ಹಳ್ಳಿ ಮೇಷ್ಟ್ರ ಹಳ್ಳಿ ಹಟ್ಟಿ!
ಚಾಮರಾಜನಗರದ ಆಲೂರಿನವರಾದ ಚಂದ್ರು 2019ರಲ್ಲಿ ಈ ಹಳ್ಳಿಹಟ್ಟಿ ಪ್ರಾರಂಭಿಸಿದ್ದು. ಮೈಸೂರಿನ ಟಿಟಿಎಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಎಸ್‌ಡಿಎಂ ಕಾಲೇಜಿನಲ್ಲಿ ಎಂಕಾಂ ಮಾಸ್ಟರ್ ಡಿಗ್ರಿ ಮುಗಿಸಿ ಅಕೌಂಟೆನ್ಸಿ ಪಾಠ ಮಾಡಿಕೊಂಡಿದ್ದ ಮೇಷ್ಟ್ರು, ಮದುವೆಗಾಗಿ ಒಂದುವಾರ ರಜೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದು ಸ್ವಂತ ಬದುಕು ಕಟ್ಟಿಕೊಂಡ ಛಲವೇ ಹಳ್ಳಿ ಹಟ್ಟಿಯ ಹುಟ್ಟಿಗೆ ಕಾರಣ.
- ನಂಜನಗೂಡು ಪ್ರದ್ಯುಮ್ನ
ಮೈಸೂರಿಗೆ ಬಂದಿದ್ದೀರಾ...? ಎಲ್ಲಿ...? ಚಾಮುಂಡಿ ಬೆಟ್ಟದಲ್ಲಿದ್ದೀರಾ? ತಾಯಿ ದರ್ಶನ ಮಾಡಿ ಕೆಳಗಿಳಿಯುತ್ತಿದ್ದೀರಾ? ಒಳ್ಳೆ ತಿಂಡಿ ತಿನ್ನಬೇಕಾ? ಒಂದು ಕೆಲಸ ಮಾಡಿ. ಚಾಮುಂಡಿ ಬೆಟ್ಟದಿಂದ ಇಳಿದ ಮೇಲೆ (ಕಾರಿನಲ್ಲಿ) ಕುರುಬರಹಳ್ಳಿ ವೃತ್ತಕ್ಕೆ ಬರುವ ಮಾರ್ಗ ಮಧ್ಯೆ ಎಡಭಾಗಕ್ಕೆ ಮೈಸೂರು ನಗರ ಬಸ್ ನಿಲ್ದಾಣ ಸಿಗುತ್ತದೆ. ಅಲ್ಲೇ ಬಲಕ್ಕೆ ಜೆ.ಸಿ.ನಗರಕ್ಕೆ ಹೋಗುವ ರಸ್ತೆಯಲ್ಲಿ ತಿರುಗಿ, ಅರ್ಧ ಕಿಲೋಮೀಟರ್ ಮುಂದೆ ಹೋದರೆ ದೊಡ್ಡದಾದ ಪಾರ್ಕ್ ಸಿಗುತ್ತೆ. ಅಲ್ಲೇ ಪಕ್ಕದಲ್ಲಿ ತೆಂಗಿನ ಗರಿಗಳ ಗುಡಿಸಲು ಮಾದರಿಯ ʼಹಟ್ʼ ಸಿಗುತ್ತದೆ. ಅದೇ ‘ಹಳ್ಳಿಹಟ್ಟಿ’ ಹೊಟೇಲ್. ಅಷ್ಟೇ.
