ಸಾಗರದ ದಾರಿಯಲ್ಲಿ… ಮತ್ತೆ ಸಿಕ್ಕ ಬಾಲ್ಯ
ಸಾಗರಕ್ಕೆ ಹೋದಾಗ ನಾನು ಪ್ರವಾಸಿಯಾಗುವುದಿಲ್ಲ. ಕಲ್ಲು, ಮಣ್ಣು, ಟಾರಿನ ದಾರಿಗಳನ್ನು ಹುಡುಕುವುದಕ್ಕಿಂತ, ನನ್ನೊಳಗೆ ಉಳಿದಿರುವ ಹಳೆಯ ನೆನಪಿನ ಹೆಜ್ಜೆಗಳನ್ನೇ ಮತ್ತೆ ಹುಡುಕುತ್ತೇನೆ. ಕೆಲವು ಊರುಗಳು ನಮ್ಮನ್ನು ಮತ್ತೆ ಕರೆಯುತ್ತವೆ. ಅಲ್ಲಿಗೆ ಹೋದಾಗ ನಾವು ಕೇವಲ ಒಂದು ಊರನ್ನು ನೋಡುವುದಿಲ್ಲ, ಕಾಲದ ಯಾವುದೋ ತಿರುವಿನಲ್ಲಿ ಬಿಟ್ಟು ಬಂದ ನಮ್ಮನ್ನೇ ಮತ್ತೆ ಭೇಟಿಯಾಗುತ್ತೇವೆ. ಸಾಗರದ ದಾರಿಯಲ್ಲಿ… ನನಗೆ ಮತ್ತೆ ಸಿಕ್ಕಿದ್ದು ಒಂದು ಊರಲ್ಲ. ನನ್ನ ಬಾಲ್ಯ.
- ಮೇಘನಾ ಕಾನೇಟ್ಕರ್
ಕೆಲವು ಊರುಗಳು ನಮ್ಮ ವಿಳಾಸವಾಗಿರುತ್ತವೆ. ಇನ್ನು ಕೆಲವು ಊರುಗಳು ಮಾತ್ರ ನಮ್ಮೊಳಗೇ ಒಂದು ಪ್ರಪಂಚವಾಗಿ ಉಳಿದುಬಿಡುತ್ತವೆ. ʼಸಾಗರʼ ನನಗೆ ಅಂಥ ಊರು. ಅದು ನನ್ನ ಹುಟ್ಟೂರು ಮಾತ್ರವಲ್ಲ, ಅಜ್ಜನ ಮನೆಯ ನೆನಪುಗಳನ್ನೂ, ಬೇಸಗೆ ರಜೆಯ ಮಜವನ್ನೂ, ಬದುಕಿನ ಅತ್ಯಂತ ಸುಂದರ ಕ್ಷಣಗಳನ್ನೂ ತನ್ನ ಹಸಿರಿನೊಳಗೆ ಬಚ್ಚಿಟ್ಟುಕೊಂಡಿರುವ ಊರು.
ಇದನ್ನೂ ಓದಿ: ವರದಹಳ್ಳಿಯಲ್ಲಿ ಶ್ರೀಧರಸ್ವಾಮಿಗಳ ಪವಾಡ
ಬೇಸಗೆ ರಜೆ ಎಂದರೆ ಸಾಕು, ಮನಸು ಸಾಗರದ ದಾರಿ ಹಿಡಿಯುತ್ತಿತ್ತು. ಅಜ್ಜನ ಮನೆ ತಲುಪಿದ ಖುಷಿಯ ಬೆನ್ನಲ್ಲೇ ವರದಹಳ್ಳಿಯ ಶ್ರೀಧರಾಶ್ರಮ, ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ, ಇವೆರಡಕ್ಕೂ ಕುಟುಂಬದ ಜತೆ ಹೋಗುವುದು ನಮ್ಮ ಸಂಭ್ರಮಗಳಲ್ಲೊಂದು. ಆ ದಾರಿಗಳಲ್ಲಿ ಪ್ರಯಾಣವೆಂದರೆ ಪ್ರಯಾಣವಲ್ಲ, ಅದು ಬಾಲ್ಯದ ಮತ್ತೊಂದು ಪುಟವನ್ನು ತೆರೆದಂತೆ.
