ಇತಿಹಾಸದ ನಿಶ್ಯಬ್ದ ಸಾಕ್ಷಿಗಳು ಈ ಅರವತ್ತು ಗೋರಿಗಳು
ಜ್ಯೋತಿಷ್ಯ ಶಾಸ್ತ್ರದ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಅಫ್ಜಲ್ ಖಾನ್ ಯುದ್ಧಕ್ಕೆ ಹೋಗುವ ಮೊದಲು, ಭವಿಷ್ಯ ಕೇಳುತ್ತಾನೆ. ಆ ಸಮಯದಲ್ಲಿ ಭವಿಷ್ಯಕಾರ ಸರಿಯಾದ ಭವಿಷ್ಯ ಹೇಳುತ್ತಾನೆ. ʼಈ ಯುದ್ಧದಲ್ಲಿ ನೀನು ಸೋತು ಸಾಯ್ತೀಯ, ಮುಂದೆ ನಿನ್ನ ಎಲ್ಲ ಹೆಂಡತಿಯರು ಬೇರೆಯವರ ಪಾಲಾಗುತ್ತಾರೆʼ ಅಂತ ಹೇಳಿದ ತಕ್ಷಣ ದಿಗಿಲುಗೊಳ್ಳದೆ ಅಫ್ಜಲ್ ಮಾಡಿದ ಕೆಲಸ, ತನ್ನೆಲ್ಲ ಹೆಂಡತಿಯರನ್ನು ಈ ಸ್ಥಳಕ್ಕೆ ಕರೆಸುವುದು.
- ವಿನಯ್ ಖಾನ್
'ಸಾಟ್ ಕಬರ್ ಕಡೆ ಹೋಗುಣು?' ಅಂತ ಕೇಳಿದ ನನಗೆ ನನ್ನ ಸ್ನೇಹಿತ, "ಅಲ್ಲಿಗೆ ಹೋಗಿ ಬಂದೋರಿಗೆ ಹುಷಾರ್ ತಪ್ತದಂತ" ಅಂತ ಹೇಳುತ್ತಲೇ ಸಾಟ್ ಕಬರ್ ಗಳತ್ತ ಗಾಡಿ ತಿರುಗುತ್ತಿತ್ತು. ವಿಜಯಪುರದ ಎಲ್ಲ ಮಾನ್ಯುಮೆಂಟ್‌ಗಿಂತ ಸ್ವಲ್ಪ ದೂರದಲ್ಲಿರುವ ಸಾಟ್ ಕಬರ್‌ಗೆ ಜನರು ಬರೋದು ಕಮ್ಮಿ, ಸ್ಮಶಾನವನ್ನು ನೋಡೋಕೆ ಬರುವುದಾದರೂ ಯಾರು ನೀವೇ ಹೇಳಿ? ಪ್ರಾಚೀನ ಕಾಲದ ಮಾನ್ಯುಮೆಂಟ್ ಆಗಿದ್ದರಿಂದ, ಗೋಲ್ ಗುಂಬಜ್ ಲೆವೆಲ್ ಗೆ ಅಲ್ಲದಿದ್ರೂ ಸರಿಯಾದ ವ್ಯವಸ್ಥೆ ಇರುತ್ತೆ ಅಂದುಕೊಂಡು ಮುಂದೆ ಹೋದೆವು. ಗಾಡಿಯನ್ನು ಸೈಡ್ ಗೆ ಇಟ್ಟು, 'ಅದ ನೋಡು ಸಾಟ್ ಕಬರ್' ಅಂದ. ಅಲ್ಲಿಗೆ ಎಷ್ಟು ಕಣ್ಣರಳಿಸಿ ನೋಡಿದರೂ ಮುಳ್ಳಿನ ಕಂಟಿ ಬಿಟ್ಟರೆ ಮತ್ತೇನೂ ಇರಲಿಲ್ಲ. ಯಾವುದೋ ಕಾಡಿನ ಕಾಲುದಾರಿ ಥರ ಇದ್ದ, ಮುಳ್ಳಿನ ಕಂಟಿಯನ್ನು ಬೆಳೆಸಿಕೊಂಡಿದ್ದ ದಾರಿಯಿಂದ ಮುಂದೆ ಹೋದೆವು. ಸಾಟ್ ಕಬರ್ ಗೆ ಏನೂ ʼಧಕ್ಕೆʼ ಆಗದಂತೆ ನೋಡಿಕೊಳ್ಳೋಕೆ ಕಾಂಪೌಂಡೂ ಅಲ್ಲದ ಬೇಲಿಯೂ ಅಲ್ಲದ ಏನೋ ಒಂದು ಚಿಕ್ಕ ಗೋಡೆ, ಅದರ ಮೇಲೆ ಕಬ್ಬಿಣದ ರಾಡ್‌ಗಳು. ಹಾಗೆ ನಾವು ಮುಂದಕ್ಕೆ ಹೋಗುವ ಸಮಯಕ್ಕೆ ಒಂದು ವಿದೇಶಿ ಜೋಡಿ ಪರಿಚಯದವರ ರೀತಿಯಲ್ಲಿ ಸ್ಮೈಲ್ ಮಾಡಿದ್ರೆ, ಏನೂ ಗೊತ್ತಿಲ್ಲದೆ ನನ್ನ ಕಡೆಯಿಂದಲೂ ವಾಪಸ್ ಸ್ಮೈಲ್.