ಬೆಳಗ್ಗೆ ಎಂಟಕ್ಕೇ ಜನವೋ ಜನ. ಹತ್ತಾರು ಕಾರುಗಳು. ವಾಕಿಂಗ್ ಬಂದವರು, ಅಕ್ಕಪಕ್ಕದವರು, ಬೇರೆ ಊರಿನಿಂದ ಬಂದವರೆಲ್ಲರೂ ಹೊಟೇಲ್ ತೆರೆಯುವ ಮುನ್ನವೇ ಬಾಗಿಲ ಬಳಿ ಇಣುಕುತ್ತಾ ಕಾದು ನಿಂತಿರುತ್ತಾರೆ. ಪಕ್ಕಾ ಹಳ್ಳಿ ವಾತಾವರಣದಲ್ಲಿ ನಿರ್ಮಾಣ ಮಾಡಿರುವ ವಿಭಿನ್ನವಾದ ಹೊಟೇಲ್. ತೆಂಗಿನ ಗರಿಯ ಜೋಪಡಿ, ಕೂರಲು ಕಡಪ ಕಲ್ಲಿನ ಕಟ್ಟೆ, ಅದೇ ಕಲ್ಲಿನ ಟೇಬಲ್, ತಟ್ಟೆ ಒಳಗೆ ಬಾಳೆಎಲೆ ಹರಡಿ ಕೊಡುವ ತಿಂಡಿ... ಹೀಗೆ ಪಕ್ಕಾ ದೇಸಿ ವಾತಾವರಣ.
ಚಾಮರಾಜನಗರದ ಆಲೂರಿನವರಾದ ಚಂದ್ರು 2019ರಲ್ಲಿ ಈ ಹಳ್ಳಿಹಟ್ಟಿ ಪ್ರಾರಂಭಿಸಿದ್ದು. ಮೈಸೂರಿನ ಟಿಟಿಎಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಎಸ್‌ಡಿಎಂ ಕಾಲೇಜಿನಲ್ಲಿ ಎಂಕಾಂ ಮಾಸ್ಟರ್ ಡಿಗ್ರಿ ಮುಗಿಸಿ ಅಕೌಂಟೆನ್ಸಿ ಪಾಠ ಮಾಡಿಕೊಂಡಿದ್ದ ಮೇಷ್ಟ್ರು, ಮದುವೆಗಾಗಿ ಒಂದುವಾರ ರಜೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದು ಸ್ವಂತ ಬದುಕು ಕಟ್ಟಿಕೊಂಡ ಛಲವೇ ಹಳ್ಳಿ ಹಟ್ಟಿಯ ಹುಟ್ಟಿಗೆ ಕಾರಣ. ಸಂಸಾರ ತೂಗಲು ವ್ಯಾಪಾರ ಮಾಡಲು ನಿರ್ಧಾರ ಮಾಡಿದ ಚಂದ್ರು ಅವರಿಗೆ ಮೊದಲ ಆಯ್ಕೆ ಸಾವಯವ ಅಂಗಡಿ. ಅದರಲ್ಲಿ ಕೊಂಚ ತಿಳಿವಳಿಕೆ ಇದ್ದ ಕಾರಣ ನಾಲ್ಕುಲಕ್ಷ ಸಾಲ ಪಡೆದು ವ್ಯಾಪಾರ ಆರಂಭಿಸಿದರು. ಯಾಕೋ ಕೈ ಹಿಡಿಯಲಿಲ್ಲ. ಅಲ್ಲೇ ಪಕ್ಕದಲ್ಲಿ ಮಜ್ಜಿಗೆ-ಟೀ ವ್ಯಾಪಾರ ಶುರು ಮಾಡಿದರು. ವ್ಯಾಪಾರ ಕುದುರಲು ಆರಂಭವಾಯಿತು. ನಂತರ ಒಂದೊಂದೇ ತಿಂಡಿ ಪ್ರಾರಂಭ.

‘ಕಲ್ಲಿನಂಥ ಇಡ್ಲಿ’ ಎಂದವರೇ ಕ್ಯೂ ನಿಂತರು!
