾತೃ
Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