‘ಕೆಪ್ಪಜೋಗ’ದ ಚಂದ್ರ ಧನಸ್ಸು! ಅದೃಷ್ಟವಂತರಿಗೆ ಮಾತ್ರ ಸಿಗುವ ದೃಶ್ಯ...!
ಈ ಜಲಪಾತದೆದುರು ನಿಂತರೆ ಅದರ ರಭಸಕ್ಕೆ ಪಕ್ಕದಲ್ಲೇ ಇದ್ದವರು ಮಾತಾಡಿದರೂ ಕೇಳಿಸದು. ಹಾಗಾಗಿ ಇದಕ್ಕೆ ಕೆಪ್ಪಜೋಗ ಎಂಬ ಹೆಸರು ಬಂದಿದೆ. ಇದಕ್ಕೊಂದು ಲೂಷಿಂಗ್ಟನ್ ಜಲಪಾತ ಎಂಬ ಬ್ರಿಟಿಷ್ ಹೆಸರು ಕೂಡ ಇದೆ!
ಮಳೆಗಾಲದಲ್ಲಿ, ಸೂರ್ಯನ ಬೆಳಕಿನಲ್ಲಿ ಮಾತ್ರ ಈ ಕಾಮನ ಬಿಲ್ಲು ಉಂಟಾಗುತ್ತದೆಂಬುದು ಸಾಮಾನ್ಯ ತಿಳಿವಳಿಕೆ. ಆದರೆ ಈ ನಿಸರ್ಗದ ವಿಸ್ಮಯ ಕಾಂಡದಲ್ಲಿ, ಚಂದ್ರನ ಬೆಳಕಿನಲ್ಲೂ ಕಾಮನಬಿಲ್ಲು ಮೂಡುತ್ತದೆ. ಚಂದ್ರ ಧನಸ್ಸು ಎಂಬ ಚಂದ ಹೆಸರೂ ಅದಕ್ಕಿದೆ. ಇಂಗ್ಲಿಷಿನಲ್ಲಿ ಮೂನ್ ಬೋ. ಇದನ್ನು ಕಾಣುವುದಕ್ಕೆ ಜೀವಮಾನದ ಪುಣ್ಯ ಬೇಕು ಮತ್ತು ಅಷ್ಟೇ ಇದ್ದರೆ ಸಾಕಾಗುವುದಿಲ್ಲ!
ಇಂಥ ಒಂದು ಅಪರೂಪದ ಪ್ರಾಕೃತಿಕ ವಿದ್ಯಮಾನ ಹುಣ್ಣಿಮೆಯ ಆಸುಪಾಸು ನಡೆಯುತ್ತದೆ. ಮೊದಲೇ ಮೃದುವಾದ ಚಂದ್ರನ ಬೆಳಕಿನ ಮ್ಯಾಕ್ಸಿಮಮ್ ತೀಕ್ಷ್ಣತೆ ಇದ್ದಾಗ ಈ ಚಂದ್ರ ಧನಸ್ಸು ಕಾಣುತ್ತದೆ. ಸಾಮಾನ್ಯವಾಗಿ ಕಾಮನಬಿಲ್ಲಿನಷ್ಟೇ ಬಣ್ಣ ಇದ್ದರೂ, ಅಷ್ಟು ಗಾಢವಾಗಿ ಇದು ಗೋಚರಿಸುವುದಿಲ್ಲ. ಎಷ್ಟೋ ಸಲ ಬರಿಗಣ್ಣಿಗೆ ಕಾಣುವುದೂ ಇಲ್ಲ, ಆದರೆ ಕೆಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದು. ಇದನ್ನು ಕಾಣುವುದಕ್ಕೆ ತಪಸ್ಸನ್ನೇ ಮಾಡಬೇಕು ಅನ್ನೋದು ಅನುಭವಸ್ಥರ ಮಾತು.ಇದು ಕಾಮನ ಬಿಲ್ಲಿನಂತೆ ಬಾನಲ್ಲಿ ಕಾಣುವುದಿಲ್ಲ. ಜಲಪಾತದಂಥ ಸದಾ ರಭಸವಾಗಿ ನೀರು ಧುಮುಕುವ ಪ್ರದೇಶ ಬೇಕು. ಒಂದೇ ಸಲದ ಭೇಟಿಯಲ್ಲಿ ಕಂಡೇಬಿಡುತ್ತದೆಂಬ ಯಾವುದೇ ಖಾತರಿ ಇಲ್ಲ. ಈ ಎಲ್ಲ ಅಂಶಗಳಿಂದಲೇ ಇದೊಂದು ಅನನ್ಯ ಆಕರ್ಷಣೆಯಾಗಿದೆ!

