Thursday, December 25, 2025
Thursday, December 25, 2025

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ…

ಬೋಟ್‌ಮ್ಯಾನ್‌ಗಳು ಹೇಳುವ ಇತಿಹಾಸದ ಕಥೆಗಳನ್ನು ಆಲಿಸುತ್ತಾ, ನೀರಿನಡಿ ಮೀನುಗಳ ಓಡಾಟ, ಅಲ್ಲಲ್ಲಿ ಬೃಹದಾಕಾರ ಬಂಡೆಗಳ ಮೇಲೆ ಇತಿಹಾಸ ಕುರುಹುಗಳನ್ನು ಕಣ್ಣು ಮತ್ತು ಕ್ಯಾಮೆರಾಗಳಲ್ಲಿ ಸೆರೆಹಿಡಿಯಬಹುದು.

ಬೆರಳೆಣಿಕೆಯ ಜನಸಂದಣಿ, ಬೆಟ್ಟಗಳ ಸಾಲಿನ ಮಧ್ಯೆ ತುಂಬಿ ಹರಿವ ತುಂಗಭದ್ರೆ, ಮೊಸಳೆಗಳ ಚಲನವಲನ, ಆಲಾಪದಂಥ ಅನುಭವ ನೀಡುವ ಸ್ವಚ್ಛಂದ ಪರಿಸರದ ಮಧ್ಯೆ ಕೂಗಿಡುತ್ತ ನಲಿದಾಡುವ ನೈದಿಲೆಗಳು, ಮುಂಜಾವಿಗೊಮ್ಮೆ, ಸಂಜೆಗೊಮ್ಮೆ ಹೊಳೆ ನೀರಿನ ಮೇಲೆ ಬಂಗಾರ ಹರಿವಂತೆ ಭಾಸವಾಗುವ ಸೂರ್ಯರಶ್ಮಿ, ಅಕ್ಟೋಬರ್‌ ಹೊತ್ತಿಗೆ ಬಂಗಾರ ಬೆಳೆದಂತೆ ಕಾಣುವ ಭತ್ತದ ಗದ್ದೆಗಳ ಸಾಲು, ಹಾಂ.. ಅಲ್ಲಲ್ಲಿ ಗುಂಡು ತುಂಡು ಹಿಡಿದು ಕುಳಿತ ವಿದೇಶಿ ಬೆಡಗಿಯರು ಇವೆಲ್ಲದರ ಮಧ್ಯೆ ತಿರುಗಾಟಕ್ಕೋ ಇಲ್ಲ ಮೀನುಗಾರಿಕೆಗೋ ತೆಪ್ಪಗಳ ಜತೆಗೆ ಹೊಳೆಯ ಮಧ್ಯೆ ತೆರಳುವ ಅಂಬಿಗರ ದಂಡು ನೋಡಲು ನೀವೊಮ್ಮೆ ಈ ಸಣ್ಣ ಊರಿಗೆ ಹೊರಡಬೇಕು.

Untitled design (1)

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿದೆ ಸಣಾಪುರವೆಂಬ ಈ ಸುಂದರ ತಾಣ. ವಿಶ್ವ ಪ್ರಸಿದ್ಧ ಹಂಪಿಯನ್ನು ವೀಕ್ಷಿಸಲು ಬರುವ ಪ್ರವಾಸಿಗಳು, ಹಂಪಿಯಲ್ಲೇ ಬಾಡಿಗೆಗೆ ಸಿಗುವ ಬೈಕ್‌ ಇಲ್ಲವೇ ಸೈಕಲ್ ಹತ್ತಿ ನಿಮಿಷ ಮಾರ್ಗದಲ್ಲಿ ಈ ತಾಣವನ್ನು ತಲುಪಬಹುದು. ದಾಂಡೇಲಿಯಂತೆ ಬೋಟ್‌ರೈಡ್‌, ಜಲ ಕ್ರೀಡೆ ‌ಆಡಲು ಬಯಸುವ ಪ್ರವಾಸಿಗರು ಸಣಾಪುರದಲ್ಲಿ ಹರಿವ ತುಂಗಭದ್ರೆಯ ಮಡಿಲಲ್ಲಿ ಈ ತೆರನಾದ ಕ್ಷಣಗಳನ್ನು ಕಳೆಯಬಹುದು. ಈ ನದಿ ಹರಿವ ತಟದಲ್ಲಿಯೇ ಸಣಾಪುರ ಎಂಬ ಹಳ್ಳಿಯಿದ್ದು ಇಲ್ಲಿ ತುಂಗಭದ್ರೆ ಸಣಾಪುರ ಹೊಳೆ (ನದಿ) ಎಂದು ಕರೆಯಲ್ಪಡುತ್ತದೆ.

