Monday, March 30, 2026
Monday, March 30, 2026

ಬೆಟ್ಟ ಹೇಳುತೈತೆ ನೂರೊಂದು ಕತೆ

ಸುತ್ತಲೂ ದಟ್ಟವಾದ ಕಾಡಿದೆ. ರಣಹದ್ದುಗಳು ಹಾರಾಡುತ್ತಿರುತ್ತವೆ. ಅಲ್ಲಿ ದೊಡ್ಡದಾದ ಬೆಟ್ಟವಿದೆ. ಬೆಟ್ಟದ ನಡುವೆ ಕಲ್ಲಿನ ಮೆಟ್ಟಿಲು, ಒಂದೊಂದು ಮೆಟ್ಟಿಲನ್ನೂ ಏರುತ್ತಾ ಹೋದರೆ ಪಟ್ಟಾಭಿರಾಮ ಸಿಗುತ್ತಾನೆ. ಅಲ್ಲಿ ಹನುಮನೂ ಇದ್ದಾನೆ. ಬೆಟ್ಟದ ಹಾದಿಯ ಜಾಡು ಹಿಡಿದು ಹೋದರೆ ಒಂದೊಳ್ಳೆ ಟ್ರೆಕ್ಕಿಂಗ್‌ ಆಗುತ್ತದೆ. ಅರೆರೆ.. ನಾನು ಹೇಳುತ್ತಿರುವುದು ರಾಮದೇವರ ಬೆಟ್ಟದ ಬಗ್ಗೆ. ಸೂಪರ್‌ ಹಿಟ್‌ ಬಾಲಿವುಡ್‌ ಸಿನಿಮಾ ಶೋಲೇ ಚಿತ್ರೀಕರಣವಾದ ನಂತರ ಶೋಲೇ ಬೆಟ್ಟ ಎಂದೇ ಖ್ಯಾತವಾಯಿತಲ್ಲ ಅದೇ ಬೆಟ್ಟದ ಬಗ್ಗೆ.

-ಯತೀಶ ಎಸ್

ರಾಮದೇವರಬೆಟ್ಟ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಶ್ರೀರಾಮನ ಚಿತ್ರ ಸರಿದು ಹೋಗುತ್ತದೆ. ಮನಸಿನಲ್ಲಿ ರಾಮನ ಜಪವೂ ಶುರುವಾಗುತ್ತದೆ. ಭಾರತದಲ್ಲಿ ಪ್ರಭು ಶ್ರೀರಾಮನ ಸಾವಿರಾರು ದೇವಾಲಯಗಳಿವೆ. ಹೊರ ದೇಶದಲ್ಲೂ ಅವನ ಮಹಿಮೆಯಿದೆ. ರಾಮನಾಮ ಹಾಡಿದರೆ ಖಂಡಿತ ರಾಮ ಬರುತ್ತಾನೆ. ಅವನ ಜತೆಗೆ ಹನುಮನೂ ಬರುತ್ತಾನೆ ಎಂಬುದು ಭಕ್ತರ ನಂಬಿಕೆ. ರಾಮ ನೆಲೆಸಿದ ಮತ್ತು ನಡೆದಾಡಿದ ಹಲವು ಜಾಗಗಳು ಈ ಜಗತ್ತಿನಲ್ಲಿದೆ. ಪ್ರತಿ ಜಾಗದಲ್ಲೂ ಅವನು ಮಾಡಿದ ಪವಾಡ ಮತ್ತು ಅವನ ಕುರುಹುಗಳಿವೆ. ನಮ್ಮ ರಾಜಧಾನಿ ಬೆಂಗಳೂರಿನಿಂದ 40-50 ಕಿಮೀ ದೂರದಲ್ಲೇ ರಾಮನ ಬೆಟ್ಟವೊಂದಿದೆ. ಅದು ರಾಮದೇವರ ಬೆಟ್ಟ. ಸಿನಿ ಪ್ರಿಯರಿಗೆ ಶೋಲೇ ಬೆಟ್ಟ ಎಂದರೆ ಕೂಡಲೇ ನೆನಪಾಗಬಹುದು. ಈ ರಾಮದೇವರ ಬೆಟ್ಟವು ಪ್ರಸಿದ್ಧ ಧಾರ್ಮಿಕ ತಾಣ. ಚಾರಣ ಪ್ರಿಯರಿಗಂತೂ ತೀರಾ ಆಪ್ತವೆನಿಸುವ ಜಾಗ. ಇಲ್ಲಿ ಭಕ್ತಿಯೂ ಇದೆ. ಸಾಹಸವೂ ಇದೆ. ಭಕ್ತಿಗೆ ರಾಮ ಮತ್ತು ಹನುಮನ ದರ್ಶನ. ಸಾಹಸಕ್ಕೆ ಚಾರಣ. ಮೈಮನಸಿಗೆ ಮುದ ನೀಡಲು ಮತ್ತೇನು ಬೇಕು?
ಇದನ್ನೂ ಓದಿ: ಸಂಜು ಮತ್ತು ಗೀತಾ ಮಾಡಿದ ಟೂರ್‌ಗೆ ಇಂಪಾಕ್ಟ್‌ ಪ್ರಶಸ್ತಿ

