ವಿಶ್ವಮಾನ್ಯತೆ ಪಡೆದಿರುವ ಮೈಸೂರಿನ ʻಶುಕʼವನ
ಗಣಪತಿ ಆಶ್ರಮದ ಆವರಣದಲ್ಲೇ ಇರುವ ಶುಕವನಕ್ಕೆ ಪ್ರವೇಶಿಸುತ್ತಿದ್ದಂತೆ ವಿವಿಧ ದೇಶದ, ವಿವಿಧ ಪ್ರಭೇದದ, ವಿವಿಧ ಬಣ್ಣಗಳ, ವಿವಿಧ ಆಕಾರ, ವಿವಿಧ ಸ್ವರಗಳ ಅಕರ್ಷಣೀಯ ಗಿಳಿಗಳು ಚಿಲಿಪಿಲಿ ಸದ್ದಿನೊಂದಿಗೆ ಸ್ವಾಗತ ನೀಡುತ್ತವೆ. ಕೆಲವು ಪಂಜರದಲ್ಲಿದ್ದರೆ ಮತ್ತೆ ಕೆಲವು ಶುಕವನದ ಆವರಣದ ಸುತ್ತ ಸ್ವಚ್ಛಂದವಾಗಿ ಹಾರಾಡಿಕೊಂಡು ನಮ್ಮನ್ನು ಮನೋರಂಜಿಸುತ್ತವೆ.
- ನಂಜನಗೂಡು ಪ್ರದ್ಯುಮ್ನ
ಮೈಸೂರಿಗೆ ಬಂದವರು ಸಾಮಾನ್ಯವಾಗಿ ಭೇಟಿ ನೀಡುವ ಪ್ರವಾಸಿ ಸ್ಥಳಗಳೆಂದರೆ ಅಂಬಾವಿಲಾಸ ಅರಮನೆ, ಅಲ್ಲಿಂದ ಮುಂದೆ ಬಂದರೆ ಚಾಮರಾಜೇಂದ್ರ ಮೃಗಾಲಯ. ಅಲ್ಲಿಂದ ಮೇಲಕ್ಕೆ ಚಾಮುಂಡಿಬೆಟ್ಟ. ಕೆಳಗಿಳಿದರೆ ಲಲಿತಮಹಲ್ ಅರಮನೆ. ಪಕ್ಕದಲ್ಲೇ ಇರುವ ಕಾರಂಜಿಕೆರೆ ಹೀಗೆ ವೃತ್ತಾಕಾರದಲ್ಲಿ ಸುತ್ತುತ್ತಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬರುತ್ತಾರೆ. ಆದರೆ ಇವಿಷ್ಟೇ ಮೈಸೂರಿನ ಹಿರಿಮೆಯಲ್ಲ. ಇವುಗಳ ಹೊರತಾಗಿಯೂ ಅನೇಕ ಸ್ಥಳಗಳು ತನ್ನದೇ ಆದ ಪ್ರಸಿದ್ಧಿಯನ್ನು ಪಡೆದಿವೆ. ಅವುಗಳಲ್ಲಿ ಒಂದು ಗಣಪತಿ ಆಶ್ರಮದ ಶುಕವನ.
ಇದನ್ನೂ ಓದಿ: ಹಳ್ಳಿ ಮೇಷ್ಟ್ರ ಹಳ್ಳಿ ಹಟ್ಟಿ!
ಮೈಸೂರಿನಿಂದ ಊಟಿಗೆ ಹೋಗುವ ಹೆದ್ದಾರಿಯ ಬಲಭಾಗಕ್ಕೆ ವಿಶ್ವಪ್ರಸಿದ್ಧ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಈ ಸುಂದರವಾದ ಶುಕವನವಿದೆ. ಸುತ್ತ ಹಸಿರು ವನ, ಎಲ್ಲೆಲ್ಲೂ ಗಿಳಿಗಳ ಚಿಲಿಪಿಲಿ. ಚಿಲಿಪಿಲಿ ಸದ್ದಿನಿಂದ ರಾಜ್ಯ-ಹೊರರಾಜ್ಯ, ದೇಶ-ವಿದೇಶ ಪ್ರವಾಸಿಗರನ್ನು ಒಂದು ದಶಕದಿಂದ ತನ್ನತ್ತ ಸೆಳೆಯುತ್ತಿದೆ.