ಮಜ್ಜಿಗೆ ಜತೆ ಚಂದ್ರಣ್ಣ ಚಿಬ್ಲು ಇಡ್ಲಿ ಮಾಡಲು ಪ್ರಾರಂಭಿಸಿದರು. ಪ್ರಾರಂಭದ ದಿನಗಳಲ್ಲಿ ಇಡ್ಲಿ ತೆಗೆದು ಗೋಡೆಗೆ ಬಿಸಾಡಿದರೆ ಹಿಂದಿರುಗಿ ಅವರಿಗೇ ಬೀಳುತಿತ್ತು. ಇಡ್ಲಿ ಕಲ್ಲಿನಂತಿತ್ತು ಎಂದು ಸ್ವತಃ ಚಂದ್ರಣ್ಣನೇ ಆ ಬಗ್ಗೆ ಹೇಳಿಕೊಂಡು ನಗುವುದುಂಟು. ಇಡ್ಲಿ ಮತ್ತು ಭಾತು ತೆಗೆದುಕೊಂಡವರು ಅದನ್ನು ಹಿಂದಿರುಗಿಸಿ ಬಿಸಾಡಿ ‘ಯಾವ ನಾಯಿ ಇದನ್ನು ತಿನ್ನುತ್ತೆ’ ಎಂದು ಹೀಯಾಳಿಸಿದ ಘಟನೆಗಳು ನಡೆದಿವೆ. ಹಾಗೆ ಅಂದವರು ಇಂದು ನನ್ನ ಹೊಟೇಲ್ ಮುಂದೆ ಒಂದು ಗಂಟೆ ಕಾದು ಇಡ್ಲಿ ಖರೀದಿಸ್ತಾರೆ ಎಂದು ಚಂದ್ರಣ್ಣ, ಪ್ರಾರಂಭದ ದಿನಗಳನ್ನು ಮತ್ತು ಇಂದಿನ ಸಾಧನೆಯನ್ನು ನೆನಪಿಸಿಕೊಳ್ಳುತ್ತಾರೆ.
ಚಂದ್ರಣ್ಣನ ಸಿಗ್ನೇಚರ್ ಡಿಶ್ ಬೆಲ್ಲದ ಕೇಸರಿಬಾತ್. ಬಾಯಿಗಿಟ್ಟರೆ ದೇವಸ್ಥಾನದಲ್ಲಿ ಸಿಗುವ ಸಿಹಿ ಪೊಂಗಲ್ ಸ್ವಾದ ನಾಲಿಗೆಗೆ ಬಡಿಯುತ್ತದೆ. ಇಲ್ಲಿ ಸಿಗುವ ಉಪ್ಪಿಟ್ಟು, ಬರುವವರಿಗೆಲ್ಲಾ ಫೇವರಿಟ್ಟು. ಇಲ್ಲಿ ಮಾಡುವ ವಿಶೇಷವಾದ ರಾಜ್‌ಮುಡಿ ಅಕ್ಕಿಯ ದೋಸೆ ಕಂಡರೆ ಎಲ್ಲರಿಗೂ ಆಸೆ. ಇನ್ನು ಬೆಟ್ಟದ ನೆಲ್ಲಿಕಾಯಿ ಹಾಗೂ ಹೆರಳೆಕಾಯಿ ಜ್ಯೂಸ್ ಕುಡಿದವರು ಫುಲ್ ಖುಷ್.
ಪತ್ನಿಯ ಸಹಕಾರ ಪತಿಗೆ ಒಳ್ಳೆ ವ್ಯಾಪಾರ:
ಹೊಟೇಲ್ ಮಾಲೀಕರಾದ ಚಂದ್ರು ಮತ್ತು ಅವರ ಪತ್ನಿ ತೇಜಾ ದಂಪತಿಗಳು ಹಗಲಿರುರುಳೆನ್ನದೇ ನಿಷ್ಠೆ ಹಾಗೂ ಶ್ರಮದಿಂದ ಇಂದಿಗೂ ಹೊಟೇಲ್ ನಡೆಸಿಕೊಂಡು ಬರುತ್ತಿದ್ದಾರೆ. ಬೆಳಗಿನ ಜಾವ ಮೂರುಗಂಟೆಗೆ ದಂಪತಿಗಳಿಬ್ಬರು ಬಂದು ಅಂದಿನ ತಿಂಡಿಗೆ ಬೇಕಾದ ಎಲ್ಲಾ ತಯಾರಿಗಳನ್ನು ಪ್ರಾರಂಭಿಸುತ್ತಾರೆ. ‘ಪ್ರಾರಂಭದ ದಿನಗಳಲ್ಲಿ 2ತಿಂಗಳ ಮಗುವನ್ನು ಜೋಲಿಯಲ್ಲಿ ಕಟ್ಟಿ ದಂಪತಿಗಳಿಬ್ಬರೂ ಕೆಲಸ ಮಾಡಿದ್ದೇವೆ. ನಾನೇನಾದರೂ ಇಂದು ಅಡುಗೆ ಚೆನ್ನಾಗಿ ಮಾಡುತ್ತಿದ್ದೇನೆ, ನನ್ನ ಹೊಟೇಲ್‌ಗೆ ಬಂದ ಗಿರಾಕಿಗಳು ತಿಂಡಿಯನ್ನು ಮೆಚ್ಚಿದ್ದಾರೆ ಎಂದರೆ ಅದಕ್ಕೆ ನನ್ನ ಪತ್ನಿಯೇ ಕಾರಣʼ ಎನ್ನುತ್ತಾರೆ ಚಂದ್ರಣ್ಣ.

