ಇದು ಆರುಮುಗಂ ಕೋಟೆ ಕಣೋ…!
ಗರ್ಭಗುಡಿಯ ಹೊರಗಡೆ ಶೋಕೇಸಿನಲ್ಲಿ ದೇಶದೆಲ್ಲೆಡೆಯಿಂದ ತಂದ ವಿವಿಧ ಭಾವಭಂಗಿಗಳಲ್ಲಿರುವ ಪುಟ್ಟ ಪುಟ್ಟ ಗಣೇಶನ ವಿಗ್ರಹಗಳಿವೆ. ಸುಮಾರು 3000ಕ್ಕೂ ಹೆಚ್ಚಿನ ವಿಗ್ರಹಗಳಿದ್ದು ಇವನ್ನು ಗಾಜಿನ ಕಪಾಟಿನಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಇದು ದೇವಾಲಯದ ವಿನ್ಯಾಸಕಾರ ಅರುಣಾಚಲಮ್ ಅವರ ಕೊಡುಗೆ.
- ವೀಣಾ ಭಟ್
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಶೃಂಗಗಿರಿ ಶ್ರೀ ಷಣ್ಮುಖ ದೇವಾಲಯ ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದ ಭಕ್ತರನ್ನು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿದೆ. ಇದು ವಿಶ್ವದ ಏಕೈಕ ಆರು ಮುಖಗಳಿರುವ ಷಣ್ಮುಖ ದೇವಾಲಯ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಷಟ್ ಅಂದರೆ ಆರು, ಹಾಗೆ ಆರು ಮುಖಗಳಿರುವವನು ಷಣ್ಮುಖ. ದೇವಾಲಯದ ಗೋಪುರದಲ್ಲಿ ಬೃಹದಾಕಾರದ ಷಣ್ಮುಖ ದೇವರ ಆರು ಮುಖಗಳಿದ್ದು ಇದರ ಮೇಲೆ ಸ್ಫಟಿಕದ ಗುಮ್ಮಟವಿದೆ. ಈ ಗೋಪುರವು ಸುಮಾರು 125 ಅಡಿ ಎತ್ತರವಿದೆ. ಹಗಲು ಹೊತ್ತಿನಲ್ಲಿ ಈ ಸ್ಫಟಿಕಗಳು ಕಾಮನಬಿಲ್ಲಿನ ಬಣ್ಣಗಳನ್ನು ಚೆಲ್ಲುತ್ತವೆ. ರಾತ್ರಿಯ ಸಮಯದಲ್ಲಿ ಈ ಸ್ಫಟಿಕಕ್ಕೆ ಅಳವಡಿಸಿರುವ ಎಲ್ ಇಡಿ ಬಲ್ಬ್ ಗಳು ಸಹಸ್ರ ಬಣ್ಣಗಳನ್ನು ಹೊರಚೆಲ್ಲುತ್ತವೆ. ಸಂಗೀತಕ್ಕೆ ತಕ್ಕಂತೆ ಬಣ್ಣಗಳು ನರ್ತಿಸುತ್ತವೆ. ಈ ಸ್ಫಟಿಕದ ದೀಪಗಳು ಫಳಫಳನೆ ಹೊಳೆಯುತ್ತ ಅಲೌಕಿಕ ವಾತಾವರಣವನ್ನು ನಿರ್ಮಿಸುತ್ತವೆ. ಈ ಹೊಳೆಯುವ ಗೋಪುರ ಸುಮಾರು ಹತ್ತು ಕಿ.ಮೀ. ದೂರದವರೆಗೆ ಕಾಣಿಸುತ್ತದೆ.
