ಕುಪ್ಪಸದ ಖಣ ನೋಡಬೇಕೆ? ಹಾಗಾದರೆ ಹದ್ದಿನಗುಂಡಿಗೆ ಬನ್ನಿ…
ಹೊಸಪೇಟೆಯಲ್ಲಿನ ಕರ್ನಾಟಕದ ಅತಿದೊಡ್ಡ ಜಲಾಶಯಗಳಲ್ಲಿ ಒಂದಾದ ತುಂಗಭದ್ರಾ ಆಣೆಕಟ್ಟೆಯನ್ನು ವೀಕ್ಷಿಸಿ, ಬಳಿಕ ಹೊಸಳ್ಳಿ ಮಾರ್ಗವಾಗಿ ಶಹಪುರ ಟೋಲ್‌ನಿಂದ ಕೆರೆಹಳ್ಳಿಗೆ ಬಂದರೆ ಸಾಕು. ಅಲ್ಲಿ ನಿಮಗೆ ತಾಯಿ ಅನ್ನಪೂರ್ಣೆ ಕೈ ಬೀಸಿ ಕರೆಯುತ್ತಾಳೆ. ಎಂತೆಂಥ ವಿಜ್ಞಾನಿಗಳನ್ನೂ ಮಕಾಡೆ ಮಲಗಿಸಿ, ಇಂಜಿನಿಯರ್‌ಗಳನ್ನೂ ದಂಗುಬಡಿಸಿ ರಾಷ್ಟ್ರೀಯ ಹೆದ್ದಾರಿಗಾಗಿ ತನ್ನ ಇರುವು ಕಳೆದುಕೊಳ್ಳದೇ ಇರುವ ಈ ಭಾಗದ ಏಕೈಕ ಶಕ್ತಿ ದೇವತೆ ಆಕೆ. ಇಲ್ಲಿನ ಒಂದು ಬೇವಿನ ಮರವನ್ನು ಜೆಸಿಬಿ ಯಂತ್ರದಿಂದ ಕತ್ತರಿಸಲು ಯೋಚಿಸಲಾಗಿತ್ತು. ಆಗ ಈ ಕಾರ್ಯಕ್ಕಾಗಿ ಬಂದ ಚಾಲಕ ದೃಷ್ಟಿ ಕಳೆದುಕೊಂಡ ಮತ್ತು ಜೆಸಿಬಿ ಯಂತ್ರದಲ್ಲಿನ ಡೀಸೆಲ್ ಕ್ಷಣದಲ್ಲೇ ಮಾಯವಾಯಿತು ಎನ್ನಲಾಗಿದ
- ಎಂ.ವಿ. ಜೋಷಿ, ಶಹಪುರ
ಕೊಪ್ಪಳ ಜಿಲ್ಲೆಯ ಐತಿಹಾಸಿಕ ದಿಂದಿರಿಗಿ ಪಟ್ಟಣ ಎಂದು ಕರೆಯುವ ಕೆರೆಹಳ್ಳಿ ಪರಿಸರ ನಿಗೂಢ ಐತಿಹ್ಯಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ. ಹೊರನೋಟಕ್ಕೆ ಕುರುಚಲು ಕಾಡು, ಕಲ್ಲುಬಂಡೆಗಳಂತೆ ಕಾಣುವ ಗುಡ್ಡವನ್ನು ಹತ್ತಿ ನೋಡಿದಾಗ ಬೆರಗುಗೊಳ್ಳುವ ಹಲವಾರು ವಿಸ್ಮಯಗಳು ನಿಮ್ಮನ್ನು ಅಚ್ಚರಿಗೊಳಿಸುತ್ತವೆ. ನಿಮ್ಮ ಸ್ನೇಹಿತರೊಂದಿಗೆ ಒಂದು ದಿನದ ಮಟ್ಟಿಗೆ ಬಿಡುವು ಮಾಡಿಕೊಂಡು ಬಂದು ಹೋಗಬಹುದಾದ ತಾಣವಿದು.