ಈ ಚಂದ್ರ ಧನಸ್ಸು ಹೇಗೆ ಉಂಟಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ, ಬೆಳಕಿನ ವಕ್ರೀಭವನ ಎಂದೇ. ಜಲಪಾತವು ದೊಡ್ಡ ಪ್ರಮಾಣದಲ್ಲಿ ನೀರನ್ನು ಧುಮ್ಮಿಕ್ಕಿಸುವುದರಿಂದ, ಅದರ ಸುತ್ತಮುತ್ತಲಿನ ವಾತಾವರಣದಲ್ಲಿ ಯಾವಾಗಲೂ ನೀರಿನ ಸೂಕ್ಷ್ಮ ಕಣಗಳು ಹಬ್ಬಿರುತ್ತವೆ. ಸಾಧ್ಯವಾದಷ್ಟು ತೀಕ್ಷ್ಣ ಹಂತ ಮುಟ್ಟಿರುವ ಚಂದ್ರನ ಬೆಳಕು ಈ ಹನಿಗಳ ಮೂಲಕ ಹಾದಾಗ ನಡೆಯುವ ವಕ್ರೀಭವನ ಪ್ರಕ್ರಿಯೆಯಲ್ಲಿ ಈ ಚಂದ್ರಧನಸ್ಸು ಮೂಡುತ್ತದೆ. ಮೊದಲೇ ಹೇಳಿದಂತೆ ಇದು ತುಂಬ ಅಪರೂಪದ ವಿದ್ಯಮಾನ, ತಾಳಮೇಳ ಜಾತಕಗಳು ಕೂಡಿಬಂದರೆ ಕಾಣಬಹುದಷ್ಟೇ.
ಜಗತ್ತಿನ ನಾನಾ ಭಾಗಗಳಲ್ಲಿ ಚಂದ್ರಧನಸ್ಸು ಕಾಣುವ ಸ್ಥಳಗಳುಂಟು. ಆದರೆ ಈ ವಿಸ್ಮಯ ವಿದ್ಯಮಾನದ ಬಗ್ಗೆ ಹೆಚ್ಚಿನ ಪ್ರಚಾರವಿಲ್ಲ. ಒಂದರ್ಥದಲ್ಲಿ ಬೇಕಾಗೂ ಇಲ್ಲ. ಸಾಮಾನ್ಯವಾಗಿ ರಾತ್ರಿಗಳಲ್ಲೇ ಇದು ನಡೆಯುವುದರಿಂದ, ಚಂದ್ರಧನಸ್ಸನ್ನು ನೋಡಲು ಹೋಗುವುದು ಅಪಾಯಕಾರಿಯೂ ಹೌದು. ಸೂರ್ಯಾಸ್ತವಾಗುತ್ತಿದ್ದಂತೆಯೇ ಎಲ್ಲ ಜಲಪಾತಗಳ ವೀಕ್ಷಣೆಗೆ ತಡೆ ಇರುವುದರಿಂದ ಇದನ್ನು ನೋಡಿದವರೂ ಕಮ್ಮಿಯೇ. ಅಂದಹಾಗೆ ನಮ್ಮ ದೇಶದ ನಾಲ್ಕೈದು ಕಡೆಗಳಲ್ಲಿ ಚಂದ್ರಧನಸ್ಸು ಕಾಣಿಸಿಕೊಳ್ಳುತ್ತದೆ. ನಮ್ಮ ಕರ್ನಾಟಕದಲ್ಲೂ ಮೂರು ಕಡೆ ಇದನ್ನು ಕಾಣಬಹುದು.
ಇದರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಉಂಚಳ್ಳಿಯ ಕೆಪ್ಪಜೋಗ ಮುಖ್ಯವಾದದ್ದು.
ಗಾಂವ್ಟಿ ಕೆಪ್ಪಜೋಗಕ್ಕೆ ಬ್ರಿಟಿಷ್ ಹೆಸರು!
ಉಂಚಳ್ಳಿ ಜಲಪಾತಕ್ಕೆ ಕೆಪ್ಪಜೋಗ ಎಂಬುದು ಸ್ಥಳೀಯ ಹೆಸರು. ಜಲಪಾತದೆದುರು ನಿಂತರೆ ಅದರ ರಭಸಕ್ಕೆ ಪಕ್ಕದಲ್ಲೇ ಇದ್ದವರು ಮಾತಾಡಿದರೂ ಕೇಳಿಸದು. ಹಾಗಾಗಿ ಆ ಹೆಸರು. ಇದಕ್ಕೊಂದು ಲೂಷಿಂಗ್ಟನ್ ಜಲಪಾತ ಎಂಬ ಬ್ರಿಟಿಷ್ ಹೆಸರು ಕೂಡ ಇದೆ! 1859ರ ಹೊತ್ತಿಗೆ ಬ್ರಿಟಿಷ್ ವಸಾಹತುಶಾಹಿ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಭಾಗದ ಕಲೆಕ್ಟರ್ ಆಗಿದ್ದವ, ಸ್ಥಳೀಯರಿಗೆ ಮಾತ್ರ ಗೊತ್ತಿದ್ದ ಈ ಜಲಪಾತವನ್ನು ನೋಡುತ್ತಾನೆ. ಅದರ ಸೌಂದರ್ಯಕ್ಕೆ ಮನಸೋಲುತ್ತಾನೆ. ಹಾಗಾಗಿ ಸರ್ಕಾರಿ ದಾಖಲೆಗಳಲ್ಲಿ ತನ್ನ ಹೆಸರಲ್ಲೇ ಈ ಜಲಪಾತವನ್ನು ಗುರುತಿಸಿ, ಹೊರ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಾನೆ. ಹಾಗಾಗಿ ಅಪ್ಪಟ ಮಲೆನಾಡಿನ, ಕನ್ನಡದ ದಟ್ಟ ಕಾನನದಲ್ಲಿ ಇರುವ ಗಾಂವ್ಟಿ ಹೆಸರಿನ ‘ಕೆಪ್ಪ ಜೋಗ’ ಬ್ರಿಟಿಷ್ ಹೆಸರಿನ ಜಲಪಾತವಾಗಿ ಬದಲಾದದ್ದು ಮಾತ್ರ ವಿಶೇಷ!
ಹುಣ್ಣಿಮೆ ಹೊಸ್ತಿಲಲ್ಲಿ ಚಂದ್ರಧನಸ್ಸಿಗೆ ಕಾರಣವಾಗುವ ಇದು ತನ್ನ ಅಪ್ರತಿಮ ಸೌಂದರ್ಯ ಹಾಗೂ ಆಕರ್ಷಣೆಯಿಂದಾಗಿ ಕರ್ನಾಟಕದ ಹೆಮ್ಮೆಯ ಜಲಧಾರೆಗಳಲ್ಲಿ ಒಂದಾಗಿದೆ. ಅಘನಾಶಿನಿ ನದಿಯಿಂದ ಉಂಟಾದ ಇದು ಸುಮಾರು 116 ಮೀಟರ್ (380 ಅಡಿ) ಎತ್ತರದಿಂದ ಭೋರ್ಗರೆಯುತ್ತದೆ.ಎದುರಿನ ವೀಕ್ಷಣಾ ಸ್ಥಳದಲ್ಲಿ ನಿಂತರೆ ನೀರು, ಮಂಜು, ಗಾಳಿ ಬೆಳಕಿನ ಓಡಾಟಗಳು ಸಿನಿಮಾಟಿಕ್ ಫೀಲ್ ನೀಡುತ್ತದೆ. ಮಳೆಗಾಲದ ದಿನಗಳಲ್ಲಿ ಮೈದುಂಬುತ್ತದೆ. ಬೇಸಿಗೆಯಲ್ಲಿ ಹೋದರೆ ಚಿಕ್ಕ ಚಿಕ್ಕ ಧಾರೆಗಳಾಗಿ ಬಂಡೆಗಳ ಸಂದುಗಳಲ್ಲಿ ಹರಿಯುತ್ತದೆ.