ಕಳೆದ ನಾಲ್ಕೈದು ವರ್ಷಗಳು ಕೆಲಸದ ಓಟದಲ್ಲಿ ಕಳೆದುಹೋದವು. ಅಜ್ಜನ ಮನೆಗೂ, ಆ ಎರಡು ಪ್ರಿಯ ಸ್ಥಳಗಳಿಗೂ ಹೋಗಲಾಗಲಿಲ್ಲ. ಆದರೆ ಇತ್ತೀಚಿಗೆ ಎರಡ್ಮೂರು ತಿಂಗಳ ಹಿಂದೆ ಮತ್ತೆ ಸಾಗರದ ದಾರಿ ಹಿಡಿದಾಗ, ಎಷ್ಟೋ ವರ್ಷಗಳಿಂದ ಮನಸಿನ ಯಾವುದೋ ಮೂಲೆಯಲ್ಲಿ ಕಾಯುತ್ತಿದ್ದ ಬಾಲ್ಯವೇ ಓಡಿಬಂದು ಕೈ ಹಿಡಿದಂತಾಯಿತು.

ವರದಹಳ್ಳಿಯ ಮೌನ
ವರದಹಳ್ಳಿ… ಹೆಸರೇ ಮನಸಿನಲ್ಲಿ ಒಂದು ನಿಶ್ಶಬ್ದವನ್ನು ಸೃಷ್ಟಿಸುತ್ತದೆ. ಸಹ್ಯಾದ್ರಿಯ ಮಡಿಲಲ್ಲಿ ನೆಲೆಸಿರುವ ಶ್ರೀಧರಾಶ್ರಮದ ಸುತ್ತಲಿನ ಹಸಿರು, ತಂಗಾಳಿಯ ಸದ್ದಿನ ನಡುವೆ ಬೆರೆತ ಮೌನ, ಅಲ್ಲಿ ನಿಂತಾಗ ಮನಸಿನೊಳಗಿನ ಗದ್ದಲವೆಲ್ಲ ನಿಧಾನವಾಗಿ ಕರಗುತ್ತದೆ. ಶ್ರೀಧರ ಸ್ವಾಮಿಗಳು ಇಲ್ಲಿ ನೆಲೆಸಿ ಆಶ್ರಮ ಸ್ಥಾಪಿಸಿ, ಧರ್ಮಧ್ವಜವನ್ನು ಏರಿಸಿದರೆಂಬ ಪರಂಪರೆ ಇದೆ. ನೀರಿನ ಕೊರತೆಯನ್ನು ಕಂಡು ಅವರು ಬಲಗಾಲಿನ ಹೆಬ್ಬೆರಳಿನಿಂದ ನೆಲವನ್ನು ಒತ್ತಿದಾಗ ನೀರಿನ ಒರತೆ ಕಾಣಿಸಿಕೊಂಡಿತು, ಅದೇ ಶ್ರೀಧರ ತೀರ್ಥವಾಗಿ ಹರಿಯುತ್ತಿದೆ ಎಂಬ ನಂಬಿಕೆಯೂ ಇಲ್ಲಿದೆ.
ಆ ನೀರಿನ ಹರಿವಿಗಿಂತಲೂ, ಅಲ್ಲಿ ಕುಳಿತಾಗ ಮನಸಿನಲ್ಲಿ ಹರಿಯುವ ನೆಮ್ಮದಿ ನನಗೆ ದೊಡ್ಡದು. ಬಹುಶಃ ಅದಕ್ಕೇ ವರದಹಳ್ಳಿ ನನ್ನ ಪಾಲಿಗೆ ಮನಸು ತನ್ನನ್ನೇ ಮತ್ತೆ ಕಂಡುಕೊಳ್ಳುವ ನೆಮ್ಮದಿ ಕೇಂದ್ರ.
ವರದಹಳ್ಳಿಯ ನೆನಪು ಬಂದಾಗ ಕನ್ನಡದ ‘ಅಮೃತಘಳಿಗೆ’ ಚಿತ್ರದ ದೃಶ್ಯಗಳು ಮನಸಿನ ಪರದೆಯ ಮೇಲೆ ಮೂಡುತ್ತದೆ. ಮಲೆನಾಡಿನ ಹಸಿರು, ನಿಶ್ಶಬ್ದ ಮತ್ತು ಭಾವನೆಗಳನ್ನು ಬೆಳ್ಳಿತೆರೆಯ ಮೇಲೆ ಕಂಡಿದ್ದ ದಿನಗಳು ನೆನಪಾಗುತ್ತವೆ. ಇಂದು ಅದೇ ಮಲೆನಾಡಿನ ತಂಗಾಳಿಯಲ್ಲಿ ನಿಂತಾಗ, ಬೆಳ್ಳಿತೆರೆಯ ದೃಶ್ಯಗಳಿಗೂ ನಿಜ ಜೀವನದ ಈ ನೆಲಕ್ಕೂ ಒಂದು ಏಕಾಂತದ ಸಂಬಂಧವಿದೆ ಅನಿಸುತ್ತದೆ. ಹೇಗೆ ಸಿನಿಮಾ ಮುಗಿದರೂ ಕೆಲವು ದೃಶ್ಯಗಳು ಮನಸಿನಲ್ಲಿ ಉಳಿಯುವಂತೆ, ಈ ನೆಲವೂ ಒಮ್ಮೆ ಕಂಡ ಮೇಲೆ ನೆನಪಿನಲ್ಲಿ ಉಳಿದುಬಿಡುತ್ತದೆ.