ಅಲ್ಲಿ ಯಾರೂ ಇರಲ್ಲ. ಒಂದು ಸ್ಮಶಾನದ ಮುಂದೆ ಯಾರಿರುತ್ತಾರೆ ಹೇಳಿ? ಅದೂ ಅಂತಿಂಥ ಸಮಾಧಿಗಳಲ್ಲ. ನಮ್ಮ ಕಣ್ಣಿಗೆ ಕಂಡಿದ್ದು ರೀಲ್ಸ್ ನೋಡುತ್ತ, ತೊಗರಿ ಬೆಳೆದಿದ್ದ ಹೊಲವನ್ನು ಕಾಯುತ್ತಿದ್ದ ಇಬ್ಬರು ಹುಡುಗರು. ಅಲ್ಲೊಂದು ಸಣ್ಣ ಗೇಟು ಅದನ್ನು ಹಾದು ಹೋದಾಗ ಅಲ್ಲಿಬ್ಬರು, ಸಾಟ್ ಕಬರ್ ಒಂಥರಾ, ವಿಚಿತ್ರವೂ ಅಲ್ಲ, ಕೆಟ್ಟದ್ದೂ ಅಲ್ಲ, ಒಳ್ಳೆಯದ್ದೂ ಅಲ್ಲ ಎನ್ನುವ ರೀತಿಯ ಸ್ಥಳ. ಅಲ್ಲಿಗೆ ಹೋಗೋಕೆ ಕೆಲವರಿಗೆ ಹೆದರಿಕೆ, ಕೆಲವರಿಗೆ ಅಸಡ್ಡೆ. ಆದರೆ ರಾತ್ರಿ ಸಮಯಕ್ಕೆ ಕುಡುಕರ ಅಡ್ಡೆ.

ಸಾಲಾಗಿದ್ದ 23 ಗೋರಿಗಳು. ಯಾವುವೂ ಯುನಿಫಾರ್ಮಿಟಿಯಲ್ಲಿಲ್ಲ. ಅಲ್ಲಿ ಪಾಳು ಬಿದ್ದ ಗುಂಬಜ್ ಥರದ ಚಿಕ್ಕ ಆಕೃತಿ. ಅದನ್ನು ನೋಡಿದರೆ, ಅಲ್ಲಿ ಕುಳಿತುಕೊಳ್ಳೋಕೋ, ನಮಾಜ್ ಮಾಡೋಕೋ ಮಾಡಿದ್ದಂತಿತ್ತು. ಅದರ ಹಿಂದೆ ಒಂದು ಬಾವಿ. ಇಲ್ಲಿನ ಗುಂಬಜ್‌ಗಿಂತ ಸ್ವಲ್ಪ ವಿಭಿನ್ನವಾದ ಮತ್ತೊಂದು ಗುಂಬಜ್. ಉತ್ತರಕರ್ನಾಟಕದಾದ್ಯಂತ ಭಾರಿ ಮಳೆಯ ಕಾರಣ ಬಾವಿ ತುಂಬಿತ್ತು. ಆ ಕಡೆ ಗುಂಬಜ್‌ಗೆ ಹೋಗೋದಕ್ಕೆ ದಾರಿಯೂ ಇರಲಿಲ್ಲ. ಹೋಗಬಹುದಾಗಿದ್ರೂ ದಾರಿಗೆ ಮುಳ್ಳಿನ ಬೇಲಿ.
