ಶಿಲೆಯಲ್ಲರಳಿದ ಕಾವ್ಯ: ಕೇದಾರೇಶ್ವರ-ಚನ್ನಕೇಶವ ದೇಗುಲಗಳು
ಎರಡೂ ದೇಗುಲಗಳ ಹೊರ ಭಿತ್ತಿಗಳಲ್ಲಿನ ಕೆಲವು ಶಿಲ್ಪಗಳು ಭಾಗಶಃ ವಿರೂಪಗೊಂಡಿದ್ದು, ಕೆಲವೊಂದು ಶಿಲ್ಪಗಳ ಮುಖ ಗುರುತಿಸಲಾಗದಷ್ಟು ಹಾಳಾಗಿವೆ. ಇಲ್ಲಿನ ಆವರಣದ ಸುತ್ತಲೂ ಆವರಿಸಿರುವ ಮೌನ ಮತ್ತು ಶಾಂತಿಯು ಪ್ರವಾಸಿಗರ ಮನಸ್ಸಿಗೆ ನೆಮ್ಮದಿ ಮತ್ತು ಪ್ರಶಾಂತತೆಯ (Tranquillity/Serenity) ಭಾವನೆಯನ್ನು ಮೂಡಿಸುತ್ತದೆ. ಈ ಎರಡೂ ದೇವಾಲಯಗಳು ಭಾರತೀಯ ಪ್ರಾಚ್ಯ ಹಾಗೂ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿದೆ.
- ಹೊಸ್ಮನೆ ಮುತ್ತು.
ಹಚ್ಚ ಹಸಿರಿನ ನಡುವಿನ ಆ ದಾರಿಯಲ್ಲಿ ನಡೆಯುವುದೇ ಒಂದು ವಿಶಿಷ್ಟ ಅನುಭವ. ರಸ್ತೆಯ ಇಕ್ಕೆಲಗಳಲ್ಲೂ ಸಾಲುಗಟ್ಟಿರುವ ತೆಂಗು ಮತ್ತು ಅಡಿಕೆ ತೋಟಗಳು ಒಂದು ಹಸಿರು ಗೋಡೆಯಂತೆ ಕಾಣುತ್ತವೆ. ಇವುಗಳೆಡೆಯಿಂದ ಸುಮ್ಮನೆ ಸುಯ್ಯಲಿಡುವ ತಂಪಾದ ಗಾಳಿ, ಹಕ್ಕಿಗಳ ನಾದಮಯ ಕಲರವ, ಕಾಡು ಕುಸುಮಗಳ ಸೌಮ್ಯ ಸುಗಂಧ ಇವೆಲ್ಲವೂ ಮನಸ್ಸನ್ನು ಮುದಗೊಳಿಸುತ್ತವೆ. ಈ ಹಸಿರು ತೋಟಗಳ ನಡುವಿನ ತಿರುವು, ಮುರುವುಗಳ ಕಿರುದಾರಿ ಅಂತ್ಯವಾಗುವಲ್ಲಿ, ಕಾಲದ ಸಾಕ್ಷಿಯಾಗಿರುವ ಪುರಾತನ ದೇಗುಲದ ಭವ್ಯ ದರ್ಶನವಾಗುತ್ತದೆ.