ಗಿಳಿಗಳ ಉಳಿವಿಗೆ ಅವಧೂತರ ʻಶ್ರೀʼರಕ್ಷೆ
ಇದು ಅವಧೂತ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಕನಸಿನ ಕೂಸು. ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ಈ ಗಿಳಿಧಾಮ ವಿಶ್ವದಾದ್ಯಂತ ಮನ್ನಣೆ ಪಡೆದಿದೆ. ಶುಕವನ ಪಕ್ಷಿಧಾಮ ನೂರಾರು ವರ್ಣರಂಜಿತ, ವಿಲಕ್ಷಣ ಜಾತಿಯ ಅಷ್ಟೇ ಅಲ್ಲದೇ ಅಳಿವಿನಂಚಿನಲ್ಲಿರುವ ಪ್ರಭೇದಗಳ ಆಸರೆಯ ನೆಲೆಯಾಗಿದೆ. 2012ರಲ್ಲಿ ಸ್ಥಾಪಿಸಿದ ಶುಕವನ, ಕೇವಲ 5 ಗಿಳಿಗಳಿಂದ ಪ್ರಾರಂಭವಾಯಿತು. ಆದರೆ ಸ್ವಾಮೀಜಿಯ ಸಂಕಲ್ಪದಿಂದಾಗಿ ಇಂದು ಈ ಸಂಖ್ಯೆ ಸಾವಿರ ದಾಟಿದೆ. ಮಾನವೀಯತೆ, ನೀತಿವಂತ ಮೌಲ್ಯಗಳನ್ನು ನೀಡುವಲ್ಲಿ ಮಹತ್ವದ ಕೊಡುಗೆ ನೀಡಿರುವ ಋಷಿ ಶುಕ ಅವರ ನಾಮವನ್ನು ಗೌರವಾರ್ಥವಾಗಿ ಈ ವನಕ್ಕೆ ಇಡಲಾಗಿದೆ.
ಗಣಪತಿ ಆಶ್ರಮದ ಆವರಣದಲ್ಲೇ ಇರುವ ಶುಕವನಕ್ಕೆ ಪ್ರವೇಶಿಸುತ್ತಿದ್ದಂತೆ ವಿವಿಧ ದೇಶದ, ವಿವಿಧ ಪ್ರಭೇದದ, ವಿವಿಧ ಬಣ್ಣಗಳ, ವಿವಿಧ ಆಕಾರ, ವಿವಿಧ ಸ್ವರಗಳ ಅಕರ್ಷಣೀಯ ಗಿಳಿಗಳು ಚಿಲಿಪಿಲಿ ಸದ್ದಿನೊಂದಿಗೆ ಸ್ವಾಗತ ನೀಡುತ್ತವೆ. ಕೆಲವು ಪಂಜರದಲ್ಲಿದ್ದರೆ ಮತ್ತೆ ಕೆಲವು ಶುಕವನದ ಆವರಣದ ಸುತ್ತ ಸ್ವಚ್ಛಂದವಾಗಿ ಹಾರಾಡಿಕೊಂಡು ನಮ್ಮನ್ನು ಮನೋರಂಜಿಸುತ್ತವೆ. ಮುಕ್ತ-ಹಾರಾಟದ ಈ ವಾಕ್-ಇನ್ ಪಕ್ಷಿಧಾಮವು ಪ್ರಪಂಚದಾದ್ಯಂತದ 486 ವಿವಿಧ ಜಾತಿಗಳ 2,000 ಕ್ಕೂ ಹೆಚ್ಚು ಪಕ್ಷಿಗಳ ನೆಲೆಯಾಗಿದೆ.