ಅಲ್ಲೊಂದು ಮುರಿದು ಬಿದ್ದ ನೋಟಿಸ್ ಇತ್ತು. ʼ..ಯಾರಾದರೂ ಈ ಸ್ಮಾರಕವನ್ನು ಸ್ಥಳಾಂತರಿಸಿದರೆ, ಹಾನಿಯುಂಟು ಮಾಡಿದರೆ, 3 ತಿಂಗಳವರೆಗೆ ಸೆರೆವಾಸ, 5000 ವರೆಗೂ ಹೆಚ್ಚಿಸಬಹುದಾದ ದಂಡ..ʼ ಅನ್ನೋದನ್ನು ನೋಡಿದಾಗ, ʼ5000 ದಂಡ ಅಂದ್ರ ಯಾರಾದರೂ ಕೊಡ್ತಾರಾ?ʼ ಅದಕ್ಕೆ, ʼಇಲ್ಲಿ ಕಳುವು ಮಾಡಕೂ ಏನೂ ಇಲ್ಲʼ. ಅಂದಾಗ. ʼಹೋದ ವಾರ ಈ ಮಾನ್ಯುಮೆಂಟ್‌ದು ಬಾಗಿಲ ಕದ್ದು, ಅದಕ್ಕ ಹಾಕಿದ್ದ ಸರಪಳಿ ಸಹ ತುಡುಗು ಮಾಡ್ಕೊಂಡ್ ಹೋಗಯಾರʼ ಅಂತ ಹೇಳಿದ್ದು ಪ್ರ್ಯಾಚ್ಯವಸ್ತು ಇಲಾಖೆಯ ನೌಕರ, ಮತ್ತು ಸಾಟ್ ಕಬರ್‌ನ ದೇಖುರೇಖು ಮಾಡುತ್ತಿರುವ ಪರಶುರಾಮ್. ʼಹೋದ್ವಾರ ಗುಂಬಜ್‌ಗೆ ಡ್ಯೂಟಿ ಹಾಕಿದ್ರು ನಾನ್ ಅಲ್ಲಿದ್ದೆ, ಒಂದು ದಿನದಾಗ ಹಿಂಗೆಲ್ಲ ಮಾಡ್ಯಾರ ನೋಡ್ರೀʼ ಅಂತ ಹೇಳಿದರು.
ನಿಜ ಬಿಡಿ, ಸಾಟ್ ಕಬರ್ ಇತಿಹಾಸದ ಬಗ್ಗೆ ಸ್ವಲ್ಪ ಅಭಿರುಚಿ ಇದ್ದವರಿಗೆ ಗೊತ್ತಿರಬಹುದು. ಇನ್ನು ಕುಡಿಯೋರಿಗೆ ಇದೊಂದು ಥರದ ಸ್ವರ್ಗ. ನೋಡುಗರೇ ಇಲ್ಲದ್ದಕ್ಕೆ ಸರಿಯಾದ ಮೇಂಟೆನೆನ್ಸ್ ಸಹ ಇರಲಿಲ್ಲ. ಈ ಪರಶುರಾಮ್‌ನನ್ನೂ 6 ತಿಂಗಳಿನಿಂದ ಈ ಸ್ಥಳಕ್ಕೆ ಹಾಕಿದ್ದಾರಂತೆ. 6 ತಿಂಗಳ ಮೊದಲು ಇಲ್ಲಿ ಹೇಳೋಕೂ ಕೇಳೋಕು ಯಾರೂ ಇರದಂಥ ಶಾಪಗ್ರಸ್ಥ ಸ್ಥಳ ಇದು. ಸಾವಿರಾರು ಹನಿ ಕಣ್ಣೀರು, 63 ದೇಹ, 65 ಆತ್ಮ, ಎಂದೂ ಕಾಣರಿಯದ ಕೃತ್ಯ, ಪೌರುಷ, ರಕ್ತದ ದಾಹ… ಹೀಗೆ ಇದೊಂದು ಇತಿಹಾಸದ ಕರ್ಸ್ಡ್ ಪ್ಲೇಸ್. ಇನ್ನು ಕೆಲವರಿಗೆ ಇದೊಂದು ಹಾಂಟಿಂಗ್ ಪ್ಲೇಸ್. ಇಲ್ಲಿ ದೆವ್ವ ಮತ್ತು ಆತ್ಮಗಳೂ ಇವೆ ಅಂತ ಒಬ್ಬೊಬ್ಬರ ಮಾತು. ಇಲ್ಲಿ ದೆವ್ವ ಇದೆ ಅನ್ನುವ ಸುದ್ದಿ ಕೆಲವೊಮ್ಮೆ ಟಿವಿ ಯೂಟ್ಯೂಬ್‌ನಲ್ಲೂ ನೋಡಸಿಗುತ್ತದೆ.

