ಪ್ರವಾಸ ಎಂಬುದು ಅನೇಕರಿಗೆ ಚಟ ಇನ್ನೂ ಕೆಲವರಿಗೆ ಕೆಲಸಗಳ ಒತ್ತಡದಿಂದ ಸಿಗುವ ನೆಮ್ಮದಿ ಅಥವಾ ಬಿಡುಗಡೆ ಎನ್ನಬಹುದು. ಕರ್ನಾಟಕ ರಾಜ್ಯವು ಒಂದು ರೀತಿಯಲ್ಲಿ ತನ್ನದೇ ಆದ ಪ್ರವಾಸಿ ತಾಣಗಳಿಂದ ವೈಭವವನ್ನು ಮೆರೆದಿದೆ. ಪ್ರವಾಸ ಮಾಡಲು ಹೊರ ರಾಜ್ಯಗಳಿಗೆ ಹೋಗಬೇಕೆಂದಿಲ್ಲ. ನಮ್ಮ ಹತ್ತಿರದಲ್ಲೇ ಅನೇಕ ಸ್ಥಳಗಳಿವೆ ಅವುಗಳನ್ನು ನಾವು ಗಮನಿಸಿರುವುದಿಲ್ಲ. ಹೌದು, ಅಂಥ ವಿಶೇಷ ಪ್ರವಾಸಿ ಸ್ಥಳಗಳಲ್ಲಿ K R ನಗರ(ಕೃಷ್ಣರಾಜನಗರ) ದ ಹತ್ತಿರದಲ್ಲಿರುವ ಕ್ರೈಸ್ತ ದೇವಾಲಯವಾದ ಸೇಂಟ್ ಅಂತೋನಿ ಬೆಸಿಲಿಕಾ ಚರ್ಚ್ ಡೋರನಹಳ್ಳಿ ಕೂಡ ಒಂದು.

ಇದು ಕ್ರೈಸ್ತ ಧರ್ಮದ ದೇವಾಲಯವಾಗಿದ್ದು ಇಲ್ಲಿಗೆ ಬರುವಂಥ ಬಹುತೇಕ ಪ್ರವಾಸಿಗರು ಬೇರೆ ಧರ್ಮದ ಅನುಯಾಯಿಗಳಾಗಿರುತ್ತಾರೆ. ವರ್ಷದ ಇಡೀ ದಿನವೂ ಈ ಚರ್ಚ್ ತೆರೆದಿರುತ್ತದೆ. ಭಾನುವಾರ ಮರಿಯಾ ಮತ್ತು ಏಸುಕ್ರಿಸ್ತನ ಪೂಜೆ(ಆರಾಧನೆ) ನಡೆಯುತ್ತದೆ. ಇದೊಂದು ಕ್ಯಾಥೋಲಿಕ್ ಚರ್ಚ್ ಆಗಿದ್ದು, ಇಲ್ಲಿಗೆ ಭೇಟಿ ನೀಡಿ ಸೇಂಟ್ ಅಂತೋನಿಯನ್ನು(ಯೇಸುವನ್ನು) ಪ್ರಾರ್ಥಿಸಿದರೆ ಅದ್ಭುತಗಳು ನಡೆಯುತ್ತವೆ ಎಂಬುದು ಸ್ಥಳೀಯರ ನಂಬಿಕೆ ಮತ್ತು ವಾಡಿಕೆ. ಇಲ್ಲಿಗೆ ಬರುವಂಥ ಜನರು ಅಥವಾ ಪ್ರವಾಸಿಗರು ಯಾವುದೇ ಮತ ಭೇದವಿಲ್ಲದೆ ಕ್ರಿಸ್ತನನ್ನು ಬೇಡುತ್ತಾರೆ. ಚರ್ಚಿನ ಪ್ರಶಾಂತತೆ ಮತ್ತು ಅಲ್ಲಿನ ವಾತಾವರಣ ಪ್ರವಾಸಕ್ಕೆ ಬಂದ ಅನುಭವವನ್ನು ಪರಿಪೂರ್ಣ ಆಗುವಂತೆ ಮಾಡುತ್ತದೆ.ಇಲ್ಲಿಗೆ ಬರುವಂಥ ಬಹುತೇಕ ಪ್ರವಾಸಿಗಳು ಸ್ಥಳೀಯರೇ ಆಗಿರುತ್ತಾರೆ.