ಇದು ಕೇವಲ ಪಕ್ಷಿಧಾಮವಾಗಿ ಮಾತ್ರವಲ್ಲದೆ, ಗಾಯಗೊಂಡ ಅಥವಾ ಆಸರೆ ಕಳೆದುಕೊಂಡ, ನೈಸರ್ಗಿಕ ವಿಕೋಪಕ್ಕೆ ಒಳಗಾದ ಪಕ್ಷಿಗಳಿಗೆ ಅಭಯಾರಣ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು. ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳಿಗೆ ನೈಸರ್ಗಿಕ ಆವಾಸಸ್ಥಾನವನ್ನು ಒದಗಿಸಲಾಗಿದೆ. ಇದು ಅವು ಅಭಿವೃದ್ಧಿ ಹೊಂದಲು ಮತ್ತು ಸಂತಾನೋತ್ಪತ್ತಿ ಮಾಡಲು ಅನುವು ಮಾಡಿಕೊಡುತ್ತದೆ. ಪಕ್ಷಿಧಾಮದ ಆರೋಗ್ಯಕರ, ಸುರಕ್ಷಿತ ಮತ್ತು ಸ್ವಚ್ಛ ಪರಿಸರವು ಅವುಗಳ ರಕ್ಷಣೆ ಮತ್ತು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ನಿರಿ ವನ
ಇದು ಪಕ್ಷಿಗಳ ಪುನರ್ವಸತಿ ಕೇಂದ್ರ. ಗಾಯಗೊಂಡ, ಅಂಗವಿಕಲ ಮತ್ತು ಮಾನಸಿಕ ಅಸ್ವಸ್ಥತೆ ಹೊಂದಿರುವ ಪಕ್ಷಿಗಳಿಗೆ ಆಶ್ರಯ ನೀಡಲಾಗುತ್ತಿದೆ. ದೈಹಿಕವಾಗಿ ಅಸ್ವಸ್ಥವಾಗಿರುವ ಪಕ್ಷಿಗಳ ಆರೈಕೆ ಮಾಡುವ ಸಂಕಲ್ಪವನ್ನು ಮಾಡಿರುವ ಸ್ವಾಮೀಜಿಗಳು ಈ ಘಟಕವನ್ನು ಸ್ಥಾಪಿಸಿದ್ದಾರೆ.
ಪರಿ ವನ
ಪಕ್ಷಿಗಳ ಆರೈಕೆ ಘಟಕ. ಪಕ್ಷಿಗಳಿಗೆ ರೋಗನಿರ್ಣಯ ಮತ್ತು ವಿವಿಧ ಚಿಕಿತ್ಸೆಗಳನ್ನು ನೀಡುವ ಸ್ಥಳ. ಪಕ್ಷಿಗಳಲ್ಲಿ ಇರುವ ವೈರಲ್ ಮತ್ತು ಬ್ಯಾಕ್ಟೀರಿಯ ಕಾಯಿಲೆಗಳನ್ನು ಪತ್ತೆಹಚ್ಚಲು ಬಳಸುವ ಪಿಸಿಆರ್ (ಪಾಲಿಮರೇಸ್ ಚೈನ್ ರಿಯಾಕ್ಷನ್) ಅನ್ನು ಹೊಂದಿದೆ. ಏರ್‌ಫ್ಯೂಜ್, ವಾಟರ್ ಬಾತ್, ವೊರ್ಟೆಕ್ಸ್ ಮಿಶ್ರಣ, ಎಲೆಕ್ಟ್ರೋಫೋರೆಸಿಸ್ ಘಟಕಗಳನ್ನು ಇಲ್ಲಿ ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾತನಾಡುವ ಗಿಳಿಗಳು
