• ದಿನೇಶ ನಾಯ್ಕ, ಅಡ್ಕಾರ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಕಾಳಿ ಹುಲಿ ಸಂರಕ್ಷಣಾ ವ್ಯಾಪ್ತಿಯ ದಟ್ಟ ಕಾನನದಲ್ಲಿ ಕವಳಾ ಗುಹೆ (Kavala Caves) ಇದೆ. ಇದೇ ಗುಹೆಯಲ್ಲಿ ಸ್ವಯಂಭೂ ಶಿವಲಿಂಗವಿದೆ. ಈ ಶಿವಲಿಂಗವನ್ನು ಕವಳೇಶ್ವರ ಎನ್ನಲಾಗಿದ್ದು, ಈ ಕವಳೇಶ್ವರ ಸ್ವಾಮಿಯು ಭಕ್ತರ ಸಕಲರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬುದು ಭಕ್ತರ ನಂಬಿಕೆ. ಇಷ್ಟಾರ್ಥಗಳನ್ನು ಈಡೇರಿಸುವ ಸ್ವಾಮಿಯ ಸನ್ನಿಧಿಗೆ ಪ್ರತಿದಿನವೂ ಪ್ರವೇಶವಿಲ್ಲ. ಈ ಕವಳೇಶ್ವರನ ದರ್ಶನ ಸಿಗುವುದು ವರ್ಷಕ್ಕೆ ಒಂದು ಬಾರಿ ಮಾತ್ರ. ದುರ್ಗಮ ದಟ್ಟ ಕಾಡಿನ ನಡುವೆ ಇರುವುದರಿಂದ ಹೊರ ಜಗತ್ತಿಗೆ ಕವಳೇಶ್ವರ ಇನ್ನೂ ಮರೆಯಲ್ಲಿನ ಮಾಣಿಕ್ಯದಂತಿದೆ.

ಇದನ್ನೂ ಓದಿ: ಅಂಕೋಲೆಯ ವಿಶಿಷ್ಟ ಕರಡಿ ವೇಷ, ಹಗರಣ, ಸುಗ್ಗಿ ಮತ್ತು ಹೋಳಿ

ಚಾರಿಣಿಗರ ಸ್ವರ್ಗ

ಚಾರಣದ ಹಾದಿಯು ನಿಸರ್ಗ ಸೃಷ್ಟಿಸಿದ ನಾಕದಂತಿದೆ. ಕಾಳಿನದಿಯ ವಿಂಗಮ ನೋಟ. ಎತ್ತರವಾದ ಪರ್ವತ ಶ್ರೇಣಿ. ರಮಣೀಯ ಮತ್ತು ದುರ್ಗಮ ಹಾದಿ ಹಚ್ಚಹಸುರಿನ ಅರಣ್ಯ ರಾಶಿಯೇ ಕಣ್ಣಿಗೆ ತಂಪೆರೆಯುತ್ತದೆ. ಪ್ರವಾಸಿಗರು ಮತ್ತು ಭಕ್ತ ಸಮೂಹಕ್ಕೆ ಕವಳೇಶ್ವರನ ದರ್ಶನ ಉಲ್ಲಾಸಕರ ಅನುಭವವನ್ನು ನೀಡುತ್ತದೆ. ಈ ಇಡೀ ಗುಹೆ ಸೃಷ್ಟಿಯಾಗಿದ್ದು ಸಾವಿರಾರು ವರ್ಷಗಳ ಹಿಂದೆ. ಜ್ವಾಲಾಮುಖಿಯಲ್ಲಿನ ರಾಸಾಯನಿಕ ಚಟುವಟಿಕೆಗಳಿಂದ ಕವಳಾ ಗುಹೆ ರೂಪಾಂತರಗೊಂಡಿದೆ. ಹಾಗಾಗಿ ಇದು ಪರಿಸರದ ವಿಸ್ಮಯತೆಗೆ ಸಾಕ್ಷಿ.

