ಸುಖೀ ಸಂಸಾರ ಬಯಸುವವರು ನೀವಾದರೆ ಈ ದೇವಾಲಯಕ್ಕೆ ಭೇಟಿ ನೀಡಿ
ಗಂಡ ಹೆಂಡತಿಯ ನಡುವೆ ಜಗಳಕ್ಕೆ ಕಾರಣಗಳು ಅನೇಕ. ಆದರೆ ಆ ಜಗಳ ಅತಿಯಾಗಿ ಕೌಟುಂಬಿಕ ಕಲಹವಾಗಿ ರೂಪುಗೊಳ್ಳುತ್ತಿದೆ, ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಈ ದೇವಾಲಯಕ್ಕೊಮ್ಮೆ ದಂಪತಿ ಸಮೇತರಾಗಿ ಭೇಟಿ ಕೊಟ್ಟು, ಪೂಜಿಸುವುದರಿಂದ ದಂಪತಿಯ ನಡುವೆ ಉತ್ತಮ ಬಾಂಧವ್ಯಕ್ಕೆ ಕಾರಣವಾಗುತ್ತದೆ.
ಕರ್ನಾಟಕದಂತೆಯೇ ತಮಿಳುನಾಡಿನಲ್ಲೂ ಅನೇಕ ಧಾರ್ಮಿಕ ಪ್ರವಾಸಿ ತಾಣಗಳಿವೆ. ಇಲ್ಲಿರುವ ಐತಿಹಾಸಿಕ ಹಿನ್ನಲೆಯ ದೇವಾಲಯಗಳನ್ನು ಅರಸಿ, ದೇಶದೆಲ್ಲೆಡೆಯಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನಂಬಿದ ದೇವರನ್ನು ವಿವಾಹ, ವಿವಾಹದ ನಂತರದ ಜೀವನಕ್ಕಾಗಿ ಭಕ್ತಿಯಿಂದ ಪ್ರಾರ್ಥಿಸಿ, ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಾರೆ. ಅಂತಹ ವಿಶೇಷ ದೇವಾಲಯವಿರುವುದು ತಮಿಳುನಾಡಿನ ಮಯಿಲಾಡುತುರ ಜಿಲ್ಲೆಯಲ್ಲಿರುವ ತಿರುಮಣಂಚೇರಿಯಲ್ಲಿ.
ಕೌಟುಂಬಿಕ ಸಂಬಂಧಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ದೇಶದಾದ್ಯಂತ ಅನೇಕ ದೇವಸ್ಥಾನಗಳಿವೆಯಾದರೂ, ತಮಿಳುನಾಡಿನಲ್ಲಿರುವ ತಿರುಮಣಂಚೇರಿಯ ಶ್ರೀ ಕಲ್ಯಾಣಸುಂದರೇಸ್ವರರ್ ದೇವಾಲಯವು ಪತಿ ಪತ್ನಿಯ ಸಂಬಂಧದಲ್ಲಿ ಐಕ್ಯತೆಯನ್ನು ತರುವ ಸ್ಥಳವಾಗಿ ಗುರುತಿಸಿಕೊಂಡಿದೆ. ಇಲ್ಲಿ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ದಂಪತಿಯ ನಡುವೆ ಐಕ್ಯತೆ ಹೆಚ್ಚಾಗುವುದರ ಜತೆಗೆ ಅಂಬಿಕೆಗೆ ಬಳೆಗಳನ್ನು ಅರ್ಪಿಸಿ ಪೂಜಿಸಿದರೆ ಸಂಬಂಧದಲ್ಲಿ ಗಟ್ಟಿತನ ಹುಟ್ಟಿಕೊಳ್ಳುವುದು ಎಂಬ ನಂಬಿಕೆಯಿದೆ.

ಶಿವ- ಪಾರ್ವತಿ ವಿವಾಹವಾದ ಸ್ಥಳ
ತಿರುಮನಂಚೇರಿ ಗ್ರಾಮದ ಹೆಸರು ಶಿವ ಮತ್ತು ಪಾರ್ವತಿ ದೇವಿಯರ ವಿವಾಹದೊಂದಿಗೆ ಸಂಬಂಧ ಹೊಂದಿದೆ. ತಿರುಮಣನ್ ಎಂದರೆ ತಮಿಳಿನಲ್ಲಿ ಮದುವೆ ಮತ್ತು ಚೇರಿ ಎಂದರೆ ಸಣ್ಣ ಹಳ್ಳಿ ಅಥವಾ ಹಳ್ಳಿ ಎಂದರ್ಥ. ಹೀಗಾಗಿ, ತಿರುಮನಂಚೇರಿ ಎಂದರೆ ಶಿವ ಮತ್ತು ಪಾರ್ವತಿ ವಿವಾಹವಾದ ಸ್ಥಳ ಎಂಬುದಾಗಿಯೂ ಗುರುತಿಸಿಕೊಂಡಿದೆ.
ತಿಳಿಯಲೇಬೇಕಿದೆ ದೇವಾಲಯದ ಐತಿಹ್ಯ
ದೇವಿ ಪಾರ್ವತಿಯು ಕಾವೇರಿ ನದಿ ತೀರದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದ ವೇಳೆ, ಆಕೆಯನ್ನು ಪರೀಕ್ಷಿಸಲು ಬಯಸಿದ ಶಿವನು, ನದಿಯಲ್ಲಿ ಪ್ರವಾಹ ಬರುವಂತೆ ಮಾಡಿದ್ದ. ಆದರೆ ಪ್ರತಿಷ್ಠಾಪಿಸಲ್ಪಟ್ಟ ಲಿಂಗವು ಪ್ರವಾಹದಿಂದ ಕೊಚ್ಚಿಕೊಂಡು ಹೋಗದಂತೆ ತಡೆಯಲು ದೇವಿಯೇ ಖುದ್ದು ಭಗವಂತನನ್ನು ಬಿಗಿಯಾಗಿ ಅಪ್ಪಿಕೊಂಡಳು. ಆಕೆಯ ಪ್ರೀತಿಗೆ ಬೆರಗಾಗಿ ಭಗವಂತನೇ ದೇವಿಗೆ ದರ್ಶನ ನೀಡಿದ್ದನೆಂಬ ನಂಬಿಕೆ ಇಲ್ಲಿನವರದ್ದು.
ತಿರುಮಣಂಚೇರಿಯ ಶ್ರೀ ಕಲ್ಯಾಣಸುಂದರೇಸ್ವರರ್ ದೇವಾಲಯವು ಕುಂಭಕೋಣಂನಿಂದ 30 ಕಿ.ಮೀ ಮತ್ತು ಮೈಲಾಡುತುರೈನಿಂದ 26 ಕಿ.ಮೀ ದೂರದಲ್ಲಿದೆ. ಇದು ಕುಠಾಲಂನಿಂದ ಸುಮಾರು 6 ಕಿ.ಮೀ ದೂರದಲ್ಲಿದೆ.