ಕೆಪ್ಪಜೋಗದ ಚಂದ್ರಧನಸ್ಸು:
ದಟ್ಟ ಅರಣ್ಯದ ಮಧ್ಯದಲ್ಲಿರುವ ಈ ಪ್ರದೇಶಕ್ಕೆ ಯಾವುದೇ ಕೃತಕ ಬೆಳಕಿನ ಸೋಂಕು ಇಲ್ಲ! ಹಗಲು ಅಂದರೆ ಹಗಲು, ಕತ್ತಲೆ ಅಂದರೆ ಕತ್ತಲೆ. ರಾತ್ರಿಯ ಆಕಾಶವು ಅತಿ ಕತ್ತಲಾಗಿರುತ್ತದೆ. ಇದು ಚಂದ್ರನ ಮಸುಕಾದ ಬೆಳಕಿನಲ್ಲಿಯೂ ಮೂನ್‌ಬೋವನ್ನು ಸ್ಪಷ್ಟವಾಗಿ ನೋಡಲು ಇಲ್ಲಿ ಹೆಚ್ಚು ಅನುಕೂಲ ಇದೆ. ನಿಜವಾದ ಪ್ರಾಕೃತಿಕ ಸೊಬಗನ್ನು ಇಲ್ಲಿ ಸವಿಯಬಹುದು. ಆದರೆ ನೆನಪಿರಲಿ, ಸ್ಥಳೀಯ ಮಾರ್ಗದರ್ಶಕರು ಹಾಗೂ ಅರಣ್ಯ ಇಲಾಖೆಯ ಒಪ್ಪಿಗೆ ಇಲ್ಲದೇ ಇಲ್ಲಿ ಮೂನ್ ಬೋ ನೋಡುವುದಕ್ಕೆ ಸಾಧ್ಯವಿಲ್ಲ. ಅಪಾಯಕಾರಿ ಇಳಿಜಾರು, ಕಣಿವೆ ಪ್ರದೇಶ ಇದು. ಚೂರು ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತು ಬರಬಹುದು.
ಪ್ರಕೃತಿ ವಿಧಿಸಿದ ಎಚ್ಚರಿಕೆ!
ಉಂಚಳ್ಳಿ ಜಲಪಾತವು ಕಾಡಿನ ನಡುವೆದೂರದ ಸ್ಥಳದಲ್ಲಿರುವುದರಿಂದ, ಅಲ್ಲಿಗೆ ಪ್ರಯಾಣಿಸುವುದು ಸವಾಲಿನಿಂದ ಕೂಡಿದೆ. ರಾತ್ರಿ ಸಮಯದಲ್ಲಿ ಪ್ರಯಾಣಿಸುವುದು ಅಪಾಯಕಾರಿ. ಇಲ್ಲಿನ ರಸ್ತೆಗಳು ಅಷ್ಟೇನೂ ಉತ್ತಮವಾಗಿಲ್ಲ. ಮಳೆಗಾಲದಲ್ಲಿ ಜಾರಿಕೆ ಹೆಚ್ಚು. ನಿಮ್ಮ ಬಳಿ ನಾಲ್ಕು ಚಕ್ರದ ವಾಹನಗಳು ಅಥವಾ ಎಸ್‌ಯುವಿಗಳು ಇದ್ದರೆ ಉತ್ತಮ. ಜಲಪಾತದ ಸುತ್ತಮುತ್ತ ವಸತಿ ಸೌಕರ್ಯಗಳು ಕಡಿಮೆ. ಹತ್ತಿರದ ಶಿರಸಿ ಅಥವಾ ಸಿದ್ಧಾಪುರಗಳಲ್ಲಿ ವಸತಿ ವ್ಯವಸ್ಥೆ ಮಾಡಿಕೊಳ್ಳಬಹುದು. ವನ್ಯಜೀವಿಗಳ ಬಗ್ಗೆ ಕೂಡ ಎಚ್ಚರಿಕೆ ವಹಿಸಬೇಕು. ಮೂನ್‌ಬೋ ನೋಡಲು ವಿಶೇಷವಾಗಿ ಹೋಗುವುದಾದರೆ, ಅರಣ್ಯ ಇಲಾಖೆ ಪರವಾನಗಿ, ಸ್ಥಳೀಯರ ಅಥವಾ ಅನುಭವಿಗಳ ಮಾರ್ಗದರ್ಶನ ಪಡೆದುಕೊಳ್ಳುವುದು ಅತ್ಯಗತ್ಯ.