ಐತಿಹಾಸಿಕ ತಾಣ ಇಕ್ಕೇರಿ
ಇಕ್ಕೇರಿ ಎಂದರೆ ಮತ್ತೊಂದು ಲೋಕ. ಸಾಗರದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಈ ನೆಲ ಒಮ್ಮೆ ಕೆಳದಿ ನಾಯಕರ ರಾಜಧಾನಿಯಾಗಿತ್ತು. 16–17ನೆಯ ಶತಮಾನಗಳ ಕೆಳದಿ ಪರಂಪರೆಯನ್ನು ಹೊತ್ತ ಅಘೋರೇಶ್ವರ ದೇವಾಲಯವು ಕಲ್ಲಿನಲ್ಲಿ ಕೆತ್ತಿದ ಇತಿಹಾಸದಂತಿದೆ.
ಗ್ರಾನೈಟ್ ಕಲ್ಲಿನಲ್ಲಿ ಮೂಡಿರುವ ಈ ದೇವಾಲಯದಲ್ಲಿ ವಿಜಯನಗರ ಮತ್ತು ದ್ರಾವಿಡ ವಾಸ್ತುಶೈಲಿಗಳ ಸೊಗಸಾದ ಮೇಳೈಸುವಿಕೆ ಕಾಣುತ್ತದೆ. ಅಘೋರೇಶ್ವರನ ಗರ್ಭಗುಡಿ, ಪಾರ್ವತಿಯ ಸನ್ನಿಧಿ, ಭವ್ಯವಾದ ನಂದಿ, ಅಲಂಕೃತ ಮಂಟಪಗಳು, ಪ್ರತಿಯೊಂದರಲ್ಲೂ ಶಿಲ್ಪಿಯ ಕೈಚಳಕದ ಸೂಕ್ಷ್ಮತೆ ಗೋಚರಿಸುತ್ತದೆ. ಗರ್ಭಗುಡಿಯ ಸುತ್ತಲಿನ 32 ಶಕ್ತಿರೂಪಗಳ ಶಿಲ್ಪಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.

ಇನ್ನೂ ಹಲವು ವಿಶೇಷಗಳು
ಸಾಗರವೆಂದರೆ ವರದಹಳ್ಳಿ, ಇಕ್ಕೇರಿ ಮಾತ್ರವಲ್ಲ. ಜೋಗದ ಧುಮ್ಮಿಕ್ಕುವ ರುದ್ರ ರಮಣೀಯ ಜಲಪಾತ, ಸಿಗಂದೂರಿನ ಅಮ್ಮನವರು, ಹಿಂದೆ ತೆಪ್ಪ-ಲಾಂಚ್ನಲ್ಲಿ ನದಿ ದಾಟುತ್ತಿದ್ದ ದಿನಗಳು, ಕೆಳದಿ ಕೋಟೆಯ ಇತಿಹಾಸ, ಹೊಸಗುಂದ ಉಮಾಮಹೇಶ್ವರ, ವಡನಬೈಲು ಬಳೆಪದ್ಮಾವತಿಯ ಸಾನ್ನಿಧ್ಯ, ಊರ ಮಧ್ಯದ ಮಾರಿಕಾಂಬೆಯ ಕೃಪೆ, ಹೀಗೆ ಸಾಗರದ ಪ್ರತಿಯೊಂದು ದಾರಿಗೂ ಒಂದೊಂದು ನೆನಪು ಇದೆ.
ಅಲ್ಲಿನ ಜನರ ಮಾತಿನಲ್ಲಿ ಮಲೆನಾಡಿನ ಮಮತೆ ಇದೆ. ಆತುರವಿಲ್ಲದ ಬದುಕು, ಕಿರಿಕಿರಿಯಿಲ್ಲದ ವಾತಾವರಣ, ಕಣ್ಣಿಗೆ ಹಬ್ಬವಾಗುವ ಹಸಿರು, ಸಾಗರದಲ್ಲಿ ಸಮಯವೂ ಸ್ವಲ್ಪ ನಿಧಾನವಾಗಿ ನಡೆಯುವಂತೆ ಅನಿಸುತ್ತದೆ.