ರಾಮದೇವರ ಬೆಟ್ಟ ಮತ್ತು ಅಭಯಾರಣ್ಯ

ಶ್ರೀ ರಾಮಗಿರಿ ಕ್ಷೇತ್ರ ಎಂದೇ ಕರೆಯಲ್ಪಡುವ ರಾಮದೇವರ ಬೆಟ್ಟ ಭಾರತ ಮತ್ತು ಏಷ್ಯಾದಾದ್ಯಂತ ಇರುವ ಕೆಲವೇ ಕೆಲವು ರಣಹದ್ದು ಅಭಯಾರಣ್ಯಗಳಲ್ಲಿ ಒಂದಾಗಿದೆ. ಭಾರತದಲ್ಲಿ ಕಂಡುಬರುವ ಒಂಬತ್ತು ಜಾತಿಯ ರಣಹದ್ದುಗಳಲ್ಲಿ, ರಾಮನಗರ ಜಿಲ್ಲೆಯು ಮೂರು ಜಾತಿಯ ರಣಹದ್ದುಗಳಿಗೆ ನೆಲೆಯಾಗಿದೆ. ಇಲ್ಲಿ ಉದ್ದ ಕೊಕ್ಕಿನ ರಣಹದ್ದು ಖ್ಯಾತಿಪಡೆದಿವೆ. ಈ ಬೆಟ್ಟವು ಸುತ್ತಲೂ ಬಂಡೆಗಳಿಂದ ಕೂಡಿದ ಒಂದು ಪವಿತ್ರ ಸ್ಥಳ, ತನ್ನ ಸುತ್ತಲಿನ ಬೃಹತ್‌ ಬಂಡೆಗಳ ನಡುವೆ ರಾಜನಂತೆ ತಲೆ ಎತ್ತಿ ನಿಂತಿರುವ ಈ ಬೆಟ್ಟಕ್ಕೆ ದೊಡ್ಡ ಇತಿಹಾಸವೇ ಇದೆ. ಸೀತೆಯ ಅಪಹರಣದ ಸಂದರ್ಭದಲ್ಲಿ ರಾಮನು ಲಂಕೆಗೆ ಹೋಗುವಾಗ ಇಲ್ಲಿಯೇ ಉಳಿದಿದ್ದಿರಬಹುದು ಎಂಬ ನಂಬಿಕೆಯಿದೆ. ನಂಬಿಕೆಯಷ್ಟೇ ಅಲ್ಲ ನಂಬಬಹುದಾದ ಕುರುಹು ಮತ್ತು ಸಾಕ್ಷ್ಯರೂಪಗಳೂ ಇವೆ. ಈ ಸ್ಥಳಕ್ಕೆ ಸಂಬಂಧಿಸಿದ ಅತ್ಯಂತ ಆಸಕ್ತಿದಾಯಕ ಕಥೆಗಳಲ್ಲಿ ಪ್ರಮುಖವಾದದ್ದು; ರಾಮನು ಕಾಕಾಸುರನನ್ನು (ಇಂದ್ರನ ಮಗ ಕಾಗೆ ರಾಕ್ಷಸ) ದರ್ಭೆ ಹುಲ್ಲಿನ ಬಾಣದಿಂದ ಕೊಂದ ಎನ್ನಲಾಗುತ್ತದೆ. ದೇವತೆಗಳು ಸಹಾಯವನ್ನು ನಿರಾಕರಿಸಿದಾಗ ಕಾಕಾಸುರನು ಆಶ್ರಯ ಪಡೆದು ರಾಮನಲ್ಲಿ ಕ್ಷಮೆ ಯಾಚಿಸುತ್ತಾನೆ. ರಾಮನು ರಾಕ್ಷಸನ ಶಾಪಗ್ರಸ್ತ ರೂಪವಾಗಿದ್ದ ಕಾಗೆಯಾಗುವುದರಿಂದ ಅವನನ್ನು ಮುಕ್ತಗೊಳಿಸಿದ ಕಾರಣ, ಈ ಸ್ಥಳದಲ್ಲಿ ಮತ್ತು ಸುತ್ತಮುತ್ತ ಯಾವುದೇ ಕಾಗೆಗಳು ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತದೆ.ಬೆಂಗಳೂರಿನ ನಿರ್ಮಾತೃ ಎಂದು ಕರೆಸಿಕೊಂಡಿರುವ ಶ್ರೀ ಕೆಂಪೇಗೌಡರ ಆಳ್ವಿಕೆಯಲ್ಲಿ ಈ ದೇವಾಲಯವನ್ನು ನವೀಕರಿಸಲಾಗಿದೆ.