ಸಂಪೂರ್ಣವಾಗಿ ಗ್ರಾಮೀಣ ಸೊಗಡಿನಿಂದ ತುಂಬಿರುವ ಈ ಐತಿಹಾಸಿಕ ತಾಣವೇ ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ, ನಾಗಲಾಪುರ ಗ್ರಾಮದ ಶ್ರೀ ಕೇದಾರೇಶ್ವರ ಹಾಗೂ ಶ್ರೀ ಚನ್ನಕೇಶವ ದೇವಸ್ಥಾನಗಳು. ಹೊರಜಗತ್ತಿಗೆ ಹೆಚ್ಚು ಪರಿಚಿತವಲ್ಲದ ಈ ಎರಡು ಸುಂದರವಾದ ಮತ್ತು ಅಲಂಕೃತ ಹೊಯ್ಸಳ ದೇವಾಲಯಗಳು, ಬೇಲೂರು-ಹಳೇಬೀಡು ದೇವಾಲಯಗಳಿಗೆ ಸರಿಸಾಟಿಯಾದ ಹಾಗೂ ಆಕರ್ಷಕ ಮತ್ತು ಸುಂದರ ಕೆತ್ತನೆಗಳಿಂದ ಕೂಡಿದ ಒಂದು ಉತ್ತಮ ಪ್ರವಾಸಿ ತಾಣವಾಗಿದೆ.

ಶಿಲ್ಪಕಲೆ ಮತ್ತು ಪರಂಪರೆ:
ಹೊಯ್ಸಳರ ಕಾಲದ ದೇವಾಲಯಗಳಾದ ಕೇದಾರೇಶ್ವರ (ಶಿವ) ಹಾಗೂ ಚನ್ನಕೇಶವ (ವಿಷ್ಣು) ದೇಗುಲಗಳು ಪರಂಪರೆ ಮತ್ತು ಪ್ರಾಕೃತಿಕ ಸೌಂದರ್ಯದ ನಡುವಿನ ಒಂದು ಸುಂದರ ಸಂಗಮವಾಗಿದ್ದು, ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿ ನಿಂತಿವೆ. ಕಲ್ಲಿನ ಗೋಡೆಗಳು ಮತ್ತು ಕಲ್ಲಿನ ಕಂಬಗಳು ತಮ್ಮ ಸೂಕ್ಷ್ಮ ಕೆತ್ತನೆಗಳು ಮತ್ತು ಅದ್ಭುತ ಶಿಲ್ಪಕಲೆಯಿಂದ ನಮ್ಮ ಮನಸೂರೆಗೊಳ್ಳುವುದಲ್ಲದೇ, ಕಾಲದ ಪರೀಕ್ಷೆಯಲ್ಲಿಯೂ ತಮ್ಮ ವೈಭವವನ್ನು ಉಳಿಸಿಕೊಂಡಿವೆ. “ಹೊಯ್ಸಳರ ವಾಸ್ತುಶಿಲ್ಪ ಶೈಲಿಯ ಸೌಂದರ್ಯವನ್ನು ಸಂಪೂರ್ಣವಾಗಿ ಬಿಂಬಿಸುವ ಈ ದೇಗುಲಗಳ ಪ್ರತಿ ಶಿಲೆಯಲ್ಲೂ, ಶತಮಾನಗಳ ಹಿಂದೆ ಅವುಗಳನ್ನು ಕೆತ್ತಿದ ಶಿಲ್ಪಿಗಳ ಅದ್ಭುತ ಕಲಾಪ್ರಜ್ಞೆ, ಭಕ್ತಿ ಮತ್ತು ಭಾವನಾತ್ಮಕತೆಯು ಸ್ಪಷ್ಟವಾಗಿ ಗೋಚರಿಸುತ್ತದೆ."