ಇದನ್ನೂ ಓದಿ:ಇದು ಆರುಮುಗಂ ಕೋಟೆ ಕಣೋ…!
ವಿಶ್ವವಿಖ್ಯಾತ ಹಂಪಿ ನೋಡುವ ಪ್ರವಾಸಿಗರು, ಬೆಟ್ಟ- ಗುಡ್ಡ, ಕಣಿವೆ- ಗಹ್ವರಗಳು, ಸುಂದರ ಪರಿಸರ ನೋಡುವ ಅಪೇಕ್ಷೆ ಇದ್ದರೆ, ಒಮ್ಮೆ ಕೊಪ್ಪಳ ಜಿಲ್ಲೆಯ ಕೆರೆಹಳ್ಳಿಗೆ ಬರಬೇಕು. ಅಲ್ಲಿ ʻಉರಗ ಪ್ರೇಮಿ' ವಸಂತ್ ಅವರನ್ನು ಸಂಪರ್ಕಿಸಿದರೆ ನಿಮಗೆ ಶಹಪುರದ ಪರಿಸರ ಪ್ರೇಮಿ ವೀರಣ್ಣ ಕೋಮಲಾಪುರ ಅವರ ಪರಿಚಯ ಮಾಡಿಕೊಡುತ್ತಾರೆ. ಅವರೊಂದಿಗೆ ರಾಮಾಲೆಪ್ಪ ಕುರಿ, ಹುಲ್ಲೇಶ್ ಕುರಿ ಮತ್ತು ಹುಲ್ಲೇಶ್ ಸಿಂದೋಗಿ ಎನ್ನುವವರು ಜತೆಯಾಗುತ್ತಾರೆ. ಅವರೊಂದಿಗೆ ಖಾರ-ಮಂಡಾಳು ಜತೆಗೆ ಹಸಿ ಮಿರ್ಚಿ- ಈರುಳ್ಳಿ ಸೇವಿಸಿ ಆದಿ ಹನುಮಪ್ಪ ಗುಡಿ ಬಳಿಯಿಂದ ಗುಡ್ಡ ಹತ್ತಲು ಅಣಿಯಾಗಬಹುದು.

ಐತಿಹಾಸಿಕ ತಾಣ
ಹೊಸಪೇಟೆಯಲ್ಲಿನ ಕರ್ನಾಟಕದ ಅತಿದೊಡ್ಡ ಜಲಾಶಯಗಳಲ್ಲಿ ಒಂದಾದ ತುಂಗಭದ್ರಾ ಆಣೆಕಟ್ಟೆಯನ್ನು ವೀಕ್ಷಿಸಿ, ಬಳಿಕ ಹೊಸಳ್ಳಿ ಮಾರ್ಗವಾಗಿ ಶಹಪುರ ಟೋಲ್‌ನಿಂದ ಕೆರೆಹಳ್ಳಿಗೆ ಬಂದರೆ ಸಾಕು. ಅಲ್ಲಿ ನಿಮಗೆ ತಾಯಿ ಅನ್ನಪೂರ್ಣೆ ಕೈ ಬೀಸಿ ಕರೆಯುತ್ತಾಳೆ. ಎಂತೆಂಥ ವಿಜ್ಞಾನಿಗಳನ್ನೂ ಮಕಾಡೆ ಮಲಗಿಸಿ, ಇಂಜಿನಿಯರ್‌ಗಳನ್ನೂ ದಂಗುಬಡಿಸಿ ರಾಷ್ಟ್ರೀಯ ಹೆದ್ದಾರಿಗಾಗಿ ತನ್ನ ಇರುವು ಕಳೆದುಕೊಳ್ಳದೇ ಇರುವ ಈ ಭಾಗದ ಏಕೈಕ ಶಕ್ತಿ ದೇವತೆ ಆಕೆ. ಇಲ್ಲಿನ ಒಂದು ಬೇವಿನ ಮರವನ್ನು ಜೆಸಿಬಿ ಯಂತ್ರದಿಂದ ಕತ್ತರಿಸಲು ಯೋಚಿಸಲಾಗಿತ್ತು. ಆಗ ಈ ಕಾರ್ಯಕ್ಕಾಗಿ ಬಂದ ಚಾಲಕ ದೃಷ್ಟಿ ಕಳೆದುಕೊಂಡ ಮತ್ತು ಜೆಸಿಬಿ ಯಂತ್ರದಲ್ಲಿನ ಡೀಸೆಲ್ ಕ್ಷಣದಲ್ಲೇ ಮಾಯವಾಯಿತು ಎನ್ನಲಾಗಿದೆ. ಮೂಲದಲ್ಲಿ ಮಹಾಲಕ್ಷ್ಮಿ ಎಂದು ಕರೆಯುವ ಆ ತಾಯಿಯನ್ನು ಕಾಲಾನಂತರದಲ್ಲಿ ಅನ್ನಪೂರ್ಣೇಶ್ವರಿ ಎಂದು ಕರೆಯಲಾಗುತ್ತಿದೆ.