ಇಲ್ಲಿನ ಹದಿಹರೆಯದ ಮಕ್ಕಳು ನದಿಗೆ ಹಾರಿ ಈಜುವ ವೇಗ ಕಂಡು ಎಂಥವರಿಗೂ ನಾಚಿಕೆ ಆಗದಿರದು. ಹಾಗಂತ ಈಜು ಬಾರದವರು ಹುಂಬರಂತೆ ಇದರ ಗೋಜಿಗೆ ಹೋಗುವುದು ಬೇಡ. ಇಲ್ಲಿ ಹರಿವ ನದಿಯ ಆಳ-ಅಗಲವರಿಯದೇ ಹಾರಿದರೆ, ತನ್ನ ಮಡಿಲಲ್ಲೇ ಅಡಗಿಸಿಕೊಳ್ಳುತ್ತದೆ. ನದಿಯ ಅಲ್ಲಲ್ಲಿ ಸ್ಥಳೀಯವಾಗಿ ಮೊಸಳೆ ಮಡುವು (ಮೊಸಳೆಗಳು ಅತಿಯಾಗಿ ಕಂಡುಬರುವ ತಾಣ) ಕರೆಯುವ ಅಪಾಯಕಾರಿ ತಾಣಗಳೂ ಇಲ್ಲಿವೆ. ಹಾಗಾಗಿ ಸ್ಥಳಿಯ ಅಂಬಿಗರು ಅಥವಾ ಬೋಟ್‌ಮ್ಯಾನ್‌ಗಳು ಅಲ್ಲಿಯೇ ಲಭ್ಯವಿದ್ದು ಅವರ ಸಹಾಯ ಪಡೆದರೆ ಸುಂದರ ಸಣಾಪುರದ ಸೌಂದರ್ಯ ಸವಿಯಬಹುದು.

Untitled design (4)

ಹೀಗೆ ನೀವು ಪಯಣ ಆರಂಭಿಸಿದರೆ……

ಬೋಟ್‌ಮ್ಯಾನ್‌ಗಳು ಹೇಳುವ ಇತಿಹಾಸದ ಕಥೆಗಳನ್ನು ಆಲಿಸುತ್ತಾ, ನೀರಿನಡಿ ಮೀನುಗಳ ಓಡಾಟ, ಅಲ್ಲಲ್ಲಿ ಬೃಹದಾಕಾರ ಬಂಡೆಗಳ ಮೇಲೆ ಇತಿಹಾಸ ಕುರುಹುಗಳನ್ನು ಕಣ್ಣು, ಕ್ಯಾಮೆರಾಗಳಲ್ಲಿ ಸೆರೆಹಿಡಿಯಬಹುದು. ಬೃಹತ್‌ ಬಂಡೆಗಳೆರಡರ ಮಧ್ಯೆ ತೆಪ್ಪ ಸಾಗುವಾಗ ಅಲ್ಲಲ್ಲಿ ಮೊಸಳೆಗಳ ಕಂಡಾಗ ರೋಮಾಂಚನದ ಅನುಭವವಾದರೆ, ಅವಕಾಶ ಸಿಕ್ಕಾಗ ಪ್ರವಾಸಿಗರ ಈಜುಮಸ್ತಿಗೆ ಬೋಟ್‌ಮ್ಯಾನ್‌ಗಳು ಸಮಯ ನೀಡುತ್ತಾರೆ.

ದಾರಿ ಹೇಗೆ?

ಹಂಪಿಯ ವಿರೂಪಾಕ್ಷ ದೇವಾಲಯದಿಂದ 25 ಕಿಮೀ ಅಂತರದಲ್ಲಿ ಈ ತಾಣವಿದ್ದು, ಹಂಪಿಯಿಂದ ಕಮಲಾಪುರ, ಕಂಪ್ಲಿ, ಬುಕ್ಕಸಾಗರ ಮಾರ್ಗವಾಗಿ ಸಾಗಿ ಸಣಾಪುರ ನದಿಯನ್ನು ತಲುಪಬಹುದು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..