ವಾಸ್ತು ವೈಭವ:
ಹೊಯ್ಸಳರ ಕಾಲದ ಕೇದಾರೇಶ್ವರ ದೇವಾಲಯದ ಪ್ರವೇಶದ್ವಾರವು ದಕ್ಶಿಣ ದಿಕ್ಕಿಗಿದ್ದು, ಗರ್ಭಗೃಹ, ಅಂತರಾಳ ಮತ್ತು ನವರಂಗಗಳು ಪೂರ್ವಾಭಿಮುಖವಾಗಿವೆ. ಚೌಕಾಕಾರದ ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ಕೇದಾರೇಶ್ವರ ಲಿಂಗವು ಪ್ರತಿಷ್ಠಾಪಿಸಲ್ಪಟ್ಟಿದೆ. ನವರಂಗದಲ್ಲಿ ಅತ್ಯಂತ ನವಿರಾದ ಮತ್ತು ಆಕರ್ಷಕ ಕೆತ್ತನೆಗಳಿಂದ ಕೂಡಿದ ನಾಲ್ಕು ಕಂಬಗಳಿವೆ. ಈ ಕಂಬಗಳು ಆ ಕಾಲದ ಶಿಲ್ಪಕಲಾ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ. ಅಂತರಾಳದಲ್ಲಿ, ಶಿವಲಿಂಗಕ್ಕೆ ಎದುರಾಗಿ ಬಳಪದ ಕಲ್ಲಿನಲ್ಲಿ ಕೆತ್ತಿದ ನಂದಿ ವಿಗ್ರಹವಿದ್ದು, ಈ ವಿಗ್ರಹಕ್ಕೆ ಹಣೆಪಟ್ಟಿ, ದಂಡೆ ಮತ್ತು ಸರಪಳಿಗಳನ್ನು ಅತ್ಯಂತ ಕಲಾತ್ಮಕವಾಗಿ ಕೆತ್ತಲಾಗಿದೆ. ಇವೆಲ್ಲವೂ ಹೊಯ್ಸಳರ ಕಾಲದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿವೆ.

ದೇಗುಲದ ಕಲ್ಲಿನ ಗೋಡೆಗಳು ಶತಮಾನಗಳ ಕಥೆ ಹೇಳುವಂತಿವೆ. ದೇವಾಲಯದ ಹೊರಭಾಗದಲ್ಲಿ (ಪ್ರಾಂಗಣ) ವಿಶಾಲವಾದ ಜಾಗವಿದ್ದು, ಅದನ್ನು ಸುತ್ತುವರೆದಿರುವ ಪ್ರಾಕಾರ ಗೋಡೆಗಳಿವೆ. ಹೊರಬಿತ್ತಿ ಸಹ ಬಹು ಸೊಗಸಾದ ನಕ್ಷತ್ರಾಕಾರದ ತಳಹದಿಯ ಮೇಲಿದ್ದು, ಇಲ್ಲಿನ ಶಿಲ್ಪಗಳು ಅತ್ಯಂತ ಅಂದವಾಗಿ ಮೂಡಿಬಂದಿವೆ. ಹೊರಗೋಡೆಯ ತಳಭಾಗದ ಪಟ್ಟಿಕೆಗಳಲ್ಲಿ ಇರುವ ಕೆತ್ತನೆಗಳು ಕಣ್ಮನ ಸೆಳೆಯುತ್ತವೆ. ಇಲ್ಲಿ ಆನೆ, ಕುದುರೆ, ಬಳ್ಳಿ, ಮಕರ ಮತ್ತು ಹಂಸಗಳ ಸಾಲನ್ನು ಕೆತ್ತಲಾಗಿದೆ. ಇವಲ್ಲದೇ ಹೊರಗೋಡೆಗಳ ಮೇಲೆ ಪುರಾಣಗಳಿಗೆ ಸಂಬಂಧಿಸಿದ ಬಗೆಬಗೆಯ ಅದ್ಭುತ ಶಿಲ್ಪಗಳನ್ನು ಕಾಣಬಹುದಾಗಿದೆ. ಈ ಶಿಲ್ಪಗಳು ನೋಡಲು ಆಕರ್ಷಕವಾಗಿರುವುದಲ್ಲದೇ, ವಿಗ್ರಹಗಳ ಕೆತ್ತನೆ ಅದ್ವಿತೀಯ ಕಲಾತ್ಮಕತೆಯನ್ನು ಹೊಂದಿದೆ. ನೋಡುತ್ತಾ ಹೋದಂತೆ, ಮೌನದಲ್ಲಿಯೇ ಭವ್ಯತೆಯನ್ನು ಹೊತ್ತು ನಿಂತಿರುವ ಈ ಪುರಾತನ ದೇಗುಲದ ದಿವ್ಯ ಸೌಂದರ್ಯ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ.
