ಹೃದಯದ ದ್ವೀಪದಲ್ಲಿ ಮುಳುಗುವ ಕನಸು
ನಮ್ಮ ಉತ್ತರ ಕನ್ನಡ ನಮ್ಮ ಹೆಮ್ಮೆ. ಹಚ್ಚ ಹೆಸರಿನ ಮಲೆನಾಡನ್ನು ಹಾಗೂ ಕರಾವಳಿ ತೀರಗಳನ್ನು ಇಲ್ಲಿ ನೋಡಬಹುದು. ಮುರುಡೇಶ್ವರ ಇದು ನಮ್ಮ ಜಿಲ್ಲೆಯ ಪ್ರಸಿದ್ಧವಾದ ಒಂದು ಯಾತ್ರಾ ಸ್ಥಳ. ದೇವಸ್ಥಾನದಲ್ಲಿ ಶಿವನ ದರ್ಶನವನ್ನು ಪಡೆದು ಹಾಗೆ ಸಮುದ್ರದಲ್ಲಿ ಗೇಮ್ಸ್ ಗಳನ್ನು ಆಡಿ, ಅಲ್ಲಿಂದ ಸುಮಾರು 10 ಕಿಮೀ ಬೋಟ್ನಲ್ಲಿ ನಮ್ಮ ಪಯಣ ನೇತ್ರಾಣಿ ಕಡೆಗೆ.
- ಸ್ವಾತಿ ಹೆಗಡೆ
ನೇತ್ರಾಣಿ ದ್ವೀಪ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಸಮೀಪದಲ್ಲಿರುವ ಒಂದು ಸುಂದರ ಸಮುದ್ರ ದ್ವೀಪ. ಇದರ ಆಕಾರ ಹೃದಯದಂತಿರುವುದರಿಂದ ಇದನ್ನು ʼHeart-shaped Islandʼ ಎಂದೂ ಕರೆಯುತ್ತಾರೆ. ನೇತ್ರಾಣಿ ದ್ವೀಪವು ಕರ್ನಾಟಕದ ʼScuba Diving Paradiseʼ ಎಂದೇ ಪ್ರಖ್ಯಾತಿಯಾಗಿದೆ. ಅಂದರೆ ಸ್ಕೂಬಾ ಡೈವ್ ಮಾಡುವವರಿಗೆ ನೇತ್ರಾಣಿ ಸ್ವರ್ಗದಂತೆ! ಸ್ಕೂಬಾ ಮಾಡಲು ಇಷ್ಟಪಡುವವರು ಅಕ್ಟೋಬರ್-ಮೇ ಸಮಯದಲ್ಲಿ ಹೋದರೆ ಸೂಕ್ತ. ಈ ಸಮಯದಲ್ಲಿ ವಾತಾವರಣವೂ ತಂಪಾಗಿರುತ್ತದೆ. ಬೇಸಗೆಯಲ್ಲೂ ಸ್ಕೂಬಾ ಮಾಡುವ ಅವಕಾಶವಿದೆ. ಆದರೆ, ಕರಾವಳಿ ಪ್ರದೇಶ ಆದ ಕಾರಣ, ಸೆಕೆ ಜಾಸ್ತಿ ಇರುತ್ತದೆ. ಆದರೆ, ನೀರಿನೊಳಗೆ ಹೇಗೂ ತಂಪಿರುತ್ತದೆ ಎಂಬ ಧೈರ್ಯದೊಂದಿಗೆ ಹೋಗಬಹುದು.