ಮತ್ತೆ, ಮಲೆನಾಡಿನ ಊಟ ಅಂತೂ ಆಹಾ! ತಂಬುಳಿ, ಹಶಿ, ಪೊಳಜ, ಕೆಂಪಕ್ಕಿ ಅನ್ನ-ತಿಳಿಸಾರು, ತರಕಾರಿ ಗಸಿ, ಅಪ್ಪೆಹುಳಿ… ಇವು ಹೊಟ್ಟೆ ತುಂಬಿಸುವ ರುಚಿಗಳಷ್ಟೇ ಅಲ್ಲ, ಮಲೆನಾಡಿನ ಅಡುಗೆಮನೆಯಿಂದ ಹೊಮ್ಮುವ ಅಮೃತದಂಥ ರುಚಿಗಳು. ಒಂದು ತುತ್ತು ಬಾಯಿಗೆ ಹೋದರೆ, ಅದರ ಜತೆ ಒಂದು ಬೇಸಗೆ ರಜೆಯೂ ನೆನಪ ಭಿತ್ತಿಯಲಿ ಹಾದು ಹೋಗುತ್ತದೆ.
ಯಾವಾಗ ಹೋಗಬೇಕು?
ಈಗ ನಿಮಗೂ ಒಮ್ಮೆ ಸಾಗರಕ್ಕೆ ಹೋಗಬೇಕು ಅನಿಸಿರಬೇಕು ಅಲ್ಲವೇ? ಹಾಗಾದರೆ ಯಾವ ಕಾಲದಲ್ಲಿ ಬರಬೇಕು? ಎಂಬುದಕ್ಕೂ ಒಂದು ಸಣ್ಣ ಉತ್ತರ ಇದೆ. ಮಳೆಗಾಲದ ನಂತರದ ಅಂದರೆ ಸೆಪ್ಟೆಂಬರ್ನಿಂದ ಫೆಬ್ರವರಿವರೆಗೆ ಹಸಿರು ಮಲೆನಾಡನ್ನು ಆಸ್ವಾದಿಸಲು ಹಾಗೂ ಆರಾಮವಾಗಿ ಸುತ್ತಾಡಲು ಸೂಕ್ತ ಕಾಲವೆಂದು ಹೇಳಬಹುದು. ಮಳೆಗಾಲದ ಸಾಗರ ತನ್ನದೇ ಅದ್ಭುತ ಸೌಂದರ್ಯ ಹೊಂದಿದ್ದರೂ, ಭಾರಿ ಮಳೆಯ ದಿನಗಳಲ್ಲಿ ರಸ್ತೆ ಪ್ರಯಾಣವನ್ನು ಯೋಜಿಸುವಾಗ ಕೊಂಚ ಜಾಗ್ರತೆ ಇರಲಿ.
ದಾರಿ ಹೇಗೆ?
ಸಾಗರಕ್ಕೆ ಸ್ವಂತ ವಾಹನದಲ್ಲಿ ಬರುವವರಿಗೆ ದಾರಿಯೇ ಒಂದು ಅನುಭವ. ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ, ಹುಬ್ಬಳ್ಳಿ ಕಡೆಯಿಂದ ಶಿರಸಿ ಮಾರ್ಗವಾಗಿ, ಮಂಗಳೂರು ಕಡೆಯಿಂದ ಕರಾವಳಿ, ಮಲೆನಾಡಿನ ದಾರಿಯಲ್ಲಿ ಸಾಗರ ತಲುಪಬಹುದು. ಬಸ್ಸಿನಲ್ಲಿ ಬರುವವರಿಗೆ ಶಿವಮೊಗ್ಗ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳಿಂದ ರಸ್ತೆ ಸಂಪರ್ಕವಿದೆ.
ರೈಲಿನಲ್ಲಿ ಬರುವವರಿಗೆ ಸಾಗರ ಜಂಬಗಾರು ಮತ್ತು ತಾಳಗುಪ್ಪ ರೈಲು ನಿಲ್ದಾಣಗಳು ಉಪಯುಕ್ತ. ಅಲ್ಲಿಂದ ಸ್ಥಳೀಯ ಬಸ್, ಆಟೋ ಅಥವಾ ಟ್ಯಾಕ್ಸಿ ಮೂಲಕ ಸುತ್ತಮುತ್ತಲಿನ ತಾಣಗಳನ್ನು ತಲುಪಬಹುದು. ವಿಮಾನದಲ್ಲಿ ಬರುವವರು ಮಂಗಳೂರು, ಬೆಂಗಳೂರು ಅಥವಾ ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ತಮ್ಮ ಪ್ರಯಾಣದ ಆರಂಭಿಕ ಬಿಂದುವಾಗಿ ಆಯ್ಕೆ ಮಾಡಿಕೊಂಡು, ಅಲ್ಲಿಂದ ರಸ್ತೆ ಮೂಲಕ ಸಾಗರ ತಲುಪಬಹುದು.
ಲೇಖಕರು: ಲೇಖಕಿ