ಕೇದಾರೇಶ್ವರ ದೇವಾಲಯವು ಗ್ರಾಮದ ಪ್ರವೇಶ ದ್ವಾರದಲ್ಲಿದ್ದರೆ, ಈ ಮೇಲಿನ ಎಲ್ಲಾ ಕೆತ್ತನೆಯ ವೈಶಿಷ್ಟ್ಯ, ಸುಂದರ ಕಲೆಯೊಂದಿಗೆ ನಾಗಲಾಪುರ ಊರಿನ ಮತ್ತೊಂದು ಭಾಗದಲ್ಲಿ ಶ್ರೀ ಚನ್ನಕೇಶವ ದೇವಾಲಯವಿದೆ. ಇದು ಕೇದಾರೇಶ್ವರ ದೇವಾಲಯಕ್ಕಿಂತ ಚಿಕ್ಕದಾಗಿದ್ದು, ಎರಡೂ ನಿರ್ಮಾಣದ ಯೋಜನೆಗಳು ಒಂದೇ ರೀತಿಯಲ್ಲಿವೆ. ಈ ದೇವಾಲಯದ ಪಾರ್ಶ್ವದ ಒಂದು ಗೋಡೆ ಶತ್ರುಗಳ ದಾಳಿಯಿಂದ ನಾಶವಾಗಿದ್ದಿರಬಹುದು, ನಂತರ ಆ ಭಾಗವನ್ನು ಪುನರ್ ನಿರ್ಮಿಸಿದಂತೆ ಕಾಣುತ್ತದೆ. ಎರಡೂ ದೇವಾಲಯದ ಸುತ್ತಲೂ ಜಗುಲಿ (ಕಟ್ಟೆ) ಇದ್ದು, ಪ್ರವಾಸಿಗರು ಮತ್ತು ಭಕ್ತರು ಪ್ರದಕ್ಷಿಣೆ ಮಾಡಿ ವಿಗ್ರಹಗಳನ್ನು ವೀಕ್ಷಿಸಬಹುದಾಗಿದೆ. ಚನ್ನಕೇಶವ ದೇವಾಲಯದ ಪ್ರವೇಶ ದ್ವಾರವು ಪೂರ್ವಾಭಿಮುಖವಾಗಿದ್ದು, ಉತ್ತಮ ಕಲಾತ್ಮಕತೆಯಿಂದ ಕೂಡಿದೆ. ಈ ದೇಗುಲ ಕೂಡಾ ನಕ್ಷತ್ರಾಕಾರದ ಮೂಲೆಗಳನ್ನು ಹೊಂದಿದ್ದು, ಬಹುತೇಕ ಕೇದಾರೇಶ್ವರ ದೇವಾಲಯದ ವಿಶಿಷ್ಟತೆಯನ್ನೇ ಹೊಂದಿದೆ.