ಎಲ್ಲಿದೆ?:
ಉಂಚಳ್ಳಿ ಫಾಲ್ಸ್‌ಗೆ ಹೋಗಲು, ಬೆಂಗಳೂರಿನಿಂದ ಸುಮಾರು 440 ಕಿಮೀ, ಶಿರಸಿಯಿಂದ 35 ಕಿಮೀ, ಸಿದ್ಧಾಪುರದಿಂದ 22 ಕಿಮೀ ದೂರವಿದೆ, ರಸ್ತೆ ಮಾರ್ಗವಾಗಿ ಕಾರು/ಬಸ್‌ನಿಂದ ಪ್ರಯಾಣಿಸಬಹುದು. ಬೆಂಗಳೂರಿನಿಂದ KSRTC ಹಾಗೂ ಖಾಸಗಿ ಬಸ್‌ಗಳು ಶಿರಸಿ/ಸಿದ್ಧಾಪುರಕ್ಕೆ ಲಭ್ಯವಿದ್ದು, ಅಲ್ಲಿಂದ ಟ್ಯಾಕ್ಸಿ/ಆಟೋ ಮೂಲಕ ಹೋಗಬಹುದು. ಹತ್ತಿರದ ರೈಲು ನಿಲ್ದಾಣ ಹಾವೇರಿ (130 ಕಿಮೀ) ಅಥವಾ ಕುಮಟಾ (65 ಕಿಮೀ), ಆದರೆ ರೈಲು ಸಂಪರ್ಕ ಸೀಮಿತ. ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿ (130 ಕಿಮೀ) ಅಥವಾ ಗೋವಾ (220 ಕಿಮೀ), ಅಲ್ಲಿಂದ ಟ್ಯಾಕ್ಸಿ/ಬಸ್ ಮೂಲಕ ತಲುಪಬಹುದು. ಶಿರಸಿಯಿಂದ ಫಾಲ್ಸ್‌ಗೆ ಸ್ಥಳೀಯ ಸಾರಿಗೆ ಸುಲಭವಾಗಿ ದೊರೆಯುತ್ತದೆ.
ಭಾರತದಲ್ಲಿ ಚಂದ್ರ ಧನಸ್ಸು ಕಾಣುವ ಪ್ರದೇಶಗಳು:
- ಮೇಘಾಲಯ: ವಿಶ್ವದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಚಿರಾಪುಂಜಿ ಮತ್ತು ಮೌಸಿನ್ರಾಮ್ ಸುತ್ತಮುತ್ತಲಿನ ನೊಹ್ಕಾಲಿಕಾಯ್ ಜಲಪಾತ, ಎಲಿಫೆಂಟ್ ಫಾಲ್ಸ್
- ಮಹಾರಾಷ್ಟ್ರ: ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿರುವ ಲೋನಾವಾಲಾ, ಖಂಡಾಲಾ, ಮತ್ತು ಮಹಾಬಲೇಶ್ವರ ಸುತ್ತಮುತ್ತಲಿನ ಜಲಪಾತಗಳು.
- ಹಿಮಾಚಲ ಪ್ರದೇಶ/ಉತ್ತರಾಖಂಡ: ಹಿಮಾಲಯದ ತಪ್ಪಲಿನಲ್ಲಿರುವ ಪ್ರದೇಶಗಳಲ್ಲಿ ಮಳೆ ಅಥವಾ ಇಬ್ಬನಿ ಇರುವ ರಾತ್ರಿಗಳಲ್ಲಿ, ಶುಭ್ರವಾದ ಆಕಾಶದಲ್ಲಿ ಮೂನ್‌ಬೋ ಕಾಣುವ ಸಾಧ್ಯತೆ ಇರುತ್ತದೆ.