ಮಾಸ್ಟರ್ ಡಿಗ್ರಿ ಟೂ ಮಾಸ್ಟರ್ ಶೆಫ್:
ಹಳ್ಳಿಹಟ್ಟಿ ಚಂದ್ರು ಅವರ ವಿದ್ಯಾಭ್ಯಾಸ ಎಂಕಾಮ್. ವಿದ್ಯಾಭ್ಯಾಸದಲ್ಲೂ ಮಾಸ್ಟರ್; ಇತ್ತ ಪಾಕಶಾಲೆಯಲ್ಲೂ ಮಾಸ್ಟರ್. ಅವರ ವಿದ್ಯಾಭ್ಯಾಸಕ್ಕೂ ಮಾಡುತ್ತಿರುವ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಎರಡೂ ಕ್ಷೇತ್ರಗಳಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.
ಚಲನಚಿತ್ರನಟರಾದ ಡಾಲಿ ಧನಂಜಯ್, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಆಶಿಶ್‌ವಿದ್ಯಾರ್ಥಿ, ರಾಘವೇಂದ್ರರಾಜ್‌ಕುಮಾರ್ ಕುಟುಂಬ, ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಹಿರಿಯ ಪತ್ರಿಕೋದ್ಯಮಿ ವಿಶ್ವೇಶ್ವರ ಭಟ್ ಮತ್ತು ಅವರ ಧರ್ಮಪತ್ನಿ ಸೇರಿದಂತೆ ಎಲ್ಲಾ ಕ್ಷೇತ್ರದ ದಿಗ್ಗಜರು ಹಳ್ಳಿಹಟ್ಟಿಗೆ ಭೇಟಿ ನೀಡಿ ಇಲ್ಲಿಯ ತಿಂಡಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಬನ್ನಿ ಹಳ್ಳಿಹಟ್ಟಿ ಸ್ವಾದ ಸವಿಯಿರಿ.
ಸಿಗುವ ತಿಂಡಿಗಳು :
ಹೆರಳೇಕಾಯಿ, ಬೆಟ್ಟದ ನೆಲ್ಲಿಕಾಯಿ ಜ್ಯೂಸ್
ಬಿಸಿ ಬಿಸಿ ತುಪ್ಪದ ಇಡ್ಲಿ
ಮಸಾಲೆ ದೋಸೆ, ಪ್ಲೇನ್ ದೋಸೆ
ಅವರೆಕಾಳು ಉಪ್ಪಿಟ್ಟು
ಹೆರಳೇಕಾಯಿ ಚಿತ್ರಾನ್ನ
ಬೆಲ್ಲದ ಕೇಸರೀಬಾತ್
ಅಲಸಂದೆ ಮಸಾಲೆ ವಡೆ
ಸಿಹಿ ಸುದ್ದಿ ಏನೆಂದರೆ, ಗ್ರಾಹಕರ ಒತ್ತಾಯದಿಂದಾಗಿ ಚಂದ್ರು, ಮೈಸೂರು ನಗರ ಹೃದಯ ಭಾಗದಲ್ಲಿ ಬ್ರ್ಯಾಂಚ್ ತೆರೆಯುವ ಸಿದ್ಧತೆಯಲ್ಲಿದ್ದಾರೆ.