Untitled design - 2026-03-23T122708.020

ಕವಳೇಶ್ವರನ ದರ್ಶನಕ್ಕೆ ಸಾಗಬೇಕಾದರೆ ಪುಟ್ಟ ದ್ವಾರದ ಮೂಲಕ ಸಾಗಬೇಕು. ಪ್ರವೇಶ ದ್ವಾರ ಚಿಕ್ಕದಾಗಿದ್ದು, ಒಮ್ಮೆ ಒಬ್ಬರು ಮಾತ್ರ ತೆವಳಿಕೊಂಡು ಪ್ರವೇಶಿಸಬಹುದು. ಒಳಗೆ ಗಾಢ ಕತ್ತಲು ಆವರಿಸಿದ್ದು, ಭಕ್ತರ ದರ್ಶನಕ್ಕಾಗಿ ವಿದ್ಯುತ್ ದೀಪವನ್ನು ಅಳವಡಿಸಲಾಗಿದೆ. ಗುಹೆಯಲ್ಲಿ ಸಾಗಿದರೆ ಸುಮಾರು ಐದು ಅಡಿ ಎತ್ತರದ ನೆರಳೆ ಬಣ್ಣದ ಉದ್ಭವ ಶಿವಲಿಂಗ ದರ್ಶನ ನಮ್ಮ ಮೈಮನಗಳನ್ನು ರೋಮಾಂಚನಗೊಳಿಸುತ್ತದೆ. ಇದು ಸುಮಾರು ನಾಲ್ಕು ಅಡಿ ವ್ಯಾಸವಿದ್ದು, ನೈಸರ್ಗಿಕ ಸುಣ್ಣದ ಕಲ್ಲಿನಿಂದ ರಚಿತವಾಗಿದೆ. ಇಡೀ ಗುಹೆಯ ಪ್ರಕೃತಿದತ್ತ ವಿನ್ಯಾಸ, ತೇವಭರಿತ ತಂಪು ವಾತಾವರಣ ಹಾಗೂ ಶಿಲಾ ರಚನೆಗಳು ಶಿವಭಕ್ತರ ಪಾಲಿಗೆ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತವೆ.

ಕವಳೇಶ್ವರನಿಗೆ ಅನಂತಕಾಲವೂ ಅಭಿಷೇಕ

ಗುಹೆಯ ಮೇಲ್ಚಾವಣಿಯಲ್ಲಿರುವ ಕಲ್ಲುಗಳಿಂದ ಸ್ರವಿಸುವ ನೀರಿನ ದ್ರವ ಶಿವನ ತಲೆಯ ಮೇಲೆ ಬೀಳುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಹೀಗೆ ಸಯಂಭೂ ಲಿಂಗದ ಮೇಲೆ ಪ್ರಕೃತಿ ಸದಾ ಅಭಿಷೇಕ ಮಾಡುತ್ತಿರುವುದು ಭಕ್ತ ಸಮೂಹದಲ್ಲಿ ಶ್ರದ್ಧಾ ಭಾವನೆಯನ್ನು ದ್ವಿಗುಣ ಗೊಳಿಸುತ್ತದೆ.

ವರ್ಷಕ್ಕೊಮ್ಮೆ ದರ್ಶನ

ಈ ಕವಳಾ ಗುಹಾ ಪ್ರದೇಶವು ಕಾಳಿ ನದಿ ಹುಲಿ ಸಂರಕ್ಷಣಾ ವ್ಯಾಪ್ತಿಗೆ ಒಳಪಟ್ಟಿದೆ. ಹಾಗಾಗಿ ಸಾಮಾನ್ಯ ದಿನಗಳಲ್ಲಿ ಪ್ರವೇಶಕ್ಕೆ ನಿರ್ಬಂಧವಿದೆ. ಪ್ರತಿ ವರ್ಷ ಶಿವರಾತ್ರಿಯ ಸಂದರ್ಭದಲ್ಲಿ ಸ್ಥಳೀಯ ಅರಣ್ಯ ಇಲಾಖೆ, ಕರ್ನಾಟಕ ವಿದ್ಯುತ್ ನಿಗಮ ಹಾಗೂ ಇತರೆ ಇಲಾಖೆಯ ಸಹಯೋಗದೊಂದಿಗೆ ದರ್ಶನಕ್ಕೆ ಎರಡು ಮಾರ್ಗಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪಣಸೋಲಿ ಮತ್ತು ಅಂಬಿಕಾ ನಗರ ಪವರ ಹೌಸ್ ಮೂಲಕ ಅಲ್ಲಿಗೆ ತೆರಳಬಹುದು. ಸುಮಾರು ನಾಲ್ಕರಿಂದ ಐದು ಕಿಲೋ ಮೀಟರ್ ನಡೆದು ಸಾಗಬೇಕು. ಈ ಅವಕಾಶದಲ್ಲಿ ಸುಮಾರು ಐವತ್ತರಿಂದ ಅರವತ್ತು ಸಾವಿರ ಭಕ್ತ ಸಮೂಹ ಕವಳೇಶ್ವರನ ದರ್ಶನ ಪಡೆದುಕೊಳ್ಳಲು ಸೇರುವುದು ವಿಶೇಷ.

Untitled design - 2026-03-23T122650.671

ಭಕ್ತರ ಬೇಡಿಕೆ

ಶಿವರಾತ್ರಿಯ ಸಂದರ್ಭದಲ್ಲಿ ಜನಜಂಗುಳಿ ಹೆಚ್ಚಾಗಿರುತ್ತದೆ. ಹಾಗಾಗಿ ವರ್ಷಕ್ಕೆ ಕನಿಷ್ಠ ಮೂರು ದಿನವಾದರೂ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಭಕ್ತ ಸಮೂಹದ ಒತ್ತಾಯ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಇಲಾಖೆಗಳು ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಎಂದು ಕಾದು ನೋಡಬೇಕಿದೆ.