ಈ ದೇವಾಲಯದ ಗರ್ಭಗುಡಿ ಸಾಂಪ್ರದಾಯಿಕ ವಿನ್ಯಾಸದಲ್ಲಿದೆ. ಗರ್ಭಗುಡಿಯಲ್ಲಿರುವ ಷಣ್ಮುಖ ಮೂರ್ತಿಗೆ ಕೂಡ ಆರು ಮುಖಗಳಿವೆ. ಕಪ್ಪು ಕಲ್ಲಿನಲ್ಲಿ ನಿರ್ಮಿತವಾದ ಈ ಮೂರ್ತಿ ಹಾವಿನ ಹೆಡೆ ಮತ್ತು ನವಿಲಿನ ಮೇಲೆ ನಿಂತಿದೆ. ಭಾರವಾದ ಮೂರ್ತಿಯನ್ನು ಈ ರೀತಿ ನಿಲ್ಲಿಸಿರುವುದು ಶಿಲ್ಪಿಯ ಕಲಾನೈಪುಣ್ಯವನ್ನು ತೋರಿಸುತ್ತದೆ. ಷಣ್ಮುಖನ ಅಕ್ಕಪಕ್ಕ ಶ್ರೀ ವಲ್ಲಿ ಮತ್ತು ದೇವಯಾನಿಯರ ಮೂರ್ತಿಯಿದೆ. ಗರ್ಭಗುಡಿಗೆ ಪ್ರದಕ್ಷಿಣೆ ಬರುವಾಗ ಹಿಂದುಗಡೆ ಇರುವ ಕಿಂಡಿಯಿಂದ ಷಣ್ಮುಖ ಸ್ವಾಮಿಯ ಹಿಂಬದಿಯ ಮುಖವನ್ನು ನೋಡಬಹುದು. ಗರ್ಭಗುಡಿಯ ಹೊರಗಡೆ ಶೋಕೇಸಿನಲ್ಲಿ ದೇಶದೆಲ್ಲೆಡೆಯಿಂದ ತಂದ ವಿವಿಧ ಭಾವಭಂಗಿಗಳಲ್ಲಿರುವ ಪುಟ್ಟ ಪುಟ್ಟ ಗಣೇಶನ ವಿಗ್ರಹಗಳಿವೆ. ಸುಮಾರು 3000ಕ್ಕೂ ಹೆಚ್ಚಿನ ವಿಗ್ರಹಗಳಿದ್ದು ಇವನ್ನು ಗಾಜಿನ ಕಪಾಟಿನಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಇದು ದೇವಾಲಯದ ವಿನ್ಯಾಸಕಾರ ಅರುಣಾಚಲಮ್ ಅವರ ಕೊಡುಗೆ.
ಶೃಂಗಗಿರಿ ಷಣ್ಮುಖ ದೇವಾಲಯದ ಇನ್ನೊಂದು ವೈಶಿಷ್ಟ್ಯ ಅಂದರೆ ದೇವಾಲಯದ ಮೇಲ್ಛಾವಣಿಯು 2 ಲಂಬ ಮತ್ತು 2 ಸಮತಲವಾದ ಸೂರ್ಯನ ಬೆಳಕಿನ ಸಂವೇದಕಗಳನ್ನು ಹೊಂದಿರುವ ಸೂರ್ಯನ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಈ ಸಂವೇದಕಗಳ ಸ್ಥಾನವು ಬೆಳಿಗ್ಗೆಯಿಂದ ಸಂಜೆಯವರೆಗೆ ಸೂರ್ಯನಿಗೆ ಎದುರಾಗಿರುತ್ತದೆ ಮತ್ತು ಯಾವುದೇ ಸಮಯದಲ್ಲಿ ಗರಿಷ್ಠ ಸೂರ್ಯನ ಕಿರಣಗಳನ್ನು ಟ್ರ್ಯಾಕ್ ಮಾಡುತ್ತದೆ. ಹೀಗೆ ಟ್ರ್ಯಾಕ್ ಮಾಡಿದ ಸೂರ್ಯನ ಕಿರಣಗಳು ಆ ದಿಕ್ಕಿನಿಂದ ಮುಖ್ಯ ದೇವರ ಮೇಲೆ ಬೀಳುತ್ತದೆ. ಮುಂಜಾನೆಯಿಂದಲೇ ಷಣ್ಮುಖ ಭಗವಂತನಿಗೆ 'ಸೂರ್ಯ ಕಿರಣ ಅಭಿಷೇಕ'ವನ್ನು ಸಕ್ರಿಯಗೊಳಿಸುತ್ತದೆ.

ಬೆಟ್ಟದ ತುದಿ ತಲುಪಲು ಸುಮಾರು ಇನ್ನೂರು ಮೆಟ್ಟಿಲುಗಳನ್ನು ಹತ್ತಬೇಕು. ಷಣ್ಮುಖ ದೇವಾಲಯದ ಜೊತೆಗೆ, ಶೃಂಗಗಿರಿ ಬೆಟ್ಟದ ಕೆಳಭಾಗದಲ್ಲಿ ಗಣಪ ಮತ್ತು ಶಿವ ದೇವಾಲಯಗಳಿವೆ. ಕಪ್ಪು ಕಲ್ಲಿನಲ್ಲಿ ನಿರ್ಮಿತವಾದ ಪಂಚಮುಖಿ ವಿನಾಯಕನು ಶಾರ್ದೂಲದ ಮೇಲೆ ವಿರಾಜಮಾನನಾಗಿದ್ದು ಈ ದೇವಾಲಯವೂ ವಿಶಿಷ್ಟವಾಗಿದೆ. ಗರ್ಭಗುಡಿಯ ಸುತ್ತಲೂ ಮೂರು ದಿಕ್ಕುಗಳಲ್ಲಿ ಮೂರು ಕಿಂಡಿಗಳಿವೆ.ಇದರಿಂದ ಭಕ್ತರು ಗಣೇಶನ ಎಲ್ಲಾ ಮುಖಗಳ ದರ್ಶನ ಮಾಡಬಹುದಾಗಿದೆ. ದೇವಾಲಯದ ಸಂಕೀರ್ಣವು "ನಾಗರ ಕಟ್ಟೆ"ಯನ್ನು ಸಹ ಹೊಂದಿದೆ.