Untitled design (14)

ಅದು ಬೆಟ್ಟ ಇದು ಬೆಟ್ಟವೋ

ಈ ಪ್ರಾಚೀನ ಬೆಟ್ಟವು ಪುರಾಣ ಮತ್ತು ಇತಿಹಾಸವನ್ನು ಹೊದ್ದು ಕೂತಿದೆ. ಇದು ಚಾರಣಿಗರು ಮತ್ತು ಅಧ್ಯಾತ್ಮ ಪ್ರಿಯರಿಗೆ ಮನಃಶಾಂತಿಯ ತಾಣವಾಗಿದೆ. ಬೆಂಗಳೂರಿನಿಂದ ಸುಮಾರು 50 ಕಿಮೀ ದೂರದಲ್ಲಿ ಈ ಬೆಟ್ಟವಿದೆ. ಹೆಚ್ಚೆಂದರೆ ಒಂದು ಗಂಟೆಯ ಹಾದಿ. ಬೆಟ್ಟದ ಆರಂಭದಲ್ಲಿಯೇ ದೇವಾಲಯದ ಕಮಾನು ಕಾಣಿಸುತ್ತದೆ. ಒಬ್ಬರಿಗೆ 20 ರುಪಾಯಿ ಹಾಗೂ ಕಾರಿಗೆ 35ರು ಪ್ರವೇಶ ಶುಲ್ಕವಿರುತ್ತದೆ. ಸ್ವಲ್ಪ ಮುಂದೆ ಸರಿದು ಕಾರು ಪಾರ್ಕ್ ಮಾಡಿ ನಡೆದರೆ ಸುಮಾರು 400 ಮೆಟ್ಟಿಲುಗಳು ಕಾಣಿಸುತ್ತವೆ. ರಾಮಭಧ್ರನ ಮಹಿಮೆಯ ಹಾಡಿಕೊಂಡು ಬೆಟ್ಟವನ್ನು ಆರಾಮವಾಗಿ ಹತ್ತಬಹುದು. ಮೆಟ್ಟಿಲು ಹತ್ತುತ್ತಿದ್ದಂತೆಯೇ ಬಲಕ್ಕೆ ಒಂದು ಸುಂದರ ಶಿವನ ಮೂರ್ತಿ ಕಾಣಿಸುತ್ತದೆ. ಅವನಿಗೆ ತಲೆ ಬಾಗಿ ಹಾಗೆ ಕೊಂಚ ಮುಂದೆ ಹೋದರೆ ಒಂದು ದೊಡ್ಡ ಅರಳಿ ಮರದ ಕೆಳಗೆ ಮೆಟ್ಟಿಲೇರಿ ಬಳಲಿದ ಜನರು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಅಲ್ಲೇ ಕೈ ಕಾಲು ತೊಳೆದು ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ರಾಮ ನಮ್ಮ ಜತೆಯಲ್ಲಿಯೇ ಇದ್ದಂತೆ ಭಾಸವಾಗುತ್ತದೆ. ಗರ್ಭ ಗುಡಿಯ ಒಳಗೆ ಪಟ್ಟಾಭಿರಾಮ ಬರಮಾಡಿಕೊಳ್ಳುತ್ತಾನೆ. ಅಲ್ಲೇ ಕುಳಿತು ನಂತರ ಆಚೆ ಬಂದು ಬೆಟ್ಟದ ತುದಿಗೆ ಹತ್ತಬೇಕೆನಿಸಿದರೆ ಅಲ್ಲೇ ಕಾಣ ಸಿಗುವ ಒಂದು ಸಣ್ಣ ದಾರಿಯಲ್ಲಿ ಬಂಡೆಗಳ ನಡು ಹಾದಿಯಲ್ಲಿ ನಡೆಯುತ್ತಾ ಹೋಗಬೇಕು. ಒಂದು ದೊಡ್ಡ ಬಂಡೆಯಲ್ಲೇ ಚಿಕ್ಕ ಮೆಟ್ಟಿಲುಗಳಿವೆ. ಅಲ್ಲಿ ಸಾಥ್‌ಗೆ ಕೇವಲ ಎರಡು ಕಬ್ಬಿಣದ ಸರಳುಗಳು ಆಪತ್ಭಾಂದವರಂತೆ ಸಹಾಯಕ್ಕೆ ಬರುತ್ತವೆ. ಆ ಮೆಟ್ಟಿಲುಗಳನ್ನು ಹತ್ತುವಾಗ ಅಪ್ಪಿತಪ್ಪಿಯೂ ಕೆಳಗೆ ನೋಡಬಾರದು.

