ಪಾಪರ ಪಟ್ಟಿ ರಾಘವೇಂದ್ರ ಸ್ವಾಮಿಗಳ ಮಠ
ಇಲ್ಲಿ ಭೂನಿಳಾದೇವಿ ಸಹಿತ ಶ್ರೀ ಅಭೀಷ್ಟ ವರದರಾಜ ದೇವಾಲಯವೂ ಇದ್ದು, ಇಲ್ಲಿ ಹೊಯ್ಸಳರ ಕಾಲದ ಶಿಲಾಶಾಸನವೂ ದೊರೆತಿದೆ. ಶಾಸನದ ಪ್ರಕಾರ ವರದರಾಜ ದೇವಾಲಯವು ಸಾವಿರ ವರ್ಷಗಳಷ್ಟು ಪುರಾತನವಾಗಿದೆ ಎನ್ನಲಾಗಿದೆ. ಈ ದೇವಸ್ಥಾನದ ಮುಂಭಾಗದಲ್ಲಿ ಪುಷ್ಕರಣಿ ಇದೆ.
-ಜೆ ಎನ್ ಜಗನ್ನಾಥ್
ಬೆಂಗಳೂರಿನಿಂದ ಹೊಸೂರು ಮಾರ್ಗವಾಗಿ ಸುಮಾರು 130 ಕಿಲೋಮೀಟರ್ ದೂರದಲ್ಲಿ ಪಾಪರ ಪಟ್ಟಿಯನ್ನು ತಲುಪಬಹುದು. ಧರ್ಮಪುರಿ ಜಿಲ್ಲಾ ಕೇಂದ್ರದಿಂದ ಕೇವಲ 10 ಕಿಮೀ ದೂರವಿರುವ ಪಾಪರ ಪಟ್ಟಿ ಗ್ರಾಮದಲ್ಲಿ ಸುಮಾರು 60 ರಿಂದ 70 ಮಾಧ್ವ ಕುಟುಂಬಗಳು ವಾಸವಿರುವ ಒಂದು ಸಣ್ಣ ಅಗ್ರಹಾರವಿದೆ. ಈ ಕ್ಷೇತ್ರದಲ್ಲಿ ರಾಘವೇಂದ್ರ ಸ್ವಾಮಿಗಳ ಮಠವಿದೆ.
ಇಲ್ಲಿ ಸಾಲಿಗ್ರಾಮ ಸಹಿತ ಮೃತ್ಯುಕ ಬೃಂದಾವನ ಪ್ರತಿಷ್ಠಾಪನೆಯಾಗಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವನ್ನು 23-5-1935ರಲ್ಲಿ ಶ್ರೀ ಪಾದರಾಜ ಮಠದ ಶ್ರೀ ದಯಾನಿಧಿ ತೀರ್ಥ ಸ್ವಾಮಿಗಳು ನೆರವೇರಿಸಿದ್ದಾರೆ. ಈ ಮಠದಲ್ಲಿ ಶ್ರೀ ಮದ್ವಾಚಾರ್ಯರು ಮತ್ತು ಶ್ರೀ ಪ್ರಾಣದೇವರ ಪ್ರತಿಷ್ಠಾಪನೆಯಾಗಿದೆ.

ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ್ವರ ತೀರ್ಥರು ಮತ್ತು ಪುತ್ತಿಗೆ ಮಠಾಧೀಶರಾದ ಸುಗುಣೀಂದ್ರ ತೀರ್ಥರಿಂದ ಶ್ರೀ ಮಧ್ವಾಚಾರ್ಯರ ವಿಗ್ರಹವನ್ನು 1986ರಲ್ಲಿ ಪ್ರತಿಷ್ಠಾಪಿಸಲಾಗಿದೆ. ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹ ಇಲ್ಲಿದೆ. ಇಲ್ಲಿ ಭೂನಿಳಾದೇವಿ ಸಹಿತ ಶ್ರೀ ಅಭೀಷ್ಟ ವರದರಾಜ ದೇವಾಲಯವೂ ಇದ್ದು, ಹೊಯ್ಸಳರ ಕಾಲದ ಶಿಲಾಶಾಸನವೂ ದೊರೆತಿದೆ. ಶಾಸನದ ಪ್ರಕಾರ ವರದರಾಜ ದೇವಾಲಯವು ಸಾವಿರ ವರ್ಷಗಳಷ್ಟು ಪುರಾತನವಾಗಿದೆ ಎನ್ನಲಾಗಿದೆ. ಈ ದೇವಸ್ಥಾನದ ಮುಂಭಾಗದಲ್ಲಿ ಪುಷ್ಕರಣಿ ಇದೆ.
ಈ ಕ್ಷೇತ್ರದಲ್ಲಿ ಮೊದಲು ಶ್ರೀ ವರದರಾಜನನ್ನು ನೋಡಿ ನಂತರ ರಾಯರ ಮಠಕ್ಕೆ ಹೋಗುವುದು ವಾಡಿಕೆ. ಪೂಜೆಗಳು ಅಚ್ಚುಕಟ್ಟಾಗಿ ನಡೆಯುತ್ತವೆ. ಬೆಳಗ್ಗೆ 10:30ಕ್ಕೆ ದೇವಾಲಯ ತಲುಪಿದರೆ, ಪೂಜೆ ನೈವೇದ್ಯ ಪ್ರಸಾದ ಭೋಜನ 12 ರಿಂದ 1 ಗಂಟೆಯ ಒಳಗೆ ಆಗುತ್ತದೆ. ಇಲ್ಲಿಂದ ಸುಮಾರು 40 ನಿಮಿಷ ಪ್ರಯಾಣ ಮಾಡಿದರೆ ಹಳೆಯ ಊರು ಎಂಬಲ್ಲಿ ಶ್ರೀ ನರಸಿಂಹ ದೇವರ ದೇವಾಲಯವಿದೆ. ಎಲ್ಲವನ್ನು ಒಂದು ದಿನದ ಪ್ರವಾಸದಲ್ಲಿ ನೋಡಿಕೊಂಡು ಬರಬಹುದು.