ವಿಘ್ನನಾಶಕನಿಗೆ ನಮಸ್ಕರಿಸಿ ಕೆಲವು ಮೆಟ್ಟಿಲುಗಳನ್ನು ಹತ್ತುವಷ್ಟರಲ್ಲಿ ನೀವು ಶಿವನ ಸನ್ನಿಧಿಯಲ್ಲಿರುತ್ತೀರಿ. ಇಲ್ಲಿ ಬೆಟ್ಟವನ್ನು ಕೊರೆದು ಅರುಣಾಚಲೇಶ್ವರ ಸ್ವಾಮಿ ಮಂದಿರವನ್ನು ನಿರ್ಮಿಸಿದ್ದಾರೆ. ಇಲ್ಲಿಯ ಮೂರು ಅಡಿ ಎತ್ತರದ ಸ್ಫಟಿಕದ ಶಿವಲಿಂಗ ಭಾರತದಲ್ಲೇ ಮೊದಲನೆಯದು ಎನ್ನಲಾಗಿದೆ. ಇದರ ಸೌಂದರ್ಯ ಮನಸ್ಸಿನಲ್ಲಿ ಭಕ್ತಿಭಾವ ಮೂಡಿಸುತ್ತದೆ. ಗರ್ಭಗುಡಿಯ ಮೇಲೆ ಬೃಹದಾಕಾರದ ಹುತ್ತಗಳನ್ನು ನಿರ್ಮಿಸಿ ಗೋಪುರದಂತೆ ಮಾಡಿದ್ದಾರೆ. ಈ ಹುತ್ತದ ಮೇಲಿಂದ ಅಭಿಷೇಕ ಮಾಡಿದರೆ ಕೆಳಗಿರುವ ಶಿವಲಿಂಗದ ಮೇಲೆ ಬೀಳುತ್ತದೆ. ಈ ಹುತ್ತಗಳ ಜೊತೆಗೆ ಬೃಹತ್ ತ್ರಿಶೂಲ ಹಾಗೂ ಡಮರುವಿನ ವಿನ್ಯಾಸ ಗಮನಸೆಳೆಯುತ್ತದೆ. ಇದು ಕೂಡ ವಿನ್ಯಾಸಕಾರ ಅರುಣಾಚಲಮ್ ಅವರ ಅದ್ಭುತ ಪರಿಕಲ್ಪನೆ.
ಈ ದೇವಾಲಯದ ಇನ್ನೊಂದು ವಿಸ್ಮಯಕಾರಿ ಸಂಗತಿಯೆಂದರೆ, ಸ್ವತಃ ಷಣ್ಮುಖನೇ ಬಯಸಿ ಈ ದೇಗುಲವನ್ನು ನಿರ್ಮಿಸಿಕೊಂಡನಂತೆ. ಶೃಂಗೇರಿ ಶಾರದಾಪೀಠದ ಮಹಾಸ್ವಾಮಿ ಶ್ರೀ ಭಾರತೀ ತೀರ್ಥರಿಗೆ ಷಣ್ಮುಖ ಸ್ವಾಮಿ ಕನಸಿನಲ್ಲಿ ಬಂದು ಸ್ಫೂರ್ತಿ ನೀಡಿದ್ದನಂತೆ. ನಂತರ ಅರುಣಾಚಲಮ್ ಅವರ ನೇತೃತ್ವದಲ್ಲಿ ದೇವಾಲಯ ನಿರ್ಮಾಣವಾಯಿತು. ಆನಂತರ, 2015ರ ಜುಲೈ ತಿಂಗಳಲ್ಲಿ ಶೃಂಗೇರಿ ಶಾರದಾಪೀಠದ ಉಭಯ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಉದ್ಘಾಟನೆಯಾಯಿತು. ದೇವಾಲಯಕ್ಕೆ ಮೆಟ್ಟಿಲುಗಳಲ್ಲದೆ ಮೇಲಿನವರೆಗೆ ರಸ್ತೆಯೂ ಇದೆ. ಸಂಜೆಯ ಸಮಯದಲ್ಲಿ ಹೋದರೆ ಸುಂದರ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು.ಇದಲ್ಲದೆ ಬೆಟ್ಟದ ಮೇಲಿಂದ ಬೆಂಗಳೂರು ನಗರದ ಪಕ್ಷಿನೋಟವನ್ನು ಮಿಸ್ ಮಾಡಬೇಡಿ.
ನೀವು ಬೆಂಗಳೂರಿನವರಾದರೆ ಈ ದೇವಾಲಯಕ್ಕೆ ಭೇಟಿ ನೀಡಿರುತ್ತೀರಿ. ಇಲ್ಲವೆಂದಾದಲ್ಲಿ ಒಮ್ಮೆ ಭೇಟಿ ನೀಡಿ ಈ ವಿಸ್ಮಯಗಳಿಗೆ ಸಾಕ್ಷಿಯಾಗಿ.