- ಕರ್ನಾಟಕದ ಜೋಗ್ ಜಲಪಾತ, ಗೋಕಾಕ್ ಜಲಪಾತಗಳಲ್ಲೂ ಮಳೆಗಾಲದಲ್ಲಿ ಮೂನ್‌ಬೋ ಮೂಡುವ ಸಾಧ್ಯತೆಗಳಿವೆ.
ಚಂದ್ರಧನಸ್ಸಿನ ಡಾಕ್ಯುಮೆಂಟರಿ: ಈ ಜಲಪಾತದ ಬಗ್ಗೆ ಪ್ರಖ್ಯಾತ ಲ್ಯಾಂಡ್‌ಸ್ಕೇಪ್ ಪೋಟೋಗ್ರಾಫರ್ ಅಶ್ವಿನಿ ಕುಮಾರ್ ಭಟ್ ಹಾಗೂ ತಂಡ ಅಘನಾಶಿನಿ ಎನ್ನುವ ಡಾಕ್ಯುಮೆಂಟರಿಯನ್ನು ಮಾಡಿದ್ದಾರೆ. ಚಂದ್ರಧನಸ್ಸನ್ನೂ ನೀವು ಇದರಲ್ಲಿ ನೋಡಬಹುದು. ಈ ಲಿಂಕ್ ಮೂಲಕ ಡಾಕ್ಯುಮೆಂಟರಿ ವೀಕ್ಷಿಸಬಹುದು. https://youtu.be/pkk0tk5WUtA?si=CIBsUoaX2y4gX4rH
ಮೂನ್ ಬೋ ವೀಕ್ಷಿಸಲು ಒಂದಿಷ್ಟು ಸಲಹೆಗಳು:
ತಾಳ್ಮೆ ಅತ್ಯಗತ್ಯ: ಇದು ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಂಡು ಮಾಯವಾಗಬಹುದು. ಸರಿಯಾದ ಸಮಯ, ಸ್ಥಳ ಮತ್ತು ಹವಾಮಾನಕ್ಕಾಗಿ ತಾಳ್ಮೆಯಿಂದ ಕಾಯಬೇಕು.
ಸುರಕ್ಷಿತ ಸ್ಥಳವನ್ನು ಆರಿಸಿ: ಜಲಪಾತಗಳು ಅಥವಾ ಕಾಡಿನ ಪ್ರದೇಶಗಳಲ್ಲಿ ರಾತ್ರಿ ವೀಕ್ಷಣೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡಿ. ಸಾಧ್ಯವಾದರೆ ಸ್ಥಳೀಯರ ಮಾರ್ಗದರ್ಶನ ಪಡೆಯಿರಿ.
ಬೆಳಕಿನ ಮಾಲಿನ್ಯದಿಂದ ದೂರವಿರಿ: ನಿಮ್ಮ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳಲು ಟಾರ್ಚ್‌ಲೈಟ್ ಬಳಕೆ ಕಡಿಮೆ ಮಾಡಿ. ಕೆಂಪು ಬೆಳಕಿನ ಟಾರ್ಚ್‌ಲೈಟ್ ರಾತ್ರಿ ದೃಷ್ಟಿಗೆ ಅಡ್ಡಿಯಾಗುವುದಿಲ್ಲ.
ಕ್ಯಾಮೆರಾ ಸಿದ್ಧತೆ: ಮೂನ್‌ಬೋವನ್ನು ಛಾಯಾಚಿತ್ರ ತೆಗೆಯಲು ಬಯಸಿದರೆ, ದೀರ್ಘ ಎಕ್ಸ್‌ಪೋಸರ್ (long exposure) ಸೆಟ್ಟಿಂಗ್‌ಗಳಿರುವ ಕ್ಯಾಮೆರಾ ಮತ್ತು ಟ್ರೈಪಾಡ್ ಅಗತ್ಯ.