ಆ ತಾಯಿಯ ದರ್ಶನ ಪಡೆದು ಅಗಳಕೇರಿ ದಾರಿಯತ್ತ ಸಾಗಿ, ಆರ್‌ಟಿಓ ಪರಿವೀಕ್ಷಣಾ ಸ್ಥಳದಿಂದ ಎಡಕ್ಕೆ ತಿರುಗಿದರೆ ಅಲ್ಲಿ ಆದಿ ಹನುಮಪ್ಪನ ಗುಡಿ ಸಿಗುತ್ತದೆ. ಹನುಮಪ್ಪನ ದರ್ಶನ ಮಾಡಿ, ವಿಶ್ರಾಂತಿ ಪಡೆದು ಹತ್ತಿರದಲ್ಲಿಯೇ ಇದ್ದ ಗುಡ್ಡದಲ್ಲಿ `ಕುಪ್ಪಸದ ಕಣ' ದಂತೆ ಕಾಣುವ ಕಲ್ಲನ್ನು ನೋಡಲು ತೆರಳಬಹುದು.

ಗುಡ್ಡ ಹತ್ತುವುದೇ ಪುಳಕ
ʻಕುಪ್ಪಸದ ಕಣ'ದಂತೆ ಕಾಣುವ ಕಲ್ಲನ್ನು ನೋಡಲು ಹೋಗುವಾಗ ಕೊಲೆಸ್ಟ್ರಾಲ್ ಕರಗುವುದು ಗ್ಯಾರಂಟಿ. ಅಲ್ಲಿನ ಕುರುಚಲು ಗಿಡಗಳ ನಡುವೆ ಕಲ್ಲುಬಂಡೆಗಳನ್ನು ಹತ್ತಿ- ಇಳಿದು ಮಾಡುವ ದೈಹಿಕ ಸರ್ಕಸ್ ಚಾರಣದ ಅನುಭವ ನೀಡುತ್ತದೆ. ʻಕುಪ್ಪಸದ ಕಣ' ನೋಡಿದ ಬಳಿಕ ನೀವು ಹದ್ದಿನ ಗುಂಡಿನತ್ತ ಸಾಗುವ ಪರಿ ನಿಜಕ್ಕೂ ರೋಚಕವಾಗಿರುತ್ತದೆ. ಗಿಡ-ಗಂಟಿಗಳನ್ನು ಸರಿಸಿಕೊಂಡು, ಕಲ್ಲುಬಂಡೆಗಳನ್ನು ಹತ್ತಿ ʻಕುಪ್ಪಸದ ಕಣ'ದ ಬಂಡೆಯೊಳಗಿನ ಗವಿಯಲ್ಲಿ ನುಸುಳಿ ಹೋಗುವ ಪರಿ ನಿಜಕ್ಕೂ ಚೇತೋಹಾರಿ. ಕಾಲಿಗೆ ತೊಡಕು ಉಂಟು ಮಾಡುವ ಗಿಡಗಳು, ಬೆವರಿಳಿಸುವ ಏರು, ಹಸಿವು ಹಿಂಗಿಸುವ ಕಾಡಿನ ಹಣ್ಣುಗಳನ್ನು ಸೇವಿಸುವ ಮೂಲಕ ಗುಡ್ಡ ಹತ್ತುವುದೇ ಒಂದು ಸುಂದರ ಅನುಭವ. ಬಗೆ ಬಗೆಯ ಪಕ್ಷಿಗಳನ್ನು ನೋಡಲು ಮತ್ತು ಅವುಗಳ ಉಲಿಯುವಿಕೆಯನ್ನು ಆಲಿಸಲು ಇದು ಅದ್ಭುತ ತಾಣ.
ಪ್ರಾಗೈತಿಹಾಸಿಕ ಕುರುಹುಗಳು
ಕೊಪ್ಪಳ ಮತ್ತು ಗಂಗಾವತಿಯಿಂದ ಆಗಮಿಸುವವರು ಬೂದುಗುಂಪಾ ಕ್ರಾಸ್‌ಗೆ ಬರಬೇಕು. ಅಲ್ಲಿಂದ ಕೆರೆಹಳ್ಳಿ ಮಾರ್ಗವಾಗಿ ಶಹಪುರ ಟೋಲ್ ಬಳಿಯ ಎಡಕ್ಕೆ ತಿರುಗಿದರೆ ಈ ತಾಣ ವೀಕ್ಷಿಸಬಹುದು. ʻಕುಪ್ಪಸದ ಕಣ', ʻಹದ್ದಿನ ಗುಂಡು' ಹತ್ತಿ- ಇಳಿದು ಬಂದರೆ ನಿಮಗೆ ಸಿಗುವುದು ಪ್ರಾಗೈತಿಹಾಸಿಕ ಕಾಲದ ಕುರುಹುಗಳು. ʻಹಾವಿನ ಹೆಡೆ'ಯಂತಿರುವ ಕಲ್ಲು ಬಂಡೆಯ ಒಡಲಿನಲ್ಲಿ ಸುಂದರವಾದ ಜಿಂಕೆಯ ಚಿತ್ರಗಳನ್ನು ಚಿತ್ರಿಸಲಾಗಿದೆ. ಇದರ ಒಳಗೆ ಹೋದರೆ ಅಲ್ಲಿ ನೈಸರ್ಗಿಕವಾಗಿರುವ ಆಸನಗಳು ಇವೆ. ಆಸಕ್ತಿ ಇದ್ದವರು ಗವಿಯೊಳಗೆ ತೆರಳಬಹುದು. ಒಟ್ಟಿನಲ್ಲಿ ಒಂದು ದಿನದ ಮಟ್ಟಿಗೆ ಜೀವನದ ಎಲ್ಲ ಜಂಜಾಟಗಳನ್ನು ಮರೆತು ಪ್ರಕೃತಿ ಮಡಿಲಲ್ಲಿ ಬೆರೆತು ನಲಿದಾಡಬಹುದಾದ ಜಾಗವಿದು.