ಇದನ್ನೂ ಓದಿ:ಭಾರತದ ಅತ್ಯುತ್ತಮ ಸ್ಕೂಬಾ ಡೈವಿಂಗ್ ತಾಣಗಳು
ಅಲೆಗಳ ಕೆಳಗೆ
ಸಮುದ್ರದ ಮೇಲೆ ಕಾಣಿಸುವ ಲೋಕ ಒಂದಾದರೆ, ಅಲೆಗಳ ಕೆಳಗೆ ಮತ್ತೊಂದು ಲೋಕ ಇದೆ. ನೀಲಿ ನೀರಿನಲ್ಲಿ ಮಿಂಚುವ ಜೀವಿಗಳು, ವಿವಿಧ ಬಗೆಯ ಬಂಡೆಕಲ್ಲುಗಳು, ಮನಸಿಗೆ ಶಾಂತಿ ಕೊಡುವ ಸಮುದ್ರದ ನಿಶ್ಶಬ್ದ. ಭೂಮಿಯ ಮೇಲೆ ಸ್ವರ್ಗ ನೋಡಬೇಕೆಂದರೆ, ಒಮ್ಮೆ ನೇತ್ರಾಣಿ ನೋಡಲೇ ಬೇಕು. ಇಂಥ ಜಾಗದಲ್ಲೊಮ್ಮೆ ಸ್ಕೂಬಾ ಡೈವ್ ಮಾಡಬೇಕು ಎನ್ನುವುದು ನನ್ನ ಬಹಳ ದಿನಗಳ ಕನಸಾಗಿತ್ತು. ಕನಸು ನನಸಾಗಿದೆ. ಎಲ್ಲರೂ ಹೇಳುವಂತೆ ಇದೊಂದು ಬೇರೆ ಪ್ರಪಂಚ. ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈಜು ಬರದಿದ್ದರೂ ತುಂಬಾ ಆರಾಮಾಗಿ ಸಮುದ್ರದ ಆಳಕ್ಕೆ ಹೋಗಿ ವಿವಿಧ ಬಗೆಯ ಬಣ್ಣಗಳನ್ನು ಹೊಂದಿರುವ ಮೀನು, ಪಟ್ಟೆ ಪಟ್ಟೆ ಹಾವು, ಹೀಗೆ ನಾನಾ ರೀತಿಯ ಜೀವಿಗಳನ್ನು ತುಂಬಾ ಹತ್ತಿರದಿಂದ ನಾವು ಒಂದು ಮೀನಿನಂತೆ ಹೋಗಿ ವೀಕ್ಷಣೆ ಮಾಡಬಹುದು.

ನೇತ್ರಾಣಿ ವಿಶೇಷತೆ
ಹೃದಯದ ಆಕಾರದಲ್ಲಿರುವ ದ್ವೀಪದ ಸುತ್ತ ಇರುವ ನೀಲಿ ನೀರನ್ನು ಕಂಡಾಗ ಮನಸು ಕೂಡ ತಿಳಿಯಾಗುತ್ತದೆ. ವರ್ಣರಂಜಿತ ಮೀನುಗಳು, ಕೊರಲ್ ರೀಫ್‌ಗಳು ಹಾಗೂ ಇನ್ನೂ ಹಲವು ಜೀವಿಗಳನ್ನು ಈ ಸ್ಕೂಬಾ ಡೈವ್ ಅಲ್ಲಿ ನೋಡಬಹುದು. ಸ್ಕೂಬಾ ಡೈವ್ ಮಾಡಲು ಕರ್ನಾಟಕದ ಅತ್ಯುತ್ತಮ ಸ್ಥಳವೆಂದರೆ ಅದು ನೇತ್ರಾಣಿ. ಸಮುದ್ರದ ದಡದಲ್ಲಿ ನಿಂತು ಸೂರ್ಯಾಸ್ತ ನೋಡುವ ಖುಷಿ ಒಂದೆಡೆಯಾದರೆ ಸಮುದ್ರದ ಆಳದಲ್ಲಿರುವ ಪ್ರಪಂಚವನ್ನು ಕಣ್ತುಂಬಿಕೊಳ್ಳುವ ಸಮಾಧಾನ ಇನ್ನೊಂದೆಡೆ. ಈ ಎರಡೂ ದೃಶ್ಯಗಳು ತುಂಬಾ ಸುಂದರ. ಶಾಂತಿ ಮತ್ತು ಸಾಹಸ ಪ್ರವಾಸ ಒಂದೇ ಜಾಗದಲ್ಲಿ ಸಿಕ್ಕರೆ ಯಾರಿಗೆ ತಾನೆ ಬೇಡ ಎನ್ನಲು ಮನಸಾಗುತ್ತದೆ? ಇನ್ನು ಫೊಟೋಗ್ರಫಿ ಮಾಡಲು ಇಷ್ಟಪಡುವವರಿದ್ದರೆ, ಜಲಾಂತರ್ಗತ ಛಾಯಾಗ್ರಹಣಕ್ಕೆ ಉತ್ತಮ ಸ್ಥಳ ಇದು. ಇವೆಲ್ಲವನ್ನೂ ನೋಡಿ ಎಕ್ಸ್ಪೀರಿಯೆನ್ಸ್ ಮಾಡಲು ನಾನು ನೀರಿಗೆ ಧುಮುಕಿದೆ. ತುಂಬಾ ಸಮಾಧಾನವಾಗಿ ನೀರಿನ ಶಬ್ದವನ್ನು ಗಮನಿಸುತ್ತಾ ನಮ್ಮ ಸುತ್ತಲಿನ ಜೀವಿಗಳನ್ನು ನೋಡುತ್ತಿದ್ದರೆ ಕಣ್ಣಿಗಷ್ಟೇ ಅಲ್ಲ ಮನಸಿಗೆ ಕೂಡ ಹಬ್ಬ!