ಆನಂದಮಯ ಜಗಹೃದಯ

ಬೆಟ್ಟದ ಅಂಚಿಗೆ ಸಾಗುತ್ತಿದ್ದಂತೆ ಇಡೀ ರಾಮನಗರದ ಸುಂದರ ನೋಟವನ್ನು ಸವಿಯಬಹುದು. ಬಿರು ಬಿಸಿಲಿನಲ್ಲೂ ತಂಪು ಗಾಳಿ ಬೀಸಿ ಮನಸಿಗೆ ಕಚಗುಳಿಯಿಡುತ್ತದೆ. ಕಣ್ಣುಗಳನ್ನು ತಂಪಾಗಿಸುವ ಕಲ್ಯಾಣಿಗಳು ನೋವನ್ನು ಕ್ಷಣದಲ್ಲೇ ಮರೆಸುತ್ತವೆ. ಅಲ್ಲಿಂದ ಕೆಳಗೆ ಬಂದರೆ ಮಧ್ಯಾಹ್ನದ ನಂತರ ಅಲ್ಲಿ ಅನ್ನ ದಾಸೋಹ ನಡೆಯುತ್ತಿರುತ್ತದೆ. ಊಟವನ್ನು ಮುಗಿಸಿ ಕೆಳಗೆ ಬಂದರೆ, ಕಣ್ಣು ಕುಕ್ಕುವ ಹಾಗೆ ಕಾಣಿಸುವ ಹದ್ದಿನ ಚಿತ್ರ ಹಾಗೂ ನಾಮ ಫಲಕ. ನಡೆದು ಒಳಗೆ ಹೋದರೆ ಸುಮಾರು ವೈಶಿಷ್ಟ್ಯದ ಹದ್ದು ಹಾಗೂ ಕೆಲ ಪಕ್ಷಿ ಸಂಕುಲವನ್ನು ಕಾಣಬಹುದು. ಸಮಯವಿದ್ದಲ್ಲಿ ಬೆಟ್ಟದಿಂದ 10 ಕಿಮೀ ದೂರವಿರುವ ಜಾನಪದ ಲೋಕಕ್ಕೆ ಭೇಟಿ ನೀಡಿ, ಸುಮಾರು ಹದಿನೈದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಸುಂದರ ತಾಣ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಬಹುದು. ಈ ಪ್ರದರ್ಶನಾಲಯದ ಒಳಗೆ ಹೋಗುತ್ತಿದ್ದಂತೆ ಜಾನಪದ ಲೋಕದ ಶಿಲ್ಪಿ ನಾಡೋಜ ದಿ. ನಾಗೇಗೌಡರ ದಿವ್ಯ ಮೂರ್ತಿ ಎಲ್ಲರನ್ನು ಸ್ವಾಗತಿಸುತ್ತದೆ. ಇಲ್ಲಿ ಗ್ರಾಮೀಣ ಗೃಹೋಪಯೋಗಿ ವಸ್ತುಗಳ ಸಂಗ್ರಹವನ್ನು