ಅಂಥೋನಿ ಹುಟ್ಟು

ಪ್ರಸಿದ್ಧಿಯಾಗಿರುವ ಪ್ರತಿಯೊಂದು ಹೆಸರಿಗೂ ಅಥವಾ ಕಟ್ಟಡಕ್ಕೂ ತನ್ನದೇ ಅದ ಇತಿಹಾಸ ಅಥವಾ ಪ್ರಭಾವ ಇರುತ್ತದೆ. ಅದೇ ರೀತಿಯಾಗಿ ಸೇಂಟ್ ಅಂತೋನಿ ಚರ್ಚ್ ಕೂಡ ತನ್ನದೇ ಆದ ಇತಿಹಾಸವನ್ನು ಹೊಂದಿದೆ.

ಸುಮಾರು 200 ವರ್ಷಗಳ ಹಿಂದೆ ಒಬ್ಬ ರೈತನು ಗದ್ದೆಯಲ್ಲಿ ಉಳುಮೆ ಮಾಡುವಾಗ ಒಂದು ಮೂರ್ತಿಯು ಅವನ ನೇಗಿಲಿಗೆ ಸಿಕ್ಕಿತು. ಅದನ್ನು ನೋಡಿದ ಅವನು ಗೊಂಬೆ ಎಂದು ತಿಳಿದು ಅವನ ಮನೆಯ ಮಕ್ಕಳಿಗೆ ಅದನ್ನು ಆಟಿಕೆಯಾಗಿ ಆಡಲು ಕೊಟ್ಟನು. ಅನೇಕರು ಅದು ಆಟಿಕೆಯ ವಸ್ತುವಲ್ಲ ಎಂದು ಹೇಳಿದರೂ ಅಸಡ್ಡೆ ತೋರಿದನು. ಕಾಲ ಕಳೆದ ನಂತರ ವಿದೇಶದಿಂದ ಬಂದ ಒಬ್ಬ ಸಂತ(ಪ್ರವಾದಿ) ಇದು ಆಟಿಕೆಯ ವಸ್ತು ಅಲ್ಲ ಸಂತ ಅಂಥೋನಿಯವರ ಮೂರ್ತಿ ತಿಳಿಸಿದನು. ಸ್ವಲ್ಪ ದಿನಗಳಲ್ಲಿಯೇ ರೂತನ ಕನಸಿನಲ್ಲಿ ಅಂತೋನಿಯವರು ಕಾಣಿಸಿಕೊಂಡು ತನಗೊಂದು ಚರ್ಚ್‌ ನಿರ್ಮಿಸುವಂತೆ ಕೇಳಿಕೊಂಡರು ಎಂಬುದರಿಂದ ಕತೆ ಆರಂಭಗೊಳ್ಳುತ್ತದೆ. 19ನೇ ಶತಮಾನದ ಮದ್ಯದಲ್ಲಿ 1920 ರ ಕಾಲಘಟ್ಟದಲ್ಲಿಈ ಚರ್ಚ್ ಅನ್ನು ನಿರ್ಮಿಸಲಾಯಿತು. ಕಾಲ ಕಳೆದ ನಂತರ ಶಿಥಿಲಾವಸ್ಥೆಯಲ್ಲಿದ್ದಾ ಚರ್ಚ್ ಅನ್ನು ಕೆಡವಿ 1969ರಲ್ಲಿ ಪುನರ್ನಿರ್ಮಿಸಲಾಯಿತು. ವಿಶೇಷವಾಗಿ ಮೂರ್ತಿ ಸಿಕ್ಕಿದ ರೈತನಿಗೆ ಗೌರವಾರ್ಥವಾಗಿ ಅವನ ಮೂರ್ತಿಯನ್ನು ಅಲ್ಲಿ ಸ್ಥಾಪಿಸಿದ್ದಾರೆ. ಆ ಮೂರ್ತಿಯ ಮೇಲೆ ರೈತನಿಗೆ ಆ ವಿಗ್ರಹವು ಹೇಗೆ ದೊರಕಿತು ಎಂಬುದನ್ನು ಬರೆಯಲಾಗಿದೆ.

ಚರ್ಚ್ ವಿನ್ಯಾಸ

ಬಹುತೇಕ ಎಲ್ಲಾ ಚರ್ಚ್ ಗಳು ತುಂಬಾ ಎತ್ತರವಾಗಿದ್ದು ಆಕರ್ಷಣೆಯಾಗಿರುತ್ತವೆ. ಅದೇ ರೀತಿಯಾಗಿ ಇದು ನಯನಾಕರ್ಷಣೆಯಾಗಿ ಮತ್ತು ಎಲ್ಲಾ ಕ್ಯಾಥೋಲಿಕ್ ಕ್ರೈಸ್ತ ದೇವಾಲಯಗಳಂತಿವೆ. ಯೇಸುಕ್ರಿಸ್ತನ ಮತ್ತು ಮಾತೆ ಮರಿಯಾಳ ವಿಗ್ರಹ ಮೂರ್ತಿಗಳಿವೆ. ಈ ಚರ್ಚ್ ಸಾವಿರಾರು ಜನರು ಒಟ್ಟಾಗಿ ಕುಳಿತುಕೊಳ್ಳುವ ವಿಶಾಲ ಜಾಗದ ವ್ಯವಸ್ಥೆಯನ್ನು ಹೊಂದಿದೆ. ಆಶ್ಚರ್ಯವೆಂದರೆ ಈ ಚರ್ಚಿನ ವಿನ್ಯಾಸ ಇಂಗ್ಲೀಷ್ ವರ್ಣಮಾಲೆಯ "T" ಅಥವಾ ಶಿಲುಬೆ ಆಕಾರದಲ್ಲಿದೆ. ಇದರ ಪೂಜಾಸ್ಥಳವು ವಿಶಾಲವಾಗಿದ್ದು ಯಾವ ಬಾಗಿಲಲ್ಲೂ ಬಂದರು ನೇರವಾಗಿ ಪೂಜಾ ಸ್ಥಳಕ್ಕೆ ಹೋಗಬಹುದು. ಕಲಾಶಿಲ್ಪ ವಿನ್ಯಾಸವನ್ನು ಈ ಚರ್ಚ್ ಹೊಂದಿದೆ. ಇತ್ತೀಚಿಗೆ ನವೀಕರಿಸಲಾದ ಕೆಲವು ಕಟ್ಟಡಗಳು ತುಂಬಾ ವಿಶೇಷವಾಗಿವೆ. ಒಟ್ಟಾರೆ ಹೇಳುವುದಾದರೆ ಈ ಚರ್ಚ್ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ಹಬ್ಬಗಳ ಅಂಥೋನಿ

ಅತಿ ಕಡಿಮೆ ಸಂಖ್ಯೆಯಲ್ಲಿ ಹಬ್ಬಗಳನ್ನು ಹೊಂದಿರುವ ಧರ್ಮಗಳ ಪೈಕಿ ಕ್ರೈಸ್ತ ಧರ್ಮವು ಒಂದಾಗಿದೆ . ಅದೇ ರೀತಿ ಸೇಂಟ್ ಅಂತೋನಿ ಚರ್ಚ್ ನಲ್ಲಿ ನೆಡೆಯುವ ಹಬ್ಬಗಳು ಈ ರೀತಿಯಲ್ಲಿವೆ