ಕಣ್ಣಲ್ಲೇ ಮಾತು
ನೀರಿನೊಳಗೆ ಮಾತನಾಡಲು ಕಷ್ಟವಾಗುವುದರಿಂದ ಅಲ್ಲಿ ನಮ್ಮ ಕೈ ಸನ್ನೆ ಹಾಗೂ ಕಣ್ಣಿನಲ್ಲೇ ಮಾತನಾಡಲು ಮೊದಲೇ ತರಬೇತಿ ನೀಡುತ್ತಾರೆ. ಮುಖ್ಯವಾಗಿ ಬಾಯಲ್ಲೇ ಉಸಿರಾಡಬೇಕು ಮತ್ತು ಕಿವಿಯಲ್ಲಿ ತುಂಬಿಕೊಳ್ಳುವ ಗಾಳಿಯನ್ನು ಆಗಾಗ ಸರಿಯಾಗಿ ಕ್ಲಿಯರ್ ಮಾಡಿಕೊಳ್ಳುತ್ತಿರಬೇಕು. ಇವಿಷ್ಟು ವಿಷಯ ಗೊತ್ತಿದ್ದರೆ ಹಿರಿಯರಿಂದ ಕಿರಿಯರವರೆಗೆ ಯಾರು ಬೇಕಾದರೂ ಸ್ಕೂಬಾ ಡೈವ್ ಮಾಡಬಹುದು. ಸಾಮಾನ್ಯವಾಗಿ ಮೊದಲ ಬಾರಿಗೆ ಸ್ಕೂಬಾ ಡೈವ್ ಮಾಡಲು ಹೋಗುವವರಿಗೆ ಭಯ ಆಗುವುದು ಸಹಜ. ಆದರೆ, ನೀರಿನ ಆಳಕ್ಕೆ ಹೋದಾಗ ಉಸಿರಾಡಲು ತೊಂದರೆ ಆದಲ್ಲಿ ಕೈ ಸನ್ನೆ ತೋರಿಸಿದರೆ, ಕೂಡಲೇ ನಮ್ಮನ್ನು ನೀರಿನ ಮೇಲಕ್ಕೆ ಕರೆದುಕೊಂಡು ಬರುತ್ತಾರೆ. ಹಾಗಾಗಿ ಸ್ವಲ್ಪವೂ ಯೋಚನೆ ಮಾಡುವ ಅನಿವಾರ್ಯತೆ ಇರುವುದಿಲ್ಲ.
ಮರೆಯಲಾರದ ಕ್ಷಣ
ನನ್ನ ಎಕ್ಸ್ಪೀರಿಯನ್ಸ್ ಪ್ರಕಾರ ಹೇಳುವುದಾದರೆ ಅದೊಂದು ತುಂಬಾ ಅಮೂಲ್ಯವಾದ ಕ್ಷಣ. ನೀರಿನೊಳಗೆ ನಾನು ಮೀನಿನಂತೆ ಅವರೊಂದಿಗೆ ಜೀವಿಸುತ್ತಿದ್ದೀನೋ ಎಂದು ಭಾವಿಸಿಕೊಂಡು ಬಂದೆ. ಅಲ್ಲಿಯ ಪ್ರಶಾಂತತೆ ನನ್ನನ್ನು ಎಷ್ಟು ಆವರಿಸಿತ್ತು ಎಂದರೆ ನೀರಿನಿಂದ ಮೇಲೆ ಬಂದ ಮೇಲೂ ಇನ್ನು ನೀರಿನಲ್ಲಿಯೇ ಇದ್ದೀನೇನೋ ಎಂದು ಭಾಸವಾಗುತ್ತಿತ್ತು. ಅಷ್ಟೇ ಅಲ್ಲ ಮತ್ತೆ ಮತ್ತೆ ಹೋಗಿ ಸ್ಕೂಬಾ ಡೈ ವಿಂಗ್ ಮಾಡಬೇಕೆಂದು ಅನಿಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಎಲ್ಲರೂ ಇದರ ಅನುಭವ ಪಡೆಯಲಿ ಎಂದು ನಾನು ನನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದೇನೆ. ಜಸ್ಟ್ ಡೈವ್.
ಲೇಖಕರು: ಹವ್ಯಾಸಿ ಬರಹಗಾರರು