ʻನಾನು ಸ್ನೇಹಿತರೊಂದಿಗೆ ಈ ಗುಡ್ಡ ಹತ್ತಿದಾಗ ಅಲ್ಲಿನ ಐತಿಹಾಸಿಕ ಕುರುಹುಗಳನ್ನು ನೋಡಿ ಚಕಿತನಾದೆ. ಕೆರೆಹಳ್ಳಿ ಗ್ರಾಮದ ಹಸು, ಕರುಗಳು ಧರ್ಮದ ಹಾದಿಗುಂಟ ಈ ಗುಡ್ಡಕ್ಕೆ ಬಂದು ಹುಲ್ಲು ಮೇಯುತ್ತಿದ್ದವು ಎನ್ನಲಾಗಿದೆ. ಇಲ್ಲಿನ ಹಾದಿ ಹನುಮಪ್ಪನ ಗುಡಿ, ಶ್ರೀರಾಮದೇವರ ಮೂರ್ತಿ ನೋಡಿ ಖುಷಿ ಆಯಿತು. ಗುಡ್ಡ ಹತ್ತಿ ಇಳಿಯುವವರೆಗೆ ಹೊರ ಜಗತ್ತಿನ ಪರಿಯೇ ಇಲ್ಲದಂತೆ ಎಂಜಾಯ್ ಮಾಡಿದ್ದೇನೆʼ.
- ಹುಲ್ಲೇಶ್ ಸಿಂದೋಗಿ, ಅಧ್ಯಕ್ಷರು, ಶಾಲಾ ಸುಧಾರಣಾ ಸಮಿತಿ, ಶಹಪುರ.
ʻಬಾಲ್ಯದಲ್ಲಿದ್ದಾಗ ಅಪ್ಪ-ಅಮ್ಮನೊಂದಿಗೆ ಗುಡ್ಡದ ಹತ್ತಿರದಲ್ಲಿಯೇ ಇರುವ ನಮ್ಮ ಹೊಲಕ್ಕೆ ಹೋಗುತ್ತಿದ್ದೆ. ಗುಡ್ಡದಲ್ಲಿ ಇಷ್ಟೆಲ್ಲಾ ಅಂಶಗಳು ಇವೆ ಅಂತ ಗೊತ್ತಾಗಿರಲಿಲ್ಲ. ನಮ್ಮ ಸ್ನೇಹಿತರೊಂದಿಗೆ ಗುಡ್ಡ ಹತ್ತಿದಾಗ ನಿಜಕ್ಕೂ ಸಂತೋಷವಾಯಿತು. ಈ ಸುತ್ತಾಟದಲ್ಲಿ ನಾನು ಆನಂದದಾಯಕ ಕ್ಷಣಗಳನ್ನು ಕಳೆದೆ. ಮತ್ತೆ ಮತ್ತೆ ಗುಡ್ಡ ಹತ್ತಬೇಕೆನಿಸುತ್ತಿದೆʼ.
- ಹುಲ್ಲೇಶ್ ಕುರಿ, ಕಾರು ಚಾಲಕ, ಶಹಪುರ
ಹಾದಿ ಹನುಮಪ್ಪನ ಗುಡಿ ಐತಿಹಾಸಿಕವಾಗಿ ತುಂಬಾ ಮಹತ್ವ ಪಡೆದಿದೆ. ಇತ್ತೀಚೆಗೆ ಭಕ್ತರೆಲ್ಲ ಸೇರಿ ಈ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ. ಹತ್ತಿರದಲ್ಲಿಯೇ ಇರುವ ಕುಪ್ಪಸದ ಕಣ, ಹದ್ದಿನ ಗುಂಡು ಮತ್ತು ಹಾವಿನ ಹೆಡೆ ಗುಡ್ಡದ ಪರಿಸರ ಹತ್ತಿ ಇಳಿದರೆ ಅದರ ಸೊಬಗೇ ಬೇರೆ. ಏನೋ ಒಂದು ರೀತಿಯ ಆನಂದ ಲಭಿಸುತ್ತದೆ. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಈ ತಾಣದಲ್ಲಿ ವಿಹರಿಸಿದ್ದೆವು. ಇಲ್ಲಿ ಒಂದು ರೀತಿಯ ಆಧ್ಯಾತ್ಮಿಕ ಅನುಭೂತಿ ಲಭಿಸುತ್ತದೆ.
- ರಾಮಾಲೆಪ್ಪ ಕುರಿ, ಕೃಷಿಕರು, ಶಹಪುರ