ಕಾಣಬಹುದು. ಅಷ್ಟೇ ಅಲ್ಲದೆ ಜಾನಪದ ಕಲೆಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರ, ಗ್ರಾಮೀಣ ಕಲೆಗಳ ಮತ್ತು ಕಲಾ ಪ್ರದರ್ಶನಕ್ಕಾಗಿ ಬಳಸುವ ವಾದ್ಯಗಳು ಹಾಗೂ ಹಳ್ಳಿಗರು ಬಳಸುವ ಸರಕು ಸಾಧನಗಳು, ನಾಣ್ಯಗಳು, ಗೊಂಬೆಗಳನ್ನು ಒಳಗೊಂಡ ವಿವಿಧ ಬಗೆಯ ಆಕರ್ಷಕ ವಸ್ತುಗಳು ಕಾಣಿಸುತ್ತವೆ.

Untitled design (15)

ಮನವಿ

ಪ್ರೀತಿಯ ಪ್ರವಾಸಿಗರಿಗೆ ಒಂದು ಮನವಿ. ಇದು ದೇವಸ್ಥಾನ ಹಾಗಾಗಿ ಇಲ್ಲಿಗೆ ಬರುವವರು ಸೂಕ್ತ ಉಡುಪು ಧರಿಸಿ ಹೋಗುವುದು ಸೂಕ್ತ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಅಲ್ಲಿ ಇರುವ ಕಲ್ಯಾಣಿಗಳನ್ನು ಹಾಳು ಮಾಡದೆ ಮುಂದಿನ ಪೀಳಿಗೆಗೂ ಬೆಟ್ಟ ಬೆಟ್ಟವಾಗಿಯೇ ಉಳಿಯಲು ಸಹಕರಿಸಿ. ಪ್ರವಾಸಿಗರ ಸಹಕಾರ ಅತ್ಯಗತ್ಯ.

ದಾರಿ ಹೇಗೆ?
ರಾಜಧಾನಿ ಬೆಂಗಳೂರಿನಿಂದ 48 ಕಿಮೀ ದೂರದಲ್ಲಿದೆ.
ಬಸ್ ನಲ್ಲಿ ಬೆಂಗಳೂರಿಂದ ರಾಮನಗರದವರೆಗೂ ತಲುಪಿ ಅಲ್ಲಿಂದ ರಿಕ್ಷಾದ ಮೂಲಕ ಬೆಟ್ಟವನ್ನು ಹಾಗೂ ಜಾನಪದ ಲೋಕವನ್ನು ಸುತ್ತಿ ಬರಬಹುದು.
ಕಾರು ಅಥವಾ ಖಾಸಗಿ ವಾಹನದಲ್ಲಿ ಬೆಟ್ಟದ ಪಾದದವರೆಗೂ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..