ಅಲ್ಲಿ ನಡೆದಿದ್ದಾರೂ ಏನು?
ಅಫ್ಙಲ್ ಖಾನ್ ಬೇರೆ ಯಾರೂ ಅಲ್ಲ, ಶಿವಾಜಿಯೊಂದಿಗೆ ಹೋರಾಟಕ್ಕಿಂತ ಅವನನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಸಾಯಿಸಬೇಕೆಂದು ಪ್ಲಾನ್ ಮಾಡಿದ್ದ. ಅವನ ಪ್ಲ್ಯಾನ್ ಪ್ರಕಾರ ಶಿವಾಜಿಯನ್ನು ತೆಕ್ಕೆಯಲ್ಲಿ ಹಿಡಿದ. ಆದರೆ ಚೂರಿ ಚುಚ್ಚುವ ಸಮಯಕ್ಕೆ ಶಿವಾಜಿ ತನ್ನ ವ್ಯಾಘ್ರನಖಗಳಿಂದ ಅವನನ್ನು ಇರಿದು ಕೊಲ್ಲುತ್ತಾನೆ. ಆ ಅಫ್ಙಲ್ ಖಾನನಿಗೆ 65 ಜನ ಹೆಂಡತಿಯರು. ಅವನು ಅಲಿ ಆದಿಲ್ ಶಾ 2ನೇ ರಾಜನ ಸೇನಾಧಿಪತಿಯಾಗಿರುತ್ತಾನೆ.
ಅದಕ್ಕೂ ಮೊದಲು ಇದರ ಸ್ಟೋರಿ ಶುರುವಾಗೋದು ಅಫ್ಜಲ್ ಹತ್ಯೆಗೂ ಮೊದಲು. ಜ್ಯೋತಿಷ್ಯ ಶಾಸ್ತ್ರದ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಅಫ್ಜಲ್ ಖಾನ್ ಯುದ್ಧಕ್ಕೆ ಹೋಗುವ ಮೊದಲು, ಭವಿಷ್ಯ ಕೇಳುತ್ತಾನೆ. ಆ ಸಮಯದಲ್ಲಿ ಭವಿಷ್ಯಕಾರ ಸರಿಯಾದ ಭವಿಷ್ಯ ಹೇಳುತ್ತಾನೆ. ʼಈ ಯುದ್ಧದಲ್ಲಿ ನೀನು ಸೋತು ಸಾಯ್ತಿಯ, ಮುಂದೆ ನಿನ್ನ ಎಲ್ಲ ಹೆಂಡತಿಯರು ಬೇರೆಯವರ ಪಾಲಾಗುತ್ತಾರೆ.ʼ ಅಂತ ಹೇಳಿದ ತಕ್ಷಣ ದಿಗಿಲುಗೊಳ್ಳದೆ ಅಫ್ಜಲ್ ಮಾಡಿದ ಕೆಲಸ, ತನ್ನೆಲ್ಲ ಹೆಂಡತಿಯರನ್ನು ಈ ಸ್ಥಳಕ್ಕೆ ಕರೆಸುವುದು. ಆಗ ಬಂದ ಹೆಂಡತಿಯರನ್ನು ಕರೆದು ಬಾವಿಯಲ್ಲಿ ಮುಳುಗಿಸಿ, ಅವರನ್ನು ಕತ್ತಿಯಿಂದ ಕೊಂದು, ಅವರು ಬಿದ್ದ ಜಾಗದಲ್ಲೇ ಅವರನ್ನು ಮಣ್ಣು ಮಾಡತೊಡಗಿದ. ಆ ಸಮಯದಲ್ಲಿ ವಿಷಯ ಗೊತ್ತಾಗಿ ಇಬ್ಬರು ಹೆಂಡತಿಯರು ಓಡಿಹೋಗಲು ಯತ್ನಿಸುತ್ತಾರೆ. ಆಗ ಅವರನ್ನು ಅವರು ಓಡುತ್ತಿದ್ದ ಜಾಗದಲ್ಲೇ ಕೊಂದು, ಅಲ್ಲೇ ಒಂದು ಕಬರ್ ಮಾಡಿದ. ಆ ಇಬ್ಬರ ಕಬರ್‌ಗಳು ಒಂದು ಬಿಳಿ ಮಸೀದಿ ಹತ್ತಿರ ಇದ್ದರೆ. ಮತ್ತೊಂದು ಈಗಿನ ಸರಕಾರಿ ಆಸ್ಪತ್ರೆಯ ಪ್ರಾಂಗಣದಲ್ಲಿದೆ. ಕೆಲವರ ಪ್ರಕಾರ ಶಿವಾಜಿಯ ಜತೆ ಯುದ್ಧಕ್ಕೆ ಹೊರಡುವ ಮುನ್ನ ಬಿಳಿ ಮಸ್ಜಿದ್ ಹತ್ತಿರ ಸತ್ತಿರುವ ಹೆಂಡತಿಗೆ ತಾನೇ ಚೆನ್ನಾಗಿರುವ ಗೋರಿ ಕಟ್ಟಿ ಅಲ್ಲೊಂದು ಮಸ್ಜಿದ್ ಕಟ್ಟಿ ಎಂದಿದ್ದನಂತೆ. ಆದರೂ, ಸಾಯಿಸಿ ಮಸ್ಜಿದ್ ಕಟ್ಟುವ ರೀತಿಯಲ್ಲಿದ್ದರೆ ಅದು ಪ್ರೀತಿಯಾ? ಅಥವಾ ತಾನು ಕಟ್ಟಿಕೊಂಡ 60+ ಹೆಂಡತಿಯರನ್ನೂ ಆತ ಪ್ರೀತಿಸುತ್ತಿದ್ದನಾ? ಅವರೆಲ್ಲರ ಪ್ರೀತಿ ಒಬ್ಬಳಲ್ಲೇ ಸಿಗಲಿಲ್ಲವಾ? ಹೋಗ್ಲಿ ಬಿಡಿ ಅದು ಅವರವರ ಕೆಪಾಸಿಟಿ.

ಇದು ನಿರ್ಲಕ್ಷ್ಯಕ್ಕೆ ಒಳಗಾದ ತಾಣ ಎಂದೂ ಹೇಳೋಕೆ ಆಗಲ್ಲ. ಏಕೆಂದರೆ ಇದು ಮೊದಲಿಗೆ ಸ್ಮಶಾನ. ಸತ್ತವರನ್ನು ಬಿಟ್ಟು ಮತ್ಯಾರಿಗೆ ಮತ್ತೇಕೆ ಈ ಸ್ಮಶಾನ ಕರೆಯುತ್ತದೆ ಅಂತ ಗೊತ್ತಿಲ್ಲ. ಆದರೆ, ಈ ಸ್ಥಳದ ಬಗ್ಗೆ ಸ್ವಲ್ಪ ಪ್ರಚಾರವಂತೂ ಬೇಕೇ ಬೇಕು. ಪ್ಯಾರಿಸಿನ ಪೀರೆ ಲಚೈಸ್ ಸಿಮೆಟ್ರಿ ವಿಶ್ವದಲ್ಲೇ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. ಇರಾಕ್‌ನ ವಾಡಿ ಅಲ್ ಸಲಾಮ್ ವಿಶ್ವದ ಅತಿದೊಡ್ಡ ಸ್ಮಶಾನವಾಗಿ ಪ್ರವಾಸಿಗರು ನೋಡುವಂಥ ಸ್ಥಳವಾಗುತ್ತಿದೆ. ಸ್ಮಶಾನವನ್ನು ತೋರಿಸುವುದೂ ಒಂದು ಕಲೆ ಅಲ್ವಾ? ಆದರೆ, ನಮ್ಮವರು ಸಾಟ್ ಕಬರ್‌ನನ್ನು ಎಷ್ಟು ಮುಚ್ಚಬಹುದೋ ಮುಚ್ಚುತ್ತಿದ್ದಾರೆ. ಸ್ಮಶಾನವನ್ನೇ ನೋಡುವುದಕ್ಕೆ ವಿದೇಶಗಳಿಗೆ ಹೋಗಿರುವ ಉದಾಹರಣೆಗಳಿವೆ. ಸ್ಮಶಾನಗಳ ಬಗ್ಗೆಯೇ ಹಲವಾರು ಲೇಖನಗಳು ಪ್ರವಾಸಿ ಪ್ರಪಂಚದಲ್ಲಿ ಬಂದಿದೆ. ಅದೇ ರೀತಿಯಲ್ಲಿ ನಮ್ಮ ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯ ವಸ್ತು ಇಲಾಖೆ ಸಾಟ್ ಕಬರ್‌ಗೆ ಸ್ವಲ್ಪ ಪುಷ್ ಕೊಟ್ಟು, ದೇಶ ವಿದೇಶದ ಪ್ರವಾಸಿಗರಿಗೆ ಈ ಸ್ಥಳವನ್ನೂ ತೋರಿಸಬಹುದು. ಗೋಲ್ ಗುಂಬಜ್ ಗೋರಿ, ಬಾರಾ ಕಮಾನ್ ಗೋರಿ ಹಾಗೆ ವಿಜಯಪುರದಲ್ಲಿರುವ ಎಲ್ಲ ಗೋರಿಗಳಿಗಿಂತ ಹೆಚ್ಚಿನ ಸವಲತ್ತು ಮತ್ತೆ ಪ್ರಾಶಸ್ತ್ಯ ನೀಡಿದರೆ, ಅವತ್ತು ಅಫ್ಙಲ್ ಖಾನ್‌ನ ಚಪಲಕ್ಕೆ, ಹೊಟ್ಟೆ ಕಿಚ್ಚಿಗೆ ಬಲಿಯಾದ ಆ ಎಲ್ಲ ಹೆಣ್ಣುಮಕ್ಕಳ ಕತೆಯನ್ನು ಹೆಚ್ಚೆಚ್ಚು ಜನರಿಗೆ ತಿಳಿಸಬಹುದು ಅಲ್ಲವೇ?
ತಿರಸಟ್ ಕಬರ್!
ಸಾಟ್ ಅಂದರೆ ಹಿಂದಿಯಲ್ಲಿ 60 ಗೂಗಲ್ ಪ್ರಕಾರ 60 ಸಮಾಧಿಗಳಷ್ಟೇ ಇರೋದು ಎಂಬ ಮಾಹಿತಿ ಇದ್ದರೂ. ಅಲ್ಲಿ ಎಣಿಸಿದಾಗ ಸಿಗೋದು 63. ಇತಿಹಾಸದ ಪ್ರಕಾರ ಅಫ್ಜಲ್ ಖಾನನಿಗೆ 64 ಹೆಂಡತಿ ಇದ್ದರು, 63ರನ್ನು ಸಾಟ್ ಕಬರ್ ಹತ್ತಿರ ಕೊಂದರೆ ಮತ್ತೊಬ್ಬಳು ಓಡಿಕೊಂಡು ಹೋಗುವಾಗ ಕೊಂದಿದ್ದು. ಆದರೆ, ಇನ್ನೂ ಹಲವರ ಪ್ರಕಾರ ಬಿಳಿ ಮಸೀದಿ ಹತ್ತಿರವಿರುವ ಗೋರಿಯೂ ಅಫ್ಜಲನ ಹೆಂಡತಿಯದ್ದೇ ಎಂದು. ಆದರೆ ಯಾರು ಎಷ್ಟೇ ಹೇಳಿದರೂ ಅವನ ಹೆಂಡತಿಯ ಸಂಖ್ಯೆ 60ಕ್ಕಿಂತ ಜಾಸ್ತಿಯೇ ಇದೆ. ಕನ್ಫರ್ಮೇಷನ್‌ಗೋಸ್ಕರ ಕೇಳಬೇಕು ಅಂದರೆ ಅಫ್ಜಲನನ್ನು ಶಿವಾಜಿ ಕೊಂದುಹಾಕಿದ್ದ!