ಜೂನ್ 4 ಧ್ವಜ ಹಾರೋಹಣ, ಮೇರಿಮಾತೆಯ ಜನ್ಮದಿನ ಮತ್ತು ಪ್ರವಾದಿ ಜಾನ್ ರವರ ಜನ್ಮದಿನ. 3. ಕ್ರಿಸ್ಮಸ್ ಡಿಸೆಂಬರ್ 25. ವರ್ಷಕೊಮ್ಮೆ ಸಂತ ಅಂಥೋನಿಯವರ ಜಾತ್ರೆ ದೊಡ್ಡದಾಗಿ ನಡೆಯುತ್ತದೆ. ಆ ಜಾತ್ರೆಗೆ ಎಲ್ಲ ಧರ್ಮೀಯರು ಸೇರುತ್ತಾರೆ .

ಇನ್ನು ಕೆಲವು ಹಬ್ಬಗಳು ಆಯಾ ಕ್ಯಾಲೆಂಡರ್ ನ ದಿನಾಂಕಗಳಿಗೆ ತಕ್ಕಂತೆ ಆಚರಿಸುತ್ತಾರೆ ಉದಾಹರಣೆ ಈಸ್ಟರ್, ಗುಡ್ ಫ್ರೈಡೇ. ಇನ್ನು ಮುಂತಾದ ಹಬ್ಬಗಳನ್ನು ಆಚರಿಸುತ್ತಾರೆ

ಪ್ರವಾಸಿಗರ ಅನುಕೂಲಕ್ಕಾಗಿ

1.ಈ ಚರ್ಚ್ ಇಡೀ ದಿನ ತೆರೆದಿರುತ್ತದೆ.

2. ಚರ್ಚ್ ಗೆ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ.

3. ನಾವು ಯಾವುದೇ ಧರ್ಮದವರಾಗಿದ್ದರೂ ಒಳಗೆ ಹೋಗಿ ಪ್ರಾರ್ಥಿಸಬಹುದು.
4. ಪ್ರವಾಸಿಗರ ತಂಗಲು ಕೊಠಡಿಗಳ ವ್ಯವಸ್ಥೆ ಇರುತ್ತದೆ.

ಇರುವುದು ಒಂದೇ ಜೀವನ. ನಮ್ಮನ್ನು ನಾವೇ ಹುಡುಕುವ ಸಾಹಸಕ್ಕೆ ಕೈ ಹಾಕುವ ನಾವು ಪ್ರವಾಸಕ್ಕೆ ಎಂದಿಗೂ ಬ್ರೇಕ್ ಹಾಕೋದು ಬೇಡ. ಹುಡುಕಿ ನಿಮ್ಮ ಮನೆಯ ಹಾದಿಯಲ್ಲೇ ನಿಮಗೆ ತಿಳಿಯದ ಸ್ಥಳಗಳಿರುತ್ತವೆ .ಆ ಸ್ಥಳಗಳನ್ನು ಹುಡುಕಿ ನಿಮ್ಮೊಳಗಿನ ಪ್ರವಾಸಿ ಆತ್ಮವನ್ನು ಹೊರಗೆ ತನ್ನಿ. ಯಶಸ್ವಿ ಪ್ರವಾಸ ನಿಮ್ಮದಾಗಲಿ ಯಶಸ್ವಿ ಪ್ರವಾಸಿ ನೀವಾಗಿ!

ದಾರಿ ಹೇಗೆ?

ಮೈಸೂರು ಮಾರ್ಗ ಮಧ್ಯೆ ಡೋರನಹಳ್ಳಿ ಸಿಗುತ್ತದೆ. ಕೆಆರ್‌ ನಗರ ಮಾರ್ಗವಾಗಿ ಬರುವವರು ಬಹಳ ಸುಲಭವಾಗಿ ಚರ್ಚ್‌ ಗೆ ಭೇಟಿ ನೀಡಬಹುದು. ಸರ್ಕಾರಿ ಮತ್ತು ಖಾಸಗಿ ಬಸ್‌ಗಳಿವೆ. ಬೈಕು, ಕಾರುಗಳಲ್ಲೂ ತಲುಪಬಹದು.