ಶುಕವನದಲ್ಲಿ ಕೇವಲ ಹಾರಾಡುವ ಅಥವ ಚಿಲಿಪಿಲಿ ಸದ್ದು ಮಾಡುವ ಗಿಳಿಗಳು ಮಾತ್ರ ಇಲ್ಲ. ಇಲ್ಲಿ ಮಾತನಾಡುವ ಗಿಳಿಗಳೂ ಇವೆ. ಸ್ವಾಮೀಜಿಗಳು ಕೇವಲ ಗಿಳಿಗಳ ಆರೈಕೆ ಅಥವ ಸಂರಕ್ಷಣೆಗೆ ಮಾತ್ರ ಒತ್ತುಕೊಡದೆ ಅವುಗಳಿಗೆ ವಿಶಿಷ್ಟ ತರಬೇತಿ ನೀಡುವುದಕ್ಕೂ ಮಾನ್ಯತೆ ನೀಡಿದ್ದಾರೆ. ಬಹುಮುಖ್ಯವಾಗಿ ಗಿಳಿಗಳಿಗೆ ಮಾತು ಕಲಿಸಲಾಗುತ್ತದೆ. ಸ್ವಾಮಿಗಳ ನೆಚ್ಚಿನ ಕೆಲವು ಆಯ್ದ ಗಿಳಿಗಳಾದ ರಾಮ್ (ಆಫ್ರಿಕನ್ ಗ್ರೇ ಪ್ಯಾರೆಟ್), ವರ್ಮ (ಮಗ್ನ ಡಬಲ್ ಎಲ್ಲೋ-ಹೆಡೆಡ್ ಅಮೇಜಾನ್), ಕಲಿ (ಆಫ್ರಿಕನ್ ಗ್ರೇ ಪ್ಯಾರೆಟ್), ಬಿಟ್ಟು (ರೆಡ್-ಸೈಡ್ ಎಲೆಕ್ಟಸ್ ಪ್ಯಾರೆಟ್), ಕುಬ (ಕುಬನ್ ಅಮೇಜಾನ್) ಮತ್ತು ಅಪ್ಪುರಾಮ್-ರಂಗ ( ಹನ್ಸ್ ಮಾಕಾವ್ಸ್) ಪ್ರಭೇದದ ಗಿಳಿಗಳು ಮಾತನಾಡಬಲ್ಲವು. ಸ್ವಾಮೀಜಿ ಹೇಳುವ ʼಜಯಗುರುದತ್ತ, ಹನುಮ, ಗುಡ್ ಮಾರ್ನಿಂಗ್, ಓಂ ನಮೋ ನಾರಾಯಣ ಕೃಷ್ಣ, ಐ ಲವ್ ಯೂ, ಓಂ ಹಮ್-ಸೋ ಹಮ್, ರಾಮ ದತ್ತ-ರಾಮ ದತ್ತʼ ಹೀಗೆ ಇನ್ನಷ್ಟು ಪದಗಳನ್ನು ಉಚ್ಚಾರಣೆ ಮಾಡುತ್ತವೆ.
ಗಿಳಿಗಳಿಗೆ ಹೈಜಿನ್ ಆಹಾರ
ಪ್ರತಿನಿತ್ಯ ಗಿಳಿಹಿಂಡಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಅದೂ ದಿನಕ್ಕೆ ನಾಲ್ಕು ಬಾರಿ ಆಹಾರವನ್ನು ನೀಡಲಾಗುತ್ತದೆ. ಸೇಬು, ಪಪ್ಪಾಯ, ಕಸ್ತೂರಿ ಕಲ್ಲಂಗಡಿ, ಕಿವಿ, ಮಾವು, ಬಾಳೆಹಣ್ಣು, ದಾಳಿಂಬೆ ಮತ್ತು ಕಿತ್ತಳೆ ಸೇರಿದಂತೆ ಮುಂತಾದ ತಾಜಾ ಹಣ್ಣನ್ನು ನೀಡಲಾಗುತ್ತದೆ. ತರಕಾರಿಗಳಲ್ಲಿ, ಕ್ಯಾರೆಟ್, ಬೀಟ್ರೂಟ್, ನುಗ್ಗೆಕಾಯಿ, ಕುಂಬಳಕಾಯಿ, ಬೆಂಡೆಕಾಯಿ ಮತ್ತು ಕ್ಯಾಪ್ಸಿಕಂ. ಮೊಳಕೆಗಳಲ್ಲಿ ಹೆಸರುಕಾಳು, ಕಡಲೆ, ಹಸಿರು ಬಟಾಣಿ, ಹುರುಳಿಕಾಳು ನೀಡಲಾಗುತ್ತದೆ. ಬಾದಾಮಿ, ವಾಲ್ನಟ್, ಹ್ಯಾಝೆಲ್ನಟ್ ಮತ್ತು ಪೈನ್ ಬೀಜಗಳು ಮತ್ತು ರಾಗಿ ನೀಡಲಾಗುವುದು.