ಒಟ್ಟಾರೆಯಾಗಿ, ಈ ಊರಿನ ಎರಡೂ ದೇಗುಲಗಳು ಹೊಯ್ಸಳ ಕಾಲದ ಶಿಲ್ಪಕಲಾ ವೈಭವಗಳ ಪ್ರತೀಕವಾಗಿದ್ದು, ಹಳೇಬೀಡು, ಬೇಲೂರು, ಸೋಮನಾಥಪುರ ದೇವಾಲಯಗಳನ್ನು ನೆನಪಿಸುತ್ತವೆ. ಈ ಎರಡೂ ದೇವಾಲಯಗಳ ನವರಂಗದ ಒಳ ಚಾವಣಿಯ ಅಂಕಣಗಳು ಬಗೆ ಬಗೆಯ ಸೂಕ್ಷ್ಮ ಕುಸುರಿ ಕೆಲಸಗಳಿಂದ ತುಂಬಿದ್ದು, ಅತ್ಯಂತ ಮನಮೋಹಕವಾಗಿವೆ. ಎರಡೂ ದೇಗುಲಗಳ ಹೊರ ಭಿತ್ತಿಗಳಲ್ಲಿನ ಕೆಲವು ಶಿಲ್ಪಗಳು ಭಾಗಶಃ ವಿರೂಪಗೊಂಡಿದ್ದು, ಕೆಲವೊಂದು ಶಿಲ್ಪಗಳ ಮುಖ ಗುರುತಿಸಲಾಗದಷ್ಟು ಹಾಳಾಗಿವೆ. ಇಲ್ಲಿನ ಆವರಣದ ಸುತ್ತಲೂ ಆವರಿಸಿರುವ ಮೌನ ಮತ್ತು ಶಾಂತಿಯು ಪ್ರವಾಸಿಗರ ಮನಸ್ಸಿಗೆ ನೆಮ್ಮದಿ ಮತ್ತು ಪ್ರಶಾಂತತೆಯ (Tranquillity/Serenity) ಭಾವನೆಯನ್ನು ಮೂಡಿಸುತ್ತದೆ. ಈ ಎರಡೂ ದೇವಾಲಯಗಳು ಭಾರತೀಯ ಪ್ರಾಚ್ಯ ಹಾಗೂ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿದೆ.
ತಲುಪುವ ಮಾರ್ಗ
ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ನಾಗಲಾಪುರ ಗ್ರಾಮದಲ್ಲಿರುವ ಕೇದಾರೇಶ್ವರ ಹಾಗೂ ಚನ್ನಕೇಶವ ದೇವಸ್ಥಾನ ಸಂದರ್ಶಿಸುವ ಪ್ರವಾಸಿಗರು, ತುರುವೇಕೆರೆ ತಾಲೂಕಿನ ಮಾಯಸಂದ್ರಕ್ಕೆ ಬಂದಿಳಿದು ಮಾವಿನಕೆರೆ ಮಾರ್ಗವಾಗಿ ಇಲ್ಲವೇ, ತುರುವೇಕೆರೆಯಿಂದ ಕಡೇಹಳ್ಳಿ ಮಾರ್ಗವಾಗಿ ನಾಗಲಾಪುರ ದೇವಾಲಯವನ್ನು ತಲುಪಬಹುದು. ಈ ದೇವಾಲಯ ಬೆಂಗಳೂರಿನಿಂದ 128 ಕಿ.ಮೀ ಮತ್ತು ತುಮಕೂರು ನಗರದಿಂದ 68 ಕಿ.ಮೀ ದೂರದಲ್ಲಿದೆ. ಹಾಗೂ ತುರುವೇಕೆರೆ ನಗರದಿಂದ ಸುಮಾರು 11 ಕಿ.ಮೀ, ಮಾಯಸಂದ್ರದಿಂದ 8 ಕಿ.ಮೀ ದೂರದಲ್ಲಿದೆ. ಖಾಸಗಿ ವಾಹನದಲ್ಲಿ ತೆರಳುವುದು ಉತ್ತಮ. ತುಮಕೂರಿನ ಕಡೆ ಹೋದಾಗ ಈ ಜಾಗಕ್ಕೆ ಭೇಟಿಕೊಡುವುದನ್ನು ಮರೆಯದಿರಿ. ಕಣ್ಮನ ಸೆಳೆಯುವ ಈ ಪ್ರದೇಶದಲ್ಲಿ, ಇತಿಹಾಸದ ಹೆಜ್ಜೆ ಗುರುತುಗಳನ್ನು ಅನ್ವೇಷಿಸುತ್ತಾ, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು; ಜೊತೆಗೆ ಐತಿಹಾಸಿಕ ಮಹತ್ವ ಹೊಂದಿರುವ ಈ ತಾಣದಿಂದ ಒಂದೊಳ್ಳೆ ಪ್ರವಾಸದ ಅನುಭವವೂ ಆಗುತ್ತದೆ.