ವಿವಿಧ ದೇಶಗಳ ವಿಭಿನ್ನ ಪ್ರಭೇದಗಳು
ಗ್ರೇಟ್ ಮಿಲಿಟರಿ ಮಕಾವ್, ಗ್ರೀನ್ ವಿಂಗ್ ಮಕಾವ್, ನವಗ್ರಹ ಗಿಳಿಗಳು, ಕ್ಯೂಬ, ಬ್ಲ್ಯೂ-ಗೋಲ್ಡ್ ಮಕಾವ್, ಆಫ್ರಿಕನ್ ಗ್ರೇ ಪ್ಯಾರೆಟ್, ಆಫ್ರಿಕನ್ ಲವ್ ಬರ್ಡ್ಸ್, ಗಲ್ಲ ಕೊಕಟೋ, ಅಂಬ್ರೆಲ ಕೊಕಟೋ, ರೈನ್ ಬೋ ಲೋರಿ ಸೇರಿದಂತೆ ಮೆಕ್ಸಿಕೋ, ಕ್ಯೂಬಾ, ಬ್ರೆಸಿಲ್, ನೈಜೀರಿಯ, ದಕ್ಷಿಣ ಆಫ್ರಿಕ, ಥೈಲ್ಯಾಂಡ್ ಸೇರಿದಂತೆ ವಿಶ್ವದ ನಾನಾ ದೇಶಗಳ ವಿಭಿನ್ನ ತಳಿಗಳನ್ನು ಸಾಕಲಾಗಿದೆ.
ಗಿನ್ನಿಸ್ ಮಾನ್ಯತೆ
ಒಂದೇ ಸೂರಿನಡಿಯಲ್ಲಿ ನೂರಾರು ಪ್ರಭೇದದ ಸಾವಿರಾರು ಗಿಳಿಗಳನ್ನು ಸಂರಕ್ಷಿಸಿ, ಪೋಷಿಸುತ್ತಿರುವ ಗಣಪತಿ ಸಚ್ಚಿದಾನಂದ ಶ್ರೀಗಳ ಈ ಮಹತ್ಕಾರ್ಯವನ್ನು ಗುರುತಿಸಿದ ʼಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ʼ ಸಂಸ್ಥೆಯು ಗಿನ್ನಿಸ್ ದಾಖಲೆಯ ಪತ್ರ ನೀಡಿ ಸ್ವಾಮೀಜಿಗಳನ್ನು ಗೌರವಿಸಿದೆ.
ದಾರಿ ಹೇಗೆ?
* ಮೈಸೂರು ನಗರದಿಂದ ಸುಮಾರು 3.8 ಕಿ.ಮೀ ದೂರದಲ್ಲಿದೆ. NH13 ಮೂಲಕ ಸುಮಾರು 12 ನಿಮಿಷಗಳಲ್ಲಿ ಅಲ್ಲಿಗೆ ತಲುಪಬಹುದು.
* ಬೆಂಗಳೂರಿನಿಂದ 141 ಕಿ.ಮೀ.
* ಚಾಮರಾಜನಗರದಿಂದ 57 ಕಿ.ಮೀ
* ಮಡಿಕೇರಿಯಿಂದ 121 ಕಿ.ಮೀ

ನೋಡಲು ಇನ್ನೇನಿದೆ ?
* ಕಿಷ್ಕಿಂದಾ ಮೂಲಿಕ ಬೋನ್ಸಾಯಿ ವನ
* ವಿಶ್ವಂ ಬೃಹತ್ ಸಂಗ್ರಹಾಲಯ
* ಕಾರ್ಯಸಿದ್ಧಿ ಹನುಮಾನ್ ಮಂದಿರ
* ಸಪ್ತರಿಶಿ ಸರೋವರ
* ನಾದ ಮಂಟಪ
* ವೆಂಕಟರಮಣ ದೇವಸ್ಥಾನ
ಹೋಗುವ ಮುನ್ನ
* ಬುಧವಾರ ರಜೆ
* ಬೆಳಗ್ಗೆ 10.00 ರಿಂದ 12.30ರವರೆಗೆ. ಮಧ್ಯಾಹ್ನ 3.30 ರಿಂದ 5.30ರವರೆಗೆ ವೀಕ್ಷಣೆಗೆ ಅವಕಾಶ.
* ಉಚಿತ ಪ್ರವೇಶ
* ಮೊಬೈಲ್ ಚಿತ್ರೀಕರಣ ಅಥವ ಛಾಯಾಚಿತ್ರ ತೆಗೆಯಲು ನಿಷೇಧ
ಪಕ್ಷಿಗಳೇ ಇತರ ಪ್ರಾಣಿ ಪ್ರಭೇದಗಳ ಅಸ್ತಿತ್ವಕ್ಕೆ ಪ್ರಮುಖ ಕಾರಣ : ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ.